ಮಲೆನಾಡಿನ ಮೂಲೆಯಲ್ಲಿ ಸದ್ದಿಲ್ಲದೇ ಪರಿಸರ ಕ್ರಾಂತಿಗೆ ಶ್ರೀಕಾರ ಹಾಕಿದ ಗಣಪತಿ ವಡ್ಡಿನಗದ್ದೆ

By Kannadaprabha News  |  First Published Jun 5, 2023, 10:03 AM IST

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣಕ್ಕೆ ಸಮೀಪದಲ್ಲಿಯೇ ಇರುವ ಊರು ವಡ್ಡಿನಗದ್ದೆ. ಅಲ್ಲಿನ ಕೃಷಿಕ ಗಣಪತಿ ಹೆಗಡೆ ಎಂಬ ಪರಿಸರ ಪ್ರೇಮಿಯ ಬದುಕು ಪರಿಸರದ ಉಳಿವಿಗೆ ದೊಡ್ಡ ದೊಡ್ಡ ಕಾರ್ಯಕ್ರಮಗಳ ಬದಲು ನಮ್ಮ ಜೀವನಶೈಲಿಯಲ್ಲಿಯೇ ಹೇಗೆ ಸಾಕಷ್ಟು ಮಾರ್ಗಗಳಿವೆ ಎಂಬುದನ್ನು ನಮಗೆ ತೋರಿಸಿಕೊಡುತ್ತದೆ.


ಸಹನಾ ಹೆಗಡೆ

ಸಿದ್ದಾಪುರ: ಗಿಡಗಳನ್ನು ನೆಟ್ಟುಬಿಟ್ಟರೆ ಸಾಲದು, ಅವುಗಳನ್ನು ಪೋಷಿಸಬೇಕು, ಅವು ಬೆಳೆದು ಸದೃಢವಾಗುವ ತನಕ ರಕ್ಷಿಸಬೇಕು. ಪ್ರತಿಫಲಾಪೇಕ್ಷೆಯಿಲ್ಲದೇ ದುಡಿಯುವ ಶ್ರದ್ಧೆ ಬೇಕು. ಪ್ರಚಾರಪ್ರಿಯರಿಂದ ಆಗುವ ಕೆಲಸ ಇದಲ್ಲ. ಗಣಪತಿ ಅವರಂತಹ ತೆರೆಮರೆಯ ಕಾಯಕ ಜೀವಿಗಳಿಂದ ಕೆಲವೆಡೆ ಇಂತಹ ನಿಸ್ವಾರ್ಥ ಕಾರ್ಯಗಳು ಆಗುತ್ತಿವೆ. ಅರಣ್ಯ ಇಲಾಖೆ ಹಾಗೂ ಭವಿಷ್ಯದ ತಲೆಮಾರಿಗೆ ಇಂಥವರೇ ಮಾದರಿ.

Tap to resize

Latest Videos

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣಕ್ಕೆ ಸಮೀಪದಲ್ಲಿಯೇ ಇರುವ ಊರು ವಡ್ಡಿನಗದ್ದೆ. ಅಲ್ಲಿನ ಕೃಷಿಕ ಗಣಪತಿ ಹೆಗಡೆ ಎಂಬ ಪರಿಸರ ಪ್ರೇಮಿಯ ಬದುಕು ಪರಿಸರದ ಉಳಿವಿಗೆ ದೊಡ್ಡ ದೊಡ್ಡ ಕಾರ್ಯಕ್ರಮಗಳ ಬದಲು ನಮ್ಮ ಜೀವನಶೈಲಿಯಲ್ಲಿಯೇ ಹೇಗೆ ಸಾಕಷ್ಟು ಮಾರ್ಗಗಳಿವೆ ಎಂಬುದನ್ನು ನಮಗೆ ತೋರಿಸಿಕೊಡುತ್ತದೆ.

ಕೇವಲ ಮಾಧ್ಯಮಿಕ ಶಿಕ್ಷಣವನ್ನಷ್ಟೇ ಪಡೆದು ಪ್ರಕೃತಿ ಎಂಬ ಮಹಾಪಾಠಶಾಲೆಯತ್ತ ಮುಖ ಮಾಡಿದ ಗಣಪತಿ ಅವರು ಪರಿಸರದ ಮಡಿಲಿನಲ್ಲಿ ಸ್ವತಃ ಅನುಭವಗಳಿಂದಲೇ ಪರಿಸರದ ಪಾಠಗಳನ್ನು ಕಲಿತವರು. ಭಾರತೀ ಸಂಪದ (Bharati sampada) ಎಂಬ ಸಂಸ್ಥೆ ಹುಟ್ಟುಹಾಕಿ 2011ರಿಂದೀಚೆಗೆ ಪ್ರತೀವರ್ಷ ಅದರಡಿಯಲ್ಲಿ ಪರಿಸರದ ಕುರಿತಾದ ಜನಜಾಗೃತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಪರಿಸರ ತಜ್ಞರನ್ನು( Environmentalist), ಸಸ್ಯವಿಜ್ಞಾನಿಗಳನ್ನು ಮನೆಯಂಗಳಕ್ಕೇ ಕರೆಸಿ ವಿದ್ಯಾರ್ಥಿಗಳು ಮತ್ತು ಕೃಷಿಕರನ್ನು (Agriculturist) ದೃಷ್ಟಿಯಲ್ಲಿಟ್ಟುಕೊಂಡು ಸಸ್ಯಗಳ ಕುರಿತಾದ ಪರಿಚಯ, ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸುತ್ತಿದ್ದಾರೆ. ವರ್ಷವಿಡೀ ಎರಡು-ಮೂರು ಸಸ್ಯ ಪ್ರಭೇದಗಳ ಕುರಿತಂತೆ ಅಧ್ಯಯನ ಅಥವಾ ಪ್ರಯೋಗ, ಕಾಡು ಮರಗಳ ಬೀಜ ಹಾಗೂ ದೇಸೀ ಬೀಜಗಳ ಸಂಗ್ರಹಣೆ, ಸಂರಕ್ಷಣೆ, ಸಸ್ಯ ಪಾಲನೆ, ನೆಡುವಿಕೆ ಮತ್ತು ಆನಂತರದ ರಕ್ಷಣೆ, ಜಲಸಂಗ್ರಹ, ಇಂಗುಗುಂಡಿ ನಿರ್ಮಾಣ ಇತ್ಯಾದಿ ಕಾರ್ಯಗಳು ನಡೆದೇ ಇರುತ್ತವೆ. ತಮ್ಮ ಮನೆಯ ಸುತ್ತಮುತ್ತಲಿನ ಖಾಲಿ ಜಾಗದಲ್ಲೆಲ್ಲ ಗಿಡಮರಗಳನ್ನು ಬೆಳೆಸಿ ಬಯಲನ್ನು ನೈಸರ್ಗಿಕ ಕಾಡನ್ನಾಗಿಸಿದ್ದಾರೆ.

World Environment Day 2023: ಈ ದಿನದ ಇತಿಹಾಸ, ಮಹತ್ವ ಮತ್ತು ಥೀಮ್‌ ಏನು? ಇಲ್ಲಿದೆ ಮಾಹಿತಿ

ವಿದ್ಯಾರ್ಥಿಗಳಿಗೆ ಪರಿಸರ ಪಾಠ

ಪರಿಸರದ ರಕ್ಷಣೆಗೆ ಭವಿಷ್ಯದ ನಾಗರಿಕರಲ್ಲಿ ಅದರ ಬಗ್ಗೆ ಪ್ರಜ್ಞೆ ಮೂಡಿಸುವುದು ಅಗತ್ಯವೆಂದು ಮನಗಂಡಿರುವ ಗಣಪತಿ ಅವರು, ವಿದ್ಯಾರ್ಥಿಗಳನ್ನೊಳಗೊಂಡ ಪರಿಸರ ಅಧ್ಯಯನ ಶಿಬಿರಗಳನ್ನು ಹಮ್ಮಿಕೊಳ್ಳುತ್ತಾರೆ. ವಿದ್ಯಾರ್ಥಿಗಳಿಗಾಗಿ, ವಿಶೇಷವಾಗಿ ಮಕ್ಕಳಿಗೆ ಬೇಸಿಗೆ ರಜೆಯ ಅವಧಿಯಲ್ಲಿ ಕಾಡಿನ ಹಣ್ಣುಗಳು ಮತ್ತು ಶಾಲಾ ಮಕ್ಕಳು ಎಂಬ ಕಾರ್ಯಕ್ರಮದಡಿ, ನೇರಳೆ, ಕವಳೆ, ಹಲಗೆ, ಹಣಗೆರೆ ಇತ್ಯಾದಿ ಕಾಡಿನಲ್ಲಿ ಬೆಳೆಯುವ 24 ವಿವಿಧ ಹಣ್ಣುಗಳನ್ನು ಪರಿಚಯಿಸಿ, ಅವುಗಳ ಬೀಜಗಳನ್ನು ಸಂಗ್ರಹಿಸಿ, ಮೊಳಕೆಯೊಡೆಸಿ ಗಿಡ ತಯಾರು ಮಾಡಿ ನೆಡೆಸಿ, ಮುಂದಿನ ಪೀಳಿಗೆಗೆ ಅವುಗಳ ಬಗ್ಗೆ ಆಸಕ್ತಿ ಹುಟ್ಟುವಂತೆ ಮಾಡುತ್ತಾರೆ.

ಅಪರೂಪದ ಸಸ್ಯ ಪ್ರಭೇದಗಳ ರಕ್ಷಣೆ

ಸರ್ಕಾರ ‘ಬೀಜೋತ್ಸವ’ ಹಮ್ಮಿಕೊಳ್ಳುವುದಕ್ಕೂ ಮೊದಲೇ ಗಣಪತಿ 2011ರಲ್ಲೇ ‘ಸಾವಿರ ಬೀಜ, ಸಹಜ ಕಾಡು’ ಎಂಬ ಕಾರ್ಯಕ್ರಮದಡಿಯಲ್ಲಿ ಅದನ್ನು ಏರ್ಪಡಿಸಿ 50ರಿಂದ 60 ಪ್ರಭೇದದ ಬೀಜಗಳನ್ನು ಬಿತ್ತಿದ್ದರು. ರಾಜ್ಯದ ಇತಿಹಾಸದಲ್ಲಿಯೇ ಇದು ಪ್ರಥಮ ಪ್ರಯತ್ನವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಯಾವುದೇ ಪ್ರಾಣಿಪಕ್ಷಿಗಳಿಂದ ಪ್ರಸಾರವಾಗದ ಅಣಲೆ, ತಾರಿ, ಕಾಸರಕ, ಕಕ್ಕೆ, ಕೌಲು, ನೆಲ್ಲಿ, ಭಿಲ್ಕಂಬಿ, ರಾಳಧೂಪ ಇತ್ಯಾದಿ ಸಸ್ಯಗಳ ಬೀಜಗಳಲ್ಲದೇ ಮತ್ತಿ, ಶಿವಣೆ, ಗಣಪೆ, ಹಿಪ್ಪೆ, ರಂಜಲು, ಮುತ್ತುಗ, ಸರ್ಪಗಂಧಿ, ಅಶೋಕ, ದಾಲ್ಚಿನ್ನಿ, ಮುರುಗಲು, ವಾಟೆ ಇತ್ಯಾದಿ ಅತಿವಿರಳವಾದ ಹಾಗೂ ವಿನಾಶದಂಚಿನಲ್ಲಿರುವ ಬೀಜಗಳನ್ನು ಸಂಗ್ರಹಿಸಿ, ಗಿಡ ಮಾಡಿ ನೆಟ್ಟಿದ್ದರು. ಒಂದು ವರ್ಷದ ಅವಧಿಯಲ್ಲಿ ಅವರು ಹೀಗೆ ಸುಮಾರು 80-100 ಪ್ರಭೇದಗಳ ಬೀಜವನ್ನು ಸಂಗ್ರಹಿಸಿ ಸಸಿ ಮಾಡಿ ನೆಟ್ಟಿದ್ದಾರೆ.

ಗಿಡ ನೆಡೋದಷ್ಟೇ ಅಲ್ಲ, ಕಾಗದ ಉಳಿಸೋದೂ ಪರಿಸರ ಪ್ರೀತಿ
ಕೆಲವು ಸಸ್ಯಗಳ ಬೀಜಗಳು, ನಿರ್ದಿಷ್ಟ ಪಕ್ಷಿಗಳು ಅವುಗಳನ್ನು ಸೇವಿಸಿ, ವಿಸರ್ಜಿಸಿದ ನಂತರವಷ್ಟೇ ಮೊಳಕೆಯೊಡೆಯುತ್ತವೆ. ಅಂತಹ ಪಕ್ಷಿಗಳು ಕಾಣೆಯಾದರೆ ಆ ಸಸ್ಯಗಳೂ ವಿನಾಶದಂಚಿಗೆ ಸಾಗುತ್ತವೆ ಎಂದೇ ಅರ್ಥ. ಗಣಪತಿ ಅವರು ಆರು ವರ್ಷಗಳ ಪ್ರಯೋಗದ ನಂತರ ರುದ್ರಾಕ್ಷಿಯ ಗಿಡ ತಯಾರಿಸಿದ್ದಾರೆ. ರುದ್ರಾಕ್ಷಿಯು ಮೊಳಕೆಯೊಡೆದು ಸಸಿಯಾಗುವುದು ಸುಲಭವಲ್ಲ. ಅದನ್ನು ಒಡೆಯಬೇಕು. ನೂರಾರು ರುದ್ರಾಕ್ಷಿಗಳನ್ನು ಒಡೆದರೆ ಅದರಲ್ಲಿ ಒಂದೋ ಎರಡೋ ಮೊಳಕೆಯೊಡೆಯಬಹುದು ಅಷ್ಟೇ. ಗಣಪೆ ಕಾಯಿಯು ಮೊಳಕೆ ಒಡೆಯಲು ಆರು ತಿಂಗಳುಗಳಷ್ಟು ದೀರ್ಘ ಕಾಲಾವಧಿ ಅವಶ್ಯವಾಗಿದ್ದು, ಸಿಹಿ ಅಮಟೆ ಸಸಿಯನ್ನು ತಯಾರಿಸಲು ಒಂದು ವರ್ಷದಷ್ಟುತಾಳ್ಮೆ ಪರಿಶ್ರಮ ಅಗತ್ಯವಿರುವುದರಿಂದ ಬೀಜವನ್ನು ಸಸಿ ಮಾಡುವಲ್ಲಿ ವಿಶಿಷ್ಟಪ್ರಯೋಗಶೀಲತೆಯೂ ಬೇಕು ಎನ್ನುತ್ತಾರೆ ಗಣಪತಿ. ಕಸಿ ಕಟ್ಟುವ ವಿಧಾನವನ್ನು ಹಲವು ಮೂಲಗಳಿಂದ ಕಲಿತು, ಮಾವು, ಚಿಕ್ಕು, ಸಂಪಿಗೆ, ದಾಲ್ಚಿನ್ನಿ (ಶಿರ್ಶಿಕರ ಕಸಿ ವಿಧಾನ), ಲವಂಗ, ಜಾಯಿಕಾಯಿ, ಬಿಳಿಮುರುಗಲು, ಏಕನಾಯಕ, ಅಶೋಕ, ಸಮಿತ್ತುಗಳ ಸಸಿ ತಯಾರಿಸಿ ಬೆಳೆಸುವಲ್ಲಿ ಸಫಲರಾಗಿದ್ದಾರೆ.

world environment day 2023: ಇಂದು ರಾಶಿಗನುಗುಣವಾಗಿ ಈ ಗಿಡ ನೆಟ್ಟರೆ ಅದೃಷ್ಟದ ದಿನಗಳು ಶುರು..

ಬೀಜ ಸಂರಕ್ಷಣೆ, ಪಾಲನೆ, ಅಧ್ಯಯನ

ವರ್ಷವಿಡೀ ಮಲೆನಾಡಿನ ದಟ್ಟಕಾಡುಗಳ ಮಧ್ಯೆ ಅಲೆದಾಡುವ ಗಣಪತಿ ಕಾಡು ಬೀಜಗಳನ್ನು ಸಂಗ್ರಹಿಸುತ್ತಾರೆ. ಅವುಗಳನ್ನು ಗಿಡ ಮಾಡುವಾಗ ಅಧ್ಯಯನದ ಜೊತೆಗೆ ಸ್ಥಳೀಯ ಹಾಗೂ ಪಾರಂಪರಿಕ ಜ್ಞಾನಕ್ಕೆ ಹೆಚ್ಚಿನ ಗಮನ ಕೊಡುತ್ತಾರೆ. ಬೀಜ ಸಂರಕ್ಷಣೆ, ಗಿಡಗಳ ಲಾಲನೆ-ಪಾಲನೆಗೆ ಸಂಬಂಧಿಸಿದಂತೆ ದೇಸೀ ತಂತ್ರ-ವಿಧಾನಗಳನ್ನು ಅರಿತು ಅವುಗಳ ಹಿಂದಿರುವ ತರ್ಕವನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಬೀಜ ಮತ್ತು ಸಸ್ಯಗಳ ಸಂರಕ್ಷಣೆಯ ಉಪಾಯಗಳನ್ನು ಕಲೆ ಹಾಕುತ್ತಾರೆ. ನೀರು, ಗಾಳಿ, ಹಕ್ಕಿಪಕ್ಷಿಗಳು ಮತ್ತು ಪ್ರಾಣಿಗಳಿಂದ ಪ್ರಸರಣವಾಗದಂತಹ ಬೀಜಗಳ ಸಂಗ್ರಹಣೆಗೆ ಆದ್ಯತೆ ನೀಡುತ್ತಾರೆ.

ಗಣಪತಿ ಅವರು ನಾಶದಂಚಿನಲ್ಲಿರುವ ದೇವದಾರಿನಂತಹ ಅಪರೂಪದ ಸಸ್ಯಗಳ ಬೀಜಗಳನ್ನಲ್ಲದೇ ಪಶ್ಚಿಮ ಘಟ್ಟದ ವೈವಿಧ್ಯಮಯ ಮರಗಿಡಗಳ ಬೀಜಗಳನ್ನು ಸಂಗ್ರಹಿಸಿ ಅರಣ್ಯ ಇಲಾಖೆಗೆ ಪೂರೈಸಿದ್ದಾರೆ. ನೂರಾರು ವರ್ಷಗಳಷ್ಟುಹಳೆಯದಾದ ಕಣಸೆ ಅಪ್ಪೆಯ ಗಿಡಗಳನ್ನು ಕಸಿ ವಿಧಾನದ ಮೂಲಕ ತಯಾರಿಸಿ ಕೊಡುವುದರಲ್ಲಿ ಅರಣ್ಯ ಇಲಾಖೆಗೆ ನೆರವು ನೀಡಿದ್ದಾರೆ. ದಾರು ಹರಿದ್ರಾ, ಹೆಗ್ಗವಳಿ, ಸೀಗೆ, ಬರ್ಖಬಾಳೆ, ಗಣಪೆಕಾಯಿ, ಗುಲಗುಂಜಿ, ಒಡಕುಗಡಿಗೆ ಹಣ್ಣು ಮುಂತಾದ ಅಪರೂಪದ ಸಸ್ಯಗಳ ಬೀಜಗಳನ್ನು ಸಂಗ್ರಹಿಸಿ ಗಿಡಗಳನ್ನು ತಯಾರಿಸಿ ಸ್ವತಃ ನೆಟ್ಟು, ಅರಣ್ಯ ಇಲಾಖೆಗೂ ಪರಿಚಯಿಸಿದ್ದಾರೆ.

ಇವರು ಅಭಿವೃದ್ಧಿಪಡಿಸುತ್ತಿರುವ ಅಶೋಕ ವನ ಮತ್ತು ನಕ್ಷತ್ರ ವನಗಳಲ್ಲಿ ಪಾಟಲಿ, ಶಿಲಕ, ಸಪ್ತಪರ್ಣಿ ಇತ್ಯಾದಿ ನಲವತ್ತೈದು ವೃಕ್ಷಗಳಲ್ಲದೇ ಬಿಳಿಬೂರಲು, ಬಿಳಿಮತ್ತಿ, ಬಿಳಿಮುತ್ತುಗ, ಬಿಳಿಮುರುಗಲು, ಕೆಂಪು ಉಪ್ಪಾಗೆ, ಕೆಂಪು ನೇರಲು, ಅಶೋಕ, ಲಕ್ಷ್ಮೀತರು, ಪುತ್ರಂಜೀವಿ, ಸರ್ಪಗಂಧಿ ಇತ್ಯಾದಿ ಹಲವಾರು ಅಪರೂಪದ ಔಷಧಿ ಸಸ್ಯಗಳಿವೆ. ಸಿದ್ದಾಪುರ ಸಮೀಪದ ಗೋಸ್ವರ್ಗದ ಆವರಣದಲ್ಲಿ ಹಸಿರು ನಳನಳಿಸುವಂತೆ ಮಾಡುವ ಜವಾಬ್ದಾರಿಯನ್ನು ರಾಮಚಂದ್ರಾಪುರ ಮಠದ ಶ್ರೀಗಳು ಇವರಿಗೆ ವಹಿಸಿದ್ದಾರೆ.

ಸ್ಮಶಾನದಲ್ಲಿ ಕಾಡು ಬೀಜಗಳನ್ನು ಬಿತ್ತುವುದರ ಮೂಲಕ ಸಹಜ ಕಾಡಿನ ನಿರ್ಮಾಣಕ್ಕೆ ಇವರು ಹೊಸ ಅಧ್ಯಾಯ ಬರೆದಿದ್ದಾರೆ. ಕಾಡುಬೀಜಗಳ ಪರಿಚಯ, ಮೊಳಕೆ ಬರಿಸಿ ನೆಡುವ ಕುರಿತು ಮಾಹಿತಿ ನೀಡುವುದು ಈ ಬಿತ್ತನೆ ಅಭಿಯಾನದ ಹಿಂದಿರುವ ಉದ್ದೇಶ. ಜಾನುವಾರುಗಳು ತಿನ್ನದ ಇಂತಹ ಬೀಜಗಳು ಮೊಳೆತು ಬೆಳೆದಲ್ಲಿ ಸ್ಮಶಾನವೂ ಪರಿಸರದ ಉಳಿವಿಗೆ ಕೊಡುಗೆ ನೀಡುವುದರಲ್ಲಿ ಅನುಮಾನವಿಲ್ಲ. ಗಣಪತಿಯವರ ಅಭಿಪ್ರಾಯದ ಪ್ರಕಾರ, ಮೊಳಕೆಯೊಡೆದು ಮರವಾಗಿ ಬೆಳೆಯುವವರೆಗೂ ಅವುಗಳಿಗೆ ರಕ್ಷಣೆ, ಕಾಳಜಿಯ ಅವಶ್ಯಕತೆಯಿದ್ದು ಅದಕ್ಕಾಗಿ ಸಾರ್ವಜನಿಕರ ಸಹಕಾರವೂ ಅಗತ್ಯ.

ಹಣ್ಣಿನ ಗಿಡಗಳನ್ನು ಬೆಳೆಸುವ ಅಗತ್ಯ

ಇತ್ತೀಚೆಗೆ ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆ ರಕ್ಷಣೆ ಮಾಡಿಕೊಳ್ಳುವುದೇ ದುಸ್ತರವಾಗಿರುವ ಹಿನ್ನೆಲೆಯಲ್ಲಿ ಅಡಿಕೆ ತೋಟಗಳ ಬದುವಿನ ಮೇಲೆ ಹಣ್ಣಿನ ಗಿಡಗಳನ್ನು ಬೆಳೆಸುವಂತೆ ಕೃಷಿಕರ ಮನವೊಲಿಸುವುದು ಮತ್ತು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವುದು ತಮ್ಮ ಉದ್ದೇಶ ಎಂದು ಗಣಪತಿ ಹೇಳುತ್ತಾರೆ.

ಪರಿಸರ ತಜ್ಞ ಸಂತೋಷ್‌ಕುಮಾರ್‌ ಅವರ ಸಲಹೆಯ ಮೇರೆಗೆ ಕಾಡು ಬೀಜಗಳ ಬಿತ್ತನೆ ಮಾಡಿದ ನಂತರ ಅದನ್ನು ದಾಖಲಿಸುವ ಕಾರ್ಯವನ್ನೂ ಮಾಡುತ್ತಿದ್ದಾರೆ. ಬೀಜ ಮತ್ತು ಸಸ್ಯಗಳ ಕುರಿತಾದ ಮಾಹಿತಿ, ಅವುಗಳನ್ನು ನೆಟ್ಟಅಥವಾ ಬಿತ್ತಿದ ಕಾಲ ಮತ್ತು ಅವುಗಳ ಬೆಳವಣಿಗೆಯನ್ನು ದಿನಾಂಕ ಸಹಿತವಾಗಿ ದಾಖಲಿಸುತ್ತ ಬಂದಿದ್ದಾರೆ. ಮೊದಲು ಅಪರೂಪದ ಸಸ್ಯ ಪ್ರಭೇದಗಳ, ಬೀಜಗಳ ದಾಖಲೀಕರಣದ ಉದ್ದೇಶವನ್ನಿಟ್ಟುಕೊಂಡು ಖರೀದಿಸಿದ ದುಬಾರಿ ವೆಚ್ಚದ ಕ್ಯಾಮೆರಾ ಈಗ ಅವರಿಗೆ ಚಿಕ್ಕ ಆದಾಯದ ಮೂಲವೂ ಆಗಿದೆ.

ಗಿಡಗಳನ್ನು ನೆಟ್ಟುಬಿಟ್ಟರೆ ಸಾಲದು, ಅವುಗಳನ್ನು ಪೋಷಿಸಬೇಕು, ಅವು ಬೆಳೆದು ಸದೃಢವಾಗುವ ತನಕ ರಕ್ಷಿಸಬೇಕು. ಪ್ರತಿಫಲಾಪೇಕ್ಷೆಯಿಲ್ಲದೇ ದುಡಿಯುವ ಶ್ರದ್ಧೆ ಬೇಕು. ಪ್ರಚಾರಪ್ರಿಯರಿಂದ ಆಗುವ ಕೆಲಸ ಇದಲ್ಲ. ಭಾಷಣ, ಮಾತು-ಚರ್ಚೆಗಳಿಂದ ಸಾಕಾರಗೊಳ್ಳುವ ಕನಸೂ ಇದಲ್ಲ. ಮಳೆ, ಬಿಸಿಲು, ಗಾಳಿ, ನೀರು, ರೋಗರುಜಿನ, ಹವಾಮಾನದ ವೈಪರೀತ್ಯಗಳಿಗೆ ಒಡ್ಡಲ್ಪಡುವ ಗಿಡಮರಗಳು ತಂದೊಡ್ಡುವ ಅದೆಷ್ಟೋ ಹತಾಶ ಸಂದರ್ಭಗಳನ್ನು ತಾಳಿಕೊಳ್ಳುವ ಗುಣ ಬೇಕು. ದೂರದರ್ಶಿತ್ವ ಬೇಕು. ಈ ಗುಣಗಳು ಗಣಪತಿಯವರಲ್ಲಿ ಮೈಗೂಡಿವೆ.

click me!