ಒಲಿಂಪಿಕ್‌ಗೆ ಎರಡೇ ತಿಂಗಳಿರುವಾಗ ನೀರಜ್‌ ಚೋಪ್ರಾಗೆ ಇಂಜುರಿ, ಗೋಲ್ಡನ್‌ ಬಾಯ್‌ ಹೇಳಿದ್ದೇನು?

By Santosh Naik  |  First Published May 26, 2024, 6:48 PM IST

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಇನ್ನೇನು ಎರಡೇ ತಿಂಗಳು ಬಾಕಿ ಇದೆ. ಜುಲೈ 26 ರಿಂದ ಆರಂಭವಾಗಲಿರುವ ಟೂರ್ನಿಗೆ ಭಾರತದ ಸಿದ್ಧತೆಯೂ ಜೋರಾಗಿ ನಡೆಯುತ್ತಿದೆ. ಇದರ ನಡುವೆ ಹಾಲಿ ಜಾವೆಲಿನ್‌ ಥ್ರೋ ಒಲಿಂಪಿಕ್‌ ಚಾಂಪಿಯನ್‌ ನೀರಜ್‌ ಚೋಪ್ರಾ ಇಂಜುರಿಗೆ ತುತ್ತಾಗಿದ್ದಾರೆ.
 


ನವದೆಹಲಿ (ಮೇ.26): ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಇನ್ನೇನು ಎರಡೇ ತಿಂಗಳು ಇರೋವಾಗ ಟೋಕಿಯೋ ಒಲಿಂಪಿಕ್ಸ್‌ನ ಜಾವೆಲಿನ್‌ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದ ಗೋಲ್ಡನ್‌ ಬಾಯ್‌ ನೀರಜ್‌ ಚೋಪ್ರಾ ವಿಚಾರದಲ್ಲಿ ಕೆಟ್ಟ ಸುದ್ದಿ ಪ್ರಸಾರವಾಗಿದೆ. ಮಾಂಸಖಂಡ ಇಂಜುರಿಗೆ ತುತ್ತಾದ ಕಾರಣ ನೀರಜ್‌ ಚೋಪ್ರಾ ಒಸ್ಟ್ರಾವಾ ಗೋಲ್ಡನ್‌ ಸ್ಪೈಕ್‌ ಇವೆಂಟ್‌ನಿಂದ ಹೊರಗುಳಿದಿದ್ದಾರೆ ಎನ್ನಲಾಗಿತ್ತು. ಆದರೆ, ಸಂಜೆಯ ವೇಳೆಗೆ ಈ ಸುದ್ದಿಗೆ ಸ್ಪಷ್ಟೀಕರಣ ನೀಡಿರುವ ಗೋಲ್ಡನ್‌ ಬಾಯ್‌,  ನಾನು ಗಾಯಗೊಂಡಿಲ್ಲ. ಆದರೆ, ಇಂಜುರಿ ಆಗಬಾರದು ಎನ್ನುವ ಮುನ್ನಚ್ಚರಿಕೆ ಎನ್ನುವ ರೀತಿಯಲ್ಲಿ ಇವೆಂಟ್‌ನಿಂದ ಹೊರಗುಳಿದಿದ್ದಾಗಿ ತಿಳಿಸಿದ್ದಾರೆ. ಮುಂದೆ ಒಲಿಂಪಿಕ್ಸ್‌ ಇದೆ. ಈ ಸಂದರ್ಭದಲ್ಲಿ ಯಾವುದೇ ರೀತಿಯ ಗಾಯಕ್ಕೆ ತುತ್ತಾಗಬಾರದು ಎನ್ನವ ಕಾರಣಕ್ಕೆ ಪ್ರತಿಷ್ಠಿತ ಟೂರ್ನಿಯಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದೇನೆ ಎಂದು ನೀರಜ್‌ ಚೋಪ್ರಾ ಸ್ಪಷ್ಟೀಕರಣ ನೀಡಿದ್ದಾರೆ. ಇದಕ್ಕೂ ಮುನ್ನ ಬಂದ ವರದಿಯಲ್ಲಿ ನೀರಜ್‌ ಚೋಪ್ರಾ ಎರಡು ವಾರದ ಹಿಂದೆ ತರಬೇತಿ ನಡೆಸುವ ವೇಳೆ ಮಾಂಸಖಂಡದ ಗಾಯಕ್ಕೆ ತುತ್ತಾಗಿದ್ದರು. ಇದೆ ಕಾರಣಕ್ಕೆ ಜೆಕ್‌ ಗಣರಾಜ್ಯದಲ್ಲಿ ನಡೆಯಲಿರುವ ಪ್ರತಿಷ್ಠಿಯ ಓಸ್ಟ್ರಾವಾ ಗೋಲ್ಡನ್‌ ಸ್ಪೈಕ್‌ ಇವೆಂಟ್‌ನಲ್ಲಿ ಸ್ಪರ್ಧೆ ಮಾಡುತ್ತಿಲ್ಲ ಎಂದು ತಿಳಿಸಲಾಗಿತ್ತು.

ಈ ತಿಂಗಳ ಆರಂಭದಲ್ಲಿ ನಡೆದ ದೋಹಾ ಡೈಮಂಡ್‌ ಲೀಗ್‌ ಟೂರ್ನಿಯಲ್ಲಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ನೀರಜ್‌ ಚೋಪ್ರಾ, ಅದಾದ ಒಂದು ವಾರದ ಬಳಿಕ ನಡೆದ ಫೆಡರೇಷನ್‌ ಕಪ್‌ ಟೂರ್ನಿಯಲ್ಲಿ ಚಿನ್ನದ ಪದಕ ಜಯಿಸಿದ್ದರು. ಇದರ ಬೆನ್ನಲ್ಲಿಯೇ ನೀರಜ್‌ ಚೋಪ್ರಾ ಇಂಜುರಿಗೆ ತುತ್ತಾಗಿದ್ದಾರೆ ಎನ್ನುವ ಸುದ್ದಿ ದೊಡ್ಡ ಮಟ್ಟದಲ್ಲಿ ವೈರಲ್‌ ಆಗಿತ್ತು. ಅದರಲ್ಲೂ ಒಲಿಂಪಿಕ್ಸ್‌ಗೆ ಇನ್ನೆರಡೇ ತಿಂಗಳು ಇರೋವಾಗ ಆಗಿರುವ ಗಾಯ ಭಾರತದ ನಿರೀಕ್ಷೆಗಳ ಮೇಲೆಯೇ ಆಘಾತ ನೀಡಿತ್ತು.

ಆದರೆ, ಭಾನುವಾರ ಸಂಜೆಯ ವೇಳೆಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ನೀರಜ್‌ ಚೋಪ್ರಾ, ಇತ್ತೀಚಿನ ಥ್ರೋವಿಂಗ್‌ ಸೆಷನ್‌ನ ಬಳಿಕ ನನ್ನ ಥ್ರೋವಿಂಗ್‌ ಮಸಲ್‌ನಲ್ಲಿ ಏನೋ ತೊಂದರೆ ಇದ್ದಂತೆ ಕಾಣಿಸಿದೆ. ಅದಕ್ಕಾಗಿಯೇ ನಾನು ಒಸ್ಟ್ರಾವಾದ ಇವೆಂಟ್‌ನಲ್ಲಿ ಭಾಗಿಯಾಗದೇ ಇರಲು ತೀರ್ಮಾನ ಮಾಡಿದ್ದೇನೆ. ಈ ಸಮಸ್ಯೆ ನನಗೆ ಮೊದಲಿನಿಂದಲೂ ಇತ್ತು. ಆದರೆ, ಈ ಹಂತದಲ್ಲಿ ಈ ಸಮಸ್ಯೆಯ ನಡುವೆ ಸ್ಪರ್ಧೆ ಮಾಡಿದರೆ, ಅದು ಗಾಯಕ್ಕೆ ಕಾರಣವಾಗಲಿದೆ ಎನ್ನುವ ಅರಿವು ನನಗಿದೆ' ಎಂದು ನೀರಜ್‌ ಚೋಪ್ರಾ ಬರೆದುಕೊಂಡಿದ್ದಾರೆ.

Tap to resize

Latest Videos

undefined

ಫೆಡರೇಷನ್ ಕಪ್: ನೀರಜ್‌ಗೆ ಚಿನ್ನ, ರಾಜ್ಯದ ಮನುಗೆ ಬೆಳ್ಳಿ ಗರಿ

ಈ ಹಂತದಲ್ಲಿ ನಾನು ನೀಡಿವ ಸ್ಪಷ್ಟನೆ ಏನೆಂದರೆ, ನಾನು ಗಾಯಗೊಂಡಿಲ್ಲ. ಆದರೆ, ಒಲಿಂಪಿಕ್‌ ವರ್ಷದಲ್ಲಿ ಯಾವುದೇ ರಿಸ್ಕ್‌ ತೆಗೆದುಕೊಳ್ಳೋದನ್ನೂ ನಾನು ಬಯಸೋದಿಲ್ಲ. ಹಾಗೇನಾದರೂ ನಾನು ಪೂರ್ಣ ಪ್ರಮಾಣದಲ್ಲಿ ರಿಕವರ್‌ ಆಗಿದ್ದೇನೆ ಎಂದು ಅನಿಸಿದರೆ, ಟೂರ್ನಮೆಂಟ್‌ಗಳಲ್ಲಿ ಭಾಗಿಯಾಗಲಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಡೈಮಂಡ್‌ ಲೀಗ್‌ನಲ್ಲಿ ಎರಡನೇ ಸ್ಥಾನಕ್ಕೆ ನೀರಜ್‌ ಚೋಪ್ರಾ ತೃಪ್ತಿ, ಮೊದಲ ಸ್ಥಾನ ಜಸ್ಟ್ ಮಿಸ್

ಎರಡು ವಾರದ ಹಿಂದೆ ಆಗಿರುವ ಗಾಯದ ಕಾರಣಕ್ಕಾಗಿ ನೀರಜ್‌ ಚೋಪ್ರಾ ಒಸ್ಟ್ರಾವಾ ಇವೆಂಟ್‌ನಲ್ಲಿ ಭಾಗಿಯಾಗುತ್ತಿಲ್ಲ ಎಂದು ಒಸ್ಟ್ರಾವಾ ಗೋಲ್ಡನ್‌ ಸ್ಪೈಕ್‌ ಇವೆಂಟ್‌ನ ಆಯೋಜಕರು ಹೇಳಿದ ಕೆಲವೇ ಹೊತ್ತಿನಲ್ಲಿ ನೀರಜ್‌ ಚೋಪ್ರಾ ಅವರ ಸ್ಪಷ್ಟನೆ ಬಂದಿದೆ.

pic.twitter.com/PKNvS7tpSu

— Neeraj Chopra (@Neeraj_chopra1)
click me!