* ಕೋವಿಡ್ ಭೀತಿಯ ನಡುವೆಯೇ ಟೋಕಿಯೋ ಒಲಿಂಪಿಕ್ಸ್‌ಗೆ ಕ್ಷಣಗಣನೆ
* ಪ್ರೇಕ್ಷಕರಿಲ್ಲದೇ ಒಲಿಂಪಿಕ್ಸ್ ಆಯೋಜಿಸಲು ಸರ್ಕಾರ ಚಿಂತನೆ
* ಉದ್ಘಾಟನಾ ಸಮಾರಂಭಕ್ಕೆ ವಿಶೇಷ ಆಹ್ವಾನಿತರಿಗೆ ಮಾತ್ರ ಅವಕಾಶ
ಟೋಕಿಯೋ(ಜು.06): ಈ ಮೊದಲು ವಿದೇಶಿ ಪ್ರಜೆಗಳಿಗೆ ಟೋಕಿಯೋ ಒಲಿಂಪಿಕ್ಸ್‌ಗೆ ಪ್ರವೇಶ ನಿಷೇಧಿಸಿದ್ದ ಕ್ರೀಡಾಕೂಟದ ಆಯೋಜಕರು, ನಿಯಮಿತ ಸಂಖ್ಯೆಯಲ್ಲಿ ಸ್ವದೇಶಿಯರಿಗೆ ಕ್ರೀಡಾಂಗಣಕ್ಕೆ ಅವಕಾಶ ನೀಡಲು ತೀರ್ಮಾನಿಸಿದ್ದರು. ಆದರೆ, ಇದೀಗ ಖಾಲಿ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ನಡೆಸುವ ಸಾಧ್ಯತೆಗಳು ದಟ್ಟವಾಗಿವೆ.
ಕ್ರೀಡಾಂಗಣದ ಶೇ.50ರಷ್ಟು ಸಾಮರ್ಥ್ಯದ ಪ್ರೇಕ್ಷಕರಿಗೆ ಅವಕಾಶ ನೀಡಲು ನಿರ್ಧರಿಸಿದ್ದರೂ, ಆಸನಗಳ ಸಂಖ್ಯೆಯನ್ನು ಗರಿಷ್ಠ 10 ಸಾವಿರಕ್ಕೆ ಸೀಮಿತಗೊಳಿಸಲಾಗಿತ್ತು. ಆದರೆ, ಕೋವಿಡ್‌ನ ಈ ಬದಲಾದ ಪರಿಸ್ಥಿತಿಯಲ್ಲಿ 10,000 ಸಂಖ್ಯೆಯನ್ನು 5 ಸಾವಿರಕ್ಕೆ ಇಳಿಸಲು ಚಿಂತನೆ ನಡೆಸಿದೆ. ಇದರ ಜತೆಗೆ ಪ್ರೇಕ್ಷಕರೇ ಇಲ್ಲದ ಖಾಲಿ ಕ್ರೀಡಾಂಗಣದಲ್ಲೂ ಕೂಟ ನಡೆಸಲು ಆಯೋಜಕರು ಚಿಂತನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳವಾರ ನಡೆಯಬೇಕಿದ್ದ ಟಿಕೆಟ್ ಲಾಟರಿಯನ್ನು ಶನಿವಾರಕ್ಕೆ ಮುಂದೂಡಿದ್ದಾರೆ.
ಟೋಕಿಯೋ ಒಲಿಂಪಿಕ್ಸ್: ಮೇರಿ ಕೋಮ್, ಮನ್‌ಪ್ರೀತ್ ಧ್ವಜಧಾರಿಗಳು
ಇನ್ನು ಇದೇ ವೇಳೆ ಜುಲೈ 23ರಿಂದ ಆರಂಭವಾಗಲಿರುವ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭಕ್ಕೂ ವಿಶೇಷ ಆಹ್ವಾನಿತರನ್ನು ಹೊರತುಪಡಿಸಿ ಉಳಿದವರಿಗೆ ಅವಕಾಶ ನೀಡದಿರಲು ಆಯೋಜಕರು ತೀರ್ಮಾನಿಸಿದ್ದಾರೆ ಎಂದು ವರದಿಯಾಗಿದೆ. ಕೋವಿಡ್ ಭೀತಿಯ ನಡುವೆಯೇ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಅಚ್ಚುಕಟ್ಟಾಗಿ ಟೂರ್ನಿ ಆಯೋಜಿಸಲು ಜಪಾನ್ ಸರ್ಕಾರ ಸಜ್ಜಾಗುತ್ತಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona