
ಟೋಕಿಯೋ(ಜು.21): ಕ್ರೀಡಾ ಗ್ರಾಮದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದು, ಟೋಕಿಯೋ ಒಲಿಂಪಿಕ್ಸ್ ಆಯೋಜನಾ ಸಮಿತಿ, ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ)ಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಕೊರೋನಾ ವೈರಸ್ ಹಬ್ಬುವಿಕೆ ಮೇಲೆ ತೀವ್ರ ನಿಗಾ ಇರಿಸಲಾಗಿದ್ದು, ಕೊನೆ ಕ್ಷಣದಲ್ಲಿ ಬೇಕಿದ್ದರೂ ಕ್ರೀಡಾಕೂಟ ರದ್ದಾಗಬಹುದು ಎಂದು ಆಯೋಜನಾ ಸಮಿತಿ ಮುಖ್ಯಸ್ಥ ತೊಷಿರೊ ಮುಟೊ ಆತಂಕ ವ್ಯಕ್ತಪಡಿಸಿದ್ದಾರೆ. ‘ಸೋಂಕು ಕಡಿಮೆಯೂ ಆಗಬಹುದು, ಜಾಸ್ತಿಯೂ ಆಗಬಹುದು. ಏನನ್ನೂ ಊಹಿಸಲು ಸಾಧ್ಯವಾಗುತ್ತಿಲ್ಲ. ಸೋಂಕು ಹೆಚ್ಚಾದರೆ ಚರ್ಚೆ (ಕ್ರೀಡಾಕೂಟ ರದ್ದುಗೊಳಿಸುವ ಬಗ್ಗೆ) ನಡೆಸಲಿದ್ದೇವೆ’ ಎಂದಿದ್ದಾರೆ.
ಟೋಕಿಯೋ ಒಲಿಂಪಿಕ್ಸ್: ಸುರಕ್ಷತೆಗೆ ಭಾರತ ಕೈಗೊಂಡ ಕ್ರಮಗಳೇನು?
ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವು ಜುಲೈ 23ರಿಂದ ಆರಂಭವಾಗಿ ಆಗಸ್ಟ್ 08ರವರೆಗೆ ನಡೆಯಲಿದೆ. ಈಗಾಗಲೇ ಹಲವು ದೇಶಗಳು ಕ್ರೀಡಾಪಟುಗಳು ಕ್ರೀಡಾ ಗ್ರಾಮಕ್ಕೆ ಬಂದಿಳಿದಿದ್ದು, ಅಭ್ಯಾಸದಲ್ಲಿ ನಿರತರಾಗಿವೆ. 200ಕ್ಕೂ ಹೆಚ್ಚು ರಾಷ್ಟ್ರಗಳ ಸುಮಾರು 11000 ಕ್ರೀಡಾಪಟುಗಳು, 4000 ಸಹಾಯಕ ಸಿಬ್ಬಂದಿ ಟೋಕಿಯೋದಲ್ಲಿ 2 ವಾರಗಳ ಕ್ರೀಡಾಕೂಟಕ್ಕೆ ಸೇರಲಿದ್ದಾರೆ. ಒಂದು ತಿಂಗಳ ಬಳಿಕ 5,000 ಅಥ್ಲೀಟ್‌ಗಳು, ಮತ್ತೊಂದಷ್ಟು ಸಹಾಯಕ ಸಿಬ್ಬಂದಿ ಪ್ಯಾರಾಲಿಂಪಿಕ್ಸ್‌ಗಾಗಿ ಟೋಕಿಯೋಗೆ ಬರಲಿದ್ದಾರೆ.