ಒಲಿಂಪಿಕ್‌ಗೆ ಆಯ್ಕೆಯಾಗುವ ಕರ್ನಾಟಕದ ಕ್ರೀಡಾಪಟುಗಳಿಗೆ 10 ಲಕ್ಷ ರೂ ಪ್ರೋತ್ಸಾಹಧನ

By Suvarna NewsFirst Published Jun 26, 2021, 5:25 PM IST
Highlights

* ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ರಾಜ್ಯದ ಕ್ರೀಡಾಪಟುಗಳಿಗೆ ಬಂಪರ್ ಆಫರ್

* ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಅಥ್ಲೀಟ್‌ಗಳಿಗೆ 10 ಲಕ್ಷ ರು ಪ್ರೋತ್ಸಾಹ ಧನ

* ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟ ಜುಲೈ 23ರಿಂದ ಆರಂಭ 

ಬೆಂಗಳೂರು(ಜೂ.26): ಜಾಗತಿಕ ಕ್ರೀಡಾಜಾತ್ರೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಕರ್ನಾಟಕ ರಾಜ್ಯದ ಅಥ್ಲೀಟ್‌ಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಿದೆ. ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಳ್ಳುವ ರಾಜ್ಯದ ಅಥ್ಲೀಟ್‌ಗಳಿಗೆ ತಲಾ 10 ಲಕ್ಷ ರುಪಾಯಿ ಪ್ರೋತ್ಸಾಹಧನ ನೀಡುವುದಾಗಿ ರಾಜ್ಯ ಕ್ರೀಡಾಸಚಿವ ನಾರಾಯಣಗೌಡ ಘೋ‍ಷಿಸಿದ್ದಾರೆ.

ಕರ್ನಾಟಕ ರಾಜ್ಯದಿಂದ ಈ ಮೊದಲು ಐವರು ಕ್ರೀಡಾಪಟುಗಳು ಟೋಕಿಯೋ ಒಲಿಂಪಿಕ್ಸ್‌ಗೆ ಆಯ್ಕೆಯಾಗುವ ನಿರೀಕ್ಷೆಯಿತ್ತು. ಆದರೆ ಇತ್ತೀಚೆಗಷ್ಟೇ ಪ್ರಕಟಣೆಯಾದ 16 ಆಟಗಾರರನ್ನೊಳಗೊಂಡ ಭಾರತ ಹಾಕಿ ತಂಡದಲ್ಲಿ ಕನ್ನಡಿಗ ಎಸ್‌.ವಿ. ಸುನಿಲ್ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದರು. ಹೀಗಾಗಿ ಕಳೆದ ಬಾರಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ಈಕ್ವೆಸ್ಟ್ರಿಯನ್‌ ಪೌವಾದ್ ಮಿರ್ಜಾ ಈಗಾಗಲೇ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಂಡಿದ್ದಾರೆ. ಇನ್ನುಳಿದಂತೆ ಟೆನಿಸಿಗ ರೋಹನ್ ಬೋಪಣ್ಣ, ಈಜುಪಟು ಶ್ರೀಹರಿ ನಟರಾಜನ್ ಹಾಗೂ ಮಹಿಳಾ ಗಾಲ್ಫರ್ ಅದಿತಿ ಅಶೋಕ್‌ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ರಾಜ್ಯದ ಸಂಭವನೀಯ ಕ್ರೀಡಾಪಟುಗಳು ಎನಿಸಿದ್ದಾರೆ.

ಹರ್ಯಾಣ ಅಥ್ಲೀಟ್‌ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ರೆ 6 ಕೋಟಿ ರುಪಾಯಿ ಬಹುಮಾನ!

ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟವು ಜುಲೈ 23ರಿಂದ ಆಗಸ್ಟ್ 08ರವರೆಗೆ ನಡೆಯಲಿದೆ. ಒಲಿಂಪಿಕ್ಸ್‌ನಲ್ಲಿ ತಮ್ಮ ರಾಜ್ಯಗಳಿಂದ ದೇಶವನ್ನು ಪ್ರತಿನಿಧಿಸುವ ಕ್ರೀಡಾಪಟುಗಳಿಗೆ ಪೂರ್ವ ತಯಾರಿಗೆ ಹಾಗೂ ಬೆಂಬಲ ಸೂಚಕವಾಗಿ ಈಗಾಗಲೇ ತಮಿಳುನಾಡು, ಮಧ್ಯ ಪ್ರದೇಶ ಸರ್ಕಾರಗಳು ತಲಾ 10 ಲಕ್ಷ ರುಪಾಯಿ ಪ್ರೋತ್ಸಾಹಧನವನ್ನು ಘೋಷಿಸಿದೆ. ಅದೇ ರೀತಿ ಕರ್ನಾಟಕ ರಾಜ್ಯ ಸರ್ಕಾರ ಕೂಡಾ ರಾಜ್ಯದ ಕ್ರೀಡಾಪಟುಗಳ ಬೆಂಬಲಕ್ಕೆ ಮುಂದಾಗಿದೆ.
 

click me!