Weird News: ಆತನಿಗೆ 52 ವರ್ಷ, ಇತ್ತೀಚೆಗಷ್ಟೇ ಮದುವೆಯಾಗಿದ್ದ. ಹುಡುಗಿ ವಯಸ್ಸಿನಲ್ಲಿ ಚಿಕ್ಕವಳೆಂದು ಗೊತ್ತಿತ್ತು ಆದರೆ ಅಪ್ರಾಪ್ತೆ ಎಂಬುದು ತಿಳಿದಿರಲಿಲ್ಲ. ಮೂರು ತಿಂಗಳ ಬಳಿಕ ವಿಷಯ ತಿಳಿದಿದೆ, ಪೊಲೀಸರು ಆತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಕಾರವಾರ: ಅಪ್ರಾಪ್ತ ಬಾಲಕಿಯನ್ನು ಮದುವೆಯಾದ ಆರೋಪದಡಿ ಕಾರವಾರ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಿತ್ರ ಎಂದರೆ ಇದು ಬಾಲ್ಯ ವಿವಾಹ ಎಂಬುದು ಆತನಿಗೂ ಗೊತ್ತಿರಲಿಲ್ಲವಂತೆ. ಮದುವೆಯಾಗಿ ಮೂರು ತಿಂಗಳ ಬಳಿಕ ಹೆಂಡತಿ ಅಪ್ರಾಪ್ತೆ ಎಂಬ ವಿಚಾರ ಈತನಿಗೆ ತಿಳಿದಿದೆ. ಆಗ ಕಕ್ಕಾಬಿಕ್ಕಿಯಾಗಿದ್ದಾನೆ. ಆದರೆ ಗೊತ್ತಿದ್ದು ಅಥವಾ ಗೊತ್ತಿಲ್ಲದೇ ಮಾಡಿದ್ದರೂ ತಪ್ಪೇ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪೊಲೀಸರಿಗೆ ದೂರು ನೀಡಿ ವರನನ್ನು ಜೈಲಿಗೆ ಅಟ್ಟಿದೆ. 16ರ ವಯಸ್ಸಿನ ಬಾಲಕಿಯನ್ನು ಮದುವೆಯಾಗಿದ್ದ 52 ವರ್ಷ ಪ್ರಾಯದ ವ್ಯಕ್ತಿಯನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ. ಮದುವೆಯಾಗಿ ಮೂರು ತಿಂಗಳ ಬಳಿಕ ಆಕೆ ಅಪ್ರಾಪ್ತೆ ಎಂಬ ವಿಚಾರ ತಿಳಿದು ಬಂದಿದೆ.
ಇದನ್ನೂ ಓದಿ: ಬಾಲ್ಯವಿವಾಹ ತಡೆ ಕಾಯಿದೆಗೆ ಇನ್ನಷ್ಟುಬಲ ನೀಡಿ; ಸಚಿವ ಹಾಲಪ್ಪ ಆಚಾರ್
ವಧು ವರ ಇಬ್ಬರೂ ಕಾರವಾರ ನಗರದ ನಿವಾಸಿಗಳು. ಅಂಗನವಾಡಿ ಕಾರ್ಯಕರ್ತೆಯರ ಖಚಿತ ಮಾಹಿತಿ ಮೇರೆಗೆ ವಧು ಅಪ್ರಾಪ್ತೆ ಎಂಬ ಮಾಹಿತಿ ಬಹಿರಂಗವಾಗಿದೆ ಕೂಡಲೇ ಎಚ್ಚೆತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಆರೋಪಿ ಅನಿಲ್‌ರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಂಧನದ ಭೀತಿಯಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಅನಿಲ್ ಯತ್ನಿಸಿದ್ದ. ನಂತರ ವಧುವನ್ನು ಪತ್ತೆ ಹಚ್ಚಿ 52 ವಯಸ್ಸಿನ ವರ ಅನಿಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಜುಲೈ 19ರಂದು ಕಾರವಾರದ ದೇವಾಲಯವೊಂದರಲ್ಲಿ ಅದ್ಧೂರಿಯಾಗಿ ಅನಿಲ್ ಹಾಗೂ ಬಾಲಕಿಯ ವಿವಾಹವಾಗಿತ್ತು. ಬಾಲಕಿ ಸ್ಥೂಲಕಾಯ ಹೊಂದಿದ್ದರಿಂದ ಅಪ್ರಾಪ್ತೆಯಲ್ಲ ಎಂಬ ಯೋಚನೆಯೊಂದಿಗೆ ಮದುವೆಯಲ್ಲಿ ಸಂಬಂಧಿಕರು ಭಾಗಿಯಾಗಿದ್ದರು.
ಆದ್ರೆ, ಅಪ್ರಾಪ್ತೆ ಎಂದು ತಿಳಿದ ಬಳಿಕ ಗಂಡು ಹಾಗೂ ಹೆಣ್ಣಿನ ಕಡೆಯುವರೆಲ್ಲಾ ಕಕ್ಕಾಬಿಕ್ಕಿಯಾಗಿದ್ದರು. ವರ ಅನಿಲ್ ಪ್ರಸ್ತುತ ಕಾರವಾರ ಜೈಲಿನಲ್ಲಿದ್ರೆ ಅಪ್ರಾಪ್ತೆ ವಧು ಈಗ ಸಾಂತ್ವನ ಕೇಂದ್ರದಲ್ಲಿ ದಾಖಲಾಗಿದ್ದಾಳೆ. ಮದುವೆಯಲ್ಲಿ ಭಾಗಿಯಾದ ಸಂಬಂಧಿಕರು ಸೇರಿ ಒಟ್ಟು 60 ಜನರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೊಟೀಸ್ ನೀಡಿದೆ. ಕಾರವಾರ ಮಹಿಳಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Chikkamagaluru; 68 ಪಂಚಾಯಿತಿ ವ್ಯಾಪ್ತಿಯಲ್ಲಿ ಬಾಲ್ಯವಿವಾಹ ಅಧಿಕ, ಜಿಲ್ಲೆಯಲ್ಲಿ 25 ಬಾಲ್ಯ ವಿವಾಹ ತಡೆ!
ವಧು ಕೂಡ ತಾನು ಅಪ್ರಾಪ್ತೆ ಎಂಬ ವಿಚಾರವನ್ನು ಹೇಳಿರಲಿಲ್ಲವಂತೆ. ಆಕೆಯ ಸಂಬಂಧಿಗಳೂ ಆಕೆಯ ವಯಸ್ಸನ್ನು ಅನಿಲ್‌ಗೆ ಹೇಳಿರಲಿಲ್ಲ ಎಂದು ಮೂಲಗಳು ತಿಳಿಸಿವೆ. ಅನಿಲ್‌ಗೆ ಮೊದಲೇ ಐವತ್ತು ವರ್ಷ ದಾಟಿತ್ತು. ಮದುವೆಯಾದರೆ ಸಾಕು ಎಂಬ ತವಕದಲ್ಲಿದ್ದ ಅನಿಲ್ ಸರಿಯಾಗಿ ಪೂರ್ವಾಪರ ವಿಚಾರಿಸದೇ ಮದುವೆಯಾಗಿ ಈಗ ಬಾಲ್ಯವಿವಾಹ ಕಾಯ್ದೆಯಡಿ ಜೈಲು ಪಾಲಾಗಿದ್ದಾನೆ. ಇತ್ತ ಯುವತಿಯೂ ಸಾಂತ್ವನ ಕೇಂದ್ರ ಸೇರಿದ್ದಾಳೆ. ಗೊತ್ತಿದ್ದೂ ಬಾಲ್ಯ ವಿವಾಹ ಪ್ರಕರಣಗಳು ಸಾಕಷ್ಟು ದೇಶಾದ್ಯಂತ ನಡೆಯುತ್ತವೆ. ಆದರೆ ಈ ಪ್ರಕರಣಗಳಿಗೆ ಹೋಲಿಸಿದರೆ ಕಾರವಾರ ಪ್ರಕರಣ ವಿಲಕ್ಷಣವಾಗಿದೆ. ತಪ್ಪು ಎಂದು ಗೊತ್ತಿದ್ದೂ ಬಾಲ್ಯವಿವಾಹವಾಗದಿದ್ದರೂ ವರ ಅನಿಲ್ ಜೈಲು ಸೇರಿದ್ದಾನೆ.
ಇದನ್ನೂ ಓದಿ: Shivamogga ಬಾಲ್ಯ ವಿವಾಹ ತಡೆ ಬಗ್ಗೆ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟ DC
ಕಾಫಿನಾಡಲ್ಲೂ ಬಾಲ್ಯ ವಿವಾಹ
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೆಳಕಿಗೆ ಬಾರದ ರೀತಿಯಲ್ಲಿ ಬಾಲ್ಯವಿವಾಹ ಪ್ರಕರಣಗಳು ನಡೆಯುತ್ತಿದ್ದು , ಇದನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತವೂ ಕಟ್ಟು ನಿಟ್ಟಿನ ಕ್ರಮದ ನಡುವೆಯೂ 68 ಪಂಚಾಯಿತಿ ವ್ಯಾಪ್ತಿಯಲ್ಲಿ ಬಾಲ್ಯವಿವಾಹದ ಪ್ರಕರಣಗಳು ಅಧಿಕವಾಗಿದೆ. ಜಿಲ್ಲೆಯಲ್ಲಿ 68 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಹೆಚ್ಚಾಗಿ ಬಾಲ್ಯವಿವಾಹ ಪ್ರಕರಣಗಳು ವರದಿಯಾಗುತ್ತಿದ್ದು, ಈ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ತೀವ್ರ ಜಾಗೃತಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಸೂಚಿಸಿದರು. ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಇಂದು ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಜಿಲ್ಲಾ ಮಟ್ಟದ ಸಮಿತಿಗಳ ಮೊದಲ ತ್ರೈಮಾಸಿಕ ಸಭೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬಾಲ್ಯ ವಿವಾಹ ಸಂಬಂಧಿಸಿದ ಪ್ರಕರಣಗಳಲ್ಲಿ ಪೋಕ್ಸೋ ಕಾಯ್ದೆಯನ್ನು ದಾಖಲಿಸಬೇಕೆಂದು ಸಂಬಂಧಿಸಿ ಇಲಾಖೆ ಅಧಿಕಾರಿಗೆ ಎಂದು ಸೂಚಿಸಿದರು. ಕಳೆದ ವರ್ಷದ ಮೊದಲ ತ್ರೈಮಾಸಿಕಕ್ಕಿಂತ ಈವರ್ಷ ವರದಿಯಾಗಿರುವ ಬಾಲ್ಯವಿವಾಹ ದೂರುಗಳ ಸಂಖ್ಯೆ ಅಧಿಕವಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಾಗೂ ಶಾಲೆಗಳಲ್ಲಿ ಬಾಲ್ಯವಿವಾಹ ನಿಷೇಧ ಕುರಿತು ವ್ಯಾಪಕವಾಗಿ ಜನಜಾಗೃತಿ ಮೂಡಿಸಲು ಮುಂದಾಗಬೇಕೆಂದು ಹೇಳಿದರು.
ಮೊದಲ ತ್ರೈಮಾಸಿಕದಲ್ಲಿ ದಾಖಲಾಗಿರುವ 28 ಕೌಟುಂಬಿಕ ಹಿಂಸೆ ಪ್ರಕರಣಗಳಲ್ಲಿ, 21 ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ. ಸಂರಕ್ಷಣಾಧಿಕಾರಿಗಳ ಹಂತದಲ್ಲಿಯೇ 14 ಪ್ರಕರಣಗಳು ಬಾಕಿ ಉಳಿದಿದ್ದು, ಪ್ರಕರಣಗಳು ದಾಖಲಾದ 30 ದಿನಗಳ ಅವಧಿಯಲ್ಲಿ ಇತ್ಯರ್ಥಗೊಳಿಸಲು ಸೂಚಿಸಿದರು.