
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ರಂಗನಾಯಕಿ’ಯಲ್ಲಿ ನಕ್ಷತ್ರಳಾಗಿ ಮಿಂಚಿ ಹಾಗೂ ಬಿಗ್ಬಾಸ್ ತೆಲುಗು ಮೂಲಕ ಜನಪ್ರಿಯತೆ ಗಳಿಸಿದ ನಟಿ ಹಾಗೂ ರಶ್ಮಿಕಾ ಮಂದಣ್ಣ ಆಪ್ತ ಸ್ನೇಹಿತೆ ಪ್ರೇರಣಾ ಕಂಭಂ ಇತ್ತೀಚೆಗಷ್ಟೇ ಅಭಿಮಾನಿಗಳೊಂದಿಗೆ ತಾವು ತಾಯಿಯಾಗುತ್ತಿರುವ ಸಂತಸದ ವಿಚಾರವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗಪಡಿಸಿದ್ದರು. ಪತಿ ಶ್ರೀಪಾದ್ ಅವರೊಂದಿಗೆ ಬೇಬಿ ಬಂಪ್ ತೋರಿಸುತ್ತಿರುವ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಇದೀಗ ನಟಿಯ ಸೀಮಂತ ಶಾಸ್ತ್ರ ಅದ್ಧೂರಿಯಾಗಿ ನೆರವೇರಿದೆ. ಕುಟುಂಬದ ಸದಸ್ಯರು, ಸ್ನೇಹಿತರು ಹಾಗೂ ಆಪ್ತರು ಈ ಸಮಾರಂಭದಲ್ಲಿ ಭಾಗವಹಿಸಿ ಪ್ರೇರಣಾ ಮತ್ತು ಶ್ರೀಪಾದ್ ದಂಪತಿಗೆ ಶುಭ ಹಾರೈಸಿ ಆಶೀರ್ವದಿಸಿದ್ದಾರೆ.
ಸೀಮಂತದ ಸಂಭ್ರಮಕ್ಕೆ ಮತ್ತಷ್ಟು ವಿಶೇಷ ಮೆರುಗು ನೀಡಿರುವ ಪ್ರೇರಣಾ, ಈ ಕಾರ್ಯಕ್ರಮದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ, ರಶ್ಮಿಕಾ ಅಭಿನಯದ ‘ರಣಬಾಲಿ’ ಸಿನಿಮಾದ ಹಾಡನ್ನು ಈ ವಿಡಿಯೋಗೆ ಜೋಡಿಸಿರುವ ಪ್ರೇರಣಾ, ವಿಶೇಷವಾದ ಶೀರ್ಷಿಕೆಯನ್ನೂ ನೀಡಿದ್ದಾರೆ. “ಮತ್ತೊಂದು ವಿಶ್ವದಲ್ಲಿ ಈ ಜಯಮ್ಮ ತನ್ನ ವಂಶದ ವಾರಸುದಾರನ ಆಗಮನಕ್ಕಾಗಿ ಸಂಭ್ರಮಿಸುತ್ತಿದ್ದಾಳೆ. ಒಂದು ಸೀಮಂತದ ಸಂಭ್ರಮ, ನೂರಾರು ಆಶೀರ್ವಾದಗಳು ಮತ್ತು ಜೀವಮಾನದ ಪ್ರೀತಿಯನ್ನು ಹೊರಹಾಕಲು ಕಾಯುತ್ತಿದೆ” ಎಂಬ ಅರ್ಥ ಬರುವಂತೆ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ರಶ್ಮಿಕಾ ಮಂದಣ್ಣ ಅವರ ಆಪ್ತ ಸ್ನೇಹಿತೆಯಾಗಿರುವ ಪ್ರೇರಣಾ, ತಮ್ಮ ಸೀಮಂತದ ವಿಡಿಯೋಗೆ ರಣಬಾಲಿ ಸಿನಿಮಾ ಹಾಡನ್ನು ಬಳಸಿರುವುದು ಅಭಿಮಾನಿಗಳ ಗಮನ ಸೆಳೆದಿದೆ. ಹೀಗಾಗಿ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಪ್ರೇರಣಾ ಕಂಭಂ ಹಾಗೂ ಪ್ಯಾನ್ ಇಂಡಿಯಾ ಸ್ಟಾರ್ ರಶ್ಮಿಕಾ ಮಂದಣ್ಣ ಇಬ್ಬರು ಹಲವು ವರ್ಷಗಳ ಫ್ರೆಂಡ್ಸ್. ನಟಿಯಾಗುವ ಕನಸು ಕಾಣುತ್ತಿದ್ದ ದಿನಗಳಿಂದಲೇ ಇವರಿಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ನಂತರ ರಶ್ಮಿಕಾ ಮಂದಣ್ಣ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡರೆ, ಪ್ರೇರಣಾ ಕಿರುತೆರೆಯಲ್ಲಿ ನಟಿಯಾಗಿ ಜನಪ್ರಿಯತೆ ಗಳಿಸಿದರು. ವಿಶೇಷವಾಗಿ ‘ರಂಗನಾಯಕಿ’, ‘ಕೃಷ್ಣ ಮುಕುಂದ ಮುರಾರಿ' ಧಾರಾವಾಹಿ ಮೂಲಕ ಪ್ರೇರಣಾ ಕಿರುತೆರೆ ಪ್ರೇಕ್ಷಕರಿಗೆ ಹೆಚ್ಚು ಪರಿಚಿತರಾದರು. ಇದಾದ ಬಳಿಕ ಅವರು ‘ಬಿಗ್ಬಾಸ್ ತೆಲುಗು ಸೀಸನ್ 8’ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ವಿಜೇತರಾಗದಿದ್ದರೂ, ಗ್ರ್ಯಾಂಡ್ ಫಿನಾಲೆವರೆಗೂ ತಲುಪಿದ್ದರು. ಟಾಪ್ 4 ಸ್ಪರ್ಧಿಗಳಲ್ಲಿ ಒಬ್ಬರಾಗಿ ತಮ್ಮದೇ ಆದ ಗುರುತನ್ನು ಮೂಡಿಸಿದ್ದರು. ಅಷ್ಟೇ ಅಲ್ಲ ಕಲರ್ಸ್ ಕನ್ನಡದ 'ಕ್ವಾಟ್ಲಿ ಕಿಚನ್ ಸೀಸನ್ 1' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಅಲ್ಲದೆ, 2021ರ ಆಗಸ್ಟ್ನಲ್ಲಿ ಪ್ರಸಾರವಾದ 'ಬಿಗ್ಬಾಸ್ ಮಿನಿ ಸೀಸನ್'ನಲ್ಲೂ ಕಾಣಿಸಿಕೊಂಡು ಗಮನ ಸೆಳೆದಿದ್ದರು.
ಪ್ರೇರಣಾ ಕಂಭಂ ಪತಿ ಯಾರು?
ಪ್ರೇರಣಾ ಕಂಭಂ ಅವರ ಪತಿ ಹೆಸರು ಶ್ರೀಪಾದ್. 2023ರಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಇದೀಗ ಸುಮಾರು ಮೂರು ವರ್ಷಗಳ ಬಳಿಕ ದಂಪತಿ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಇದೀಗ ಪೋಷಕರಾಗುವ ಸಂಭ್ರಮದಲ್ಲಿರುವ ಈ ಜೋಡಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.