ಟೋಕಿಯೋ 2020: ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿ ಇತಿಹಾಸ ಬರೆದ ರಾಣಿ ರಾಂಪಾಲ್ ಪಡೆ

Suvarna News   | Asianet News
Published : Aug 01, 2021, 12:50 PM IST
ಟೋಕಿಯೋ 2020: ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿ ಇತಿಹಾಸ ಬರೆದ ರಾಣಿ ರಾಂಪಾಲ್ ಪಡೆ

ಸಾರಾಂಶ

* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್‌ಗೆ ಲಗ್ಗೆಯಿಟ್ಟ ಭಾರತೀಯ ಮಹಿಳಾ ಹಾಕಿ ತಂಡ * 41 ವರ್ಷಗಳ ಬಳಿಕ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ರಾಣಿ ರಾಂಪಾಲ್ ಪಡೆ * ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ ಹಾಕಿ ತಂಡ ಎದುರಾಳಿ

ಟೋಕಿಯೋ(ಆ.01): ರಾಣಿ ರಾಂಪಾಲ್‌ ನೇತೃತ್ವದ ಭಾರತೀಯ ಮಹಿಳಾ ಹಾಕಿ ತಂಡವು ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಕ್ವಾರ್ಟರ್ ಫೈನಲ್‌ ಪ್ರವೇಶಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಬರೋಬ್ಬರಿ 41 ವರ್ಷಗಳ ಬಳಿಕ ಭಾರತೀಯ ಮಹಿಳಾ ಹಾಕಿ ತಂಡವು ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ನಾಕೌಟ್‌ ಹಂತಕ್ಕೇರಿದ ಸಾಧನೆ ಮಾಡಿದೆ.

ಗ್ರೂಪ್‌ ಹಂತದ ಕೊನೆಯ ಎರಡು ಪಂದ್ಯಗಳನ್ನು ಗೆದ್ದಿದ್ದ ಭಾರತೀಯ ಮಹಿಳಾ ಹಾಕಿ ತಂಡದ ನಾಕೌಟ್‌ ಭವಿಷ್ಯ ಗ್ರೇಟ್‌ ಬ್ರಿಟನ್‌ ಹಾಗೂ ಐರ್ಲೆಂಡ್ ನಡುವಿನ ಪಂದ್ಯದ ಫಲಿತಾಂಶ ದ ಮೇಲೆ ನಿರ್ಧಾರವಾಗಿತ್ತು. ಈ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ತಂಡವು 2-0 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸುವ ಮೂಲಕ ಐರ್ಲೆಂಡ್ ತಂಡವನ್ನು ಮಣಿಸಿತ್ತು. ಇದರ ಬೆನ್ನಲ್ಲೇ ರಾಣಿ ಪಡೆ 41 ವರ್ಷಗಳ ಬಳಿಕ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದೆ. 

1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಮಹಿಳಾ ಹಾಕಿ ಕ್ರೀಡೆಯನ್ನು ಮೊದಲ ಬಾರಿಗೆ ಪರಿಚಯಿಸಲಾಗಿತ್ತು. ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡವು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. 1980ರ ಒಲಿಂಪಿಕ್ಸ್‌ನಲ್ಲಿ ಈಗಿನಂತೆ ನಾಕೌಟ್‌ ಪಂದ್ಯಗಳಿರಲಿಲ್ಲ. ಬದಲಾಗಿ ಅಗ್ರ ಮೂರು ಸ್ಥಾನ ಗಳಿಸಿದ ತಂಡವು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸುತ್ತಿದ್ದವು. ಇದಾದ ನಂತರ ಬರೋಬ್ಬರಿ 36 ವರ್ಷಗಳ ಬಳಿಕ ಅಂದರೆ 2016ರಲ್ಲಿ ಭಾರತೀಯ ಮಹಿಳಾ ಹಾಕಿ ತಂಡವು ರಿಯೋ ಒಲಿಂಪಿಕ್ಸ್‌ಗೆ ಅರ್ಹತೆಯನ್ನು ಗಿಟ್ಟಿಸಿಕೊಂಡಿತ್ತು. ಆದರೆ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡವು ಒಂದೂ ಗೆಲುವು ಕಾಣದೇ ಕೊನೆಯ ಸ್ಥಾನದಲ್ಲೇ ಉಳಿದು ನಿರಾಸೆ ಅನುಭವಿಸಿತ್ತು. 

ಟೋಕಿಯೋ 2020: ಭಾರತ ಹಾಕಿ ತಂಡಕ್ಕಿಂದು ಕ್ವಾರ್ಟರ್‌ನಲ್ಲಿ ಬ್ರಿಟನ್ ಸವಾಲು

ಗ್ರೂಪ್‌ ಹಂತದ ಮೊದಲ ಮೂರು ಪಂದ್ಯಗಳಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿದ್ದ ರಾಣಿ ರಾಂಪಾಲ್ ಪಡೆ ಆ ಬಳಿಕ ಐರ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ಎದುರು ಗೆಲುವು ಸಾಧಿಸುವ ಮೂಲಕ ಕ್ವಾರ್ಟರ್‌ ಫೈನಲ್ ಕನಸನ್ನು ಜೀವಂತವಾಗಿರಿಸಿಕೊಂಡಿತ್ತು. ಇದರ ಜತೆಗೆ ಬ್ರಿಟನ್‌ ಜಯ ಗಳಿಸುವುದರೊಂದಿಗೆ ಭಾರತದ ನಾಕೌಟ್ ಹಾದಿ ಸುಗಮವಾಯಿತು. ಇದೀಗ ಭಾರತೀಯ ಮಹಿಳಾ ಹಾಕಿ ತಂಡವು 'ಬಿ' ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಭಾರತೀಯ ಮಹಿಳಾ ಹಾಕಿ ತಂಡದ ಕ್ವಾರ್ಟರ್‌ ಫೈನಲ್ ಪಂದ್ಯವು ಆಗಸ್ಟ್ 02ರಿಂದ ಆರಂಭವಾಗಲಿದೆ.
 

PREV
click me!

Recommended Stories

ಭಾರತೀಯ ಸೇನೆ ಪಾಕ್ ದಾಳಿ ಹಿಮ್ಮೆಟ್ಟಿಸುತ್ತಿದ್ದಂತೆ ಶಾಂತಿ ಪಾಠ ಮಾಡಿದ ಸಾನಿಯಾ ಮಿರ್ಜಾ
ಕಣ್ಮುಚ್ಚಿ ಯುವತಿರಿಗೆ ಕಿಸ್ ಕೊಡುವಾಗ ಜಾಗೃತೆ, ಅಥ್ಲೀಟ್‌ಗೆ ಒಂದು ಮುತ್ತಿನ ಕತೆ ಎಚ್ಚರಿಕೆ