8 ತಿಂಗಳ ಮಗುವಿನ ಚಿಕಿತ್ಸೆಗೆ ಒಲಿಂಪಿಕ್ಸ್‌ ಪದಕವನ್ನೇ ಹರಾಜಿಗಿಟ್ಟ ಮರಿಯಾ

By Kannadaprabha NewsFirst Published Aug 20, 2021, 8:28 AM IST
Highlights

* ಪೋಲೆಂಡ್‌ನ ಒಲಿಂಪಿಕ್ಸ್‌ ಅಥ್ಲೀಟ್‌ನ ಹೃದಯವೈಶಾಲ್ಯತೆಗೆ ಸಾಕ್ಷಿಯಾದ ಒಂದು ಘಟನೆ

* 8 ತಿಂಗಳ ಮಗುವೊಂದರ ಹೃದಯ ಶಸ್ತ್ರಚಿಕಿತ್ಸೆ ಒಲಿಂಪಿಕ್ಸ್‌ ಪದಕವನ್ನೇ ಹರಾಜಿಗಿಟ್ಟ ಮರಿಯಾ ಆ್ಯಂಡ್ರೆಜಿಕ್‌

* 92 ಲಕ್ಷಕ್ಕೆ ಒಲಿಂಪಿಕ್ಸ್‌ ಪದಕ ಖರೀದಿಸಿ ಮತ್ತೆ ಪದಕವನ್ನು ಮರಿಯಾ ಆ್ಯಂಡ್ರೆಜಿಕ್‌ ವಾಪಾಸ್ ನೀಡಿದ ಜಬ್ಕಾ ಪೋಲೆಂಡ್‌ ಸಂಸ್ಥೆ

ವಾರ್ಸಾ(ಆ.20): ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಗೆದ್ದ ಬೆಳ್ಳಿ ಪದಕವನ್ನು ಪೋಲೆಂಡ್‌ನ ಜಾವೆಲಿನ್‌ ಥ್ರೋ ಪಟು ಮರಿಯಾ ಆ್ಯಂಡ್ರೆಜಿಕ್‌ ಅವರು 8 ತಿಂಗಳ ಮಗುವೊಂದರ ಹೃದಯ ಶಸ್ತ್ರಚಿಕಿತ್ಸೆಗಾಗಿ ಹರಾಜಿಗೆ ಇಟ್ಟು ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

ಮಿಲೋಸೆಕ್‌ ಮಲೈಸ ಎಂಬ ಮಗುವಿಗೆ ತುರ್ತಾಗಿ ಹೃದಯದ ಶಸ್ತ್ರಚಿಕಿತ್ಸೆ ಅಗತ್ಯವಿತ್ತು. ಯುರೋಪಿನ ಬಹುತೇಕ ಎಲ್ಲಾ ದೇಶಗಳ ಆಸ್ಪತ್ರೆಗಳ ಶಸ್ತ್ರಚಿಕಿತ್ಸೆಗೆ ನಿರಾಕರಿಸಿದ ಹಿನ್ನೆಲೆ ಮಗುವಿನ ಪೋಷಕರು ಅಮೆರಿಕಾದ ಪ್ರತಿಷ್ಠಿತ ಆಸ್ಪತ್ರೆಗೆ ಮಗುವನ್ನು ದಾಖಲಿಸಿದ್ದಾರೆ. ಆದರೆ ಚಿಕಿತ್ಸೆಗೆ ಸುಮಾರು 3 ಕೋಟಿ ರುಪಾಯಿ ಖರ್ಚಾಗುವ ಸಾಧ್ಯತೆ ಇದ್ದು, ಆರ್ಥಿಕ ಸಂಕಷ್ಟದಲ್ಲಿದ್ದ ಮಗುವಿನ ಪೋಷಕರು ಆನ್‌ಲೈನ್‌ಲ್ಲಿ ನೆರವು ಕೋರಿದ್ದರು. ಇದನ್ನು ಗಮನಿಸಿದ ಮರಿಯಾ ಆ್ಯಂಡ್ರೆಜಿಕ್‌ ತಾನು ಟೋಕಿಯೋ ಒಲಿಂಪಿಕ್ಸ್‌ನ ಜಾವೆಲಿನ್‌ ಎಸೆತದಲ್ಲಿ ಗೆದ್ದಿದ್ದ ಬೆಳ್ಳಿ ಪದಕವನ್ನೇ ಹರಾಜಿಗೆ ಇಟ್ಟಿದ್ದರು.

ಟೋಕಿಯೋ 2020: ಕ್ರೀಡಾ ಸಾಧಕರ ಜತೆ ಮೋದಿ ಮಾತುಕತೆಯಲ್ಲಿ ಸಿಕ್ಕ 8 ಅಂಶಗಳಿವು..!

ಮರಿಯಾ ಹರಾಜಿಗೆ ಇಟ್ಟ ಬೆಳ್ಳಿ ಪದಕವನ್ನು ಪೋಲೆಂಡ್‌ನ ಜಬ್ಕಾ ಪೋಲೆಂಡ್‌ ಎಂಬ ಸಂಸ್ಥೆಯು 92 ಲಕ್ಷ ರುಪಾಯಿ ನೀಡಿ ಖರೀದಿಸಿದೆ. ಆದರೆ ಬೆಳ್ಳಿ ಪದಕವನ್ನು ಮರಿಯಾಗೆ ಹಿಂದಿರುಗಿಸಿದ ಸಂಸ್ಥೆಯು ಹರಾಜಿನ ಹಣವನ್ನು ಮಗುವಿನ ಶಸ್ತ್ರಚಿಕಿತ್ಸೆಗಾಗಿ ದೇಣಿಗೆ ನೀಡಿದೆ.

2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಸ್ವಲ್ಪದರಲ್ಲೇ ಪದಕ ತಪ್ಪಿಸಿದ್ದ ಮರಿಯಾ 2018ರಲ್ಲಿ ಮೂಳೆ ಕ್ಯಾನ್ಸರ್‌ಗೆ ಒಳಗಾಗಿದ್ದರು. ಬಳಿಕ ಕ್ಯಾನ್ಸರ್‌ನಿಂದ ಚೇತರಿಸಿಕೊಂಡ ಅವರು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದರು.

click me!