* ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭಕ್ಕೆ ದಿನಗಣನೆ ಆರಂಭ
* ಜುಲೈ 23ರಿಂದ ಆಗಸ್ಟ್ 08ರವರೆಗೆ ಜರುಗಲಿದೆ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ
* ಟೋಕಿಯೋ ಒಲಿಂಪಿಕ್ಸ್ ಆಯೋಜಿಸಲು ಜಪಾನ್ ಸಜ್ಜಾಗಿರುವುದರ ಬಗ್ಗೆ ಅನುಮಾನ
ಟೋಕಿಯೋ(ಮೇ.14): ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಇನ್ನು ಕೇವಲ ಎರಡೇ ತಿಂಗಳುಗಳು ಬಾಕಿ ಉಳಿದಿವೆ. ಹೀಗಿರುವಾಗಲೇ ಜಪಾನಿನಲ್ಲಿ ನಿಧಾನವಾಗಿ ಮತ್ತೆ ಕೋವಿಡ್ ಪ್ರಕರಣಗಳು ಹೆಚ್ಚಾಗಲಾರಂಭಿಸಿವೆ. ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವು ಮುಂಬರುವ ಜುಲೈ 23ರಿಂದ ಆಗಸ್ಟ್ 08ರವರಗೆ ಜರುಗಲಿದೆ.
ಇನ್ನೂ ಕುತೂಹಲಕಾರಿ ಸಂಗತಿಯೆಂದರೆ ಜಪಾನಿನ ಒಟ್ಟು ಜನಸಂಖ್ಯೆಯ ಕೇವಲ ಒಂದು ಪ್ರತಿಶತ ಮಂದಿಗೆ ಮಾತ್ರ ಕೋವಿಡ್ ಲಸಿಕೆ ನೀಡಲಾಗಿದೆ. ಇದು ಅಮೆರಿಕ, ಯೂರೋಪ್, ಭಾರತ ಹಾಗೂ ಚೀನಾಗಿಂತ ಕಡಿಮೆ. ಹೀಗಾಗಿ ಜಪಾನ್ ನಿಜಕ್ಕೂ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜಿಸಲು ಸಕಲ ರೀತಿಯಿಂದಲೂ ಸಜ್ಜಾಗಿದೆಯಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.
2020ರ ಆರಂಭದಿಂದ ಇಲ್ಲಿಯವರೆಗೆ ಜಪಾನ್‌ನಲ್ಲಿ 6,40,000 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, 10,900ಕ್ಕೂ ಅಧಿಕ ಸಾವುಗಳು ಸಂಭವಿಸಿವೆ. ಕೊರೋನಾ ಹೆಚ್ಚಿದ್ದ ಭಾಗಗಳಲ್ಲಿ ಆಗಾಗ ಲಾಕ್‌ಡೌನ್ ಹೇರಿದ್ದ ಜಪಾನ್ ಸ್ಥಳೀಯಾಡಳಿತ, ಬಳಿಕ ಕೊರೋನಾ ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆಯೇ ಪ್ರವಾಸೋದ್ಯಮಕ್ಕೆ ಒತ್ತು ನೀಡಿದೆ. ಪರಿಣಾಮ ಟೋಕಿಯೋ, ಒಸಾಕಾ ಹಾಗೂ ದೇಶದ ಇತರೆ ಭಾಗಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಲಾರಂಭಿಸಿವೆ. ಹೀಗಾಗಿ ಮೇ.07ರಿಂದ ಮೇ 11ರವರೆಗೆ ಸರ್ಕಾರವು ರಾಜ್ಯ ತುರ್ತುಪರಿಸ್ಥಿತಿಯನ್ನು ಘೋಷಿಸಿತ್ತು. ಪರಿಸ್ಥಿತಿ ಕೈಮೀರಿದಂತೆ ಕಂಡು ಬರುತ್ತಿದ್ದಂತೆಯೇ ತುರ್ತುಪರಿಸ್ಥಿತಿಯನ್ನು ಮೇ ತಿಂಗಳಾಂತ್ಯದ ವರೆಗೆ ವಿಸ್ತರಿಸಲು ಸರ್ಕಾರ ತೀರ್ಮಾನಿಸಿದೆ.
ಸೈನಾ ನೆಹ್ವಾಲ್, ಶ್ರೀಕಾಂತ್ ಒಲಿಂಪಿಕ್ ಕನಸು ಭಗ್ನ?
ಇವೆಲ್ಲದರ ನಡುವೆ ಜಪಾನಿನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟವನ್ನು ರದ್ದು ಮಾಡಬೇಕು ಎನ್ನುವ ಅಭಿಯಾನವು ಆರಂಭವಾಗಿದೆ. ಟೋಕಿಯೋ ಒಲಿಂಪಿಕ್ಸ್ ರದ್ದುಮಾಡಿ ನಮ್ಮ ಜೀವ ಕಾಪಾಡಿ ಎನ್ನುವ ಅಭಿಯಾನ ಮೇ 5ರಿಂದ ಆರಂಬವಾಗಿದ್ದು, ಕೇವಲ 4 ದಿನಗಳ ಅಂತರದಲ್ಲಿ 3 ಲಕ್ಷ ಸಹಿ ಸಂಗ್ರಹವಾಗಿದೆ. ಒಟ್ಟಿನಲ್ಲಿ ಈ ಬಾರಿ ಟೂಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಅಂದುಕೊಂಡಂತೆ ನಡೆಯುತ್ತದೆಯೋ ಮತ್ತೆ ಮುಂದೂಡಲ್ಪಡುವುದೋ ಎನ್ನುವುದನ್ನು ಕಾಲವೇ ಉತ್ತರಿಸಬೇಕಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona