Fascinating Indian Wedding: ಪುರಾತನ ರೀತಿ, ಗ್ರಾಮೀಣ ಸೊಗಡು, ಮಾದರಿಯಾಯ್ತು ವಿಶೇಷ ವಿವಾಹ

Dec 31, 2021, 1:16 PM IST

ಉತ್ತರ ಕನ್ನಡ (ಡಿ. 31): ನಾವು ಹಲವು ರೀತಿಯ ಸರಳ ವಿವಾಹಗಳನ್ನು (Wedding) ಕಂಡಿದ್ದೇವೆ, ಕೇಳಿದ್ದೇವೆ. ಆದರೆ,‌ ಉತ್ತರಕನ್ನಡ ಜಿಲ್ಲೆಯ (Uttara Kannada) ಅಂಕೋಲಾ (Ankola) ತಾಲೂಕಿನಲ್ಲಿ  ನಡೆದ ಸರಳ ವಿವಾಹವಂತೂ ಯುವಜನರಿಗೆ ಮಾದರಿಯಾಗಿದೆ. 

ಜನಪದ ವಿದ್ವಾಂಸರಾದ  ಡಾ. ಎನ್. ಆರ್. ನಾಯಕ್,  ಶಾಂತಿ ನಾಯಕ್ ಅವರ ಮೊಮ್ಮಗ ಹಾಗೂ ಡಾ, ಸವಿತಾ ನಾಯಕ್ ಮತ್ತು ಉದಯ ನಾಯಕ್ ಅವರ ಪುತ್ರನಾಗಿರುವ ಆತ್ಮೀಯ ತನ್ನ ಜೀವನ ಸಂಗಾತಿ ಮಾಧವಿಯ ಜತೆ ಅತ್ಯಂತ ಸರಳ‌ ಹಾಗೂ ವಿಶೇಷವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. 

ಅಂಕೋಲಾದ ಅಂಗಡಿಬೈಲ ಗ್ರಾಮದ ಮಾವಿನ ಮರದ ಕೆಳಗೆ ಮನೆಯವರೇ ನಿರ್ಮಿಸಿದ ಸಾಮಾನ್ಯ ವೇದಿಕೆ‌ಯಲ್ಲಿ ಈ ಸರಳ‌ ವಿವಾಹ ಸಂಪನ್ನಗೊಂಡಿದೆ. ಅಂದಹಾಗೆ, ಸರಳ ವಿವಾಹವಾಗುವ ಬಗ್ಗೆ ದಂಪತಿಗಳು ಮೊದಲೇ ನಿಶ್ಚಯಿಸಿದ್ದರು. ಅದರಂತೆ  ಕುಟುಂಬ ವರ್ಗದವರಿಂದಲೇ ಮದುವೆಯ ಸಿದ್ಧತೆಗಳು ನಡೆದಿದ್ದು, ಇಪ್ಪಿ ಹೂವಿನ ಮಾಲೆಯನ್ನು ಬದಲಾಯಿಸಿಕೊಂಡ ವರ, ವಧು ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದ್ದಾರೆ. ಪರಿಸರದ ಮಧ್ಯೆ ಪರಿಸರ ಪೂರಕ ವಿವಾಹ ಮಾಡಿಕೊಳ್ಳುವುದರೊಂದಿಗೆ ಹಿರಿಯರ ಮುಂದೆ ವಿವಾಹ ಸಂಹಿತೆ ಒಪ್ಪಿಕೊಂಡು ಸತಿ ಪತಿಗಳಾಗಿದ್ದಾರೆ. 

New Year 2022: ರೆಸಾರ್ಟ್‌ಗಳು, ಹೋಂ ಸ್ಟೇಗಳು, ಹೊಟೇಲ್‌ಗಳು ಫುಲ್, ಪ್ರವಾಸೋದ್ಯಮಕ್ಕೆ ಕಳೆ

ವಿವಾಹ ಸಂಹಿತೆಯನ್ನು ಕನ್ನಡದಲ್ಲಿ ಅಕ್ಷತಾ ಕೃಷ್ಣಮೂರ್ತಿ, ಇಂಗ್ಲಿಷ್‌ನಲ್ಲಿ ಶರಣ್ಯಾ, ಮರಾಠಿಯಲ್ಲಿ ಅಕ್ಷತಾ ರಾವ್ ದಂಪತಿಗಳ ಮುಂದೆ ಓದಿದ್ದು, ಇದನ್ನೇ ಪ್ರಮಾಣವನ್ನಾಗಿ ದಂಪತಿಗಳು ಸ್ವೀಕರಿಸಿದರು.‌ ಅಂದಹಾಗೆ, ಮದುವೆಯ ಪ್ರತಿಯೊಂದು ಸಿದ್ಧತೆಗಳೂ ಪುರಾತನ ಪದ್ಧತಿಯನ್ನು ಮೆಲಕು ಹಾಕುವಂತಿದ್ದು, ಜಾನಪದ ವಸ್ತುಗಳು, ಕಾಡಿನ ವಿವಿಧ ಹೂಗಳು, ಎಲೆಗಳು ಮಂಟಪ ಹಾಗೂ ಮದುವೆಯ ಸ್ಥಳವನ್ನು ಶೋಭಿಸಿದ್ದವು. ಹುರಿಯಕ್ಕಿ ಲಾಡು, ಕಬ್ಬಿನಹಾಲು ಸೇರಿದಂತೆ ಗ್ರಾಮೀಣ ಪ್ರದೇಶದ ಅಡುಗೆಯೇ ಈ ಮದುವೆಯ ವಿಶೇಷವಾಗಿದ್ದು, ಕುಟುಂಬಸ್ಥರಂತೂ ಸಂತೋಷದಿಂದಲೇ ಈ ಸರಳ ಹಾಗೂ ವಿಶೇಷ ವಿವಾಹದಲ್ಲಿ ಪಾಲ್ಗೊಂಡಿದ್ದರು.