
ಹಿಂದೂ ಪೂಜಾ ಪದ್ಧತಿಯಲ್ಲಿ ಶಂಖಕ್ಕೆ ಅತ್ಯಂತ ಪವಿತ್ರ ಹಾಗೂ ಶ್ರೇಷ್ಠ ಸ್ಥಾನವಿದೆ. ಸಮುದ್ರ ಮಂಥನದ ಸಮಯದಲ್ಲಿ ಉದ್ಭವಿಸಿದ ದಿವ್ಯ ವಸ್ತುಗಳಲ್ಲಿ ಶಂಖವೂ ಒಂದ ಎಂಬುದು ಪುರಾಣಗಳ ನಂಬಿಕೆ. ದೇವಸ್ಥಾನ ಹಾಗೂ ಮನೆಗಳ ಪೂಜಾ ಕೋಣೆಯಲ್ಲಿ ಗಂಟೆ, ದೀಪ ಮತ್ತು ಕಳಶದ ಜೊತೆಗೆ ಶಂಖವನ್ನು ಇಡುವುದು ಅನಾದಿ ಕಾಲದಿಂದಲೂ ನಡೆದುಬಂದ ಸಂಪ್ರದಾಯ. ಶಂಖನಾದ ಮೊಳಗುವ ಸ್ಥಳದಲ್ಲಿ ನಕಾರಾತ್ಮಕ ಶಕ್ತಿಗಳು ದೂರವಾಗಿ, ಧನಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಲಾಗುತ್ತದೆ.
ಶಂಖವು ವಿಷ್ಣುವಿಗೆ ಅತ್ಯಂತ ಪ್ರಿಯವಾದದ್ದು ಮಾತ್ರವಲ್ಲದೆ, ಲಕ್ಷ್ಮೀ ದೇವಿ ಮತ್ತು ಶಿವನ ಆರಾಧನೆಯಲ್ಲೂ ಮುಖ್ಯ ಪಾತ್ರ ವಹಿಸುತ್ತದೆ. ಆದರೆ, ಶಂಖವನ್ನು ತಂದು ಎಲ್ಲೆಂದರಲ್ಲಿ ಇಡುವುದು ವಾಸ್ತು ಪ್ರಕಾರ ಸರಿಯಲ್ಲ. ಅದನ್ನು ಸೂಕ್ತ ದಿಕ್ಕು ಮತ್ತು ನಿಯಮಗಳಂತೆ ಇಟ್ಟಾಗ ಮಾತ್ರ ಶುಭ ಫಲಗಳು ದೊರೆಯುತ್ತವೆ.
ವಾಸ್ತು ಹಾಗೂ ಸಂಪ್ರದಾಯಗಳ ಪ್ರಕಾರ ಮನೆಯ ಪೂಜಾ ಕೋಣೆಯ ಪೂರ್ವ ದಿಕ್ಕಿನಲ್ಲಿ (East Direction) ಶಂಖವನ್ನು ಸ್ಥಾಪಿಸುವುದು ಅತ್ಯಂತ ಶುಭಪ್ರದ. ಸೂರ್ಯೋದಯದ ದಿಕ್ಕಾದ ಪೂರ್ವಕ್ಕೆ ಆಧ್ಯಾತ್ಮಿಕವಾಗಿ ವಿಶೇಷ ಪ್ರಾಮುಖ್ಯತೆಯಿದೆ. ಈ ದಿಕ್ಕಿನಲ್ಲಿ ಶಂಖವನ್ನು ಇಟ್ಟು ನಿತ್ಯ ಪೂಜಿಸುವುದರಿಂದ ಲಕ್ಷ್ಮೀ ದೇವಿಯ ಅನುಗ್ರಹ ದೊರೆತು, ಆರ್ಥಿಕ ಕಷ್ಟಗಳು ನಿವಾರಣೆಯಾಗುತ್ತವೆ. ಶಂಖವನ್ನು ನೇರವಾಗಿ ಬರಿ ನೆಲದ ಮೇಲೆ ಇಡದೆ, ಪವಿತ್ರವಾದ ಪೂಜಾ ಪೀಠದ ಮೇಲೆ ಇಡಬೇಕು.
ಶಂಖವನ್ನು ಪೂಜಾ ಪೀಠದ ಮೇಲಿಡುವಾಗ ಕೆಂಪು ಅಥವಾ ಹಳದಿ ಬಣ್ಣದ ಶುಭ್ರವಾದ ರೇಷ್ಮೆ/ಹತ್ತಿ ಬಟ್ಟೆಯನ್ನು ಹಾಸಿ, ಅದರ ಮೇಲೆ ಶಂಖವನ್ನು ಗೌರವಪೂರ್ವಕವಾಗಿ ಸ್ಥಾಪಿಸಬೇಕು. ಶಂಖವಿಡುವ ಸ್ಥಳವು ಯಾವಾಗಲೂ ಸ್ವಚ್ಛವಾಗಿರಬೇಕು. ಅದನ್ನು ಇತರ ಅನಗತ್ಯ ವಸ್ತುಗಳೊಂದಿಗೆ ಬೆರೆಸಿ ಇಡಬಾರದು.
ಪೂಜೆಯ ಆರಂಭದಲ್ಲಿ ಅಥವಾ ಆರತಿಯ ಕೊನೆಯಲ್ಲಿ ಶಂಖನಾದ ಮಾಡುವುದು ಪವಿತ್ರ ಆಚಾರವಾಗಿದೆ. ಶಂಖದಿಂದ ಹೊರಹೊಮ್ಮುವ ದಿವ್ಯ ಧ್ವನಿಯು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಓಡಿಸಿ, ಸಾತ್ವಿಕ ವಾತಾವರಣವನ್ನು ಹೆಚ್ಚಿಸುತ್ತದೆ. ಆದರೆ, ವಾಸ್ತು ಪ್ರಕಾರ ಪೂಜೆಗೆ ಬಳಸುವ ಶಂಖ ಮತ್ತು ಊದಲು ಬಳಸುವ ಶಂಖವನ್ನು ಬೇರೆ ಬೇರೆಯಾಗಿ ಇಡುವುದು ಉತ್ತಮ.
ಶಂಖವನ್ನು ಊದಿದ ನಂತರ ಅದನ್ನು ಹಾಗೆಯೇ ಇಡದೆ, ಪವಿತ್ರ ಗಂಗಾಜಲ ಅಥವಾ ಶುದ್ಧ ನೀರಿನಿಂದ ತೊಳೆದು, ಒಣ ಬಟ್ಟೆಯಿಂದ ಒರೆಸಿ ಪೂಜಾ ಸ್ಥಳದಲ್ಲಿ ಇಡಬೇಕು. ಶಂಖದ ಒಳಗೆ ನೀರು ನಿಂತುಕೊಳ್ಳದಂತೆ ನೋಡಿಕೊಳ್ಳುವುದು ಅತ್ಯಂತ ಮುಖ್ಯ.
ಹೊಸ ಶಂಖವನ್ನು ಮನೆಗೆ ತರುವಾಗ ಅದು ಎಲ್ಲಿಯೂ ಬಿರುಕು ಬಿಟ್ಟಿರಬಾರದು (Damage) ಅಥವಾ ಒಡೆದಿರಬಾರದು. ಸಂಪೂರ್ಣವಾಗಿ ಸುಸ್ಥಿತಿಯಲ್ಲಿರುವ ಶಂಖವನ್ನು ತಂದು, ಗಂಗಾಜಲದಿಂದ ಶುದ್ಧೀಕರಿಸಿ ನಂತರ ಪೂಜಾ ಕೋಣೆಯಲ್ಲಿ ವಿಧಿವಿಧಾನವಾಗಿ ಪ್ರತಿಷ್ಠಾಪಿಸಬೇಕು.