ಎಲ್ಲೆಲ್ಲಿ ಸುತ್ತಿದ್ರೂ ಮಲಗೋದಕ್ಕೆ ಮಾತ್ರ ಕಾಳಿಂಗಕ್ಕೆ ತನ್ನ ಮನೆಯೇ ಬೇಕು..!

By Kannadaprabha NewsFirst Published Oct 20, 2019, 9:36 AM IST
Highlights

ತನ್ನದೇ ವ್ಯಾಪ್ತಿ ಮಾಡಿ ಓಡಾಡೋ ಕಾಳಿಂಗ ಸರ್ಪ ಎಷ್ಟು ಓಡಾಡಿದ್ರೂ, ಎಲ್ಲೆಲ್ಲಿ ಸುತ್ತಾಡಿದ್ರೂ ಮಲಗೋದಕ್ಕೆ ಮಾತ್ರ ತನ್ನ ಮನೆಗೇ ಹೋಗುತ್ತದೆ. ಆಗೊಮ್ಮೆ ಈಗೊಮ್ಮೆ ಬಂದು ಬಿಸಿಲಿಗೆ ಮೈಯೊಡ್ಡಿ ನಿಂತರೂ ಅಲ್ಲಿ ನಿದ್ರಿಸುವುದಿಲ್ಲ. ಮರಳಿ ಗೂಡಿಗೆ ಹೋಗಿ ಅಲ್ಲಿಯೇ ನಿದ್ರಿಸುತ್ತದೆ.

ಉಡುಪಿ(ಅ.20): ಪ್ರತಿಯೊಂದು ಪ್ರಾಣಿಗೂ ವಂಶವಾಹಿಯ ಮೂಲಕ ಪ್ರಕೃತಿಯಲ್ಲಿ ಬದುಕುವ ಬುದ್ಧಿವಂತಿಕೆ ಹರಿದು ಬರುತ್ತದೆ. ಹಾವುಗಳಿಗೂ ಬೇಟೆಯಾಡುವ, ಸಂತಾನೋತ್ಪತ್ತಿ ಮಾಡುವ, ತನ್ನ ವಾಸಸ್ಥಾನದ ವ್ಯಾಪ್ತಿಯನ್ನು ಗುರುತಿಸುವ ಜ್ಞಾನ ಹುಟ್ಟಿನಿಂದಲೇ ಬಂದಿರುತ್ತದೆ.

ಆದರೆ ಕಾಳಿಂಗ ಸರ್ಪ ಮಾತ್ರ ಹಾವುಗಳಲ್ಲಿಯೇ ಅತ್ಯಂತ ಬುದ್ಧಿವಂತ ಹಾವು ಎನ್ನುವುದು ಇಲ್ಲಿನ ಆಗುಂಬೆಯ ಮಳೆಕಾಡುಗಳಲ್ಲಿ ನಡೆದ ಸಂಶೋಧನೆಯಲ್ಲಿ ಪತ್ತೆಯಾಗಿದೆ.

ತನ್ನ ಆಹಾರವನ್ನು ಹುಡುಕುವ, ಸಂತಾನೋತ್ಪತ್ತಿ ಮಾಡುವ ಇತ್ಯಾದಿ ಜನ್ಮದತ್ತ ಜ್ಞಾನದೊಂದಿಗೆ, ಇನ್ನೂ ಕೆಲವು ಜ್ಞಾನಗಳೊಂದಿಗೆ ಕಾಳಿಂಗ ಸರ್ಪಗಳು ಅತ್ಯಂತ ವ್ಯವಸ್ಥಿತವಾಗಿ ಬದುಕುತ್ತವೆ.

ತನ್ನ ವ್ಯಾಪ್ತಿ ಬಿಟ್ಟು ಹೋಗಲ್ಲ:

ಅವುಗಳು ಸುಮಾರು 8 - 10 ಕಿ.ಮೀ. ವಿಸ್ತೀರ್ಣ ಪ್ರದೇಶವನ್ನು ತನ್ನ ವಾಸದ ವ್ಯಾಪ್ತಿ (ಹೋಮ್‌ ಏರಿಯ)ಯನ್ನಾಗಿ ಗುರುತಿಸಿಕೊಳ್ಳುತ್ತದೆ, ಅದರೊಳಗೆ ಸಿಕ್ಕುವ ಹಾವುಗಳನ್ನು ತಿನ್ನುತ್ತವೆ ಮತ್ತು ಅಲ್ಲಿಯೇ ಬದುಕುತ್ತದೆ, ಆ ಪ್ರದೇಶವನ್ನು ಬಿಟ್ಟು ಹೊರಗೆ ಹೋಗುವುದಿಲ್ಲ.

ಕೇರೆ ಹಾವನ್ನ ತಿಂದ್ರೆ ತಿಂಗಳು ಪೂರಾ ಆಹಾರಾನೇ ಬೇಡ..!

ಅದು ತಿನ್ನುವುದರಲ್ಲಿಯೂ ಶಿಸ್ತು ಪಾಲಿಸುತ್ತದೆ, ಹಪ್ಪಟೆ ಹಾವುಗಳು (ಕನ್ನಡಿ ಹಾವು) ಸಿಕ್ಕಿದರೆ ದಿನಕ್ಕೊಂದು ಎರಡು ತಿನ್ನುತ್ತವೆ. ಆದರೆ ಕೇರೆಯಂತಹ ದೊಡ್ಡ ಹಾವು ಸಿಕ್ಕಿದರೆ ಅದನ್ನು ತಿಂದು ಮತ್ತೆ ಒಂದು ತಿಂಗಳು ಬೇರೆನೂ ಆಹಾರ ತಿನ್ನುವುದಿಲ್ಲ, ಸುಮ್ಮನೆ ಒಂದು ಕಡೆ ಬಿದ್ದುಕೊಂಡಿರುತ್ತದೆ, ಬಿಸಿಲು ಬಿದ್ದರೆ ಹೊರಗೆ ಬಂದು ಮೈಕಾಯಿಸಿಕೊಂಡು ಮತ್ತೆ ಹೋಗಿ ಮಲಗಿಬಿಡುತ್ತದೆ.

ಮಿಲನದ ಬಳಿಕ ಸಂಗಾತಿಯನ್ನೇ ತಿನ್ನುವ ಕಾಳಿಂಗ! ಕಾರಣವೇನು?

ಅದು ಮಲಗುವುದಕ್ಕೆ ಒಂದು ನಿರ್ದಿಷ್ಟಸ್ಥಳವನ್ನು ಗುರುತಿಸುತ್ತದೆ ಮತ್ತು ತನ್ನ ವಾಸದ ವ್ಯಾಪ್ತಿಯಲ್ಲಿ ಎಷ್ಟೇ ದೂರ ಸುತ್ತಿದರೂ ಮಲಗುವುದಕ್ಕೆ ಮರಳಿ ಅಲ್ಲಿಗೆ ಬರುತ್ತದೆ.

ಹೊಟ್ಟೆ ತುಂಬಿದ್ರೆ ಯಾರ ತಂಟೆಗೂ ಹೋಗಲ್ಲ:

ಬೆಳಗ್ಗೆ ಬೆಳಕು ಹರಿಯುತ್ತಲೇ ಆಹಾರ ಹುಡುಕಿಕೊಂಡು ಹೊರಡುವ ಕಾಳಿಂಗ ಹಾವುಗಳು ಹೊಟ್ಟೆತುಂಬುತ್ತಲೇ ತನ್ನ ನಿರ್ದಿಷ್ಟವಾಸಸ್ಥಳದಲ್ಲಿ ಸುರುಳಿಕಟ್ಟಿಕೊಂಡು ಮಲಗಿಬಿಡುತ್ತದೆ, ಸುರುಳಿ ಮಾಡಿತೆಂದರೆ ಅದರ ಅಂದಿನ ದಿನಚರಿ ಮುಗಿಯತೆಂದೇ ಅರ್ಥ.

ಗೂಡು ಕಟ್ಟುವ ಏಕೈಕ ಹಾವು:

ಹಾವುಗಳಲ್ಲಿ ಗೂಡು ಕಟ್ಟುವ ಏಕೈಕ ಹಾವು ಕಾಳಿಂಗ ಸರ್ಪ. ಹತ್ತಿರದಲ್ಲಿ ನೀರಿರುವ ತುಂಬಾ ತರಗೆಲೆಗಳು ಬಿದ್ದಿರುವ ಪ್ರದೇಶದಲ್ಲಿ ಹೆಣ್ಣು ಕಾಳಿಂಗ ಸರ್ಪ ಗೂಡು ಕಟ್ಟುತ್ತದೆ. ತರಗೆಲೆಗಳನ್ನು ತನ್ನ ದೇಹದಿಂದ ಒಟ್ಟುಗೂಡಿಸಿ ಸುಮಾರು 2 - 3 ಅಡಿಯಷ್ಟುಎತ್ತರದ ಗೂಡು ಕಟ್ಟಿಅದರೊಳಗೆ ಮೊಟ್ಟೆಇಟ್ಟು ಸುಮಾರು 1 ವಾರ ಕಾಲ ಕಾವು ಕೊಟ್ಟು ಹೊರಟುಹೋಗುತ್ತದೆ. 85 - 90 ದಿನಗಳಲ್ಲಿ ಮೊಟ್ಟೆಯೊಡೆದು ಮರಿ ಹೊರಗೆ ಬರುತ್ತವೆ.

ವಿಷದ ಹಾವಿನ ತಲೆ ಕಚ್ಚುತ್ತದೆ:

ಕಾಳಿಂಗ ಎಷ್ಟುಬುದ್ಧಿವಂತ ಎಂದರೆ ಅದು ತಾನು ತಿನ್ನುವ ಹಾವುಗಳಲ್ಲಿ ಯಾವುದು ವಿಷದ ಹಾವು ಯಾವುದು ವಿಷರಹಿತ ಎಂಬುದನ್ನು ಪಕ್ಕಾ ಗುರುತಿಸುತ್ತದೆ. ಹಪ್ಪಟೆ (ಪಿಟ್‌ ವೈಪರ್‌) ಅಥವಾ ನಾಗರ ಹಾವುಗಳನ್ನು ತಿನ್ನುವಾಗ ಮೊದಲು ಅವುಗಳ ತಲೆಯನ್ನೇ ಕಚ್ಚಿ ಕೊಂದು ತಿನ್ನುತ್ತವೆ. ಇಲ್ಲದಿದ್ದರೆ ಅವುಗಳು ತಿರುಗಿಬಿದ್ದು ಕಾಳಿಂಗ ಹಾವುಗಳಿಗೆ ಕಚ್ಚುವ ಸಾಧ್ಯತೆ ಇರುತ್ತವೆ. ವಿಷರಹಿತ ಕೇರೆಯಂತಹ ಹಾವಾದರೆ ಅದರ ದೇಹದ ಎಲ್ಲಿ ಬೇಕಾದರೂ ಬಾಯಿ ಹಾಕಿ ತಿನ್ನುತ್ತವೆ ಎಂದು ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರದ ಜೈಕುಮಾರ್‌ ಹೇಳುತ್ತಾರೆ.

ಕಾಳಿಂಗಗಳಿಗೆ ವಿಪರೀತ ಹೋಮಿಂಗ್‌ ಇಂಸ್ಟಿಂಕ್ಟ್

ಕಾಳಿಂಗ ಹಾವುಗಳಿಗೆ ವಿಪರೀತ ಮನೆಮೋಹ (ಹೋಮಿಂಗ್‌ ಇಂಸ್ಟಿಂಕ್ಟ್) ಇರುತ್ತದೆ ಎನ್ನುತ್ತಾರೆ ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರದ ಸಂಶೋಧಕ ಅಜಯ್‌ ಗಿರಿ.

ತನ್ನನ್ನೇ ತಾನು ನುಂಗಿದ ಕಾಳಿಂಗ.. ವಿಡಿಯೋ ವೈರಲ್...

ಆದ್ದರಿಂದ ಕಾಳಿಂಗ ಹಾವುಗಳನ್ನು ಅದರ ವಾಸದ ವ್ಯಾಪ್ತಿಯಿಂದ ಹೊರಗೆ ತೆಗೆದುಕೊಂಡು ಹೋಗಿ ಬಿಟ್ಟರೆ ಅದು ಅಪರಿಚಿತ ಸ್ಥಳದಲ್ಲಿ ದಿಕ್ಕುತಪ್ಪಿದಂತಾಗಿ, ತನ್ನ ವಾಸಸ್ಥಾನದ ನೆನಪಿನಲ್ಲಿ ನೀರು, ಆಹಾರವನ್ನು ಬಿಟ್ಟು ತನ್ನ ವಾಸಸ್ಥಾನವನ್ನು ಹುಡುಕುತ್ತಾ ಕೃಶವಾಗಿ ಸಾಯುತ್ತದೆ. ಆದ್ದರಿಂದ ಕಾಳಿಂಗ ಹಾವುಗಳನ್ನು ಹಿಡಿಯುವವರು ಅವುಗಳನ್ನು ಹಿಡಿದಲ್ಲಿಂದ ನೂರಿನ್ನೂರು ಮೀಟರ್‌ ವ್ಯಾಪ್ತಿಯೊಳಗೆ ಬಿಡಬೇಕು ಎನ್ನುವ ಎಚ್ಚರಿಕೆ ನೀಡುತ್ತಾರೆ ಅಜಯ್‌ ಗಿರಿ.

-ಸುಭಾಶ್ಚಂದ್ರ ಎಸ್‌.ವಾಗ್ಳೆ

click me!