Vastu Tips: ಮುಖ್ಯ ಬಾಗಿಲಲ್ಲಿ ಈ ಚಿಹ್ನೆಗಳಿದ್ರೆ ಮನೆಯೊಳಗೆ ಹರಿಯುತ್ತೆ ಸಮೃದ್ಧಿಯ ಹೊಳೆ

By Suvarna NewsFirst Published Jun 6, 2023, 4:00 PM IST
Highlights

ಮನೆ ಬಾಗಿಲನ್ನು ನೋಡುತ್ತಿದ್ದಂತೆ ಅದು ಹಿಂದೂಗಳ ಮನೆಯೆಂಬುದು ತಿಳಿಯುತ್ತದೆ. ಏಕೆಂದರೆ ಅಲ್ಲಿ ಒಂದಿಲ್ಲೊಂದು ಪಾರಂಪರಿಕ ಚಿಹ್ನೆ ಅಥವಾ ತೋರಣ ಇರುತ್ತದೆ. ವಾಸ್ತು ಪ್ರಕಾರ, ಈ ಚಿಹ್ನೆಗಳನ್ನು ಮನೆಯ ಮುಖ್ಯ ಬಾಗಿಲಿಗೆ ಹಾಕಿದರೆ ಆ ಮನೆಯಲ್ಲಿ ಸಂತೋಷ, ಸಮೃದ್ಧಿ ಇರುತ್ತದೆ..

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ಬಾಗಿಲು ಕುಟುಂಬಕ್ಕೆ ಮಾತ್ರವಲ್ಲದೆ ಶಕ್ತಿಗೂ ಪ್ರವೇಶ ದ್ವಾರವಾಗಿದೆ. ಧನಾತ್ಮಕ ಶಕ್ತಿಗಳು ಮತ್ತು ಸಮೃದ್ಧಿಯ ಪ್ರವೇಶ ವಲಯವಾಗಿದೆ. ಮುಖ್ಯ ಬಾಗಿಲೆಂದರೆ ಪರಿವರ್ತನೆಯ ವಲಯ. ಅದರ ಮೂಲಕ ನಾವು ಹೊರಗಿನ ಪ್ರಪಂಚದಿಂದ ಮನೆಗೆ ಪ್ರವೇಶಿಸುತ್ತೇವೆ. ಇದು ಸಂತೋಷ ಮತ್ತು ಅದೃಷ್ಟ ಮನೆಗೆ ಪ್ರವೇಶಿಸುವ ಸ್ಥಳವಾಗಿದೆ. ಹಾಗಾಗಿ, ವಾಸ್ತುವಿನಲ್ಲಿ ಮುಖ್ಯ ಬಾಗಿಲಿಗೆ ಬಹಳ ಮಹತ್ವವಿದೆ. 
ಸಾಮಾನ್ಯವಾಗಿ ಬಾಗಿಲನ್ನು ನೋಡುತ್ತಿದ್ದಂತೆ ಅದು ಹಿಂದೂಗಳ ಮನೆ ಎಂಬುದು ತಿಳಿದು ಹೋಗುತ್ತದೆ. ಇದಕ್ಕೆ ಬಾಗಿಲಲ್ಲಿರುವ ತಳಿರು ತೋರಣ, ದ್ವಾರದ ವಿನ್ಯಾಸ ಅಥವಾ ಯಾವುದೇ ದೇವರ ಚಿತ್ರ ಇಲ್ಲವೇ ಚಿಹ್ನೆ ಕೂಡಾ ಕಾರಣವಾಗುತ್ತದೆ. ಅದಲ್ಲದೆ, ಅಲ್ಲಿಯೇ ಇರುವ ತುಳಸಿ ಗಿಡವೂ ಹಿಂದೂಗಳ ಮನೆಯೆಂದು ಸಾರಿ ಹೇಳಬಹುದು. 

ಸಾಮಾನ್ಯವಾಗಿ ಹಿಂದೂಗಳು ಮನೆಯ ಪ್ರವೇಶ ದ್ವಾರದಲ್ಲಿ ಒಂದಿಲ್ಲೊಂದು ಪ್ರಾಚೀನ ಚಿಹ್ನೆ ಇರುತ್ತದೆ. ಪರಂಪರೆಗೆ ಸಂಬಂಧಿಸಿದ ಸಂಕೇತವಿರುತ್ತದೆ. ವಾಸ್ತು ಕೂಡಾ ಇಂಥ ಕೆಲವು ಚಿಹ್ನೆಗಳನ್ನು ಮುಖ್ಯ ದ್ವಾರದಲ್ಲಿ ಹೊಂದಲು ಶಿಫಾರಸು ಮಾಡುತ್ತದೆ. ಹೌದು, ನಿಮ್ಮ ಮನೆಯ ಮುಖ್ಯ ಬಾಗಿಲಿನ ನಾಲ್ಕು ಸಕಾರಾತ್ಮಕ ಚಿಹ್ನೆಗಳು ನೀವು ಎಲ್ಲಿ ವಾಸಿಸುತ್ತಿದ್ದರೂ ಮನೆಯೊಳಗೆ ಸಮೃದ್ಧಿಯನ್ನು ಆಕರ್ಷಿಸಲು ಸಹಾಯ ಮಾಡುತ್ತದೆ. ಆ ಚಿಹ್ನೆಗಳು ಯಾವೆಲ್ಲ ನೋಡೋಣ.

Personality Prediction: ಸಿ ಅಕ್ಷರದ ಹೆಸರುಳ್ಳವರು ಮೋಡಿಗಾರರು, ಭಾವುಕರು..

ಓಂ
ಓಂ ಒಂದು ಚಿಹ್ನೆ, ಮಂತ್ರ ಮತ್ತು ಉಚ್ಚಾರಾಂಶವಾಗಿದೆ. ಇದನ್ನು ಪ್ರತಿ ಮಂಗಳಕರ ಸಮಯದಲ್ಲಿ ಬಳಸಲಾಗುತ್ತದೆ. ಇದು ದೈವಿಕ ಧ್ವನಿಯ ನಿರೂಪಣೆ ಎಂದು ಹೇಳಲಾಗುತ್ತದೆ. ಇದು ಸರ್ವೋಚ್ಚ, ಕಾಸ್ಮಿಕ್ ಪ್ರಪಂಚ ಮತ್ತು ಪ್ರಜ್ಞೆಯ ಸಾರವನ್ನು ಸೂಚಿಸುತ್ತದೆ. ಜಗತ್ತಿನ ಮೊದಲ ಧ್ವನಿ ಎಂದೂ ಇದನ್ನು ಗುರುತಿಸಲಾಗಿದೆ. 
ನೀವು ಅದನ್ನು ನಿಮ್ಮ ಬಾಗಿಲಲ್ಲಿ ಬಳಸಿದರೆ, ಅದು ಮನೆಯ ವಾತಾವರಣವನ್ನು ಸುಧಾರಿಸುವುದು ಮಾತ್ರವಲ್ಲದೆ ನಿಮ್ಮ ಪ್ರೀತಿಪಾತ್ರರು ಆರೋಗ್ಯವಾಗಿರುವುದನ್ನು ಖಚಿತಪಡಿಸುತ್ತದೆ. ಇದು ವಾಸ್ತು ದೋಷವನ್ನು ನಿವಾರಿಸುತ್ತದೆ ಮತ್ತು ಸಂಪತ್ತಿನ ಬಾಗಿಲನ್ನು ತೆರೆಯುತ್ತದೆ. ಬಾಗಿಲಲ್ಲೇ ಇದನ್ನು ಮಾಡಿಸುವುದು ಸಾಧ್ಯವಿಲ್ಲದಿದ್ದರೆ, ಅರಿಶಿನ ಅಥವಾ ಕುಂಕುಮ ಬಳಸಿ ಇದನ್ನು ಬರೆಯಬಹುದು. ಶಾಶ್ವತವಾಗಿರಬೇಕೆಂದು ಬಣ್ಣದಲ್ಲೂ ಪೇಂಟ್ ಮಾಡಿಸಬಹುದು. 

ಶುಭ ಲಾಭ ಚಿಹ್ನೆ
ಹೆಚ್ಚಿನ ಭಾರತೀಯ ಮನೆಗಳಲ್ಲಿ, ಮನೆಯ ಮುಖ್ಯ ದ್ವಾರದ ಹೊರಗೆ ಶುಭ-ಲಾಭ ಚಿಹ್ನೆಗಳನ್ನು ಗುರುತಿಸಬಹುದು. ಈ ಚಿಹ್ನೆಗಳನ್ನು ಸಾಮಾನ್ಯವಾಗಿ ಸಂತೋಷದ ಸಂದರ್ಭದಲ್ಲಿ ಅಥವಾ ಹಬ್ಬಗಳ ಸಮಯದಲ್ಲಿ ಹಾಕಲಾಗುತ್ತದೆ. ಜನರು ಸಾಮಾನ್ಯವಾಗಿ ದೀಪಾವಳಿ ಅಥವಾ ಯುಗಾದಿ ಸಂದರ್ಭದಲ್ಲಿ ಹಳೆಯ ಚಿಹ್ನೆಗಳನ್ನು ತೆಗೆದು ಹೊಸದನ್ನು ಹಾಕುತ್ತಾರೆ.
ಶುಭ ಮತ್ತು ಲಾಭ ಗಣೇಶನ ಮಕ್ಕಳು ಎಂದು ನಂಬಲಾಗಿದೆ. ಶುಭ ಪವಿತ್ರ ಮತ್ತು ಮಂಗಳಕರವಾದದ್ದನ್ನು ಸೂಚಿಸುತ್ತದೆ. ಲಾಭ ಸಂಪತ್ತು ಮತ್ತು ಸಮೃದ್ಧಿಯನ್ನು ಸೂಚಿಸುತ್ತದೆ. ನೀವು ಮನೆಯ ಹೊರಗೆ ಈ ಶುಭ ಲಾಭ ಸ್ಟಿಕ್ಕರ್‌ಗಳನ್ನು ಅಂಟಿಸಬಹುದು ಅಥವಾ ಸಿಂಧೂರದ ಸಹಾಯದಿಂದ ಬರೆಯಬಹುದು. ನೀವು ಅದನ್ನು ಪ್ರವೇಶ ದ್ವಾರದಲ್ಲಿ ಅಥವಾ ದೇವರ ಕೋಣೆಯಲ್ಲಿ ಬಳಸಬಹುದು. 

ಸ್ವಸ್ತಿಕ ಚಿಹ್ನೆ
ಹಿಂದೂ ಧರ್ಮದ ಅನುಯಾಯಿಗಳು ಸ್ವಸ್ತಿಕ್ ಅನ್ನು ಪವಿತ್ರ ಸಂಕೇತವೆಂದು ಪರಿಗಣಿಸುತ್ತಾರೆ. ಇದು ಮನೆಯಾದ್ಯಂತ ಧನಾತ್ಮಕ ಶಕ್ತಿಯ ಹರಿವನ್ನು ಸೂಚಿಸುತ್ತದೆ. ಮುಖ್ಯ ಬಾಗಿಲಿನ ಮೇಲೆ ಸ್ವಸ್ತಿಕ ಚಿಹ್ನೆಯನ್ನು ಹಾಕುವುದರಿಂದ ಯಶಸ್ಸು ಮತ್ತು ಸಮೃದ್ಧಿಯ ಹಾದಿಯಲ್ಲಿನ ಅಡೆತಡೆಗಳನ್ನು ತೆಗೆದುಹಾಕಬಹುದು ಎಂದು ಭಾರತೀಯರು ನಂಬುತ್ತಾರೆ.
ಇದು ಆಫ್ರಿಕಾ ಮತ್ತು ಅಮೆರಿಕಾದಲ್ಲಿಯೂ ಗುರುತಿಸಲ್ಪಟ್ಟ ಪ್ರಾಚೀನ ಸಂಕೇತವಾಗಿದೆ. ಹಿಂದೂ ಧರ್ಮದಲ್ಲಿ, ಚಿಹ್ನೆಯನ್ನು ಪ್ರದಕ್ಷಿಣಾಕಾರವಾಗಿ ಎಳೆಯಲಾಗುತ್ತದೆ ಮತ್ತು ಇದು ಸೂರ್ಯನನ್ನು ಸಂಕೇತಿಸುತ್ತದೆ. ಇದು ಸಿಂಧೂ ಕಣಿವೆ ನಾಗರೀಕತೆಯ ಅವಶೇಷಗಳಲ್ಲಿ ಮತ್ತು ಗ್ರೀಕ್, ರೋಮನ್ ಮತ್ತು ಇಂಡೋ-ಯುರೋಪಿಯನ್ ಸೇರಿದಂತೆ ಅನೇಕ ಸಂಸ್ಕೃತಿಗಳಲ್ಲಿ ಕಂಡುಬಂದಿದೆ. 

ಸಂಕಷ್ಟಿಯಂದೇ ಬುಧ ಗೋಚಾರ; ಹುರ್ರೇ, 4 ರಾಶಿಗಳಿಗೆ ಶುಭ ವಿಚಾರ

ಗಣೇಶನ ಚಿಹ್ನೆ
ಹಿಂದೂಗಳು ಗಣೇಶನನ್ನು ವಿಘ್ನಹರ್ತಾ ಎಂದು ಸಂಬೋಧಿಸುತ್ತಾರೆ. ಅಡೆತಡೆಗಳನ್ನು ನಿವಾರಿಸುವವ ಎಂದು ನಂಬುತ್ತಾರೆ. ಅವನು ತನ್ನ ಭಕ್ತರಿಗೆ ಅದೃಷ್ಟ ಮತ್ತು ಬುದ್ಧಿವಂತಿಕೆಯನ್ನು ನೀಡುತ್ತಾನೆ. ಪ್ರಥಮ ಪೂಜಿತ ಗಣೇಶನನ್ನು ಮುಖ್ಯ ಬಾಗಿಲ ಮೇಲೆ ಚಿಹ್ನೆಯಾಗಿ ಬಳಸಬಹುದು. ಅದು ನಿಮ್ಮ ಮನೆಗೆ ಸಮೃದ್ಧಿ ಮತ್ತು ಸಂಪತ್ತನ್ನು ಆಕರ್ಷಿಸುವ ಮಂಗಳಕರ ಸಂಕೇತವಾಗಿದೆ. ಇದಕ್ಕಾಗಿ ನೀವು ಅವನ ಫೋಟೋ ಇಲ್ಲವೇ ಕೆತ್ತನೆ ಬಳಸಬಹುದು. 

click me!