
ಕೈಯಲ್ಲೊಂದು ಸ್ಮಾರ್ಟುಫೋನಿದ್ದರೆ ಹೇಗಾದರೂ ಮಾಡಿ ಅದಕ್ಕೆ 4ಜಿ ಇಂಟರ್‌ನೆಟ್ ಒದಗಿಸುವುದು ಎಲ್ಲರ ಪ್ರಯಾರಿಟಿ ಆಗಿಬಿಟ್ಟಿದೆ. ಹಾಗಾಗಿ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ನಾವೆಲ್ಲಾ ಮೊಬೈಲಿಗೆ ಇಂಟರ್‌ನೆಟ್ಟಂತೂ ಹಾಕಿಸಿರುತ್ತೇವೆ. ಇದೊಂದು ಗುಟ್ಟು ಜಗಜ್ಜಾಹೀರಾಗಿ ಇಂಟರ್‌ನೆಟ್ ಆಧರಿತವಾಗಿರುವ ಹೊಸ ಹೊಸ ವಿಷಯಗಳು ಗೊತ್ತಾಗುತ್ತಿವೆ. ಅದರಲ್ಲೂ ಸದ್ಯದ ಲೇಟೆಸ್ಟುನ್ಯೂಸು ಯೂ ಟ್ಯೂಬ್ ಟಿವಿ.
ಸದ್ಯ ಎಲ್ಲರೂ ಮೊಬೈಲಲ್ಲೇ ಟಿವಿ ನೋಡೋದಕ್ಕೆ ಶುರು ಮಾಡಿದ್ದಾರೆ. ಅದಕ್ಕೆ ಸಾಥ್ ನೀಡಿದ್ದು ಜಿಯೋ ಟಿವಿ. ಸ್ಪೀಡ್ ಇರೋ ಇಂಟರ್‌ನೆಟ್ಟು ಇರು ವುದರಿಂದ ಸಮಯ ಸಿಕ್ಕಾಗೆಲ್ಲಾ ಟಿವಿ ನೋಡುವ ಕೆಲಸವನ್ನು ಜಿಯೋ ಬಾಂಧವರು ಮಾಡಿರುವುದುಂಟು. ಅದಕ್ಕಿಂತ ಇದೊಂಚೂರು ಭಿನ್ನ.
ನೀವು ನೆಟ್‌ಫ್ಲಿಕ್ಸ್ ಕೇಳಿರಬಹುದು. ನೆಟ್‌ಫ್ಲಿಕ್ಸ್‌ಗೆ ನೀವು ಚಂದಾದಾರರಾದರೆ ನೆಟ್‌ಫ್ಲಿಕ್ಸ್ ನಲ್ಲಿರುವ ಎಲ್ಲಾ ವೀಡಿಯೋಗಳನ್ನೂ ಸಿನಿಮಾಗಳನ್ನೂ ಸೀರೀಸ್‌ಗಳನ್ನೂ ನೋಡಬಹುದು. ಉದಾಹರಣೆಗೆ ನೆಟ್‌ಫ್ಲಿಕ್ಸ್ ನವರು ‘ದಿ ಕ್ರೌನ್' ಅನ್ನುವ ಸೀರೀಸ್ ನಿರ್ಮಿಸಿದ್ದರು. ಅದನ್ನು ನೀವು ನೆಟ್‌ಫ್ಲಿಕ್ಸ್‌ಗೆ ಚಂದಾದಾರರಾದರೆ ಮಾತ್ರ ನೋಡಲು ಸಾಧ್ಯ. ಯಾರಾದರೂ ಪುಣ್ಯಾತ್ಮರು ಡೌನ್‌ಲೋಡ್ ಮಾಡಿದರೆ ನೋಡಬಹುದು. ಅದು ಬೇರೆ ವಿಷ್ಯ.
ಈಗ ಬಂದ ಸುದ್ದಿಯ ಪ್ರಕಾರ ಯೂ ಟ್ಯೂಬ್ ಟಿವಿ ಒಂದು ಕಡೆ ಜಿಯೋ ಥರ ಲೈವ್ ಟಿವಿಯಾಗಿಯೂ ಕೆಲಸ ಮಾಡುತ್ತದೆ ಮತ್ತು ಇನ್ನೊಂದು ಕಡೆ ನೆಟ್‌ಫ್ಲಿಕ್ಸ್ ಥರ ವೀಡಿಯೋ ಸೀರೀಸ್‌ಗಳನ್ನು ಒದಗಿಸುವ ತಾಣವಾಗಿಯೂ ಕೆಲಸ ಮಾಡಲಿದೆಯಂತೆ. ಯಾರೆಲ್ಲಾ ಈ ಯೂ ಟ್ಯೂಬ್ ಟಿವಿಗೆ ಚಂದಾದಾರರಾಗುತ್ತಾರೋ ಅವರು ಭರಪೂರ ವೀಡಿಯೋಗಳನ್ನು ನೋಡಬಹುದು.
ಈಗಾಗಲೇ ಎಬಿಸಿ, ಇಎಸ್‌ಪಿಎನ್, ಶೋ ಟೈಮ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆ ಚಾನೆಲ್‌ಗಳೆಲ್ಲಾ ಲಭ್ಯವಿದ್ದು, ಇನ್ನು ಒಂದೊಂದಾಗೇ ಸೇರಿಕೊಳ್ಳಲಿದೆ. ಇನ್ನೊಂದು ಇಂಟರೆಸ್ಟಿಂಗ್ ವಿಚಾರ ಏನೆಂದರೆ ನೀವು ಯಾವುದೇ ಶೋಗಳನ್ನು ರೆಕಾರ್ಡ್ ಮಾಡಿಟ್ಟುಕೊಂಡು ಪುರ್ಸೊತ್ತಲ್ಲಿ ನೋಡಬಹುದು. ಇಲ್ಲಿ ಏಕಕಾಲದಲ್ಲಿ ಎರಡು ಶೋಗಳನ್ನು ರೆಕಾರ್ಡ್ ಮಾಡುವ ಸೌಲಭ್ಯ ಇದೆ. ಎರಡು ಧಾರಾವಾಹಿಗಳು ಇಷ್ಟವಿದ್ದರೆ ಎರಡೂ ಧಾರಾವಾಹಿಯನ್ನು ರೆಕಾರ್ಡ್ ಮಾಡಿಟ್ಟುಕೊಳ್ಳಬಹುದು.
ಸದ್ಯ ಈ ಟಿವಿ ಎಲ್ಲಾ ಕಡೆ ಲಭ್ಯವಿಲ್ಲ. ನಿಧಾನಕ್ಕೆ ಜಗತ್ತಿನಾದ್ಯಂತ ಸಿಗಲಿದೆ. ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್, ಕಂಪ್ಯೂಟರ್ ಮತ್ತು ಟಿವಿಗಳಲ್ಲೂ ಈ ಯೂ ಟ್ಯೂಬ್ ಟಿವಿಯನ್ನು ನೋಡಬಹುದು. ಅಂದಹಾಗೆ ಒಂದು ತಿಂಗಳಿಗೆ ನೀವು ಕಟ್ಟಬೇಕಾದ ಚಂದಾ ರೂ.2335. ಯಾವ ಸಮಯದಲ್ಲಿ ಬೇಕಾದರೂ ಚಂದದಾರಿಕೆಯನ್ನು ರದ್ದುಗೊಳಿಸುವ ಸ್ವಾತಂತ್ರ್ಯ ನಿಮಗಿರುತ್ತದೆ.
ವೆಬ್‌ಸೈಟ್- https://tv.youtube.com/welcome/
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.