ಒಲಿಂಪಿಕ್ಸ್‌ ರದ್ದಾಗಲ್ಲ: ಜಪಾನ್‌ ಪ್ರಧಾನಿ ಸ್ಪಷ್ಟನೆ

By Kannadaprabha NewsFirst Published Mar 15, 2020, 3:24 PM IST
Highlights

ಟೋಕಿಯೋ ಒಲಿಂಪಿಕ್ಸ್‌ಗೂ ಕೊರೋನಾ ಭೀತಿ ಎದುರಾಗಿದೆ. ಈಗಾಗಲೇ ಹಲವು ಕ್ರೀಡಾ ಟೂರ್ನಿಗಳು ಮುಂದೂಡಲ್ಪಟ್ಟಿವೆ. ಹೀಗಿರುವಾಗಲೇ ಜಪಾನ್ ಪ್ರಧಾನಿ ಶಿನ್ಜೊ ಅಬೆ ತಮ್ಮ ದಿಟ್ಟ ನಿಲುವನ್ನು ಪ್ರಕಟಿಸಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ

ಟೋಕಿಯೋ(ಮಾ.15): ಮಾರಕ ಕೊರೋನಾ ಸೋಂಕು 127 ದೇಶಗಳಿಗೆ ಹರಡಿದ್ದು, 5000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಜಗತ್ತಿನಾದ್ಯಂತ ಕ್ರೀಡಾಕೂಟಗಳು ರದ್ದಾಗಿವೆ ಇಲ್ಲವೇ ಮುಂದೂಡಲ್ಪಟ್ಟಿವೆ. ಈ ವರ್ಷದ ಒಲಿಂಪಿಕ್ಸ್‌ ಮೇಲೆಯೂ ಕೊರೋನಾ ಕರಿನೆರಳು ಬಿದ್ದಿದೆ. 

ಕ್ರೀಡಾಕೂಟ ರದ್ದಾಗುವ ಇಲ್ಲವೇ ಮುಂದೂಡಲ್ಪಡುವ ಆತಂಕ ಎದುರಾಗಿದೆ. ಆದರೆ ಶನಿವಾರ ಜಪಾನ್‌ ಪ್ರಧಾನಿ ಶಿನ್ಜೊ ಅಬೆ, ನಿಗದಿತ ವೇಳಾಪಟ್ಟಿಯಂತೆ ಟೋಕಿಯೋ ಒಲಿಂಪಿಕ್ಸ್‌ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಜು.24ರಿಂದ ಆ.9ರ ವರೆಗೂ ಒಲಿಂಪಿಕ್ಸ್‌ ನಿಗದಿಯಾಗಿದೆ.

ಕೊರೋನಾ ಎಫೆಕ್ಟ್: ಎಲ್ಲಾ ದೇಸಿ ಕ್ರಿಕೆಟ್ ಟೂರ್ನಿ ರದ್ದುಪಡಿಸಿದ ಬಿಸಿಸಿಐ..!

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಬೆ, ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ (ಐಒಸಿ) ಹಾಗೂ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಜತೆ ಜಪಾನ್‌ ನಿರಂತರ ಸಂಪರ್ಕದಲ್ಲಿದ್ದು, ಒಲಿಂಪಿಕ್ಸ್‌ ಯಶಸ್ವಿಯಾಗಿ ನಡೆಸಲು ಬೇಕಾದ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ತಿಳಿಸಿದರು.

ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ 9 ಬಾಕ್ಸರ್‌ಗಳು..!

ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಒಲಿಂಪಿಕ್ಸ್‌ ಕ್ರೀಡಾಕೂಟವನ್ನು ಮುಂದಿನ ವರ್ಷ ನಡೆಸುವಂತೆ ಸಲಹೆ ನೀಡಿದ್ದರು. ಇದಕ್ಕೆ ಉತ್ತರಿಸಿದ ಅಬೆ, ‘ಅಧ್ಯಕ್ಷ ಟ್ರಂಪ್‌ ಕಾಳಜಿ ಅರ್ಥವಾಗುತ್ತದೆ. ಆದರೆ ನಾವು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಲಿದ್ದೇವೆ’ ಎಂದರು. 2020ರ ಒಲಿಂಪಿಕ್ಸ್‌ ಹಾಗೂ ಪ್ಯಾರಾಲಿಂಪಿಕ್ಸ್‌ಗಾಗಿ ಜಪಾನ್‌ 19 ಲಕ್ಷ ಕೋಟಿ ರುಪಾಯಿ ವೆಚ್ಚ ಮಾಡುತ್ತಿದೆ.
 

click me!