
ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಇತ್ತೀಚಿಗೆ ಕಾಶ್ಮೀರಕ್ಕೆ ಭೇಟಿ ಕೊಟ್ಟಿದ್ದು ಭೂಸ್ವರ್ಗ ಕಾಶ್ಮೀರ ಮತ್ತೆ ಮೊದಲಿನಂತೆ ಆಗ್ತಾ ಇದೆ, ಧೈರ್ಯವಾಗಿ ಕಾಶ್ಮೀರಕ್ಕೆ ಬನ್ನಿ ಅಂತ ಕರೆಕೊಟ್ಟಿದ್ದಾರೆ.
ಇತ್ತೀಚಿಗೆ ಕಾಶ್ಮೀರದಲ್ಲಿ ನಡೆದ ಉಗ್ರದಾಳಿ ಭಾರತೀಯರೆಲ್ಲರ ಆಕ್ರೋಶಕ್ಕೆ ಒಳಗಾಗಿತ್ತು. ಭಾರತ-ಪಾಕ್ ನಡುವಿನ ಯುದ್ಧಕ್ಕೂ ಕಾರಣವಾಗಿತ್ತು. ಇದೀಗ ಮತ್ತೆ ಕಾಶ್ಮೀರ ಮೊದಲಿನ ಸ್ಥಿತಿಗೆ ಮರಳುತ್ತಾ ಇದೆ. ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಇತ್ತೀಚಿಗೆ ಕಾಶ್ಮೀರಕ್ಕೆ ಭೇಟಿ ಕೊಟ್ಟಿದ್ದು ಭೂಸ್ವರ್ಗ ಕಾಶ್ಮೀರ ಮತ್ತೆ ಮೊದಲಿನಂತೆ ಆಗ್ತಾ ಇದೆ, ಧೈರ್ಯವಾಗಿ ಕಾಶ್ಮೀರಕ್ಕೆ ಬನ್ನಿ ಅಂತ ಕರೆಕೊಟ್ಟಿದ್ದಾರೆ. ಕಾಶ್ಮೀರ ಅಂದ್ರೆ ಭೂಲೋಕದ ಸ್ವರ್ಗ ಅಂದ್ರೆ ತಪ್ಪಾಗಲ್ಲ. ಅಲ್ಲಿನ ರಮಣೀಯ ತಾಣಗಳು, ಹಿಮಚ್ಚಾದಿತ ಶ್ವೇತ ಪರ್ವತಗಳು, ಶುಭ್ರ ಸ್ಪಟಿಕದಂಥಾ ಸರೋವರಗಳು, ಆ ತಂಪು ವಾತಾವರಣ ನಿಜಕ್ಕೂ ಅದು ಸ್ವರ್ಗವೇ ಸರಿ. ಆದ್ರೆ ಈ ಸ್ವರ್ಗಕ್ಕೆ ಆಗಾಗ ಭಯೋತ್ಪಾದಕರು ಕಿಚ್ಚು ಹಚ್ತಾನೇ ಇರ್ತಾರೆ. ಕಳೆದ ತಿಂಗಳು ಇದೇ ರೀತಿ ಪೆಗಲ್ಗಾಮ್ಗೆ ಪ್ರವಾಸಕ್ಕೆ ಬಂದಿದ್ದ ಅಮಾಯಕ ಪ್ರವಾಸಿಗರ ಮೇಲೆ ಟೆರೆರಿಸ್ಟ್ಗಳು ದಾಳಿ ಮಾಡಿದ್ರು.
26 ಜನ ಅಮಾಯಕರ ಹತ್ಯೆ ಮಾಡಿದ ಉಗ್ರರ ವಿರುದ್ದ ಇಡೀ ದೇಶ ಕ್ರುದ್ದವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯ ವಾಯುಪಡೆ ಪಾಕಿಸ್ತಾನದ ಉಗ್ರನೆಲೆಗಳ ಮೇಲೆ ಆಪರೇಷನ್ ಸಿಂದೂರ್ ಹೆಸರಲ್ಲಿ ಪ್ರತಿದಾಳಿ ಮಾಡಿ ಉಗ್ರರ ನೆತ್ತರು ಹರಿಸಿತ್ತು. ಭಾರತ ಪಾಕ್ ನಡುವೆ ಯುದ್ಧ ಆರಂಭವಾಗಿತ್ತು. ಇದೀಗ ಕದನ ವಿರಾಮ ಘೋಷಣೆ ಆಗಿದೆಯಾದ್ರೂ ಭಾರತ್ ಪಾಕ್ ನಡುವೆ ಬಿಗುವಿನ ವಾತಾವರಣ ಇದ್ದೇ ಇದೆ. ಈ ನಡುವೆ ಕಾಶ್ಮೀರ ಮತ್ತೆ ಮೊದಲಿನ ಸ್ಥಿತಿಗೆ ಮರಳುತ್ತಾ ಇದೆ. ದೇಶ ವಿದೇಶದ ಪ್ರವಾಸಿಗರು ಮತ್ತೆ ಕಾಶ್ಮೀರಕ್ಕೆ ಬರ್ತಾ ಇದ್ದಾರೆ. ಹೌದು ಸ್ಯಾಂಡಲ್ವುಡ್ ನಟಿ, ಮೋಹಕತಾರೆ ರಮ್ಯಾ ಸದ್ಯ ಕಾಶ್ಮೀರ ಪ್ರವಾಸದಲ್ಲಿದ್ದಾರೆ. ಲೇಹ್ ಸೇರಿದಂತೆ ಕಾಶ್ಮೀರದ ಅನೇಕ ತಾಣಗಳಿಗೆ ಬೇಟಿ ಕೊಟ್ಟು ಪ್ರವಾಸದ ಖುಷಿ ಸವೀತಾ ಇದ್ದಾರೆ. ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಕಾಶ್ಮೀರ ಪ್ರವಾಸದ ಅನೇಕ ಫೋಟೋಗಳನ್ನ ಹಂಚಿಕೊಂಡಿದ್ದಾರೆ.
ಅಂದು ಕಣ್ಣೀರಧಾರೆ ಹರಿದ ಜಾಗದಲ್ಲಿ ಮತ್ತೆ ಅಮೃತಧಾರೆ ಹರೀತಾ ಇದೆ. ಮತ್ತೆ ಕಾಶ್ಮೀರ ಮೊದಲಿನ ಸ್ಥಿತಿಗೆ ಮರಳುತ್ತಾ ಇದೆ. ಧೈರ್ಯವಾಗಿ ಇಲ್ಲಿಗೆ ಪ್ರವಾಸಿಗರು ಬನ್ನಿ ಅಂತ ರಮ್ಯಾ ಕರೆಕೊಟ್ಟಿದ್ದಾರೆ. ಹೌದು ಕಾಶ್ಮೀರಕ್ಕೂ ರಮ್ಯಾಗೂ ಒಂದು ಅಪರೂಪದ ಸಂಬಂಧ ಇದೆ. 2005ರಲ್ಲಿ ಬಂದ ಅಮೃತಧಾರೆ ಸಿನಿಮಾದ ಒಂದು ಹಾಡು ಮತ್ತು ಕೆಲ ಸೀನ್ಗಳ ಚಿತ್ರೀಕರಣ ಕಾಶ್ಮೀರದ ಲೇಹ್ನಲ್ಲಿ ನಡೆದಿತ್ತು. ಎತ್ತರದ ಹಿಮ ಪರ್ವತಗಳ ನಡುವೆ ರಮ್ಯಾ ಧ್ಯಾನ್ ಜೊತೆಗೆ ಹುಡುಗ ಹುಡುಗ ನನ್ನ ಮುದ್ದಿನ ಹುಡುಗ ಅಂತ ಹಾಡು ಹಾಡಿ ನರ್ತಿಸಿದ್ರು. ಈ ಹಾಡು ಮತ್ತು ಅಮೃತಧಾರೆ ಸಿನಿಮಾ ಎರಡೂ ಸೂಪರ್ ಹಿಟ್ ಆಗಿದ್ವು. ಆದ್ರೆ ಈ ಹಾಡಿನ ಚಿತ್ರೀಕರಣ ಮಾಡುವಾಗ ಒಂದು ಶಾಕಿಂಗ್ ಘಟನೆ ನಡೆದಿತ್ತು. ಎತ್ತರದ ತಾಣಗಳಲ್ಲಿ ಆಮ್ಲಜನಕದ ಕೊರತೆ ಕಾಡುತ್ತೆ.
ಇದೇ ರೀತಿ ಚಿತ್ರೀಕರಣ ಮಾಡ್ತಾ ಇದ್ದ ವೇಳೆ ರಮ್ಯಾ ಉಸಿರಾಟಕ್ಕೆ ತೊಂದರೆಯಾಗಿ ಪ್ರಜ್ಞೆ ತಪ್ಪಿ ಬಿದ್ದು ಬಿಟ್ಟಿದ್ರು. ಏನು ಮಾಡೋದು ಅಂತ ಗೊತ್ತಾಗದೇ ಚಿತ್ರತಂಡ ಪರದಾಡ್ತಾ ಇತ್ತು. ಆಗ ಅದೃಷ್ಟವಶಾತ್ ಅಲ್ಲಿಗೆ ಬಂದ ಭಾರತೀಯ ಸೇನೆಯವರು ರಮ್ಯಾಗೆ ಆಕ್ಸಿಜನ್ ಸಿಲಿಂಡರ್ ಕೊಟ್ಟು, ಪ್ರಥಮ ಚಿಕಿತ್ಸೆ ಮಾಡಿ ತಮ್ಮದೇ ವಾಹನದಲ್ಲಿ ಕೆಳಗೆ ಕಳುಹಿಸಿಕೊಟ್ಟಿದ್ರು. ರಮ್ಯಾ ಪ್ರಾಣಾಪಾಯದಿಂದ ಪಾರಾಗಿದ್ರು. ಹೀಗೆ ಕಾಶ್ಮೀರ ಕಣಿವೆಯಲ್ಲಿ ಸಾವಿನ ಅಂಚಿನಿಂದ ರಮ್ಯಾ ಪಾರಾಗಿ ಬಂದಿದ್ರು. ಇದೀಗ ಜಾಗಗಳಿಗೆ ಮರುಭೇಟಿ ಕೊಟ್ಟಿದ್ದಾರೆ ರಮ್ಯಾ. ಕಾಶ್ಮೀರ ನಮ್ಮ ಸೇನೆ ಮತ್ತು ಕಾಶ್ಮೀರ ಪೊಲೀಸರ ಕಣ್ಗಾವಲಿನಲ್ಲಿ ಸುರಕ್ಷಿವಾಗಿದೆ. ನೀವೂ ಕೂಡ ಧೈರ್ಯವಾಗಿ ಇಲ್ಲಿಗೆ ಬನ್ನಿ ಅಂತ ಧೈರ್ಯ ತುಂಬಿದ್ದಾರೆ.