
ಕಾರವಾರ/ಭಟ್ಕಳ (ಮೇ.29): ನಾನು ದೇವಸ್ಥಾನಗಳನ್ನು ಕಟ್ಟುವವನೇ ಹೊರತು, ದೇವರ ಸ್ಥಾನಗಳನ್ನು ಕೆಡವುವವನಲ್ಲ. ಭಟ್ಕಳದ ವಿವಾದಿತ ಮುರಿನ್‌ಕಟ್ಟೆಯನ್ನು ಅತ್ಯಂತ ಶಾಸ್ತ್ರೋಕ್ತವಾಗಿ ಅದು ಇದ್ದ ಜಾಗದಲ್ಲಿಯೇ ಅಥವಾ ಅದರ ಸನಿಹದಲ್ಲೇ ಪುನರ್ ನಿರ್ಮಾಣ ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಭಟ್ಕಳದ ಜನತೆಗೆ ಭರವಸೆ ನೀಡಿದ್ದಾರೆ. ಶಿರಾಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುರಿನ್‌ಕಟ್ಟೆ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿ ನಾಯಕರ ವಿರುದ್ಧ ತೀವ್ರವಾಗಿ ಗರಂ ಆದರು.
ಮುರಿನ್‌ಕಟ್ಟೆ ವಿವಾದದ ಹಿನ್ನೆಲೆಯನ್ನು ಕೆದಕಿದ ಸಚಿವ ಮಂಕಾಳು ವೈದ್ಯ, 'ಈ ಮುರಿನ್‌ಕಟ್ಟೆ ವಿವಾದ ಆರಂಭವಾಗಿದ್ದೇ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ, ಸುನೀಲ್ ನಾಯ್ಕ್ ಶಾಸಕರಾಗಿದ್ದಾಗ. ಆ ಸಮಯದಲ್ಲಿ ಮಾಜಿ ಶಾಸಕ ಸುನೀಲ್ ನಾಯ್ಕ್ ಅವರು ಈ ವಿಷಯದಲ್ಲಿ ಒಳ ಒಪ್ಪಂದ ಅಥವಾ ಹೊಂದಾಣಿಕೆ ಮಾಡಿಕೊಂಡಿದ್ದರು ಎನ್ನುವ ಬಲವಾದ ಸಂಶಯ ನಮಗಿದೆ. ಅಂದು ಅಧಿಕಾರ ಕೈಯಲ್ಲಿದ್ದಾಗ ಸುಮ್ಮನೆ ಕೂತಿದ್ದ ಬಿಜೆಪಿ ನಾಯಕರು, ಈಗ ಧರ್ಮದ ಹೆಸರಿನಲ್ಲಿ ಗದ್ದಲ, ಗಲಾಟೆ ಮಾಡಲು ಹೊರಟಿರುವುದು ಯಾಕೆ? ಎಂದು ಪ್ರಶ್ನಿಸಿದರು.
"ಇದು ದೇವರು ಮತ್ತು ದೈವಗಳ ಪವಿತ್ರ ಸ್ಥಾನ. ದೇವರ ವಿಚಾರದಲ್ಲಿ ಯಾರೇ ಅನ್ಯಾಯ ಅಥವಾ ಸ್ವಾರ್ಥದ ರಾಜಕೀಯ ಮಾಡಿದರೂ ಅವರು ತಮ್ಮ ಸರ್ವಸ್ವವನ್ನೇ ಕಳೆದುಕೊಳ್ಳುತ್ತಾರೆ. ಈ ನಿಯಮ ಎಲ್ಲರಿಗೂ ಅನ್ವಯಿಸುತ್ತದೆ. ಒಂದುವೇಳೆ ನಾನೇನಾದರೂ ದೇವರ ಹೆಸರಿನಲ್ಲಿ ರಾಜಕೀಯ ಮಾಡಲು ಹೋದರೆ ನನಗೂ ಕಂಟಕ ತಪ್ಪಿದ್ದಲ್ಲ," ಎಂದು ಸಚಿವರು ಎಚ್ಚರಿಕೆ ನೀಡಿದರು. ಬಿಜೆಪಿ ನಾಯಕರಿಗೆ ಕೇವಲ ರಾಜಕೀಯ ಮಾಡುವುದಷ್ಟೇ ಗೊತ್ತು, ಕ್ಷೇತ್ರದ ಅಭಿವೃದ್ಧಿಯಲ್ಲ ಎಂದು ಅವರು ತರಾಟೆಗೆ ತೆಗೆದುಕೊಂಡರು.
ಇದೇ ವೇಳೆ ರಾಜ್ಯ ರಾಜಕೀಯದ ಹೈ-ಡ್ರಾಮಾ ಹಾಗೂ ಸಿಎಂ ಸಿದ್ದರಾಮಯ್ಯ ಅವರ ದಿಢೀರ್ ರಾಜೀನಾಮೆ ಕುರಿತು ಮಾತನಾಡಿದ ಸಚಿವರು, "ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿನ್ನೆ (ಮೇ 28) ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ನಮ್ಮ ಕಾಂಗ್ರೆಸ್ ಹೈಕಮಾಂಡ್ ಅತ್ಯಂತ ಯೋಗ್ಯ ಮತ್ತು ಒಳ್ಳೆಯ ವ್ಯಕ್ತಿಯನ್ನು ಮುಂದಿನ ಸಿಎಂ ಆಗಿ ಆಯ್ಕೆ ಮಾಡಲಿದೆ. ಆಯ್ಕೆಯಾಗುವ ಹೊಸ ನಾಯಕರು ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಒಳ್ಳೆಯ ಆಡಳಿತ ನೀಡಲಿದ್ದಾರೆ," ಎಂದರು.
"ಸದ್ಯ ದೆಹಲಿಗೆ ನಮ್ಮ ರಾಜ್ಯದ ಹಿರಿಯ ಸಚಿವರು ಹಾಗೂ ಕೆಪಿಸಿಸಿ ಅಧ್ಯಕ್ಷರು ಹೋಗಿದ್ದಾರೆ. ಹೈಕಮಾಂಡ್ ಸಮ್ಮುಖದಲ್ಲಿ ಅಲ್ಲಿ ಕೈಗೊಳ್ಳುವ ಅಂತಿಮ ನಿರ್ಧಾರಕ್ಕೆ ರಾಜ್ಯದ ಎಲ್ಲಾ 136 ಕಾಂಗ್ರೆಸ್ ಶಾಸಕರು ಸಂಪೂರ್ಣವಾಗಿ ಬದ್ಧರಾಗಿರುತ್ತಾರೆ. ಬಹುಶಃ ನಾಳೆ ಅಥವಾ ನಾಡಿದ್ದು ಶಾಸಕಾಂಗ ಪಕ್ಷದ (CLP) ಸಭೆ ಕರೆಯಬಹುದು. ನಾವೆಲ್ಲರೂ ಆ ಸಭೆಯಲ್ಲಿ ಭಾಗವಹಿಸಿ ಹೈಕಮಾಂಡ್ ತೀರ್ಮಾನವನ್ನು ಒಪ್ಪಿಕೊಳ್ಳಲಿದ್ದೇವೆ," ಎಂದು ಸ್ಪಷ್ಟಪಡಿಸಿದರು.
ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿಯ ನಡುವೆಯೂ ತಮಗೆ ಕ್ಷೇತ್ರವೇ ಮುಖ್ಯ ಎಂದ ವೈದ್ಯ, ನಾನು ಇಂದು ಸಚಿವನಾಗಲು ನನ್ನ ಭಟ್ಕಳ-ಹೊನ್ನಾವರ ಕ್ಷೇತ್ರದ ಜನರೇ ಮುಖ್ಯ ಕಾರಣ. ಅವರು ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದಕ್ಕೇ ನಾನು ಮಂತ್ರಿಯಾಗಿದ್ದೇನೆ. ದೆಹಲಿ ರಾಜಕಾರಣ ನಮಗೆ ಬೇಡ, ನನಗೆ ನನ್ನ ಕ್ಷೇತ್ರದ ಜನರ ಕೆಲಸ ಮಾಡಬೇಕಿದೆ. ಹಾಗಾಗಿ ನಾನು ಬೆಂಗಳೂರು ಅಥವಾ ದೆಹಲಿ ಎಂದು ಅಲೆಯದೇ ನನ್ನ ಕ್ಷೇತ್ರದಲ್ಲೇ ಇದ್ದು ಜನರ ಸೇವೆ ಮಾಡುತ್ತೇನೆ ಎಂದು ಹೇಳಿದ್ದಾರೆ.