
ಬೆಂಗಳೂರು: ಕನ್ನಡದ ರಿಯಾಲಿಟಿ ಶೋಗಳ ಸ್ಟಾರ್ ಆ್ಯಂಕರ್ ಅನುಶ್ರೀ ಅವರು ಇಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಕೂರ್ಗ್ ಮೂಲದ ಐಟಿ ಉದ್ಯೋಗಿ ರೋಷನ್ ರಾಮಮೂರ್ತಿ ಅವರೊಂದಿಗೆ ನಡೆದ ಮದುವೆಯಲ್ಲಿ ಆಪ್ತ ಸ್ನೇಹಿತರು , ಕುಟುಂಬಸ್ಥರು ಹಾಗೂ ಕಿರುತೆರೆ ಮತ್ತು ಹಿರಿತೆರೆತ ಹಲವಾರು ಗಣ್ಯರು ಭಾಗವಹಿಸಿದ್ದರು. ವಿಶೇಷವೆಂದರೆ ಇವರಿಬ್ಬರ ಪ್ರೀತಿಗೆ ಕೊಂಡಿಯಾಗಿದ್ದು, ಶ್ರೀದೇವಿ ಬೈರಪ್ಪ ಎಂಬುದು ಬಹಿರಂಗವಾಗಿದೆ. ಶ್ರೀದೇವಿ ಬೈರಪ್ಪ ಮತ್ತು ರೋಷನ್ ಬಾಲ್ಯ ಸ್ನೇಹಿತರಾಗಿದ್ದು, ಪುನೀತ್ ರಾಜ್‌ಕುಮಾರ್ ಅವರಿಗೆ ಸಂಬಂಧಿಸಿದ ಈವೆಂಟ್ ನಲ್ಲಿ ಶ್ರೀದೇವಿ ಅವರು ಅನುಶ್ರೀಯನ್ನು ಪರಿಚಯ ಮಾಡಿಕೊಟ್ಟರಂತೆ. ಹೀಗಾಗಿ ಈ ಜೋಡಿಯ ಮದುವೆಗೆ ಶ್ರೀದೇವಿ ಬೈರಪ್ಪ ಕೂಡ ಉಪಸ್ಥಿತಿ ಇದ್ದು, ನವ ಜೋಡಿಗೆ ಹರಸಿದರು.
ಮದುವೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಈ ನವ ಜೋಡಿ ತಮ್ಮಿಬ್ಬರ ಪ್ರೀತಿ ಹೇಗಾಯ್ತು ಎಂದು ಬಹಿರಂಗಪಡಿಸಿದ್ದಾರೆ. ನಾವಿಬ್ಬರು ಮೊದಲು ಫ್ರೆಂಡ್ಸ್ ಆಗಿದ್ದೆವು. ಒಟ್ಟಿಗೆ ಕಾಫಿ ಕುಡಿದ್ವಿ, ಮಾತುಕತೆ ನಡೆಸಿದ್ವಿ. ಆ ಸಂದರ್ಭದಲ್ಲೇ ನನಗೆ ರೋಷನ್ ಇಷ್ಟವಾದರು. ಅವರಿಗೂ ನಾನು ಇಷ್ಟವಾಯ್ತು. ಹೀಗೆ ಲವ್ ಆಯ್ತು, ಮದುವೆಯಾದೆವು ಎಂದಿದ್ದಾರೆ.
ರೋಷನ್ ಕೂಡ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿ. ಪುನೀತ್ ಸರ್ ಕಾರ್ಯಕ್ರಮದಲ್ಲಿ ನಾವಿಬ್ಬರೂ ಹತ್ತಿರವಾಗಿದ್ದು, ನಾವು ಪ್ರೇಮಿಗಳು ಅಥವಾ ಗಂಡ-ಹೆಂಡತಿ ಅಷ್ಟೇ ಅಲ್ಲ, ಜೀವನವನ್ನು ತುಂಬಾ ಸಿಂಪಲ್ ಆಗಿ ನೋಡುವಂತಹವರು. ಚಿಕ್ಕ-ಚಿಕ್ಕ ವಿಚಾರಗಳನ್ನೂ ನಾವು ಸೆಲೆಬ್ರೇಟ್ ಮಾಡುತ್ತೇವೆ. ಅವರಲ್ಲಿ ಸಹಾಯ ಮಾಡುವ ಮನೋಭಾವ ಹೆಚ್ಚಾಗಿದೆ, ಅದೇ ನನಗೆ ತುಂಬಾ ಇಷ್ಟ ಎಂದಿದ್ದಾರೆ ಅನುಶ್ರೀ.
ಇನ್ನು ತಮ್ಮ ಪ್ರೀತಿ ಬಗ್ಗೆ ಹೇಳಿಕೊಂಡ ರೋಷನ್ ರಾಮಮೂರ್ತಿ ನನಗೆ ಅನುಶ್ರೀ ಅವರು ಐದು ವರ್ಷಗಳಿಂದ ಪರಿಚಯ. ಪುನೀತ್ ಪರ್ವ ಇವೆಂಟ್ ನಲ್ಲಿ ನನಗೆ ಅನು ಪರಿಚಯ ಆಯ್ತು. ಅಲ್ಲಿಂದ ಫ್ರೆಂಡ್ಸ್ ಆದ್ವಿ, ನಂತರ ನಾವು ಇನ್ನಷ್ಟು ಆತ್ಮೀಯರಾದೆವು. ಶ್ರೀದೇವಿ ಭೈರಪ್ಪ (ಯುವರಾಜ್‌ಕುಮಾರ್ ಪತ್ನಿ) ಅವರು ನನ್ನ ಬಾಲ್ಯ ಸ್ನೇಹಿತೆ ಅವರ ಮೂಲಕವೇ ನಾನು ಅನುಶ್ರೀಯನ್ನು ಭೇಟಿಯಾದೆ. ಅನುಶ್ರೀ ಸೆಲೆಬ್ರಿಟಿ ಅಂತ ನನಗೆ ಯಾವತ್ತೂ ಅನ್ನಿಸಿಲ್ಲ. ಅವರು ತುಂಬಾ ಸಿಂಪಲ್ ಹುಡುಗಿ. ನಾನು ಚೆನ್ನಾಗಿ ಅಡುಗೆ ಮಾಡುತ್ತೇನೆ, ಅವಳು ಅದನ್ನು ತುಂಬಾ ಖುಷಿಯಿಂದ ತಿನ್ನುತ್ತಾಳೆ. ನಾನು ಐಟಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದೇನೆ. ನಾನು ಕೋಟ್ಯಧಿಪತಿ ಏನೂ ಅಲ್ಲ, ಸಾಮಾನ್ಯ ಜೀವನ ನಡೆಸುತ್ತಿರುವವನು. ಆದರೆ ಆ ಸರಳತೆಯಲ್ಲೇ ನಮ್ಮ ಜೀವನದ ಸೌಂದರ್ಯ ಅಡಗಿದೆ ಎಂದಿದ್ದಾರೆ.
ಅನುಶ್ರೀ ಈಗಾಗಲೇ ತಮ್ಮ ನಿರೂಪಣಾ ಶೈಲಿ, ನೈಸರ್ಗಿಕ ನಗು ಹಾಗೂ ಪ್ರೇಕ್ಷಕರೊಂದಿಗೆ ಹೊಂದಿಕೊಂಡಿರುವ ಆತ್ಮೀಯತೆಗೆ ಹೆಸರುವಾಸಿಯಾಗಿದ್ದಾರೆ. ಅವರು ನಡೆಸಿದ ಹಲವಾರು ರಿಯಾಲಿಟಿ ಶೋಗಳು ಹಾಗೂ ಕಾರ್ಯಕ್ರಮಗಳು ಕನ್ನಡಿಗರ ಮನಸ್ಸಿನಲ್ಲಿ ವಿಶೇಷ ಸ್ಥಾನ ಗಳಿಸಿವೆ. ಇನ್ನೊಂದೆಡೆ ರೋಷನ್ ತಮ್ಮ ಸರಳತೆಯಿಂದ ಹಾಗೂ ಬದುಕಿನ ಪ್ರಾಮಾಣಿಕ ದೃಷ್ಟಿಕೋನದಿಂದ ಅನುಶ್ರೀ ಅವರ ಮನ ಗೆದ್ದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.