* ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅಧಿಕೃತ ತೆರೆ
* ಕೋವಿಡ್ ಭೀತಿಯ ನಡುವೆಯೂ ಒಲಿಂಪಿಕ್ಸ್ ಯಶಸ್ವಿ ಆಯೋಜನೆ
* 17 ದಿನಗಳ ಕಾಲ 206 ದೇಶಗಳ ಪ್ರತಿನಿಧಿಗಳು ಭಾಗಿಯಾಗಿದ್ದ ಒಲಿಂಪಿಕ್ಸ್
ಟೋಕಿಯೋ(ಆ.09): ಅರಿಗಾತೊ ಗೊಜೈಮಸಿತಾ ಜಪಾನ್. ಅರ್ಥಾತ್ ಧ್ಯನವಾದ ನಿಮಗೆ ಜಪಾನ್. ಒಂದೆಡೆ ನಿಲ್ಲದ ಕೊರೋನಾ ಅಬ್ಬರ ಮತ್ತೊಂದೆಡೆ ಚಂಡಮಾರುತ ದಾಳಿ. ಇವುಗಳ ನಡುವೆಯೇ ಆತ್ಮವಿಶ್ವಾಸ ಮತ್ತು ಏನನ್ನಾದರೂ ಸಾಧಿಸಬಲ್ಲೆವು ಎಂಬ ಧೃಢ ವಿಶ್ವಾಸದ ಹುಮ್ಮಸ್ಸಿನೊಂದಿಗೆ ಮುನ್ನಡೆದ ಟೋಕಿಯೋ ಒಲಿಂಪಿಕ್ಸ್ ಕೊನೆಗೂ ಅದ್ಧೂರಿಯಾಗಿ ಮುಕ್ತಾಯಗೊಂಡಿದೆ. ಇಡೀ ಜಗತ್ತನ್ನೇ ಕಾಡಿದ ಕೊರೋನಾದಿಂದಾಗಿ ಕ್ರೀಡಾಕೂಟ ನಡೆಯುವುದೇ ಅನುಮಾನವಾಗಿ, ಕೊನೆಗೆ ಒಂದು ವರ್ಷ ಮುಂದೂಡಿ, ತದನಂತರ ಕಡೆಯ ದಿನದವರೆಗೂ ಅನಿಶ್ಚತೆಯಲ್ಲೇ ಮುಳುಗಿದ್ದ ವಿಶ್ವದ ಅತಿದೊಡ್ಡ ಕ್ರೀಡಾಕೂಟವನ್ನು ನಡೆಸಿಕೊಟ್ಟ ಜಪಾನ್ ಇದೀಗ ವಿಶ್ವದ ಮೆಚ್ಚುಗೆಗೆ ಪಾತ್ರವಾಗಿದೆ.
ಇನ್ನು ಕ್ರೀಡೆಯ ದೃಷ್ಟಿಯಿಂದ ಮಾತ್ರವಲ್ಲದೇ, ಇಡೀ ಜಗತ್ತನ್ನು ಕಾಡುತ್ತಿರುವ ಕೊರೋನಾವನ್ನು ಶಿಸ್ತಿನಿಂದ ಹಿಮ್ಮೆಟ್ಟಿಸಬಹುದು ಎಂಬುದು ಕೂಡಾ ಟೋಕಿಯೋ ಒಲಿಂಪಿಕ್ಸ್ ಜಗತ್ತಿಗೆ ನೀಡಿದ ಬಹುದೊಡ್ಡ ಸಂದೇಶ ಎನ್ನುವುದನ್ನು ಮರೆಯುವಂತಿಲ್ಲ. 11,000 ಕ್ರೀಡಾಪಟುಗಳು ಸೇರಿದಂತೆ ಕ್ರೀಡಾಗ್ರಾಮದಲ್ಲಿದ್ದ 52000 ಜನರ ಪೈಕಿ ಕೇವಲ ಬೆರಣಿಕೆಯ ಜನರಲ್ಲಿ ಮಾತ್ರ ಸೋಂಕು ಕಾಣಿಸಿದ್ದು, ಅದು ಇತರರಿಗೆ ಹಬ್ಬದಂತೆ ನೋಡಿಕೊಂಡಿದ್ದು ಕೂಡಾ ಜಪಾನ್‌ನ ಹೆಗ್ಗಳಿಕೆ.
undefined
ಚಿನ್ನದ ಹುಡುಗನಿಗೆ ತರಬೇತಿ ನೀಡಿದ್ದ ಶಿರಸಿ ಕಾಶಿನಾಥ್‌ಗೆ 10 ಲಕ್ಷ ರೂ. ಬಹುಮಾನ
ಹೌದು. ಕೊರೋನಾ ಆತಂಕದ ನಡುವೆಯೇ ಆರಂಭಗೊಂಡು 17 ದಿನಗಳ ಕಾಲ 206 ದೇಶಗಳ ಪ್ರತಿನಿಧಿಗಳು ಭಾಗಿಯಾಗಿದ್ದ ಟೋಕಿಯೋ ಒಲಿಂಪಿಕ್ಸ್‌ಗೆ ವರ್ಣರಂಜಿತ ತೆರೆ ಬಿದ್ದಿದ್ದು, ‘ಯುನೈಟೆಡ್ ಬೈ ಎಮೋಷನ್’ ಎಂಬ ಧ್ಯೇಯ ವಾಕ್ಯಗಳೊಂದಿಗೆ ಮಹಾಕೂಟವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ ಜಪಾನ್‌ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಜಾಗತಿಕ ಮತ್ತು ಸ್ಥಳೀಯವಾಗಿಯೂ ಜನರ ವಿರೋಧಗಳ ನಡುವೆಯೇ ಯಾವುದೇ ಅನಾಹುತ ಇಲ್ಲದಂತೆ, ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಕ್ರೀಡಾಕೂಟವನ್ನು ಅತ್ಯಂತ ಯಶಸ್ವಿಯಾಗಿ, ಅಚ್ಚುಕಟ್ಟಾಗಿ ನಡೆಸಿಕೊಟ್ಟಿದ್ದಕ್ಕೆ ಇದೀಗ ಇಡೀ ವಿಶ್ವವೇ ಜಪಾನ್‌ಗೆ ಧನ್ಯವಾದ ಸಲ್ಲಿಸುತ್ತಿದೆ.
ಖಾಲಿ ಕ್ರೀಡಾಂಗಣದಲ್ಲಿ ಕೂಟ:
ಕ್ರೀಡಾಪಟುಗಳ ಸುರಕ್ಷತೆಯ ದೃಷ್ಟಿಯಿಂದ ಈ ಬಾರಿ ಖಾಲಿ ಕ್ರೀಡಾಂಗಣಗಳಲ್ಲಿ ಕ್ರೀಡಾಕೂಟ ಆಯೋಜಿಸಲಾಗಿತ್ತು. ಕ್ವಾರಂಟೈನ್, ಐಸೋಲೇಷನ್, ಬಯೋಬಬಲ್ ಸೇರಿದಂತೆ ಕ್ರೀಡಾಗ್ರಾಮ ಪ್ರವೇಶಿಸುವ ಪ್ರತಿಯೊಬ್ಬ ಕ್ರೀಡಾಪಟುಗಳು, ಕೋಚ್‌ಗಳು, ಸಿಬ್ಬಂದಿ ಹಾಗೂ ಅಧಿಕಾರಿಗಳು ಕಟ್ಟುನಿಟ್ಟಾಗಿ ಕೋವಿಡ್-19 ನಿಯಮ ಪಾಲಿಸುವಂತೆ ಕಟ್ಟೆಚ್ಚರ ವಹಿಸಲಾಗಿತ್ತು. ಮುನ್ನೆಚ್ಚರಿಕೆ ವಹಿಸಿದ ಪರಿಣಾಮ 11,000ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಿದ್ದರೂ ಕೇವಲ ಬೆರಳೆಣಿಕೆಯ ಮಂದಿಗಷ್ಟೇ ಸೋಂಕು ಹಬ್ಬಿತ್ತು.
206 ದೇಶ, 17 ದಿನ:
17 ದಿನಗಳ ಕಾಲ ನಡೆದ ಕ್ರೀಡಾ ಕುಂಭಮೇಳದಲ್ಲಿ 206 ದೇಶಗಳ 11,090 ಕ್ರೀಡಾಪಟುಗಳು ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಿದರು. 33 ಕ್ರೀಡೆಗಳ ಒಟ್ಟು 339 ವಿಭಾಗಗಳಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಹಲವು ದಾಖಲೆಗಳು ನಿರ್ಮಾಣಗೊಂಡವು. ಕೆಲವರು ಪದಕ ಗೆಲ್ಲಲು ಸಾಧ್ಯವಾಗದಿದ್ದರೂ ಮುಂದಿನ ಒಲಿಂಪಿಕ್ಸ್‌ನಲ್ಲಿ ಸಾಧನೆ ತೋರುವ ನಿರೀಕ್ಷೆ ಮೂಡಿಸುವ ಮೂಲಕ ಕ್ರೀಡಾಭಿಮಾನಿಗಳ ಮನಗೆದ್ದರು.