ತುಮಕೂರು ಅಕ್ರಮ ವಲಸಿಗರ ನೆಲೆಗೆ ಸೂಕ್ತ ಸ್ಥಾನವಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬಂದ ಅಕ್ರಮ ವಲಸಿಗರು ಇಲ್ಲಿ ಉದ್ಯಮಿಗಳಾಗಿ ಬೆಳೆದಿದ್ದಾರೆ.
ಉಗಮ ಶ್ರೀನಿವಾಸ್
ತುಮಕೂರು [ನ.12]: ಬೆಂಗಳೂರಿನ ಭವಿಷ್ಯದ ಉಪನಗರಿ ತುಮಕೂರು ಬಾಂಗ್ಲಾ ವಲಸಿಗರ ಆಶ್ರಯ ತಾಣವಾಗುತ್ತಿದೆಯೇ?!
ಇಂತಹದ್ದೊಂದು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹುಟ್ಟಿಕೊಂಡಿದೆ. ಇದಕ್ಕೆ ಕಾರಣ ದಶಕಕ್ಕೂ ಹೆಚ್ಚು ಕಾಲದಿಂದ ಬಾಂಗ್ಲಾದೇಶದಿಂದ ಅಕ್ರಮ ವಲಸಿಗರು ತುಮಕೂರಿಗೆ ವಲಸೆ ಬರುತ್ತಿರುವುದು. ರಾಜಧಾನಿಗೆ ಹತ್ತಿರವಿರುವ ಕಾರಣಕ್ಕೋ ಅಥವಾ ರಾಜಧಾನಿಗೆ ರಾಜ್ಯದ 16 ಜಿಲ್ಲೆಗಳನ್ನು ಸಂಪರ್ಕಿಸುವ ಹೆಬ್ಬಾಗಿಲು ಎಂಬ ಕಾರಣಕ್ಕೋ ನಿರಂತರವಾಗಿ ವಲಸೆ ಬರುತ್ತಲೇ ಇದ್ದಾರೆ.
ಕಳೆದ ಕೆಲ ವರ್ಷಗಳಿಂದ ಬಾಂಗ್ಲಾ ವಲಸಿಗರ ಬಗ್ಗೆ ಗುಸುಗುಸು ಆರಂಭವಾಗಿತ್ತು. ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಸೊಗಡು ಶಿವಣ್ಣ ಕೂಡ ಬಾಂಗ್ಲಾ ವಲಸಿಗರ ವಿರುದ್ಧ ಗಟ್ಟಿದನಿ ಎತ್ತಿದ್ದರು. ಮೊದಲೆಲ್ಲ ತಲೆ ಕೆಡಿಸಿಕೊಳ್ಳದ ಜನ ಈಗ ಬಾಂಗ್ಲಾ ವಲಸಿಗರ ಆಗಮನವಾಗಿದೆ ಎಂಬ ವಿಷಯವನ್ನು ಪೊಲೀಸರ ಗಮನಕ್ಕೂ ತರುತ್ತಿದ್ದಾರೆ.
ದೊಡ್ಡ ಮಳಿಗೆಗಳ ಸ್ಥಾಪನೆ:
ಪಾಸ್‌ಪೋರ್ಟ್ ಇಲ್ಲದೆ ತುಮಕೂರಿಗೆ ಆಗಮಿಸಿ ಇಲ್ಲೇ ನೆಲೆಸಿರುವ ಬಾಂಗ್ಲಾ ವಲಸಿಗರು ಮತದಾನದ ಹಕ್ಕನ್ನು ಪಡೆದಿದ್ದಾರೆ. ಆರಂಭದಲ್ಲಿ ಹಣ್ಣಿನ ವ್ಯಾಪಾರ, ಕಾರ್ಪೆಂಟರ್ ಕೆಲಸ, ಗಾರೆ, ಇನ್ನಿತರೆ ಕೆಲಸ ಮಾಡುತ್ತಿದ್ದ ಬಾಂಗ್ಲಾ ವಲಸಿಗರು ಈಗ ಆ ಉದ್ಯೋಗ ಬಿಟ್ಟು ದೊಡ್ಡ ದೊಡ್ಡ ಮಳಿಗೆಗಳನ್ನು ಸ್ಥಾಪನೆ ಮಾಡಿದ್ದಾರೆ.
ಬಂಧಿತನಾಗಿದ್ದ ಒಬ್ಬ ಉಗ್ರ:
ಕೆಲ ವರ್ಷಗಳ ಹಿಂದೆ ಪೂರ್‌ಹೌಸ್ ಕಾಲೋನಿ ಬಳಿ ಶಂಕಿತ ಉಗ್ರಗಾಮಿಯೊಬ್ಬನನ್ನು ಭಯೋತ್ಪಾದನಾ ನಿಗ್ರಹ ದಳ ವಶಕ್ಕೆ ತೆಗೆದುಕೊಂಡಾಗ ಬಾಂಗ್ಲಾ ವಲಸಿಗರು ಅಕ್ರಮವಾಗಿ ತುಮಕೂರಿನಲ್ಲಿ ನುಸುಳಿದ್ದಾರೆ ಎಂಬ ವಿಷಯ ಸಾರ್ವಜನಿಕವಾಗಿ ಚರ್ಚೆಗೆ ಬಂದಿತ್ತು. ಆದರೆ ಆಗಲೂ ಕೂಡ ಈ ಬಗ್ಗೆ ಗಂಭೀರವಾಗಿ ತುಮಕೂರು ಜಿಲ್ಲಾಡಳಿತವಾಗಲಿ, ಪೊಲೀಸ್ ಇಲಾಖೆಯಾಗಲಿ ತೆಗೆದುಕೊಳ್ಳಲಿಲ್ಲ. 10 ವರ್ಷದ ಹಿಂದೆ ಗಾರೆ ಕೆಲಸ, ಕಾರ್ಪೆಂಟರ್ ಕೆಲಸಕ್ಕೆ ಬಂದು ಈಗ ದೊಡ್ಡ ಉದ್ಯಮಿಗಳಾಗಿ ಬೆಳೆದಿರುವ ಬಾಂಗ್ಲಾ ವಲಸಿಗರು ಮತ್ತಷ್ಟುಮಂದಿ ವಲಸಿಗರು ತುಮಕೂರಿಗೆ ಬರಲು ಸಹಾಯ ಮಾಡುತ್ತಿದ್ದಾರೆ ಎಂಬ ಗುರುತರ ಆರೋಪವಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
2008ರಲ್ಲಿ ನಡೆದಿದ್ದ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಾಂಬ್ ಸ್ಫೋಟಕ್ಕೆ ಮುನ್ನ ಇಂಡಿಯನ್ ಮುಜಾಹಿದ್ದೀನ್ ಶಂಕಿತರ ಉಗ್ರರು ತುಮಕೂರಿನಲ್ಲಿ ತಾಲೀಮು ನಡೆಸಿದ್ದರು ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿತ್ತು. ಈ ಪ್ರಕರಣದ ಬಳಿಕ ಬಾಂಗ್ಲಾ ವಲಸಿಗರ ಮೇಲೆ ಖಾಕಿ ಕಣ್ಣು ಬಿತ್ತು. ಆದರೆ ಅದ್ಯಾಕೋ ಆರಂಭದಲ್ಲಿ ತೋರಿದ ಉತ್ಸಾಹ ಪೊಲೀಸರಲ್ಲಿ ಆನಂತರ ಕುಗ್ಗಿತು. ತುಮಕೂರಿನ ಕೈಗಾರಿಕಾ ಪ್ರದೇಶವಾದ ಅಂತರಸನಹಳ್ಳಿ ಮುಂತಾದ ಕಡೆ ಶೆಡ್‌ಗಳಲ್ಲಿ ಬಾಂಗ್ಲಾ ವಲಸಿಗರು ಇರುವ ಬಗ್ಗೆ ಸ್ಥಳೀಯರು ದೂರು ನೀಡಿದ್ದಾರೆ.
ತುಮಕೂರಿಗೇ ಏಕೆ ಹೆಚ್ಚು ವಲಸೆ?
ಕೈಗಾರಿಕಾ ಹಬ್ ಆಗಿ ಬೆಳೆಯುತ್ತಿರುವ, ಅಪಾರ ಜನಸಂಖ್ಯೆ ಹೊಂದಿರುವ, ಒಂದು ಸಮುದಾಯದ ಮಂದಿ ಹೆಚ್ಚು ಸಂಖ್ಯೆಯಲ್ಲಿರುವ ಕಾರಣ ತುಮಕೂರಿನ ಕಡೆ ಅಕ್ರಮವಾಗಿ ಬಾಂಗ್ಲಾ ವಲಸಿಗರು ಆಗಮಿಸುತ್ತಿದ್ದಾರೆ. ಇವರ ನೆಲೆ ಕೇವಲ ತುಮಕೂರಷ್ಟೆಅಲ್ಲ, ಶಿರಾ, ತಿಪಟೂರು, ಕುಣಿಗಲ್‌ವರೆಗೂ ಹಬ್ಬಿದೆ. ಉಗ್ರಗಾಮಿ ಚಟುವಟಿಕೆಗೆ ಸಂಬಂಧಿಸಿದಂತೆ ಎರಡು ಪ್ರಮುಖ ಘಟನೆಗಳು ತುಮಕೂರಿನಲ್ಲಿ ನಡೆದಿರುವುದು ಸಂಶಯಕ್ಕೆ ಇಂಬು ಕೊಟ್ಟಂತಾಗಿದೆ.
ಸ್ಕೆಚ್ ಹಾಕುವುದು ಇಲ್ಲಿ ಸುಲಭ?
ಮೂರು ವರ್ಷಗಳ ಹಿಂದೆ ಪೂರ್‌ಹೌಸ್ ಕಾಲೋನಿಯಿಂದ ಶಂಕಿತ ಉಗ್ರಗಾಮಿಯೊಬ್ಬನ್ನು ವಶಕ್ಕೆ ತೆಗೆದುಕೊಂಡಿದ್ದು ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣ ಸ್ಫೋಟಕ್ಕೆ ತುಮಕೂರಿನಲ್ಲಿ ಸ್ಕೆಚ್ ಹಾಕಿದ್ದ ವಿಷಯ ಹೊರ ಬೀಳುತ್ತಿದ್ದಂತೆ ಬಾಂಗ್ಲಾ ವಲಸಿಗರು ನೆಲೆ ನಿಂತಿರುವ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಆರಂಭವಾಯಿತು. ಸ್ಥಳೀಯರ ದೂರು, ತುಮಕೂರು ಹೊರವಲಯದಲ್ಲಿ ಆಗಾಗ ಅಕ್ರಮವಾಗಿ ತಲೆ ಎತ್ತುತ್ತಿರುವ ಶೆಡ್‌ಗಳು ಅದರ ತುಂಬೆಲ್ಲಾ ಬಾಂಗ್ಲಾ ವಲಸಿಗರು ತುಂಬಿರುವುದನ್ನು ಗಮನಿಸಿದ ಸ್ಥಳೀಯರು ಆತಂಕಕ್ಕೀಡಾಗಿದ್ದು ಉಂಟು. ತುಮಕೂರಿನ ಪುಟ್‌ಪಾತ್ ಬಳಿ ಕಾಣ ಸಿಗುವ ಅಪರಿಚಿತ ಮುಖಗಳೆಲ್ಲಾ ಬಾಂಗ್ಲಾ ವಲಸಿಗರು ಎಂಬ ವಿಷಯವನ್ನು ತಳ್ಳುಗಾಡಿ ವ್ಯಾಪಾರಿಗಳು ಈಗಾಗಲೇ ಪೊಲೀಸರ ಗಮನಕ್ಕೆ ತಂದಿದ್ದಾರೆ. ಇನ್ನಾದರೂ ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂಬುದು ಜನರ ಒತ್ತಾಸೆಯಾಗಿದೆ.
ತುಮಕೂರು ಜಿಲ್ಲೆಗೆ ಅಕ್ರಮವಾಗಿ ಬಾಂಗ್ಲಾ ವಲಸಿಗರ ಪ್ರವೇಶವಾಗಿದೆ. ಇದರ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್ ಇಲಾಖೆಗೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದಕ್ಕೆ ಕಡಿವಾಣ ಹಾಕದಿದ್ದರೆ ಮುಂದೆ ಅಪಾಯ ಕಟ್ಟಿಟ್ಟಬುತ್ತಿ.
- ಸೊಗಡು ಶಿವಣ್ಣ, ಮಾಜಿ ಸಚಿವ