ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದರೆ 3 ಕೋಟಿ ರೂ ಬಹುಮಾನ: ತಮಿಳುನಾಡು ಸಿಎಂ ಸ್ಟಾಲಿನ್‌

By Suvarna NewsFirst Published Jun 26, 2021, 6:43 PM IST
Highlights

* ಟೋಕಿಯೋ ಒಲಿಂಪಿಕ್ಸ್‌ ಪದಕ ಗೆದ್ದವರಿಗೆ ಬಂಪರ್ ಬಹುಮಾನ ಘೋಷಿಸಿದ ತಮಿಳುನಾಡು ಸಿಎಂ

* ಚಿನ್ನದ ಪದಕ ಗೆಲ್ಲುವ ತಮಿಳುನಾಡು ಕ್ರೀಡಾಪಟುಗಳಿಗೆ 3 ಕೋಟಿ ರುಪಾಯಿ ಬಹುಮಾನ

* ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟವು ಜುಲೈ 23ರಿಂದ ಆರಂಭ

ಚೆನ್ನೈ(ಜೂ.26): ಮುಂಬರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ತಮಿಳುನಾಡು ಕ್ರೀಡಾಪಟುಗಳಿಗೆ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್‌ ಭರ್ಜರಿ ಘೋಷಣೆ ಮಾಡಿದ್ದು, ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಕ್ರೀಡಾಪಟುಗಳಿಗೆ 3 ಕೋಟಿ ರುಪಾಯಿ ನಗದು ಬಹುಮಾನ ಘೋಷಿಸಿದ್ದಾರೆ.

ಹೌದು, ಬಹುನಿರೀಕ್ಷಿಯ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟವು ಜುಲೈ 23ರಿಂದ ಆರಂಭವಾಗಲಿದೆ. ಇದೇ ವೇಳೆ ಬೆಳ್ಳಿ ಪದಕ ಗೆದ್ದವರಿಗೆ 2 ಕೋಟಿ ರೂ ಹಾಗೂ ಕಂಚಿನ ಪದಕ ಜಯಿಸಿದ ತಮಿಳುನಾಡಿನ ಕ್ರೀಡಾಪಟುಗಳಿಗೆ ತಲಾ 1.5 ಕೋಟಿ ರುಪಾಯಿ ನೀಡುವುದಾಗಿ ಘೋಷಿಸಿದ್ದಾರೆ.

2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಪುರುಷರ 10 ಮೀಟರ್ ಏರ್‌ ರೈಫಲ್‌ ವಿಭಾಗದಲ್ಲಿ ಚೆನ್ನೈ ಮೂಲದ ಗಗನ್‌ ನಾರಂಗ್ ಕಂಚಿನ ಪದಕ ಜಯಿಸಿದ್ದರು. ಇದಾದ ಬಳಿಕ ತಮಿಳುನಾಡಿನ ಯಾವೊಬ್ಬ ಕ್ರೀಡಾಪಟು ಕೂಡಾ ಒಲಿಂಪಿಕ್ಸ್‌ನಲ್ಲಿ ಪದಕಕ್ಕೆ ಕೊರಳೊಡ್ಡಿಲ್ಲ.

ಹರ್ಯಾಣ ಅಥ್ಲೀಟ್‌ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ರೆ 6 ಕೋಟಿ ರುಪಾಯಿ ಬಹುಮಾನ!

ಈ ಮೊದಲ ಅಂತಾರಾತಾಷ್ಟ್ರೀಯ ಒಲಿಂಪಿಕ್‌ ದಿನಾಚರಣೆಯಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್, ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಹರ್ಯಾಣ ಕ್ರೀಡಾಪಟುಗಳಿಗೆ ಭರ್ಜರಿ ನಗದು ಬಹುಮಾನದ ಆಶ್ವಾಸನೆ ನೀಡಿದ್ದಾರೆ. ಹರ್ಯಾಣದ ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದರೆ 6 ಕೋಟಿ, ಬೆಳ್ಳಿ ಗೆದ್ದರೆ 4 ಕೋಟಿ ಹಾಗೂ ಕಂಚಿನ ಪದಕ ಜಯಿಸಿದರೆ 2.5 ಕೋಟಿ ರುಪಾಯಿ ಪಡೆಯಲಿದ್ದಾರೆ.

ಇಲ್ಲಿಯವರೆಗೆ 14 ವಿವಿಧ ಕ್ರೀಡಾ ವಿಭಾಗದಿಂದ ಒಟ್ಟು 102 ಅಥ್ಲೀಟ್‌ಗಳು ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಯನ್ನು ಪಡೆದಿದ್ದಾರೆ. ದೇಶದ ಮತ್ತಷ್ಟು ಅಥ್ಲೀಟ್‌ಗಳು ಕೆಲವೇ ದಿನಗಳಲ್ಲಿ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ನಿರೀಕ್ಷೆಯಿದೆ. ಜಾಗತಿಕ ಕ್ರೀಡಾ ಹಬ್ಬ ಎನಿಸಿಕೊಂಡಿರುವ ಒಲಿಂಪಿಕ್ಸ್‌ನಲ್ಲಿ ಭಾರತದ ಸಾಧನೆ ಅಷ್ಟೇನು ಉತ್ತಮವಾಗಿಲ್ಲ. 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ 6 ಪದಕ ಜಯಿಸಿರುವುದೇ ಇಲ್ಲಿಯವರೆಗಿನ ಗರಿಷ್ಠ ಸಾಧನೆ ಎನಿಸಿದೆ. 

click me!