
ಬೆಂಗಳೂರು (ಅ.14): ಕರ್ನಾಟಕ ರತ್ನ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಸ್ಮರಣೆ ಮತ್ತು ಸಮಾಜಮುಖಿ ಕೆಲಸಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ಸಿದ್ಧಪಡಿಸಲಾಗಿರುವ ಮಹತ್ವಾಕಾಂಕ್ಷೆಯ 'ಪಿಆರ್‌ಕೆ ಮೊಬೈಲ್ ಅಪ್ಲಿಕೇಶನ್' (PRK Mobile Application) ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಆಹ್ವಾನ ನೀಡಿದರು.
ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ನಿನ್ನೆ (ಅ.13ರ ಸಂಜೆ) ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಸದಾಶಿವನಗರದಲ್ಲಿರುವ ಅವರ ನಿವಾಸದಲ್ಲಿ ಭೇಟಿ ಮಾಡಿದರು. 'ಕರ್ನಾಟಕ ರತ್ನ' ಪುನೀತ್ ರಾಜ್‌ಕುಮಾರ್ ಅವರು ಬದುಕು ಸಾರ್ಥಕತೆಯ ಪ್ರತೀಕ. ಅವರ ಅಕಾಲಿಕ ಅಗಲಿಕೆ ನಾಡಿಗೆ ತುಂಬಲಾರದ ನಷ್ಟವನ್ನುಂಟು ಮಾಡಿದ್ದರೂ, ಅವರ ಪ್ರತಿಭೆ, ಸಮಾಜಸೇವೆ ಮತ್ತು ಮಾನವೀಯ ಮೌಲ್ಯಗಳು ಇಂದಿಗೂ ಕೋಟ್ಯಂತರ ಕನ್ನಡಿಗರಿಗೆ ಸ್ಫೂರ್ತಿಯ ಸೆಲೆಯಾಗಿವೆ. ಈ ಮಹಾನ್ ನಟನ ಸದಾಶಯಗಳು ಮತ್ತು ಉತ್ತಮ ವಿಚಾರಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ನಿಟ್ಟಿನಲ್ಲಿ 'PRK ಮೊಬೈಲ್ ಅಪ್ಲಿಕೇಶನ್' ಅನ್ನು ಸಿದ್ಧಪಡಿಸಲಾಗಿದೆ.
ಈ ಅಪ್ಲಿಕೇಶನ್ ಮೂಲಕ ಪುನೀತ್ ರಾಜ್‌ಕುಮಾರ್ ಅವರ ಸಿನಿಮಾ ಸಾಧನೆಗಳು, ಅಪರೂಪದ ಫೋಟೋಗಳು, ವಿಡಿಯೋಗಳು ಮಾತ್ರವಲ್ಲದೆ, ಅವರು ನಡೆಸುತ್ತಿದ್ದ ಸಮಾಜಮುಖಿ ಕಾರ್ಯಗಳು, ಅನಾಥ ಆಶ್ರಮಗಳ ಪೋಷಣೆ, ಶಾಲಾ-ಕಾಲೇಜುಗಳ ನೆರವು ಮುಂತಾದ ಮಾನವೀಯ ಮೌಲ್ಯಗಳ ಕುರಿತ ಸಂಪೂರ್ಣ ಮಾಹಿತಿಗಳು ಲಭ್ಯವಾಗಲಿವೆ. ಈ ಅಪ್ಲಿಕೇಶನ್‌ನ ಮೂಲ ಉದ್ದೇಶ, ಯುವ ಜನತೆಗೆ 'ಅಪ್ಪು' ಅವರ ಜೀವನದ ಮೌಲ್ಯಗಳನ್ನು ಪರಿಚಯಿಸಿ, ಸಮಾಜಕ್ಕೆ ಒಳ್ಳೆಯದನ್ನು ಮಾಡುವಲ್ಲಿ ಪ್ರೇರೇಪಿಸುವುದಾಗಿದೆ. ಇನ್ನು ಮುಂದೆ, ಕನ್ನಡಿಗರ ಪ್ರೀತಿಯ 'ಅಪ್ಪು'ವಿನ ಸ್ಫೂರ್ತಿ ಕೆಲವೇ ದಿನಗಳಲ್ಲಿ ಎಲ್ಲರ ಅಂಗೈಯಲ್ಲಿ ಮೊಬೈಲ್ ಅಪ್ಲಿಕೇಶನ್ ರೂಪದಲ್ಲಿ ಲಭ್ಯವಾಗಲಿದೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗಿನ ಈ ಭೇಟಿಯ ಸಂದರ್ಭದಲ್ಲಿ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಅಪ್ಲಿಕೇಶನ್‌ನ ಪ್ರಾಮುಖ್ಯತೆ ಮತ್ತು ಇದರ ಹಿಂದಿನ ಆಶಯಗಳ ಕುರಿತು ವಿವರಿಸಿದರು. ಕನ್ನಡ ನಾಡಿಗೆ ಪುನೀತ್ ರಾಜ್‌ಕುಮಾರ್ ಅವರ ಕೊಡುಗೆಗಳನ್ನು ಸ್ಮರಿಸಿದ ಡಿ.ಕೆ. ಶಿವಕುಮಾರ್ ಅವರು, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಈ ಶ್ಲಾಘನೀಯ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು. 'ಕರ್ನಾಟಕ ರತ್ನ' ಪುನೀತ್ ರಾಜ್‌ಕುಮಾರ್ ಅವರ ಸಮಾಜ ಸೇವೆ ಮತ್ತು ಮಾನವೀಯ ಮೌಲ್ಯಗಳನ್ನು ಹೊಸ ತಲೆಮಾರಿಗೆ ಪರಿಚಯಿಸುವ ಈ ಪ್ರಯತ್ನಕ್ಕೆ ತಮ್ಮ ಸಂಪೂರ್ಣ ಬೆಂಬಲ ಇರುವುದಾಗಿ ತಿಳಿಸಿ, ಮೊಬೈಲ್ ಅಪ್ಲಿಕೇಶನ್ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸುವ ಭರವಸೆ ನೀಡಿದರು.
'ಜೊತೆಗಿರದ ಜೀವ ಎಂದಿಗೂ ಜೀವಂತ...' ಎಂಬ ಮಾತಿನಂತೆ, ಪುನೀತ್ ರಾಜ್‌ಕುಮಾರ್ ಅವರು ಭೌತಿಕವಾಗಿ ನಮ್ಮ ನಡುವೆ ಇಲ್ಲದಿದ್ದರೂ, ಅವರ ಸಾರ್ಥಕ ಬದುಕು ಮತ್ತು ಸಮಾಜಮುಖಿ ಕಾರ್ಯಗಳ ಮೂಲಕ ಕೋಟ್ಯಂತರ ಜನರ ಹೃದಯದಲ್ಲಿ ಅಜರಾಮರವಾಗಿದ್ದಾರೆ. 'PRK' ಮೊಬೈಲ್ ಅಪ್ಲಿಕೇಶನ್ ಲೋಕಾರ್ಪಣೆಯು ಈ ಜೀವಂತಿಕೆಯನ್ನು ಮತ್ತಷ್ಟು ಹೆಚ್ಚಿಸುವ, ಅವರ ನೆನಪು ಮತ್ತು ಪ್ರೇರಣೆಯನ್ನು ಪ್ರತಿ ಮನೆಯ ಮಾತಾಗಿಸುವ ದಿಕ್ಕಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಈ ಕಾರ್ಯಕ್ರಮದ ದಿನಾಂಕ ಮತ್ತು ಸಮಯವನ್ನು ಶೀಘ್ರದಲ್ಲೇ ಘೋಷಿಸುವ ನಿರೀಕ್ಷೆಯಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.