
ನವದೆಹಲಿ ಸೆ(.12): ಮಾಸಿಕ ಕಂತಿನಲ್ಲಿ (ಇಎಂಐ) ಪಾವತಿಸುತ್ತೇನೆ ಎಂದು ಭರವಸೆ ನೀಡಿ ಮೊಬೈಲ್ ಖರೀದಿಸಿದ್ದೀರಾ? ಆ ಸಾಲವನ್ನು ಕಟ್ಟದೆ ಓಡಾಡುತ್ತಿದ್ದೀರಾ? ಹಾಗಿದ್ದರೆ, ನಿಮ್ಮ ಮೊಬೈಲ್ ಫೋನ್ ಲಾಕ್ ಆಗಬಹುದು!
ಭಾರತದಲ್ಲಿ ಮಾರಾಟವಾಗುವ ಮೊಬೈಲ್ ಫೋನ್ ಸೇರಿದಂತೆ ಗ್ರಾಹಕ ಬಳಕೆಯ ಎಲೆಕ್ಟ್ರಾನಿಕ್ ಉಪಕರಣಗಳ ಪೈಕಿ 3ನೇ 1ರಷ್ಟನ್ನು ಜನರು ಇಎಂಐ ಮೂಲಕವೇ ಖರೀದಿಸುತ್ತಾರೆ. ದೇಶದಲ್ಲಿ 140 ಕೋಟಿ ಜನಸಂಖ್ಯೆ ಇದ್ದು, 116 ಕೋಟಿ ಮಂದಿ ಮೊಬೈಲ್ ಸಂಪರ್ಕ ಪಡೆದಿದ್ದಾರೆ. ಹಲವು ಮಂದಿ ಕಂತಿನಲ್ಲಿ ತೀರಿಸುವುದಾಗಿ ಮೊಬೈಲ್ ಖರೀದಿಸುತ್ತಾರೆ. ಆದರೆ ಸಕಾಲಕ್ಕೆ ಪಾವತಿಸುವುದೇ ಇಲ್ಲ. ಅಂತಹ ಪದ್ಧತಿಗೆ ಕಡಿವಾಣ ಹಾಕಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮುಂದಾಗಿದೆ.
ಸಾಲ ಮರುಪಾವತಿಸದ ಗ್ರಾಹಕರ ಮೊಬೈಲ್ ಫೋನ್‌ಗಳನ್ನು ಲಾಕ್ ಮಾಡುವ ಅವಕಾಶವನ್ನು ಸಾಲದಾತ ಸಂಸ್ಥೆಗಳಿಗೆ ನೀಡಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.
ಇಎಂಐನಲ್ಲಿ ಮೊಬೈಲ್ ಖರೀದಿಸಿ, ಕಂತು ಕಟ್ಟದವರ ಮೊಬೈಲ್ ಫೋನ್‌ಗಳನ್ನು ಸಾಲದಾತ ಕಂಪನಿಗಳು ಈ ಹಿಂದೆ ಲಾಕ್ ಮಾಡುತ್ತಿದ್ದವು. ಮೊಬೈಲ್ ಸಾಲ ನೀಡುವಾಗಲೇ ಗ್ರಾಹಕನ ಮೊಬೈಲ್‌ನಲ್ಲಿ ಆ್ಯಪ್‌ವೊಂದನ್ನು ಇನ್‌ಸ್ಟಾಲ್ ಮಾಡಿ ಸಾಲ ಕಟ್ಟದೆ ಇದ್ದಾಗ ಅದರ ಮೂಲಕ ಫೋನ್ ಲಾಕ್ ಮಾಡುತ್ತಿದ್ದವು. ಆದರೆ ಇದಕ್ಕೆ ಆರ್‌ಬಿಐ ಕಳೆದ ವರ್ಷ ತಡೆಯೊಡ್ಡಿತ್ತು.
ಇದೀಗ ಸಾಲಗಾರ ಕಂಪನಿಗಳ ಜತೆ ಸಮಾಲೋಚನೆ ನಡೆಸಿ ತನ್ನ ನ್ಯಾಯಯುತ ಅಭ್ಯಾಸ ಸಂಹಿತೆಗಳನ್ನು ಕೆಲ ತಿಂಗಳಲ್ಲೇ ಮಾರ್ಪಡಿಸಲು ಆರ್‌ಬಿಐ ಮುಂದಾಗಿದೆ ಫೋನ್ ಲಾಕಿಂಗ್ ವ್ಯವಸ್ಥೆ ಕುರಿತು ಮಾರ್ಗಸೂಚಿಗಳನ್ನೂ ಬಿಡುಗಡೆ ಮಾಡಲಿದೆ. ಫೋನ್ ಲಾಕ್ ಮಾಡುವ ಕಂಪನಿಗಳು ಸಾಲ ಪಡೆದ ವ್ಯಕ್ತಿಯಿಂದ ಮೊದಲೇ ಒಪ್ಪಿಗೆ ಪಡೆದುಕೊಳ್ಳಬೇಕು. ಅವರ ಫೋನ್‌ನಲ್ಲಿನ ವೈಯಕ್ತಿಕ ಮಾಹಿತಿಯನ್ನು ಮುಟ್ಟುವಂತಿಲ್ಲ ಎಂದು ಷರತ್ತು ವಿಧಿಸಲು ಹೊರಟಿದೆ.
ಈ ಕ್ರಮ ಜಾರಿಗೆ ಬಂದರೆ ಬಜಾಜ್ ಫೈನಾನ್ಸ್, ಡಿಎಂಐ ಫೈನಾನ್ಸ್, ಚೋಳಮಂಡಲಂ ಫೈನಾನ್ಸ್‌ನಂತಹ ಕಂಪನಿಗಳಿಗೆ ಸಾಲ ವಸೂಲು ಮಾಡಲು ಭಾರಿ ಅನಕೂಲವಾಗಲಿದೆ
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.