ಕಿರುತೆರೆ ಕಲಾವಿದೆ ಮಧುರಾ ನಾಯಕ್ ಅವರ ಸಹೋದರಿ ಸಂಬಂಧಿಯ ಇಡೀ ಕುಟುಂಬ ಇಸ್ರೇಲ್‌ನಲ್ಲಿ ಹಮಾಸ್ ಉಗ್ರರ ದಾಳಿಗೆ ಬಲಿಯಾಗಿದ್ದು, ಈ ಬಗ್ಗೆ ಅವರು ಹೇಳಿದ್ದಾರೆ.
ಗಾಜಾ ಸ್ಟ್ರಿಪ್‌ನಿಂದ ಕಳೆದ ಶನಿವಾರ ಇಸ್ರೇಲ್ ಮೇಲೆ ಹಮಾಸ್ ಉಗ್ರರ ಗುಂಪು ಸಾವಿರಾರು ರಾಕೆಟ್‌ಗಳ ಸುರಿಮಳೆ ಸುರಿಸಿ, ದಿಢೀರ್ ಯುದ್ಧ ಸಾರಿದೆ. ಇದರಿಂದ ದಿಢೀರನೇ ಇಸ್ರೇಲ್ ಮೇಲೆ ಸ್ಟೇಟ್ ಆಫ್ ವಾರ್ ಆರಂಭವಾಗಿದ್ದು, ನೂರಾರು ಮಂದಿ ಜೀವ ಕಳೆದುಕೊಂಡಿದ್ದಾರೆ. ಯುದ್ಧ ಇನ್ನೂ ಭೀಕರವಾಗುತ್ತಲೇ ಸಾಗಿದೆ. ವಿದೇಶಿಗರನ್ನು ಉಗ್ರರು ಕಂಡ ಕಂಡಲ್ಲಿ ಹತ್ಯೆ ಮಾಡುತ್ತಿದ್ದಾರೆ. ಏಕಾಏಕಿ ಇಸ್ರೇಲ್ ಮೇಲೆ ಮುಗಿಬಿದ್ದಿರುವ ಉಗ್ರರು, 500ಕ್ಕೂ ಹೆಚ್ಚು ರಾಕೆಟ್‌ಗಳಿಂದ ದಾಳಿ ಮಾಡಿದ್ದಾರೆ. ಹಮಾಸ್ ಉಗ್ರಗಾಮಿಗಳು ಮೋಟಾರ್ ಸೈಕಲ್‌ಗಳು, ಪಿಕಪ್ ಟ್ರಕ್‌ಗಳು, ಬೋಟ್‌ಗಳು, ಪ್ಯಾರಾಗ್ಲೈಡರ್‌ಗಳು ಮತ್ತು ಮಧ್ಯಮ ಶ್ರೇಣಿಯ ರಾಕೆಟ್‌ಗಳನ್ನು ಬಳಸಿ ಇಸ್ರೇಲ್‌ನ ಮೇಲೆ ದಾಳಿ ಮುಂದುವರೆಸುತ್ತಲೇ ಇದ್ದಾರೆ. ಮಿಲಿಟರಿ ನೆಲೆಗಳನ್ನು ಹೊಡೆದು, ಒತ್ತೆಯಾಳುಗಳಾಗಿ ಸೈನಿಕರು ಮತ್ತು ನಾಗರಿಕರನ್ನು ಕೊಂದು ಹಾಕುತ್ತಿದ್ದಾರೆ.
ಭಾರತೀಯ ಮೂಲದ ಯಹೂದಿ ಕುಟುಂಬವರಾಗಿರುವ ಇದೀಗ ಖ್ಯಾತ ಕಿರುತೆರೆ ನಟಿ, ನಾಗಿನ್ ಖ್ಯಾತಿಯ ಮಧುರಾ ನಾಯಕ್ ಅವರು ತಮ್ಮ ಸಂಬಂಧಿಕರ ಇಡೀ ಕುಟುಂಬವು ಇಸ್ರೇಲ್‌ನಲ್ಲಿ ಹಮಾಸ್ ಉಗ್ರರ ಗುಂಡಿಗೆ ಬಲಿಯಾಗಿರುವುದಾಗಿ ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದ ಮೂಲಕ ಅವರು ಈ ವಿಷಯವನ್ನು ತಿಳಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅವರು, ಇಸ್ರೇಲ್‌ನಲ್ಲಿ ಏನಾಗುತ್ತಿದೆ ಎನ್ನುವುದೇ ತಿಳಿಯುತ್ತಿಲ್ಲ. ನನ್ನ ಇಡೀ ಕುಟುಂಬವು ತುಂಬಾ ನೋವನ್ನು ಅನುಭವಿಸುತ್ತಿದೆ ಎಂದು ಹೇಳಿದ್ದಾರೆ. ನಾವಿಲ್ಲಿ ಭಾರತದಲ್ಲಿ ಸುರಕ್ಷಿತವಾಗಿದ್ದೇವೆ. ಆದರೆ ಇಸ್ರೇಲ್‌ನಲ್ಲಿ, ಅಕ್ಟೋಬರ್ 7 ರಂದು ನಾವು ನಮ್ಮ ಕುಟುಂಬದಿಂದ ಒಬ್ಬ ಮಗಳು ಮತ್ತು ಮಗನನ್ನು ಕಳೆದುಕೊಂಡೆವು. ನನ್ನ ಸೋದರಸಂಬಂಧಿ ಮತ್ತು ಅವಳ ಪತಿಯನ್ನೂ ಉಗ್ರರು ಹತ್ಯೆ ಮಾಡಿದ್ದಾರೆ. ಅವರ ಇಬ್ಬರು ಮಕ್ಕಳು ನಮ್ಮ ಬಳಿ ಇದ್ದು, ಅವರನ್ನು ಹೇಗೆ ಸಮಾಧಾನ ಪಡಿಸುವುದೋ ತಿಳಿಯುತ್ತಿಲ್ಲ ಎಂದಿದ್ದಾರೆ.
ಇಷ್ಟು ಸುರಕ್ಷಿತ ಭಾರತದಲ್ಲಿರೋದೇ ಪುಣ್ಯ: ಇಸ್ರೇಲ್‌ನಲ್ಲಿ ಸಾವಿನ ಬಾಯಿಗೆ ಹೋಗಿದ್ದ ನಟಿ ನುಶ್ರತ್ ಹೇಳಿದ್ದೇನು?
ಉಗ್ರರು ಅಮಾಯಕರನ್ನು ಹೊಸಕಿ ಹಾಕುತ್ತಿದ್ದಾರೆ. ಶಿಶುಗಳ ಮರಣವೂ ನಡೆಯುತ್ತಿದೆ. ರಕ್ತದ ಹೊಳೆಯನ್ನೇ ಹರಿಸುತ್ತಿದ್ದಾರೆ. ನನ್ನ ಕುಟುಂಬಸ್ಥರೂ ಅಲ್ಲಿ ಸಿಲುಕಿಕೊಂಡಿದ್ದಾರೆ. ಅಲ್ಲಿ ಏನಾಗುತ್ತಿದೆಯೋ ಒಂದೂ ತಿಳಿಯುತ್ತಿಲ್ಲ. ಯಾರೊಬ್ಬರೂ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ನಟಿ ನೋವು ತೋಡಿಕೊಂಡಿದ್ದಾರೆ.
ನಿನ್ನೆಯಷ್ಟೇ ಬಾಲಿವುಡ್ ನಟಿ ಭರೂಚಾ ಅವರನ್ನು ಇಸ್ರೇಲ್ನಿಂದ ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಕರೆದುಕೊಂಡು ಬರಲಾಗಿದೆ. ನಟಿ, ನುಶ್ರತ್ ಭರೂಚಾ ಅವರು ಹೈಫಿ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಲು ಇಸ್ರೇಲ್ಗೆ ಹೋಗಿದ್ದರು. ಆದರೆ ಅದೇ ವೇಳೆ ಹಮಾಸ್ ಉಗ್ರರಿಂದ ಏಕಾಏಕಿ ದಾಳಿ ನಡೆದಿದೆ. ಹೀಗಾಗಿ ನಟಿ ದಾಳಿ ಸಂದರ್ಭ ಅಪಾಯದ ವಾತಾವರಣದಲ್ಲಿ ಇಸ್ರೇಲ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಆದರೆ ಭಾರತದ ಶ್ರಮದ ಫಲವಾಗಿ ನಟಿಗೆ ಏನೂ ಅನಾಹುತ ಸಂಭವಿಸಿಲ್ಲ. ನಟಿ ಸುರಕ್ಷಿತವಾಗಿ ಭಾರತವನ್ನು ತಲುಪಿದ್ದಾರೆ. ಇಸ್ರೇಲ್ ಭೀಕರತೆಯ ಕುರಿತು ಮಾತನಾಡಿದ್ದದ ಅವರು, ಅಂದು ತಾವು ಉಳಿದುಕೊಂಡಿದ್ದ ಹೋಟೆಲ್ ಸಮೀಪ ಗುಂಡಿನ ದಾಳಿಯಾಗಿತ್ತು, ಏನು ಆಗುತ್ತದೆಯೋ ತಿಳಿದುಬರಲಿಲ್ಲ. ಆ ಕ್ಷಣದಲ್ಲಿ ಸಾವೇ ಹತ್ತಿರ ಬಂದ ಹಾಗಿತ್ತು ಎಂದಿದ್ದಾರೆ ನಟಿ. ಕೊನೆಗೂ ಸುರಕ್ಷಿತವಾಗಿ ಮನೆಗೆ ತಲುಪಿದ್ದೇನೆ ಎಂದಿರುವ ನಟಿ, ಇಂಥ ಸುರಕ್ಷಿತ ಭಾರತದಲ್ಲಿ ನಾವಿರುವುದೇ ಪುಣ್ಯ ಎಂದಿದ್ದಾರೆ. ಇಲ್ಲಿ ನಾವು ಸಾಕಷ್ಟು ಸುರಕ್ಷಿತವಾಗಿದ್ದೇವೆ. ಇಲ್ಲಿ ಹುಟ್ಟಿರುವುದು ನಮ್ಮ ಪುಣ್ಯ ಎಂದಿರುವ ನಟಿ, ಭಾರತ ಸರ್ಕಾರ ಹಾಗೂ ಇಸ್ರೇಲ್ನಲ್ಲಿರುವ ಭಾರತ ರಾಯಭಾರ ಕಚೇರಿಯು ಹೇಗೆ ಜನರ ರಕ್ಷಣೆ ಮಾಡುವಲ್ಲಿ ಕಾರ್ಯೋನ್ಮುಖವಾಗುತ್ತದೆ ಎಂದು ನಟಿ ಬಣ್ಣಿಸಿದ್ದರು.
ಸಂಕಷ್ಟದ ಸಮಯದಲ್ಲಿ ಭಾರತ ಇಸ್ರೇಲ್ ಜತೆ ದೃಢವಾಗಿ ನಿಂತಿದೆ: ಇಸ್ರೇಲ್ ಪ್ರಧಾನಿಗೆ ಮೋದಿ ಅಭಯ