
ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ 'ಲೇಡಿ ಸೂಪರ್‌ಸ್ಟಾರ್' ಎಂದೇ ಖ್ಯಾತಿ ಪಡೆದಿರುವ ನಟಿ ನಯನತಾರಾ, ಇಂದು ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಆದರೆ, ಅವರ ಈ ಯಶಸ್ಸಿನ ಹಿಂದಿನ ಪಯಣ ತೀರಾ ಸರಳವಾಗಿರಲಿಲ್ಲ. ಇತ್ತೀಚೆಗೆ ಯೂಟ್ಯೂಬರ್ ಪರ್ಲ್ ಮಾನೆ ಅವರೊಂದಿಗಿನ ಸಂಭಾಷಣೆಯಲ್ಲಿ, ನಯನತಾರಾ ತಮ್ಮ ವೃತ್ತಿಜೀವನದ ಆರಂಭಿಕ ದಿನಗಳ ರೋಚಕ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು ನಯನತಾರಾ ಮಾಡೆಲಿಂಗ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಂಡ ಅವರು, "ನನ್ನ ಮೊದಲ ಕೆಲಸ ಒಂದು ಮ್ಯಾಗಜೀನ್ ಮುಖಪುಟದ ಚಿತ್ರೀಕರಣವಾಗಿತ್ತು. ನಂತರ ಫ್ಯಾಷನ್ ಶೋ ಒಂದಕ್ಕೆ ನನ್ನನ್ನು ಆಹ್ವಾನಿಸಲಾಯಿತು. ಆ ಕೆಲಸಕ್ಕಾಗಿ ನನಗೆ ಕೇವಲ 2,000 ದಿಂದ 3,000 ರೂಪಾಯಿಗಳಷ್ಟೇ ಸಿಕ್ಕಿತ್ತು" ಎಂದು ಹೇಳಿದ್ದಾರೆ. ನಟನೆಯು ಅವರ ವೃತ್ತಿಜೀವನದ ಯೋಜನೆಯೇ ಆಗಿರಲಿಲ್ಲ, ಆದರೆ ವಿಧಿ ಅವರಿಗಾಗಿ ಬೇರೆಯದೇ ದಾರಿಯನ್ನು ಕಾಯ್ದಿರಿಸಿತ್ತು.
ಆ ಮ್ಯಾಗಜೀನ್‌ನಲ್ಲಿ ಪ್ರಕಟವಾದ ನಯನತಾರಾ ಅವರ ಫೋಟೋಗಳು ಪ್ರಸಿದ್ಧ ಮಲಯಾಳಂ ಚಲನಚಿತ್ರ ನಿರ್ಮಾಪಕ ಸತ್ಯನ್ ಅಂತಿಕಾದ್ ಅವರ ಕಣ್ಣಿಗೆ ಬಿದ್ದವು. ಆ ಒಂದು ಫೋಟೋಶೂಟ್ ಅವರ ಜೀವನವನ್ನೇ ಬದಲಾಯಿಸಿತು. 2003 ರಲ್ಲಿ ತೆರೆಕಂಡ 'ಮನಸ್ಸಿನಕ್ಕರೆ' ಎಂಬ ಮಲಯಾಳಂ ಚಿತ್ರದ ಮೂಲಕ ಅವರು ಬೆಳ್ಳಿಪರದೆಯ ಮೇಲೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಅವರು ನಿರ್ವಹಿಸಿದ 'ಗೌರಿ' ಪಾತ್ರವು ಬಾಕ್ಸ್ ಆಫೀಸ್‌ನಲ್ಲಿ ಭಾರೀ ಯಶಸ್ಸು ಕಂಡು, ಚಿತ್ರರಂಗದ ಗಮನ ಸೆಳೆಯಿತು. ನಂತರ ಅವರು 'ವಿಸ್ಮಯತುಂಬತ್ತು' ಮತ್ತು 'ನಟ್ಟುರಾಜ್ವು' ನಂತಹ ಯಶಸ್ವಿ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದರು. 2005ರಲ್ಲಿ 'ಐಯಾ' ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ಅವರು, ಅದೇ ವರ್ಷ ಸೂಪರ್‌ಸ್ಟಾರ್ ರಜನಿಕಾಂತ್ ಅವರೊಂದಿಗೆ ನಟಿಸಿದ 'ಚಂದ್ರಮುಖಿ' ಸಿನಿಮಾ ಬ್ಲಾಕ್‌ಬಸ್ಟರ್ ಹಟ್ ಆಯಿತು. ಈ ಸಿನಿಮಾ ನಯನತಾರಾ ಅವರನ್ನು ದಕ್ಷಿಣ ಭಾರತದ ಮುಂಚೂಣಿ ನಟಿಯರ ಸಾಲಿನಲ್ಲಿ ತಂದು ನಿಲ್ಲಿಸಿತು.
ನಯನತಾರಾ ಅವರ ವೃತ್ತಿಪರ ಯಶಸ್ಸಿನಷ್ಟೇ ಅವರ ವೈಯಕ್ತಿಕ ಜೀವನವೂ ಆಗಾಗ ಸುದ್ದಿಯಲ್ಲಿತ್ತು. ನಿರ್ದೇಶಕ ವಿಘ್ನೇಶ್ ಶೀವನ್ ಅವರನ್ನು ವಿವಾಹವಾಗುವ ಮೊದಲು, ಅವರ ಹೆಸರು ಚಿತ್ರರಂಗದ ಹಲವು ಪ್ರಮುಖ ನಟರೊಂದಿಗೆ ತಳುಕು ಹಾಕಿಕೊಂಡಿತ್ತು. ವಿಶೇಷವಾಗಿ ನಟ ಹಾಗೂ ನೃತ್ಯ ಸಂಯೋಜಕ ಪ್ರಭುದೇವ ಅವರೊಂದಿಗಿನ ಅವರ ಪ್ರೇಮ ಪ್ರಸಂಗವು ತೀವ್ರ ವಿವಾದಕ್ಕೆ ಕಾರಣವಾಗಿತ್ತು.
ಪ್ರಸ್ತುತ ಪ್ರಣಯ ಆಧಾರಿತ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಯನತಾರಾ, ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' (Toxic) ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಕುತೂಹಲ ಮೂಡಿಸಿದೆ. ಕೇವಲ ₹2000 ರೊಕ್ಕದಿಂದ ಶುರುವಾದ ನಯನತಾರಾ ಅವರ ಪಯಣ, ಇಂದು ದಕ್ಷಿಣದ ಅತ್ಯುನ್ನತ ಮತ್ತು ಸಾಮ್ರಾಜ್ಯ ಆಳುವ 'ಲೇಡಿ ಸೂಪರ್‌ಸ್ಟಾರ್' ಮಟ್ಟಕ್ಕೆ ಬೆಳೆದು ನಿಂತಿರುವುದು ನಿಜಕ್ಕೂ ರೋಮಾಂಚನಕಾರಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.