ಮನೆ ಕಳೆದುಕೊಂಡವರಿಗೆ ಸರ್ಕಾರದ ಬರೀ 1 ಲಕ್ಷ ಪರಿಹಾರ, ಈ ದುಡ್ಡಲ್ಲಿ ದನದ ದೊಡ್ಡಿನೂ ಕಟ್ಟೋಕೆ ಆಗಲ್ಲ!

Published : Jul 07, 2025, 12:50 PM IST
Uttara Kannada

ಸಾರಾಂಶ

ಶಿರಸಿಯಲ್ಲಿ ಧರೆ ಕುಸಿತದಿಂದ ಮನೆ ಕಳೆದುಕೊಂಡ ಕುಟುಂಬಕ್ಕೆ ಸರ್ಕಾರ ಕೇವಲ 1 ಲಕ್ಷ ರೂ. ಪರಿಹಾರ ನೀಡಿದೆ. ಶಾಸಕ ಭೀಮಣ್ಣ ನಾಯ್ಕ್‌ ಪರಿಹಾರ ವಿತರಿಸಿದ್ದು, ಬಿಜೆಪಿ ಮುಖಂಡರು ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿದ್ದಾರೆ.

ಕಾರವಾರ (ಜು.7): ಪಾಕೃತಿಕ ವಿಕೋಪದಲ್ಲಿ ಮನೆ-ಮಠ ಕಳೆದುಕೊಂಡವರಿಗೆ ಸರ್ಕಾರ ಪರಿಹಾರ ನೀಡೋದು ವಾಡಿಕೆ. ಯಾವ ಸರ್ಕಾರ ಕೂಡ 15 ಲಕ್ಷದಲ್ಲಿ ಕಟ್ಟಿದ ಮನೆಗೆ 15 ಲಕ್ಷ ಪರಿಹಾರ ಕೊಡೋದಿಲ್ಲ. ಆದರೂ ಒಂದಷ್ಟು ಮಟ್ಟಿಗೆ ಅವರಿಗೆ ಸಹಾಯವಾಗುವಷ್ಟು ಮೊತ್ತವನ್ನಾದರೂ ನೀಡಬೇಕು. ಆದರೆ, ಉತ್ತರ ಕನ್ನಡದ ಶಿರಸಿಯಲ್ಲಿ ಭಾನುವಾರ ಧರೆ ಕುಸಿದು ಮನೆಯೊಂದು ಸಂಪೂರ್ಣವಾಗಿ ಕುಸಿದಿತ್ತು. ಇದಕ್ಕೆ ಸರ್ಕಾರ ಕೊಟ್ಟ ಪರಿಹಾರ ಎಷ್ಟು ಗೊತ್ತಾ? ಬರೀ 1 ಲಕ್ಷ ರೂಪಾಯಿ.

ಸರಿಯಾಗಿ ಲೆಕ್ಕ ಹಾಕಿದರೆ, ಸರ್ಕಾರ ನೀಡಿರುವ ಈ ಹಣದಲ್ಲಿ ಮನೆಯ ಕಂಪೌಂಡ್‌ ಹಾಕಲು ಕೂಡ ಸಾಧ್ಯವಿಲ್ಲ. ದನದ ಡೊಡ್ಡಿ ಕೂಡ ಕಟ್ಟೋಕೆ ಆಗಲ್ಲ. ಆದರೆ, ಸರ್ಕಾರ ಕೊಟ್ಟಿರುವ ಬರೀ 1 ಲಕ್ಷ ರೂಪಾಯಿ ಹಣವನ್ನು ನೀಡಲು ಶಿರಸಿ ಶಾಸಕ ಭೀಮಣ್ಣ ನಾಯ್ಕ್‌, ಪೂರ್ಣಕುಂಭ ಸ್ವಾಗತದೊಂದಿಗೆ ಬರೋದು ಮಾತ್ರವೇ ಬಾಕಿ ಇತ್ತು.

ಧರೆ ಕುಸಿದು ಮನೆ ಕಳೆದುಕೊಂಡ ರಾಧಾ ಗೋಪಾಲ ನಾಯ್ಕ ಕುಟುಂಬಕ್ಕೆ ಭೀಮಣ್ಣ ನಾಯ್ಕ್‌ 1 ಲಕ್ಷ ರೂಪಾಯಿ ಪರಿಹಾರ ವಿತರಣೆ ಮಾಡಿದ್ದಾರೆ. ಸ್ಥಳಕ್ಕೆ ತೆರಳಿ 1 ಲಕ್ಷ ರೂ. ಪರಿಹಾರದ ಮೊತ್ತ ವಿತರಣೆ ಮಾಡಿದ್ದಾರೆ. ಬಹುಶಃ ಸರ್ಕಾರ ಕೊಟ್ಟಿರುವ 1 ಲಕ್ಷ ರೂಪಾಯಿ ಹಣ ಕೊಡೋಕೆ ಅವರಿಗೂ ಮುಜುಗರ ಆದಂತೆ ಕಾಣುತ್ತದೆ. ಅದಕ್ಕಾಗಿ ಸ್ವಲ್ಪ ಸ್ವಂತ ಮೊತ್ತವನ್ನೂ ಕುಟುಂಬಕ್ಕೆ ನೀಡಿದ್ದಾರೆ.

ಈ 1 ಲಕ್ಷ ರೂಪಾಯಿಯ ಚೆಕ್‌ ನೀಡುವ ಸಲುವಾಗಿ ಶಿರಸಿ ಎಸಿ ಕಾವ್ಯರಾಣಿ ಕೂಡ ಸಾಥ್‌ ನೀಡಿದ್ದರು. ಶಿರಸಿ ಮರಾಠಿಕೊಪ್ಪದಲ್ಲಿ ರಾಧಾ ನಾಯ್ಕ್‌ ಕುಟುಂಬ ಮನೆ ಕಳೆದುಕೊಂಡಿತ್ತು. ಮಳೆ ಮುಗಿಯೋವರೆಗೆ ಸ್ಥಳಾಂತರಗೊಳ್ಳಿ, ಬಳಿಕ ಸರಕಾರದಿಂದ‌ ಏನಾದರೂ ಸಹಾಯ ಮಾಡಿಸುವುದಾಗಿ ಶಾಸಕ ಭರವಸೆ ಮಾತ್ರ ನೀಡಿ ಹೋಗಿದ್ದಾರೆ.

ಶಾಸಕ ಭೀಮಣ್ಣ ನಾಯ್ಕ್ ಭೇಟಿ ನೀಡಿದ ಬಳಿಕ ಸ್ಥಳಕ್ಕೆ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಭೇಟಿ ನೀಡಿದ್ದಾರೆ. ಕುಟುಂಬಕ್ಕೆ ಸಾಂತ್ವನ ಹೇಳಿ ಆರ್ಥಿಕ ಸಹಾಯವನ್ನೂ ಮಾಡಿದ್ದಾರೆ. ಬಿಜೆಪಿ ಸರಕಾರವಿದ್ದಾಗ ಮನೆ ಬಿದ್ದರೆ 5 ಲಕ್ಷ ರೂ. ಪರಿಹಾರ ನೀಡಲಾಗುತ್ತಿತ್ತು. ಕಾಂಗ್ರೆಸ್ ಸರಕಾರ ಕೇವಲ 1 ಲಕ್ಷ ರೂ. ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತಿದೆ. ಬಡವರ ವಿಷಯದಲ್ಲಿ ಸರಕಾರದ ತಾತ್ಸಾರ ಸರಿಯಲ್ಲ, ತುರ್ತು ವ್ಯವಸ್ಥೆ ಮಾಡಬೇಕು. ಜನಸಾಮಾನ್ಯರ ವಿಚಾರದಲ್ಲಿ ಸರಕಾರದ ನಿರ್ಲಕ್ಷ್ಯ ಖಂಡನೀಯ ಎಂದಿದ್ದಾರೆ.

 

PREV
Read more Articles on
click me!

Recommended Stories

ಕಾರವಾರದಲ್ಲಿ ಭಾರತೀಯ ನೌಕಾ ದಿನಾಚರಣೆ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗಿ!
Photos: ಗೋಕರ್ಣದ ಬೀಚ್‌ನಲ್ಲಿ ಹಿಂದೂ ಪದ್ಧತಿಯಂತೆ ವಿದೇಶಿ ಜೋಡಿಯ ವಿವಾಹ!