2024ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವುದು ನನ್ನ ಗುರಿ: ಮೀರಾಬಾಯಿ ಚಾನು

By Suvarna NewsFirst Published Aug 3, 2021, 5:28 PM IST
Highlights

* ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕದ ಮೇಲೆ ಚಿತ್ತ ನೆಟ್ಟಿರುವ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು

* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿರುವ ಮೀರಾಬಾಯಿ

* ಒಟ್ಟು 202 ಕೆ.ಜಿ ಭಾರ ಎತ್ತುವುದರೊಂದಿಗೆ ಬೆಳ್ಳಿ ಪದಕ ಜಯಿಸಿರುವ ಚಾನು 

ನವದೆಹಲಿ(ಆ.03): ಭಾರತದ ತಾರಾ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸುವ ಮೂಲಕ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಅನುಭವಿಸಿದ್ದ ಕಹಿಯನ್ನು ಮರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಚಾನು 2024ರ ಪ್ಯಾರಿಸ್‌ ಒಲಿಂಪಿಕ್ಸ್‌ನತ್ತ ಚಿತ್ತ ನೆಟ್ಟಿದ್ದಾರೆ.

2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಪದಕ ನಿರೀಕ್ಷೆಯೊಂದಿಗೆ ಕಣಕ್ಕಿಳಿದಿದ್ದ ಚಾನು ಕ್ಲೀನ್‌ ಅಂಡ್ ಜರ್ಕ್‌ ವಿಭಾಗದಲ್ಲಿ ಒಂದೇ ಒಂದು ಯಶಸ್ವಿ ಲಿಫ್ಟ್‌ ಮಾಡಲು ಅಸ್ಸಾಂ ವೇಟ್‌ಲಿಫ್ಟರ್‌ಗೆ ಸಾಧ್ಯವಾಗಿರಲಿಲ್ಲ. ಆದರೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಎಲ್ಲಾ ಹಳೆಯ ಕಹಿ ನೆನಪು ಮರೆಯುವಂತೆ ಭಾರತಕ್ಕೆ ಪದಕದ ಖಾತೆ ತೆರೆಯುವಲ್ಲಿ ಯಶಸ್ವಿಯಾದರು. ಸ್ಯಾಚ್‌ ವಿಭಾಗದಲ್ಲಿ 87  ಕೆ.ಜಿ. ಭಾರ ಎತ್ತಿದ್ದ ಮೀರಾಬಾಯಿ ಚಾನು, ಕ್ಲೀನ್ ಅಂಡ್ ಜರ್ಕ್‌ ವಿಭಾಗದಲ್ಲಿ 115 ಕೆ.ಜಿ. ಭಾರ ಎತ್ತುವ ಮೂಲಕ ಒಟ್ಟು 202 ಕೆ.ಜಿ. ಭಾರ ಎತ್ತುವುದರೊಂದಿಗೆ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.

ಈ ಮೊದಲು 2000ನೇ ಇಸವಿಯಲ್ಲಿ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕ ಜಯಿಸುವುದರೊಂದಿಗೆ ವೇಟ್‌ಲಿಫ್ಟಿಂಗ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ವೇಟ್‌ಲಿಫ್ಟರ್ ಎನ್ನುವ ದಾಖಲೆ ನಿರ್ಮಿಸಿದ್ದರು. ಬರೋಬ್ಬರಿ 21 ವರ್ಷಗಳ ಬಳಿಕ ಮೀರಾಬಾಯಿ ಚಾನು ಒಂದು ಹೆಜ್ಜೆ ಮುಂದೆ ಹೋಗಿ ಬೆಳ್ಳಿ ಪದಕಕ್ಕೆಕೊರಳೊಡ್ಡಿದ್ದಾರೆ.

ಒಲಿಂಪಿಕ್‌ ತಾರೆ ಮೀರಾಬಾಯಿ ಚಾನುಗೆ ಸಿಕ್ತು ಬಡ್ತಿ, 2 ಕೋಟಿ ರೂ ಬಹುಮಾನ

ನಾನು ರಿಯೋ ಒಲಿಂಪಿಕ್ಸ್‌ನಲ್ಲಿ ಅನುಭವಿಸಿದ ಸೋಲಿನಿಂದ ಸಾಕಷ್ಟು ಪಾಠ ಕಲಿತಿದ್ದೇನೆ. ತರಬೇತಿಯ ವೇಳೆ ನಾನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢವಾಗಿರುವತ್ತ ಚಿತ್ತ ಹರಿಸಿದ್ದೆ. 

ನನಗೀಗ 26 ವರ್ಷ. ನನ್ನ ಗುರಿ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವುದಾಗಿದೆ ಎಂದು ಚಾನು ತಿಳಿಸಿದ್ದಾರೆ. ನಾನು ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡು ಚಿನ್ನದ ಪದಕ ಕೈಯಲ್ಲಿ ಹಿಡಿದು ತವರಿಗೆ ವಾಪಾಸಾಗಬೇಕೆಂದಿದ್ದೇನೆ. ಮುಂಬರುವ ಒಲಿಂಪಿಕ್ಸ್‌ನಲ್ಲಿ ಚಾಂಪಿಯನ್ ಆಗಲು ಸರ್ವರೀತಿಯಲ್ಲೂ ಪ್ರಯತ್ನಿಸುವುದಾಗಿ ಮೀರಾಬಾಯಿ ಚಾನು ತಿಳಿಸಿದ್ದಾರೆ.
 

click me!