
ಹಳ್ಳಿಯಲ್ಲಾಗಲೀ ಪಟ್ಟಣದಲ್ಲಾಗಲೀ ಮನೆಯ ಮುಂದೆ ಒಂದು ತುಳಸಿ ಕಟ್ಟೆ ಇಟ್ಟುಕೊಳ್ಳುವುದು ಹಿಂದೂಗಳ ಸಂಪ್ರದಾಯ. ತುಳಸಿ ಕಟ್ಟೆ ಎಂಬುದು ಲಕ್ಷ್ಮಿದೇವಿಯ ಆವಾಸಸ್ಥಾನ. ಹೀಗಾಗಿ ಅದಕ್ಕೊಂದು ವಾಸ್ತುವಿದೆ. ಅದು ಇಂತಿಷ್ಟೆ ಎತ್ತರ ಇರಬೇಕೆಂಬ ನಿಯಮ ಇದೆ. ಅದು ತಪ್ಪಿದರೆ ತಲೆನೋವು ಖಚಿತ. ಹಾಗಾದರೆ ತುಳಸಿ ಕಟ್ಟೆ ಎಷ್ಟೆತ್ತರ ಇರಬೇಕು?
ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಕಟ್ಟೆಯ ಎತ್ತರ ಮನೆಯ ಫ್ಲೋರ್ ಲೆವೆಲ್‌ಗಿಂತ ಸ್ವಲ್ಪ ಕೆಳಗೆ ಇರಬೇಕು. ಇಲ್ಲವಾದಲ್ಲಿ ಅದು ಫ್ಲೋರ್‌ನ ಸಮಾನಾಂತರವಾಗಿರಬೇಕು. ಎಂದೂ ಮನೆಯ ದೇವರ ಕೋಣೆಯ ಪೀಠದ ಹೈಟ್‌ಗಿಂತ ತುಳಸಿ ಕಟ್ಟೆ ಎತ್ತರವಾಗಿರಬಾರದು. ಲಕ್ಷ್ಮಿದೇವಿ ಮನೆಯೊಳಗೆ ಮೆಟ್ಟಿಲು ಏರುತ್ತಾ ಬರಬೇಕು ಎಂದು ಇದರ ಲೆಕ್ಕ. ಕೆಲವರು ತುಳಸಿ ಗಿಡವನ್ನು ತಮ್ಮ ಜಮೀನಿನಲ್ಲಿ ನೆಡುತ್ತಾರೆ. ಆದರೆ ಶಾಸ್ತ್ರ ಆ ಪದ್ಧತಿಯನ್ನು ಒಪ್ಪುವುದಿಲ್ಲ. ತುಳಸಿ ಗಿಡವನ್ನು ನೆಲದಲ್ಲಿ ನೆಡಬಾರದು. ಅದರ ಬದಲಿಗೆ ಕುಂಡದಲ್ಲಿಯೋ ಅಥವಾ ತುಳಸಿ ಕಟ್ಟೆಯನ್ನು ನಿರ್ಮಿಸಿ ಅದರಲ್ಲಿ ತುಳಸಿ ಗಿಡ ನೆಡಬೇಕು ಎಂದು ಶಾಸ್ತ್ರ ತಿಳಿಸುತ್ತದೆ.
ಮನೆಯಲ್ಲಿ ತುಳಸಿ ಗಿಡಕ್ಕೆ ಉತ್ತರ, ಈಶಾನ್ಯ ಅಥವಾ ಪೂರ್ವ ದಿಕ್ಕನ್ನು ಆರಿಸಬೇಕು. ಈ ದಿಕ್ಕುಗಳಲ್ಲಿ ತುಳಸಿ ಗಿಡವನ್ನು ನೆಟ್ಟರೆ ಮನೆಯಲ್ಲಿ ಧನಾತ್ಮಕ ಶಕ್ತಿ ಉಂಟಾಗುತ್ತದೆ. ಇದಲ್ಲದೇ ಈಶಾನ್ಯದಲ್ಲಿ ತುಳಸಿ ಗಿಡವನ್ನೂ ನೆಡಬಹುದು. ಈ ದಿಕ್ಕುಗಳು ಧನಾತ್ಮಕ ಶಕ್ತಿಯನ್ನು ತರುತ್ತವೆ ಮತ್ತು ಆರ್ಥಿಕ ಪ್ರಗತಿಗೆ ಸಹಾಯ ಮಾಡುತ್ತವೆ. ತುಳಸಿ ಕಟ್ಟೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಬೇಕು ಮತ್ತು ಅದಕ್ಕೆ ನೇರ ಸೂರ್ಯನ ಬೆಳಕು ಬರುವಂತೆ ನೋಡಿಕೊಳ್ಳಬೇಕು. ಮನೆಯ ಮುಖ್ಯದ್ವಾರದ ಎದುರು ನಿಂತು ಎಡಭಾಗದಲ್ಲಿ, ಮುಖ್ಯದ್ವಾರದಿಂದ ಪಶ್ಚಿಮಾಭಿಮುಖವಾಗಿ ಅಥವಾ ಉತ್ತರಾಭಿಮುಖವಾಗಿ 3 ಅಡಿ ದೂರದಲ್ಲಿ ನಿರ್ಮಿಸಬಹುದು.
ಆದರೆ ತುಳಸಿ ಗಿಡವನ್ನು ಮನೆಯ ದಕ್ಷಿಣ ದಿಕ್ಕಿನಲ್ಲಿ ನೆಡಬಾರದು. ಹೀಗೆ ಮಾಡುವುದರಿಂದ ನಿಮಗೆ ಲಾಭವಾಗುವ ಬದಲು ಹಾನಿಯೂ ಆಗಬಹುದು. ತುಳಸಿ ಗಿಡವನ್ನು ಅಡುಗೆ ಮನೆಯ ಬಳಿಯೂ ಇಡಬಹುದು. ಹೀಗೆ ಮಾಡುವುದರಿಂದ ಮನೆಯಲ್ಲಿನ ಕೌಟುಂಬಿಕ ಕಲಹ ಕೊನೆಗೊಳ್ಳುತ್ತದೆ. ನಿಮ್ಮ ಮನೆಯಲ್ಲಿ ವಾಸ್ತು ದೋಷವಿದ್ದರೆ ಅದನ್ನು ಹೋಗಲಾಡಿಸಲು ಆಗ್ನೇಯದಿಂದ ವಾಯುವ್ಯ ದಿಕ್ಕಿನವರೆಗೆ ಯಾವುದೇ ಖಾಲಿ ಸ್ಥಳದಲ್ಲಿ ತುಳಸಿ ಗಿಡವನ್ನು ನೆಡಬಹುದು ಎಂದು ನಂಬಲಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ, ಪ್ರತಿ ಭಾನುವಾರ, ಏಕಾದಶಿ ಮತ್ತು ಸೂರ್ಯ ಮತ್ತು ಚಂದ್ರಗ್ರಹಣದ ದಿನದಂದು ತುಳಸಿಗೆ ನೀರನ್ನು ಅರ್ಪಿಸಬಾರದು. ಅಲ್ಲದೆ, ಈ ದಿನಗಳಲ್ಲಿ ಮತ್ತು ಸೂರ್ಯ ಮುಳುಗಿದ ನಂತರ, ತುಳಸಿ ಎಲೆಗಳನ್ನು ಕೀಳಬಾರದು. ಹೀಗೆ ಮಾಡುವುದರಿಂದ ವಾಸ್ತು ದೋಷ ಉಂಟಾಗುತ್ತೆ.
ತುಳಸಿ ಗಿಡವನ್ನು ಮನೆಯ ಒಳಗಡೆ ನೆಡಬಾರದು. ಇದು ಯಾವಾಗಲೂ ಹೊರಗಡೆಯೇ ಇರಬೇಕು.ಸೂರ್ಯನ ಬೆಳಕು ಬಾರದಂತಹ ಕತ್ತಲಾದ ಜಾಗದಲ್ಲಿ ತುಳಸಿ ಗಿಡವನ್ನು ಇಡಬಾರದು. ತುಳಸಿ ಕಟ್ಟೆಯ ಸುತ್ತಲಿನ ಪ್ರದೇಶದಲ್ಲಿ ಚಪ್ಪಲಿ, ಪೊರಕೆ ಅಥವಾ ಕಸದ ಬುಟ್ಟಿಯನ್ನು ಇಡಬಾರದು. ಇದು ಲಕ್ಷ್ಮೀ ದೇವಿಗೆ ಅವಮಾನ ಮಾಡಿದಂತೆ ಮತ್ತು ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು. ತುಳಸಿ ಕಟ್ಟೆಯ ಹತ್ತಿರ ಮುಳ್ಳು ಇರುವ ಗಿಡಗಳನ್ನು ಇಡಬೇಡಿ. ಇದು ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಹುದು. ಹೂಬಿಡುವ ಗಿಡಗಳನ್ನು ಇಡಬಹುದು.
ಮನೆಗೆ ಪ್ರವೇಶಿಸುವ ಮೂರು ದಿನಗಳ ಮೊದಲು ತುಳಸಿ ಕಟ್ಟೆಯನ್ನು ಇಟ್ಟು ನೀರೆರೆಯಬೇಕು. ನಿತ್ಯ ತುಳಸಿ ಪೂಜೆ ಮಾಡುವುದರಿಂದ ಆರ್ಥಿಕ ಹಾಗೂ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ ಮತ್ತು ನಕಾರಾತ್ಮಕ ಶಕ್ತಿ ಕಡಿಮೆಯಾಗುತ್ತದೆ. ಪ್ರತಿದಿನ ತುಳಸಿಗೆ ನೀರೆರೆದರೆ ನವಗ್ರಹ ದೋಷಗಳು ನಿವಾರಣೆಯಾಗುತ್ತವೆ. ಮುಂಜಾನೆ ಪೂಜೆ ಉತ್ತಮ. ಸಂಜೆ ತುಳಸಿ ಕಟ್ಟೆಯಲ್ಲಿ ದೀಪ ಉರಿಸಿ ನಮಸ್ಕಾರ ಮಾಡಿ ಇಡಬಹುದು. ಆದರೆ ಸೂರ್ಯ ಮುಳುಗಿದ ನಂತರ ತುಳಸಿ ಎಲೆಗಳನ್ನು ಕೀಳಬಾರದು.