ಇದೊಂದು ಸರಳ ಟಿಪ್ಸ್‌ ಪಾಲಿಸಿದ್ರೆ ಜೀವನಪರ್ಯಂತ ಸಾಲದ ಕಾಟವಿಲ್ಲ!

Published : Jul 31, 2025, 03:53 PM ISTUpdated : Jul 31, 2025, 03:55 PM IST
Bank Loan

ಸಾರಾಂಶ

ಸಾಲದ ಚಿಂತೆಯಲ್ಲಿರುವವರಿಗೆ ಜೀವನವೆಲ್ಲಾ ಆ ಚಿಂತೆ ಕಾಡಬಹುದು. ಅದನ್ನು ತೀರಿಸುವ ಪ್ರಾಮಾಣಿಕ ಪ್ರಯತ್ನಗಳ ಜೊತೆಗೆ ಕೆಲವು ವಾಸ್ತು ಆಚರಣೆಗಳು ಸಾಲದ ಬಾಧೆಯಿಂದ ಮುಕ್ತವಾಗುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಪ್ರಶ್ನೆ: ನನ್ನ ಹೆಸರು ಮೂರ್ತಿ. ಟ್ಯಾಕ್ಸಿ ಡ್ರೈವರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡ್ತೀನಿ. ಐದು ವರ್ಷದ ಕೆಳಗೆ ತಂಗಿ ಮದುವೆ ಮಾಡಬೇಕಾಗಿ ಬಂತು. ನನಗಿರೋಳು ಒಬ್ಬಳೇ ತಂಗಿ. ಅವಳ ಮದುವೆಯನ್ನ ಸಾಕಷ್ಟು ಗ್ರ್ಯಾಂಡ್ ಆಗಿಯೇ ಮಾಡಿದ್ವು. ಚಿನ್ನ, ಮದುವೆ ಖರ್ಚು ಅಂತ ಸಾಕಷ್ಟು ಹಣ ಖರ್ಚಾಯ್ತು. ನಾನು ಕ್ಯಾಬ್ ಓಡಿಸಿ ಬಂದ ಹಣದಲ್ಲಿ ಸಾಲ ತೀರಿಸುತ್ತಾ, ಒಂಚೂರು ಚೂರು ದುಡ್ಡು ಉಳಿಸುತ್ತಾ ಹೇಗೋ ಫ್ಯಾಮಿಲಿನ ಚೆನ್ನಾಗಿ ಇಟ್ಕೋಬೇಕು ಅಂತ ಒದ್ದಾಡ್ತಿದ್ದೆ. ಕಳೆದ ವರ್ಷ ಅಮ್ಮಂಗೆ ಹುಷಾರಿಲ್ಲದೇ ಆಪರೇಶನ್ ಮಾಡಬೇಕಾಗಿ ಬಂತು. ನಾನು ಕೂಡಿಟ್ಟ ಹಣ ಸಾಕಾಗದೇ ಸಾಲ ಮಾಡಬೇಕಾಗಿ ಬಂತು. ಈ ವರ್ಷ ನನ್ನ ಮದುವೆ ಆಯ್ತು. ಮದುವೆಗೆ ಅಂತ ಮತ್ತೆ ಸಾಲ ಮಾಡಿದೆ. ಈಗ ಖರ್ಚು ಮತ್ತೂ ಹೆಚ್ಚಾಗಿದೆ. ನಾನು ದುಡಿಯೋದು ಎಲ್ಲಿಗೂ ಸಾಕಾಗ್ತಿಲ್ಲ. ರಾತ್ರಿ ಮಲಗಿದ್ರೂ ಬರೀ ಸಾಲದ್ದೇ ದುಃಸ್ವಪ್ನ. ಇಷ್ಟು ಚಿಕ್ಕ ವಯಸ್ಸಲ್ಲಿ ಒಂಚೂರೂ ಖುಷಿ ಇಲ್ಲದೆ ಒದ್ದಾಡೋ ಹಾಗಾಗಿದೆ. ಬೇಜಾರು ಹೆಚ್ಚಾಗಿ ಇತ್ತೀಚೆಗೆ ಗೆಳೆಯರ ಜೊತೆಗೆ ಕುಡಿಯೋದೂ ಶುರುವಾಗಿದೆ. ಅದಕ್ಕೆ ಅಂತ ಮತ್ತೆ ಸಾಲ ಬೆಳೆಯುತ್ತಿದೆ. ನಾನು ಕುಡಿಯೋದು ಹೆಂಡತಿಗೆ ಇಷ್ಟ ಇಲ್ಲ. ನಂಗೆ ಕುಡಿದಾಗ ಮಾತ್ರ ಸಾಲ ಮಾಡಿದ್ದು ಮರೆತು ಹೋಗುತ್ತೆ. ಏನು ಮಾಡ್ಲಿ ಒಂದೂ ಗೊತ್ತಾಗ್ತಿಲ್ಲ.

ಉತ್ತರ: ನೀವು ಗಮನಿಸಿ ನೋಡಿ, ನಾವು ಲೈಫ್‌ನಲ್ಲಿ ದೊಡ್ಡ ಸಮಸ್ಯೆ ಬಂದಾಗ ಸಿಕ್ಕಾಪಟ್ಟೆ ಯೋಚಿಸಿ ಯೋಚಿಸಿಯೇ ಅದನ್ನು ಗುಡ್ಡ ಮಾಡ್ತೇವೆ. ನೀವು ಹೀಗೆಲ್ಲ ತಲೆ ಕೆಡಿಸಿಕೊಂಡು, ಒದ್ದಾಡಿಕೊಂಡು, ಆ ನೋವಿಂದ ಹೊರಬರಲು ಮತ್ತೆ ಕುಡಿತಕ್ಕೆ ಬಿದ್ದು, ಆ ಕುಡಿತಕ್ಕಾಗಿ ಮತ್ತೆ ಸಾಲ ಮಾಡಿ.. ಉಫ್.. ಅದರ ಬದಲು ತಾಳ್ಮೆಯಿಂದ ಯೋಚಿಸಿ ಏನಾದರೂ ಪರಿಹಾರ ಸಿಗುತ್ತಾ ಅಂತ ನೋಡೋದು ಬೆಟರ್ ಅಲ್ವಾ. ನೀವು ಟೆನ್ಶನ್ ತಗೊಂಡಷ್ಟೂ ಸಮಸ್ಯೆ ಹೆಚ್ಚಾಗುತ್ತಲೇ ಹೋಗುತ್ತೆ. ಅದೇ ಕೊಂಚ ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಿ. ಬೆಳಗ್ಗೆ ಕಷ್ಟವಾದರೂ ಕೊಂಚ ಬೇಗ ಏಳಿ. ಆ ಕ್ಷಣಕ್ಕೆ ನಿಮಗೆ ಕಷ್ಟ ನೆನಪಾದರೆ ದೇವರ ಬಳಿ ನಿಮ್ಮೆಲ್ಲ ಕಷ್ಟಗಳನ್ನೂ ಹೇಳಿ ಕೊಂಚ ಮನಸ್ಸು ಹಗುರಾಗುತ್ತೆ. ಇದೂ ಆಗಿಲ್ಲ ಅಂದರೆ ಬೆಳಗ್ಗೆ ಸ್ನಾನ ಮಾಡಿ ಬಂದು 'ಆದಿತ್ಯ ಹೃದಯಂ' ಎಂಬ ಪುಟ್ಟ ಶ್ಲೋಕ ಪುಸ್ತಕ ಇದೆ, ಅದನ್ನು ಓದಿ. ಖಂಡಿತಾ ಮನಸ್ಸು ಸರಿ ಹೋಗುತ್ತೆ.

ಇನ್ನು ನಿಮ್ಮ ಸಾಲಬಾಧೆಯ ವಿಚಾರಕ್ಕೆ ಬರೋಣ. ಇದಕ್ಕೆ ಒಂದು ಸಿಂಪಲ್ ಪರಿಹಾರ ಇದೆ. ಬೆಳಗ್ಗೆ ಎದ್ದ ತಕ್ಷಣ ಮನೆಯ ನಾಲ್ಕೂ ಮೂಲೆಯನ್ನೂ ಚೆನ್ನಾಗಿ ಗುಡಿಸಿ. ನಮ್ಮನೆಲಿ ಹೆಣ್ ಮಕ್ಕಳೇ ಕಸ ಗುಡಿಸೋದು ಅಂತ ನೀವು ಹೇಳಬಹುದು. ಆದರೆ ಈ ವಿಚಾರದಲ್ಲಿ ನೀವೇ ಮುಂದುವರಿಯಿರಿ. ಸ್ನಾನಕ್ಕೂ ಮೊದಲು ಮನೆಯ ಮೂಲೆ ಮೂಲೆಗಳನ್ನು ನೀಟಾಗಿ ಗುಡಿಸಿ. ಸಾಧ್ಯವಾದರೆ ಒರೆಸಿ. ಆ ಬಳಿಕ ಸ್ನಾನ ಮಾಡಿ ಬಂದು ಕೊಳೆಯಿಲ್ಲದ ಮೂಲೆಗಳಿಗೆ ಒಂದೊಂದು ಚಿಟಿಕೆಯಷ್ಟು ಹರಳುಪ್ಪ ಹಾಕಿ. ಆ ಬಳಿಕ ದೇವರ ಕೋಣೆಗೆ ಹೋಗಿ ದೇವರ ದೀಪ ಹಚ್ಚಿ. ನಿಮ್ಮ ಸಾಲ ಬಾಧೆಯನ್ನು ಸಾಧ್ಯವಾದಷ್ಟು ಬೇಗ ನಿವಾರಿಸುವಂತೆ ಒಮ್ಮೆ ಮನಃಪೂರ್ವಕವಾಗಿ ದೇವರಲ್ಲಿ ಪ್ರಾರ್ಥಿಸಿ. ದೇವರ ಮನೆಯಿಂದ ಈಚೆ ಬಂದ ಮೇಲೆ ನೀರಿಗೆ ತುಳಸಿ ಎಲೆ ಹಾಕಿ ಅದನ್ನು ಕುಡಿದು ನಿಮ್ಮ ದೈನಂದಿನ ಕೆಲಸ ಶುರು ಮಾಡಬಹುದು. ಮತ್ತೆ ಮರುದಿನ ಮೂಲೆಯಲ್ಲಿರುವ ಉಪ್ಪನ್ನು ಚೆನ್ನಾಗಿ ಗುಡಿಸಿ ತೆಗೆದು ಯಾರೂ ಅಡ್ಡಾಡದ ಜಾಗದಲ್ಲಿ ಸುರಿದುಬನ್ನಿ. ಈ ಉಪ್ಪಿನ ಮೇಲೆ ನಡೆಯೋದಾಗಲೀ, ಅದನ್ನು ದಾಟೋದಾಗಲೀ ಕೆಟ್ಟದ್ದು. ಆಮೇಲೆ ಮತ್ತೆ ಮೂಲೆಯನ್ನು ಚೊಕ್ಕಟಗೊಳಿಸಿ ಹೊಸದಾಗಿ ಚಿಟಿಕೆ ಉಪ್ಪು ಸುರಿಯಿರಿ.

ಕ್ರಮೇಣ ನಿಮ್ಮೆಲ್ಲ ಸಾಲಬಾಧೆಗಳು ನಿವಾರಣೆಯಾಗುತ್ತಾ ಹೋಗೋದು, ನಿಮ್ಮ ಕಳೆದುಕೊಂಡ ನೆಮ್ಮದಿ ಮರಳಿ ಬರುವುದು ಗಮನಕ್ಕೆ ಬರಬಹುದು. ಮತ್ತೊಂದು ವಿಚಾರ, ಈ ವೃತವನ್ನು ಸಚ್ಚಾರಿತ್ರ್ಯದಿಂದ ಮಾಡಬೇಕು. ಈ ವೇಳೆ ಮದ್ಯ, ಮಾಂಸ ಸೇವನೆ ನಿಷಿದ್ಧ.

 

PREV
Read more Articles on
click me!

Recommended Stories

Vastu Tips: ಇವನ್ನೆಲ್ಲಾ ಫ್ರಿಡ್ಜ್ ಮೇಲಿಟ್ಟರೆ ನಿಮ್ಮ ಪರ್ಸ್ ಖಾಲಿಯಾಗೋದು ಗ್ಯಾರಂಟಿ, ಹುಷಾರು
Vaastu tips: ಹೊಸ ವರ್ಷಕ್ಕೆ ಕಾಲಿಡುವ ಮೊದಲು ಮನೆಯಿಂದ ಈ ವಸ್ತುಗಳನ್ನು ಹೊರಹಾಕಿ!