* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮಿಂಚಿನ ಪ್ರದರ್ಶನ ತೋರಿದ ಭಾರತ
* 7 ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ಗರಿಷ್ಠ ಪದಕ ಗೆದ್ದ ಸಾಧನೆ ಮಾಡಿದ ಭಾರತ
* ಪದಕ ಗೆಲ್ಲದಿದ್ದರೂ ಭವಿಷ್ಯದಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿದ ಭಾರತೀಯ ಕ್ರೀಡಾಪಟುಗಳು
ನವದೆಹಲಿ(ಆ.09): ನಿರೀಕ್ಷೆ ಇಟ್ಟಲ್ಲಿ ನಿರಾಸೆ, ಸಣ್ಣ ಕನಸು ಕಂಡಿದ್ದಲ್ಲೇ ದೊಡ್ಡ ಗೆಲುವು. ಹೀಗೆ ಅಚ್ಚರಿಗಳ ಸರಮಾಲೆಯನ್ನೇ ಪೋಣಿಸಿದಂತಿದ್ದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ತನ್ನ ಅಭಿಯಾನವನ್ನು ಅತ್ಯಂತ ಯಶಸ್ವಿ ಎಂಬ ಹಿರಿಮೆಯೊಂದಿಗೆ ಮುಕ್ತಾಯಗೊಳಿಸಿದೆ. 1 ಚಿನ್ನ, 2 ಬೆಳ್ಳಿ, 4 ಕಂಚುಗಳೊಂದಿಗೆ 7 ಪದಕ ಬೇಟೆಯಾಡಿದ ಕ್ರೀಡಾಳುಗಳು, ಒಲಿಂಪಿಕ್ಸ್ ಇತಿಹಾಸದಲ್ಲೇ ಅತಿ ಹೆಚ್ಚು, ಅಥ್ಲೆಟಿಕ್ಸ್‌ನಲ್ಲಿ ಮೊದಲ ಚಿನ್ನ ಎಂಬೆಲ್ಲಾ ದಾಖಲೆಗಳೊಂದಿಗೆ ತ್ರಿವರ್ಣ ಧ್ವಜದ ಕೀರ್ತಿಯನ್ನು ಮುಗಿಲಿಗೇರಿಸಿದ್ದಾರೆ.
ಇತಿಹಾಸದಲ್ಲೇ ಅತಿದೊಡ್ಡ ತಂಡ (120 ಜನ) ದೊಂದಿಗೆ ತೆರಳಿದ್ದ ಭಾರತೀಯ ಕ್ರೀಡಾಪಟುಗಳ ಪೈಕಿ ವೈಯಕ್ತಿಕ ವಿಭಾಗದಲ್ಲಿ 6 ಜನರು ಮತ್ತು ಪುರುಷರ ಹಾಕಿ ತಂಡ ಜಯಶಾಲಿಯಾಗಿದೆ. ಇನ್ನು ಭರವಸೆ ಮೂಡಿಸಿದವರ ಪೈಕಿ ಒಂದಿಷ್ಟು ಜನ ನಿರಾಸೆ ಮೂಡಿಸಿದರೆ, ಗಾಲ್ಫ್, ವೇಟ್‌ಲಿಫ್ಟಿಂಗ್ ಸೇರಿದಂತೆ ಕೆಲ ವಿಭಾಗಗಳಲ್ಲಿ ಭರವಸೆದಾಯಕ ಫಲಿತಾಂಶ ಕಂಡುಬಂತು.
undefined
ಭಾರತವನ್ನು ಪ್ರತಿನಿಧಿಸಿದ ಎಲ್ಲರೂ ಚಾಂಪಿಯನ್: ಪ್ರಧಾನಿ ನರೇಂದ್ರ ಮೋದಿ
2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ 3, 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ 6 ಮತ್ತು 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಕೇವಲ 2 ಪದಕ ಗೆದ್ದಿದ್ದ ಭಾರತ ಈ ಬಾರಿ 7 ಪದಕ ಗೆಲ್ಲುವ ಮೂಲಕ ಸಾರ್ವಕಾಲಿಕ ಗರಿಷ್ಠ ಗೆಲುವಿನ ಸಾಧನೆ ಮಾಡಿತು. ಇನ್ನು ಒಟ್ಟಾರೆ ಚಿನ್ನದ ಸಾಧನೆ ನೋಡಿದರೆ, ಭಾರತ ಈವರೆಗೆ 10 ಚಿನ್ನ ಗೆದ್ದಿದೆ. ಈ ಪೈಕಿ 8 ಪುರುಷರ ಹಾಕಿಯಲ್ಲಿ, ಒಂದು ಅಭಿನವ್ ಬಿಂದ್ರಾಗೆ ಶೂಟಿಂಗ್‌ನಲ್ಲಿ ಮತ್ತೊಂದು ಇದೀಗ ನೀರಜ್‌ಗೆ ಜಾವೆಲಿನ್‌ನಲ್ಲಿ ಸಿಕ್ಕಿದೆ.
ಪದಕ ಗೆದ್ದವರಿವರು
ಜಾವೆಲಿನ್ ಥ್ರೋದಲ್ಲಿ ನೀರಜ್ ಚೋಪ್ರಾಗೆ ಐತಿಹಾಸಿಕ ಚಿನ್ನ, ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು, ಕುಸ್ತಿಯಲ್ಲಿ ರವಿ ದಹಿಯಾ ಬೆಳ್ಳಿ ಪದಕ ಗೆದ್ದರು. ಬ್ಯಾಡ್ಮಿಂಟನ್‌ನಲ್ಲಿ ಪಿ.ವಿ.ಸಿಂಧು, ಬಾಕ್ಸಿಂಗ್‌ನಲ್ಲಿ ಲವ್ಲೀನಾ ಬೊರ್ಗೊಹೈನ್, ಕುಸ್ತಿಯಲ್ಲಿ ಭಜರಂಗ್ ಪೂನಿಯಾ, ಭಾರತದ ಪುರುಷರ ಹಾಕಿ ತಂಡ ಕಂಚು ಪದಕ ಗೆದ್ದಿದೆ.
ನಿರಾಸೆ ಮೂಡಿಸಿದವರು
ಈ ಬಾರಿ ಬಾಕ್ಸಿಂಗ್, ಕುಸ್ತಿ, ಶೂಟಿಂಗ್, ಆರ್ಚರಿಯಲ್ಲಿ ಭಾರತಕ್ಕೆ ಹೆಚ್ಚಿನ ಪದಕದ ಇರೀಕ್ಷೆ ಇತ್ತು. ಆದರೆ ಮೇರಿ ಕೋಮ್ ಸ್ವಲ್ಪದರಲ್ಲೇ ಪದಕ ವಂಚಿತರಾದರು. ಇನ್ನು ವಿಶ್ವ ನಂ.1 ಅಮಿತ್ ಪಂಘಲ್ ಕೂಡಾ ಪ್ರೀಕ್ವಾರ್ಟರ್‌ನಲ್ಲೇ ಸೋತು ನಿರಾಸೆ ಮೂಡಿಸಿದರು. ಕುಸ್ತಿಯಲ್ಲಿ ವಿನೇಶ್ ಪೋಗಾಟ್ ಕೂಡಾ ಕ್ವಾರ್ಟರ್ ಫೈನಲ್‌ನಲ್ಲೇ ಸೋತಿದ್ದು ಭಾರತಕ್ಕೆ ಆಘಾತ ಮೂಡಿಸಿತು. ಶೂಟಿಂಗ್‌ನಲ್ಲಿ ಮನು ಭಾಕರ್, ಸೌರಭ್ ಚೌಧರಿ ಅವರದ್ದೂ ನಿರಾಶಾದಾಯ ಪ್ರದರ್ಶನ ಕಂಡುಬಂತು. ಆರ್ಚರಿಯಲ್ಲಿ ದೀಪಿಕಾ ಕುಮಾರಿ ಮತ್ತು ಅತನು ದಾಸ್ ಶೂನ್ಯ ಸಾಧನೆ ಸಾಕಷ್ಟು ನಿರಾಸೆ ಮೂಡಿಸಿತು.
ಪದಕ ಗೆಲ್ಲದಿದ್ರೂ ಹೃದಯ ಗೆದ್ದರು
ಪದಕ ಗೆಲ್ಲಲಾಗದಿದ್ದರೂ ಕರ್ನಾಟಕದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್, ಮಹಿಳಾ ಹಾಕಿ ಆಟಗಾರರು ಭಾರತೀಯರ ಮನಸ್ಸು ಗೆದ್ದಿದ್ದಾರೆ. ವಿಶ್ವದ 200ನೇ ಶ್ರೇಯಾಂಕಿತ ಅದಿತಿ ಅಗ್ರ ಗಾಲ್ಫ್ ಆಟಗಾರ್ತಿಯರಿಗೆ ಪ್ರಬಲ ಪೈಪೋಟಿ ನೀಡಿದ್ದರು. 3 ಸುತ್ತಿನ ಅಂತ್ಯದವರೆಗೂ 2ನೇ ಸ್ಥಾನದಲ್ಲಿದ್ದ ಅದಿತಿ ಅಂತಿಮ ಸುತ್ತಿನಲ್ಲಿ 4ನೇ ಸ್ಥಾನ ಪಡೆದರು. ಇದೇ ಮೊದಲ ಬಾರಿಗೆ ಸೆಮಿಗೆ ತಲುಪಿದ್ದ ಭಾರತದ ಮಹಿಳಾ ಹಾಕಿ ತಂಡ ಕಂಚಿನದ ಕದನದಲ್ಲಿ ಸೋತಿತು. ವಿರೋಚಿತ ಸೋಲು ಕಂಡರೂ 4ನೇ ಸ್ಥಾನದ ಐತಿಹಾಸಿಕ ಸಾಧನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು. ಡಿಸ್ಕಸ್ ಥ್ರೋನ ಅರ್ಹತಾ ಸುತ್ತಿನಲ್ಲಿ ನೇರವಾಗಿ ಫೈನಲ್ ಪ್ರವೇಶಿಸಿದ್ದ ಕಮಲ್‌ಪ್ರೀತ್ ಕೌರ್, ಪುರುಷರ ಸೂಪರ್ ಹೆವಿವೇಟ್ ಬಾಕ್ಸಿಂಗ್‌ನ ಕ್ವಾರ್ಟರ್ ಫೈನಲ್‌ನಲ್ಲಿ ರಕ್ತ ಜಿನುಗುತ್ತಿದ್ದರೂ ಹೋರಾಡಿ ಸೋತ ಯೋಧ ಸತೀಶ್ ಕುಮಾರ್, ಈಕ್ವೆಸ್ಟ್ರೀಯನ್‌ನಲ್ಲಿ ಅಂತಿಮ ಸುತ್ತಿಗೇರಿದ್ದ ಬೆಂಗಳೂರಿನ ಫವಾದ್ ಮಿರ್ಜಾ ಭವಿಷ್ಯದಲ್ಲಿ ಪದಕದ ಭರವಸೆಯಾಗಿದ್ದಾರೆ.