* ಒಲಿಂಪಿಕ್ಸ್ ಪದಕ ವಿಜೇತೆ ಲೊವ್ಲಿನಾ ಬೊರ್ಗೊಹೈನ್‌ಗೆ ಭರ್ಜರಿ ಗಿಫ್ಟ್
* ಬಾಕ್ಸರ್ ಲೊವ್ಲಿನಾ ಊರಿಗೆ ಸರ್ವಋತು ರಸ್ತೆ ಗಿಫ್ಟ್ ನೀಡಲು ಶಾಸಕ ರೆಡಿ
* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಖಚಿತಪಡಿಸಿಕೊಂಡಿರುವ ಲೊವ್ಲಿನಾ
ಸಿಕ್ಕಿಂ(ಆ.01): ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಎರಡನೇ ಪದಕ ಖಚಿತ ಪಡಿಸಿದ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ತವರಿಗೆ ಮರಳುತ್ತಿದ್ದಂತೆ ಅಭೂತಪೂರ್ತ ಸ್ವಾಗತದ ಜತೆಗೆ ಸ್ಮರಣೀಯ ಗಿಫ್ಟ್‌ವೊಂದು ಕಾದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಪದಕ ಗೆದ್ದುಕೊಟ್ಟ ಸಾಧಕಿಯ ಊರಿನ ರಸ್ತೆಗೆ ಅಭಿವೃದ್ದಿಯ ಸ್ಪರ್ಷ ಸಿಕ್ಕಿದೆ ಎಂದು ವರದಿಯಾಗಿದೆ.
ಅಸ್ಸಾಂನ ಗೋಲಾಘಾಟ್ ಜಿಲ್ಲೆಯ ಬಾರೊಮುಖಿಯಾ ಜಿಲ್ಲೆಯ ನಿವಾಸಿಯಾಗಿರುವ ಲೊವ್ಲಿನಾ ಟೋಕಿಯೋ ಒಲಿಂಪಿಕ್ಸ್‌ನ ಮಹಿಳಾ ವಾಟರ್‌ವಾಲ್ಟ್ ಬಾಕ್ಸಿಂಗ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಈಗಾಗಲೇ ಕಂಚಿನ ಪದಕವನ್ನು ಖಚಿತಪಡಿಸಿಕೊಂಡಿದ್ದು, ಚಿನ್ನ ಗೆಲ್ಲುವತ್ತ ಚಿತ್ತ ನೆಟ್ಟಿದ್ದಾರೆ. ಲೊವ್ಲಿನಾ ಪದಕ ಗೆಲ್ಲುತ್ತಿದ್ದಂತೆ ಅಲ್ಲಿನ ಸ್ಥಳೀಯ ಶಾಸಕರು ರಾಜ್ಯ ಸರ್ಕಾರದ ಸಹಯೋಗದೊಂದಿಗೆ 3.5 ಕಿಲೋಮೀಟರ್ ಮಣ್ಣಿನ ರಸ್ತೆಯನ್ನು ಅಭಿವೃದ್ದಿಪಡಿಸಲು ಹಗಲಿರುಳು ಶ್ರಮಿಸುತ್ತಿದೆ.
ಟೋಕಿಯೋ 2020: ಭಾರತಕ್ಕೆ ಮತ್ತೊಂದು ಒಲಿಂಪಿಕ್ಸ್ ಪದಕ ಗೆದ್ದ ಲೊವ್ಲಿನಾ ಬೊರ್ಗೊಹೈನ್..!
ಲೊವ್ಲಿನಾ ಬೊರ್ಗೊಹೈನ್ ಇರುವ ಮನೆ ಸರುಪಥಾರ್ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ್ದಾಗಿದ್ದು, ವಿಸ್ತೀರ್ಣದ ಆಧಾರದಲ್ಲಿ ಅಸ್ಸಾಂ ರಾಜ್ಯದ ಅತಿದೊಡ್ಡ ವಿಧಾನಸಭಾ ಕ್ಷೇತ್ರ ಎನಿಸಿದೆ. ಈ ಕ್ಷೇತ್ರದಲ್ಲಿ 2 ಸಾವಿರಕ್ಕೂ ಅಧಿಕ ರಸ್ತೆಗಳಿಗೆ ಕನಿಷ್ಠ ಗ್ರಾವೆಲ್ ರಸ್ತೆಯ ವ್ಯವಸ್ಥೆಯೂ ಇಲ್ಲ. ಮಳೆಗಾಲ ಬಂತೆಂದರೆ ಈ ರಸ್ತೆಗಳೆಲ್ಲಾ ಹೊಂಡ-ಗುಂಡಿಗಳಾಗಿ ಮಾರ್ಪಾಡಾಗಿ ಕೆಸರುಮಯವಾಗಿ ಬಿಡುತ್ತಿದ್ದವು. ಲೊವ್ಲಿನಾ ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಕೆಸರಿನಿಂದ ಕೂಡಿದ ರಸ್ತೆಯಾಗಿತ್ತು.
ಇದೀಗ ಲೊವ್ಲಿನಾ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಖಚಿತಪಡಿಸಿಕೊಳ್ಳುತ್ತಿದ್ದಂತೆ ಊರಿನವರ ಪಾಲಿಗೂ ಅದೃಷ್ಟ ಖುಲಾಯಿಸಿದೆ. ಲೊವ್ಲಿನ ಊರಿನ ಗ್ರಾಮಸ್ಥರು ಒಳ್ಳೆಯ ರಸ್ತೆಯಲ್ಲಿ ಓಡಾಡುವ ಕಾಲ ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯ ಶಾಸಕ ಬಿಶ್ವಜಿತ್ ಫುಕಾನ್, ಈ ಹೊಸ ರಸ್ತೆಯೂ ನಮ್ಮ ಕಡೆಯಿಂದ ಲೊವ್ಲಿನಾಗೆ ಕೊಡುಗೆ ಎಂದು ಹೇಳಿದ್ದಾರೆ.
ಮಾನ್ಸೂನ್ ಕಾರಣದಿಂದಾಗಿ ನಮಗೆ ಸರಿಯಾದ ರಸ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೀಗ ಸರ್ವಋತು ರಸ್ತೆ ನಿರ್ಮಿಸಲಿದ್ದು, ರಸ್ತೆ ಅಭಿವೃದ್ದಿ ಕಾರ್ಯ ಭರದಿಂದ ಸಾಗಿದೆ ಎಂದು ಶಾಸಕ ಬಿಶ್ವಜಿತ್ ತಿಳಿಸಿದ್ದಾರೆ. ಲೊವ್ಲಿನಾ ಅವಳಿ ಸಹೋದರಿಯರಾದ ಲಿಮಾ ಹಾಗೂ ಲಿಚಾ ಸಿಐಎಸ್‌ಎಫ್ ಹಾಗೂ ಬಿಎಸ್‌ಎಫ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವುದನ್ನಿಲ್ಲಿ ಸ್ಮರಿಸಬಹುದಾಗಿದೆ.
ಮೀರಾಬಾಯಿ ಚಾನು ಬಳಿಕ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಖಚಿತ ಪಡಿಸಿಕೊಂಡ ಎರಡನೇ ಕ್ರೀಡಾಪಟು ಲೊವ್ಲಿನಾ ಸೆಮಿಫೈನಲ್ ಗೆದ್ದು ಫೈನಲ್‌ಗೇರಿ ಚಿನ್ನ ಜಯಿಸಲಿ ಎನ್ನುವುದು ಭಾರತೀಯರ ಹಾರೈಕೆಯಾಗಿದೆ. ಈಗಾಗಲೇ ಮೀರಾಬಾಯಿ ಚಾನು ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಒಟ್ಟು 202 ಕೆ.ಜಿ. ವೇಟ್‌ಲಿಫ್ಟಿಂಗ್ ಮಾಡುವ ಮೂಲಕ ಬೆಳ್ಳಿ ಪದಕ ಜಯಿಸಿದ ಸಾಧನೆ ಮಾಡಿದ್ದಾರೆ.