ಟೋಕಿಯೋ ಒಲಿಂಪಿಕ್ಸ್‌: ಪದಕ ಬೇಟೆಗೆ ಭಾರತ ಸಜ್ಜು

By Kannadaprabha News  |  First Published Jul 21, 2021, 9:27 AM IST

* ಟೋಕಿಯೋ ಒಲಿಂಪಿಕ್ಸ್ ಆರಂಭಕ್ಕೆ ಇನ್ನೆರಡೇ ದಿನ ಬಾಕಿ

* ಜುಲೈ 23ರಿಂದ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟ ಆರಂಭ

* 120 ಭಾರತೀಯ ಕ್ರೀಡಾಪಟುಗಳು ಟೋಕಿಯೋದಲ್ಲಿ ಭಾಗಿ


ಮಾಹಿತಿ: ಸ್ಪಂದನ್‌ ಕಣಿಯಾರ್, ಕನ್ನಡಪ್ರಭ

ಬೆಂಗಳೂರು(ಜು.21): ಟೋಕಿಯೋ ಒಲಿಂಪಿಕ್ಸ್‌ ಆರಂಭಕ್ಕೆ ಕೇವಲ 2 ದಿನ ಬಾಕಿ ಇದೆ. ಪ್ರತಿ ಬಾರಿಯಂತೆ ಈ ಬಾರಿಯೂ ಭಾರತೀಯ ಕ್ರೀಡಾಪಟುಗಳು ಉತ್ತಮ ಸಿದ್ಧತೆಯೊಂದಿಗೆ ಜಪಾನ್‌ ರಾಜಧಾನಿಗೆ ತಲುಪಿದ್ದಾರೆ. ಎಷ್ಟು ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ? ಪದಕ ನಿರೀಕ್ಷೆ ಮೂಡಿಸಿರುವ ಕ್ರೀಡಾಪಟುಗಳು ಯಾರ್ಯಾರು? ಆ ಎಲ್ಲಾ ಮಾಹಿತಿ ಇಲ್ಲಿದೆ.

Latest Videos

undefined

ಟೋಕಿಯೋ ಒಲಿಂಪಿಕ್ಸ್‌ 2020ರಿಂದ 2021ಕ್ಕೆ ಮುಂದೂಡಿಕೆಯಾಗಿದ್ದು ಭಾರತೀಯ ಕ್ರೀಡಾಪಟುಗಳ ಪಾಲಿಗೆ ಒಂದು ರೀತಿಯಲ್ಲಿ ವರದಾನವೇ ಆಯಿತು. ಸಿದ್ಧತೆಗೆ ಹೆಚ್ಚಿನ ಸಮಯಾವಕಾಶ ದೊರೆಯಿತು. ಕೆಲ ಹೊಸ ಪ್ರತಿಭೆಗಳು ಕ್ರೀಡಾಕೂಟಕ್ಕೆ ಅರ್ಹತೆ ಪಡೆದವು. ಭಾರತ ಈ ಬಾರಿ ಅತಿಹೆಚ್ಚು ಕ್ರೀಡಾಪಟುಗಳನ್ನು ಒಲಿಂಪಿಕ್ಸ್‌ಗೆ ಕಳುಹಿಸಿದೆ.

68 ಪುರುಷರು, 52 ಮಹಿಳಾ ಕ್ರೀಡಾಪಟುಗಳು ಸೇರಿ ಭಾರತ ಒಟ್ಟು 120 ಅಥ್ಲೀಟ್‌ಗಳು ಟೋಕಿಯೋಗೆ ಕಳುಹಿಸಿದೆ. ಭಾರತ 1900ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿತು. 1920ರಿಂದ ಭಾರತ ಒಲಿಂಪಿಕ್ಸ್‌ನ ಎಲ್ಲಾ ಆವೃತ್ತಿಗಳಲ್ಲೂ ಪಾಲ್ಗೊಂಡಿದೆ ಎನ್ನುವುದು ವಿಶೇಷ.

ಬಲಿಷ್ಠ ಅಥ್ಲೀಟ್‌ಗಳು ಪಡೆ

ಟೋಕಿಯೋ 2020ಗೆ ಭಾರತ ತನ್ನ ಬಲಿಷ್ಠ ತಂಡವನ್ನು ಕಳುಹಿಸಿದೆ ಎನ್ನುವುದರ ಬಗ್ಗೆ ಅನುಮಾನವೇ ಇಲ್ಲ. ಈ ಹಿಂದಿನ ಎಲ್ಲಾ ಆವೃತ್ತಿಗಳಿಗಿಂತ ಈ ಬಾರಿ ಅತಿಹೆಚ್ಚು ಪದಕಗಳನ್ನು ಭಾರತ ನಿರೀಕ್ಷೆ ಮಾಡುತ್ತಿದೆ. ಹಲವು ಕ್ರೀಡೆಗಳಲ್ಲಿ ಭಾರತೀಯ ಕ್ರೀಡಾಪಟುಗಳು ಪದಕ ಗೆಲ್ಲುವ ನೆಚ್ಚಿನ ಅಥ್ಲೀಟ್‌ಗಳೆನಿಸಿದ್ದಾರೆ. ಪ್ರಮುಖವಾಗಿ ಭಾರತೀಯ ಶೂಟಿಂಗ್‌ ತಂಡದ ಮೇಲೆ ಅತಿಹೆಚ್ಚು ನಿರೀಕ್ಷೆ ಇಡಲಾಗಿದೆ.

ಟೋಕಿಯೋ ಒಲಿಂಪಿಕ್ಸ್‌: ಈ 10 ಭಾರತೀಯ ಅಥ್ಲೀಟ್‌ಗಳು ಪದಕ ಗೆಲ್ಲಬಹುದು..!

ಭಾರತ ಕಳುಹಿಸಿರುವ 120 ಕ್ರೀಡಾಪಟುಗಳ ಪೈಕಿ 10ಕ್ಕಿಂತ ಹೆಚ್ಚು ಕ್ರೀಡಾಪಟುಗಳು 20 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಭವಿಷ್ಯದ ತಾರೆಗಳು ಎಂದೇ ಬಿಂಬಿತಗೊಂಡಿದ್ದಾರೆ. ಈ ಪೈಕಿ ಒಂದಿಬ್ಬರ ಮೇಲೆ ಪದಕ ನಿರೀಕ್ಷೆಯನ್ನೂ ಇಡಲಾಗಿದೆ.

ಗುಣಮಟ್ಟದ ಅಭ್ಯಾಸ

ಕಳೆದ ಆವೃತ್ತಿಗಳಿಗೆ ಹೋಲಿಸಿದರೆ ಭಾರತೀಯ ಕ್ರೀಡಾಪಟುಗಳು ಈ ಬಾರಿ ಉತ್ತಮ ಅಭ್ಯಾಸ ನಡೆಸಿದ್ದಾರೆ. ಕೋವಿಡ್‌ನಿಂದ ಅನೇಕ ಟೂರ್ನಿಗಳು ರದ್ದಾದರೂ, ಒಲಿಂಪಿಕ್ಸ್‌ಗೆ ಹೊರಡುವ ವರೆಗೂ ಒಂದಲ್ಲ ಒಂದು ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದೆ. ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಇರುವ ಒತ್ತಡಕ್ಕೂ ಒಲಿಂಪಿಕ್ಸ್‌ನಲ್ಲಿ ಎದುರಾಗುವ ಒತ್ತಡಕ್ಕೂ ವ್ಯತ್ಯಾಸವಿದೆ. ಈ ಬಾರಿ ಆ ಒತ್ತಡ ನಿಭಾಯಿಸಲು ಭಾರತೀಯರು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದಾರೆ ಎಂದು ಕ್ರೀಡಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮೊದಲ ಬಾರಿಗೆ ಫೆನ್ಸಿಂಗ್‌ನಲ್ಲಿ ಸ್ಪರ್ಧೆ

ಒಲಿಂಪಿಕ್ಸ್‌ನಲ್ಲಿ ಇದೇ ಮೊದಲ ಬಾರಿಗೆ ಭಾರತ ಫೆನ್ಸಿಂಗ್‌ನಲ್ಲಿ ಸ್ಪರ್ಧಿಯೊಬ್ಬರನ್ನು ಕಣಕ್ಕಿಳಿಸುತ್ತಿದೆ. ಮಹಿಳೆಯರ ಸೇಬರ್‌(ಬಾಗುಕತ್ತಿ) ವಿಭಾಗದಲ್ಲಿ ಸಿ.ಎ.ಭವಾನಿ ದೇವಿ ಏಷ್ಯಾ-ಓಷಿಯಾನಿಯಾ ರ‍್ಯಾಂಕಿಂಗ್‌ ಆಧಾರದಲ್ಲಿ ಕ್ರೀಡಾಕೂಟಕ್ಕೆ ಅರ್ಹತೆ ಪಡೆದರು.

ಶೂಟಿಂಗ್‌ನಲ್ಲಿ 15, ಅಥೆಟಿಕ್ಸ್‌ನಲ್ಲಿ 25 ಕ್ರೀಡಾಪಟುಗಳು ಕಣಕ್ಕೆ

ಒಂದು ಕ್ರೀಡೆಯಲ್ಲಿ ಅತಿಹೆಚ್ಚು ಭಾರತೀಯ ಕ್ರೀಡಾಪಟುಗಳು ಸ್ಪರ್ಧಿಸುವುದು ಶೂಟಿಂಗ್‌ನಲ್ಲಿ. 15 ಶೂಟರ್‌ಗಳು ಅರ್ಹತೆ ಪಡೆದಿದ್ದಾರೆ. ಶೂಟಿಂಗ್‌ನ ಒಟ್ಟು 15 ವಿಭಾಗಗಳ ಪೈಕಿ ಭಾರತ 10 ವಿಭಾಗಗಳಲ್ಲಿ ಸ್ಪರ್ಧಿಸಲಿದೆ. ಇನ್ನು ಅಥ್ಲೆಟಿಕ್ಸ್‌ನಲ್ಲಿ ಒಟ್ಟು 13 ಕ್ರೀಡಾಪಟುಗಳು ಕಣಕ್ಕಿಳಿಯಲಿದ್ದಾರೆ. ಆದರೆ ಮಹಿಳಾ ಅಥ್ಲೀಟ್‌ಗಳ ಪೈಕಿ ಕೇರಳ ರಾಜ್ಯದ ಅಥ್ಲೀಟ್‌ಗಳು ಇಲ್ಲ ಎನ್ನುವುದು ಗಮನಾರ್ಹ. ಇನ್ನು 2008ರ ಬಳಿಕ ಇದೇ ಮೊದಲ ಬಾರಿಗೆ ಸೈಲಿಂಗ್‌ನಲ್ಲಿ ಭಾರತ ಸ್ಪರ್ಧಿಸಲಿದೆ. 2 ದಶಕಗಳ ಬಳಿಕ ಇದೇ ಮೊದಲ ಬಾರಿಗೆ ಈಕ್ವೆಸ್ಟ್ರಿಯನ್‌ನಲ್ಲಿ ಭಾರತ ಸ್ಪರ್ಧಿಸಲಿದೆ ಎನ್ನುವುದು ವಿಶೇಷ.
 

click me!