ಅತ್ತೆ- ಸೊಸೆ ಜಗಳ ಪರಿಹಾರಕ್ಕೆ ಔಷಧವೇನು? ನಟ ಜಗ್ಗೇಶ್, ರಮೇಶ್​​ ಪರಿಹಾರ ವರ್ಕ್​ಔಟ್​ ಆಗತ್ತಾ?

By Suchethana D  |  First Published Jun 7, 2024, 11:42 AM IST

ಅತ್ತೆ ಮತ್ತು ಸೊಸೆ ಚೆನ್ನಾಗಿ ಇರಬೇಕೆಂದರೆ ಅದಕ್ಕೆ ಏನು ಮಾಡಬೇಕು ಎಂಬ ಪರಿಹಾರ ಹೇಳಿದ್ದಾರೆ ನಟರಾದ ಜಗ್ಗೇಶ್​  ಮತ್ತು ರಮೇಶ್​. ಕಮೆಂಟಿಗರು ಹೇಳ್ತಿರೋದೇನು?
 


ಅತ್ತೆ ಮತ್ತು ಸೊಸೆ ಎನ್ನುವುದು ಹಲವು ಮನೆಯಲ್ಲಿ ಕಾಯಿಲೆ ರೂಪವೇ ಪಡೆದಿದೆ ಎನ್ನುವುದು ಸುಳ್ಳಲ್ಲ. ಇವರಿಬ್ಬರೂ ಎಷ್ಟೋ ಮನೆಗಳಲ್ಲಿ ಹಾವು-ಮುಂಗುಸಿಯಂತೆ ಆಡುತ್ತಿರುತ್ತಾರೆ. ಅತ್ತೆ ಕಂಡರೆ ಸೊಸೆಗೆ ಆಗದು, ಸೊಸೆ ಕಂಡರೆ ಅತ್ತೆಗೆ ಆಗದು. ಇಂಥ ಮನೆಗಳಲ್ಲಿ ಅತ್ತೆ ಮತ್ತು ಸೊಸೆಯಂದಿರನ್ನು ಪ್ರತ್ಯೇಕವಾಗಿ ಮಾತನಾಡಿಸಿದಾಗ ಅವರಿಬ್ಬರೂ ತಾವು ದ್ವೇಷಿಸುತ್ತಿರುವುದಕ್ಕೆ ಕಾರಣ ಬಿಚ್ಚಿಟ್ಟಾಗ ಎಷ್ಟೋ ಸಂದರ್ಭಗಳಲ್ಲಿ ಇಬ್ಬರೂ ಹೇಳುವುದು ನಿಜ ಎನ್ನಿಸುತ್ತದೆ. ಎಲ್ಲಾ ಮನೆಗಳ ಕಥೆಗಳೂ ಒಂದೇ ರೀತಿ ಆಗಿರುವುದಿಲ್ಲವಲ್ಲ! ಕೆಲವು ಮನೆಗಳಲ್ಲಿ ಅತ್ತೆಯದ್ದೇ ಅತಿರೇಕವಾದರೆ, ಇನ್ನು ಕೆಲವು ಮನೆಗಳಲ್ಲಿ ಸೊಸೆಯರೇ ಸರಿ ಇರುವುದಿಲ್ಲ. ಅತ್ತೆ-ಸೊಸೆ ಅಮ್ಮ-ಮಗಳಂತೆ ಇರುವ ಮನೆಗಳು ಅಪರೂಪ ಎಂದೇ ಹೇಳಬಹುದು. 

ಇದಕ್ಕೆ ಕಾರಣಗಳು ನೂರಾರು ಇರಬಹುದು. ಹೊಸದಾಗಿ ಹೊಸ ಪ್ರಪಂಚಕ್ಕೆ ಹೊಂದಿಕೊಳ್ಳಲು ಸೊಸೆ ಹೆಣಗಾಡುತ್ತಿರುವ ಸಂದರ್ಭದಲ್ಲಿ ಎಡವಟ್ಟು ಆಗುವುದು ಸಹಜ. ಆಕೆ ತನ್ನ ಅಮ್ಮನ ಮನೆಯಲ್ಲಿ ಹೇಗೆ ಇದ್ದಳೋ, ಹಾಗೆ ಇರಲು ಬಯಸಿದಾಗ ಅದು ಅತ್ತೆಗೆ ಸರಿ ಹೋಗದಿದ್ದಾಗ ಅಲ್ಲಿಂದಲೇ ಇಬ್ಬರ ನಡುವೆ ಜಟಾಪಟಿ ಶುರುವಾಗುವುದು ಇದೆ. ಇನ್ನು ಕೆಲವು ಮನೆಗಳಲ್ಲಿ ಮುದ್ದಿನಿಂದ ಸಾಕಿದ ಮಗ ಎಲ್ಲಿ ಹೆಂಡತಿ ಬಂದ ಮೇಲೆ ತನ್ನ ಕೈಬಿಟ್ಟು ಹೋಗುತ್ತಾನೋ ಎನ್ನುವ ಭಯದಲ್ಲಿಯೇ ಅತ್ತೆ ಸೊಸೆಯನ್ನು ಕಂಡರೆ ಕಿರಿಕಿರಿ ಮಾಡಿಕೊಳ್ಳುವುದೂ ಇದೆ. ಇಷ್ಟು ದಿನ ತನ್ನ ಪರವಾಗಿ ಮಾತನಾಡುತ್ತಿದ್ದ ಮಗ, ಸೊಸೆ ಬಂದ ಮೇಲೆ ಅವಳ ಪರವಾಗಿ ಒಂದೇ ಒಂದು ಮಾತು ಆಡಿದರೆ ಅತ್ತೆಗೆ ಸಹಿಸುವುದು ಕಷ್ಟವಾಗಬಹುದು. ಅದೇ ಇನ್ನೊಂದೆಡೆ, ಹೋದ ಮನೆಗೆ ಹೊಂದಿಕೊಳ್ಳುವ ಬದಲು ತನ್ನದೇ ವಾದ ಮಾಡುವ ಸೊಸೆಯಂದಿರೂ ಇದ್ದಾರೆ. ಉದ್ದೇಶಪೂರ್ವಕವಾಗಿ ಅತ್ತೆ ಮತ್ತು ಮಗನನ್ನು ದೂರ ಮಾಡಲು ಶತಪ್ರಯತ್ನ ಪಡುವವರೂ ಇದ್ದಾರೆ. ಆದ್ದರಿಂದ ಒಂದೊಂದು ಮನೆಗಳಲ್ಲಿ ಒಂದೊಂದು ಕಥೆ.

Tap to resize

Latest Videos

ಈ ವಯಸ್ಸಲ್ಲೂ ಬೇಕಿತ್ತಾ ಇದೆಲ್ಲಾ ಅನ್ನೋರಿಗೇ ಸವಾಲೆಸೆದು ರಾಜಾ ರಾಣಿ ವೇದಿಕೆ ಮೇಲೆ ರೀಲ್ಸ್​ ಜೋಡಿ!

ಇದಕ್ಕಾಗಿಯೇ ಅತ್ತೆ-ಸೊಸೆ ಎನ್ನುವುದು ಒಂದು ರೀತಿ ಕಾಯಿಲೆ ಎಂದಿರುವ ನವರಸ ನಾಯಕ ಜಗ್ಗೇಶ್​ ಅವರು ಅದಕ್ಕೆ ಔಷಧವನ್ನು ಹೇಳಿದ್ದಾರೆ. ಇದೇ ವೇಳೆ ನಟ ರಮೇಶ್​ ಅರವಿಂದ್​ ಅವರೂ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರ ಆಗೋ ಮಹಾನಟಿ ರಿಯಾಲಿಟಿ ಷೋನಲ್ಲಿ ಈ ಕಿವಿಮಾತನ್ನು ಇಬ್ಬರೂ ಹೇಳಿದ್ದಾರೆ. ಅತ್ತೆ ಹೇಳಿದ್ದಕ್ಕೆ ಸೊಸೆ ಹಾ ಹೂಂ ಎನ್ನಬೇಕು, ಸೊಸೆ ಹೇಳಿದ್ದಕ್ಕೆ ಅತ್ತೆ ಹಾಂ ಹೂಂ ಅನ್ನಬೇಕು ಎನ್ನುವುದು ಒಂದು ಮಾತಾದರೆ, ಅತ್ತೆ-ಸೊಸೆ ಹೆಚ್ಚಾಗಿ ಒಟ್ಟಿಗೇ ಇದ್ದರೆ ಈ ಸಮಸ್ಯೆ ಇರುವ ಕಾರಣ, ಮದುವೆಯಾಗುತ್ತಿದ್ದಂತೆಯೇ ಅತ್ತೆ-ಮಾವನಿಗೆ ಹೊಸ ಮನೆಯ ಕೀ ಕೊಟ್ಟು ಅಲ್ಲಿಗೆ ಕಳುಹಿಸಬೇಕು, ವಾರಾಂತ್ಯದಲ್ಲಿ ಗೆಸ್ಟ್​ ರೀತಿ ಕರೆಸಿಕೊಳ್ಳಬೇಕು.  ಎಂದಿರುವ ಜಗ್ಗೇಶ್​, ದೂರವಿದ್ದರೆ ಸಂಬಂಧ ಗಟ್ಟಿಯಾಗಿರುತ್ತದೆ ಎನ್ನುವ ಮಾತನ್ನು ಹೇಳಿದ್ದಾರೆ. ತಾವೂ ಅದೇ ರೀತಿ ಮಾಡಿರುವುದಾಗಿಯೂ ತಿಳಿಸಿದ್ದಾರೆ.  

ಆಗ ರಮೇಶ್​ ಅವರು ಅತ್ತೆ-ಸೊಸೆ ಒಂದೇ ಮನೆಯಲ್ಲಿ ಇದ್ದರೂ ಸುಖವಾಗಿ ಇರಬಹುದು. ಅದು ಹೇಗೆ ಎಂದರೆ ಅತ್ತೆಯನ್ನು ಬರೀ ಬಾಯಿಯಿಂದ ಅಮ್ಮ ಎಂದರೆ ಆಗದು. ಅವರನ್ನು ಸ್ವಂತ ಅಮ್ಮನಂತೆ ನೋಡಬೇಕು. ಹಾಗೆ ಏನಾದ್ರೂ ಮಾಡಿದ್ದೇ ಆದರೆ ಅವರು ಖಂಡಿತವಾಗಿಯೂ ನಿಮ್ಮನ್ನು ಮಗಳಂತೆ ನೋಡುತ್ತಾರೆ ಎಂದಿದ್ದಾರೆ. ಅಲ್ಲಿಗೆ ಬೇರೆ ಬೇರೆ ಇದ್ದು ಹಾಗೂ ಒಟ್ಟಿಗೇ ಇದ್ದು ಅತ್ತೆ-ಸೊಸೆಯಂದಿರ ಸಂಬಂಧವನ್ನು ಹೇಗೆ ಬೆಳೆಸಿಕೊಳ್ಳಬಹುದು ಎನ್ನುವುದನ್ನು ಈ ಇಬ್ಬರು ನಟರು ಹೇಳಿದ್ದಾರೆ. ಇದಕ್ಕೆ ಹಲವಾರು ರೀತಿಯ ಪ್ರತಿಕ್ರಿಯೆಗಳು ಬಂದಿವೆ. ಕೆಲವರು ಇಬ್ಬರು ನಟರು ಹೇಳಿರುವುದು ಸರಿಯಾಗಿದೆ ಎಂದರೆ, ಇನ್ನು ಕೆಲವರು ಇವೆರೆಡೂ ತಮ್ಮ ಲೈಫ್​ನಲ್ಲಿ ವರ್ಕ್​ಔಟ್​ ಆಗಿಲ್ಲ ಎಂದೂ ಹೇಳಿದ್ದಾರೆ.  ಬರೀ ಹೆಣ್ಣು ಅತ್ತೆಯನ್ನು ಅಮ್ಮ ಎಂದು ನೋಡಿಕೊಂಡರೆ ಸಾಲದು, ಮಗನೂ ತನ್ನ ಅತ್ತೆ-ಮಾವಂದಿರನ್ನು ಅದೇ ರೀತಿ ನೋಡಿಕೊಳ್ಳಬೇಕಲ್ವಾ? ಬರೀ ಹೆಣ್ಣುಮಕ್ಕಳಿಗೆ ಬುದ್ಧಿ ಹೇಳೋದೇ ಆಯ್ತು ಎಂದು ಕೆಲವರು ರಮೇಶ್​ ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರೆ, ಬೇರೆ ಮನೆ ಮಾಡಿಟ್ಟರೆ ಅಪ್ಪ-ಅಮ್ಮನನ್ನು ನೋಡಿಕೊಳ್ಳುವವರು, ಅವರಿಗೆ ಅಡುಗೆ ಮಾಡಿ ಹಾಕುವವರು ಯಾರು ಎಂದು ಕೆಲವರು ಜಗ್ಗೇಶ್​ ಅವರ ಮಾತಿಗೆ ಪ್ರತಿಕ್ರಿಯೆ ನೀಡಿದ್ದಾರೆ. 

ಕೆಂಪು ಸೀರೆಯಲ್ಲಿ ನೃತ್ಯದಿಂದ ಕಿಚ್ಚು ಹೊತ್ತಿಸಿದ ಶ್ರೀರಸ್ತು ಶುಭಮಸ್ತು ಸೊಸೆಯಂದಿರು!

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!