ನಿಮ್ಮ ಉದ್ಯೋಗಕ್ಕೆ ಕನ್ನ ಹಾಕಲಿದೆ ಇದು !

Published : Oct 08, 2016, 11:05 AM ISTUpdated : Apr 11, 2018, 12:46 PM IST
ನಿಮ್ಮ ಉದ್ಯೋಗಕ್ಕೆ ಕನ್ನ ಹಾಕಲಿದೆ ಇದು !

ಸಾರಾಂಶ

ಹೆಚ್ಚು ಸಾಮರ್ಥ್ಯ ಮತ್ತು ವಿಶ್ವಾಸಾರ್ಹತೆ ಸಾಧ್ಯ ಎಂಬ ಕಾರಣಕ್ಕೆ ಉದ್ಯಮಗಳು ಆಟೋಮೇಷನ್‌ಗೆ ಮೊರೆ ಹೋಗುತ್ತಿವೆ. ನಿರುದ್ಯೋಗ ಸೃಷ್ಟಿಮತ್ತು ಆರ್ಥಿಕ ಅಸ್ಥಿರತೆಗೆ ಕಾರಣವಾಗುವ ಆಟೋಮೇಷನ್‌ ಅಭಿವೃದ್ಧಿ ಹೊಂದಿದ ಮಾತ್ರವಲ್ಲ, ಅಭಿವೃದ್ಧಿಶೀಲ ದೇಶಗಳನ್ನೂ ಕಾಡಲಿದೆ. ಇದರಿಂದಾಗಿ ಭಾರತದ ಶೇ.69ರಷ್ಟುಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ವಿಶ್ವಬ್ಯಾಂಕ್‌ ಅಧ್ಯಕ್ಷ ಜಿಮ್‌ ಕಿಮ್‌ ಎಚ್ಚರಿಕೆಯ ಹಿನ್ನೆಲೆಯಲ್ಲಿ ಭಾರತದಲ್ಲಾಗುತ್ತಿರುವ ಬೆಳವಣಿಗೆಗಳತ್ತ ಇಣುಕು ನೋಟ

-ರೇಣುಕಾಪ್ರಸಾದ್ ಹಾಡ್ಯ, ಕನ್ನಡ ಪ್ರಭ

ವಿಶ್ವಬ್ಯಾಂಕ್‌ ಅಧ್ಯಕ್ಷ ಜಿಮ್‌ ಕಿಮ್‌ ಕಳೆದವಾರ ಆಘಾತಕಾರಿಯಾದ ಸಮೀಕ್ಷೆ- ಸಂಶೋಧನೆ ಆಧರಿತ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ. ವಿಶ್ವವೇ ಬೆಚ್ಚಿಬೀಳಬೇಕಾದ ಈ ಅಂಕಿ ಅಂಶಗಳ ಬಗ್ಗೆ ಯಾರೂ ತಲೆಕೆಡಿಸಿಕೊಂಡಂತಿಲ್ಲ. ಏಕೆಂದರೆ ಜಿಮ್‌ಕಿಮ್‌ ನೀಡಿರುವ ಎಚ್ಚರಿಕೆಯಿಂದಾಗಬಹುದಾದ ಅಪಾಯ ನಮ್ಮನ್ನೆಲ್ಲ ಆವರಿಸಲು ಇನ್ನೂ ಮೂರ್ನಾಲ್ಕು ವರ್ಷಗಳು ಬೇಕಾಗುತ್ತದೆ. ಆದರೆ, ಅಪಾಯ ಮಾತ್ರ ನಮ್ಮ ಮನೆಬಾಗಿಲಿಗೆ ಬಂದು ನಿಂತಿದೆ. ಅದನ್ನು ಗುರುತಿಸುವ, ಅದರ ಅಪಾಯ​ವನ್ನು ಅಳೆಯುವ ದೂರ ದೃಷ್ಟಿಯೇ ನಮ್ಮಲ್ಲಿ ಇಲ್ಲ.


ಅಷ್ಟಕ್ಕೂ ವಿಶ್ವಬ್ಯಾಂಕ್‌ ಅಧ್ಯಕ್ಷ ಜಿಮ್‌ಕಿಮ್‌ ಅವರು ನೀಡಿದ ಎಚ್ಚರಿಕೆ ಏನು? ಆಟೋಮೇಷನ್‌ನಿಂದ ಭಾರತದಲ್ಲಿ ಶೇ.69ರಷ್ಟುಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಾರೆ. ಚೀನಾದಲ್ಲಿ ಕೆಲಸ ಕಳೆದು​ಕೊಳ್ಳು​ವವರ ಸಂಖ್ಯೆ ಶೇ.77. ಆಟೋ​ಮೇಷನ್‌​ನಿಂದಾಗಿ ಅಭಿವೃದ್ಧಿಯಾಗುತ್ತಿರುವ ರಾಷ್ಟ್ರಗಳಲ್ಲಿ ಶೇ.50-75​ರಷ್ಟುಮಂದಿ ನಿರುದ್ಯೋಗಿಗಳಾಗುತ್ತಾರೆ ಎಂಬುದು.


ಆತಂಕಕ್ಕೆ ಕಾರಣ: ಆಟೋಮೇಷನ್‌ ಅಳವಡಿಕೆ​ಯಿಂದಾಗಿ ನಿರುದ್ಯೋಗ ಸಮಸ್ಯೆ ಹೆಚ್ಚಾ​ಗಲಿದೆ. ಅಂದರೆ, ಎಲ್ಲಾ ಕೆಲಸ ಕಾರ್ಯಗಳನ್ನು ಯಾಂತ್ರೀಕೃತ​ಗೊಳಿಸುತ್ತಾ ಹೋದಂತೆ ಮಾನವಾ​ಧಾರಿತ ಕೆಲಸಗಳ ಸಂಖ್ಯೆ ಮತ್ತು ಪ್ರಮಾಣ ತಗ್ಗುತ್ತಾ ಹೋಗು​ತ್ತದೆ. ಇದು ನಿರುದ್ಯೋಗಕ್ಕೆ ಕಾರಣ​ವಾಗುತ್ತದೆ. ವಿಶ್ವಬ್ಯಾಂಕ್‌ ನಡೆಸಿರುವ ಸಮೀಕ್ಷೆ-​ಸಂಶೋಧನೆಯನ್ನಾಧರಿಸಿ ಜಿಮ್‌ ಕಿಮ್‌ ಹೇಳಿರುವ ಪ್ರಕಾರ, ಆಟೋಮೇಷನ್‌ನಿಂದಾಗಿ ಭಾರತದಲ್ಲಿ ಶೇ.69ರಷ್ಟುಮಂದಿ ಉದ್ಯೋಗ ಕಳೆದುಕೊಳ್ಳುತ್ತಾರೆ. ಅಂದರೆ, ನೂರು ಮಂದಿ ಪೈಕಿ 69 ಮಂದಿ ನಿರು​ದ್ಯೋಗಿ​​ಗಳಾ​ಗುತ್ತಾರೆ. ಆಟೋಮೇಷನ್‌ ಅಳವಡಿಕೆ​ಯ ಮೊದಲ ಬಲಿಪಶು ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸೇವಾ ವಲಯ.


ಒಂದು ಕ್ಷಣ ಯೋಚಿಸಿ. ಬೆಂಗಳೂರು ವಿಶ್ವದ ಐಟಿ ರಾಜಧಾನಿ. ದೇಶದಲ್ಲಿರುವ 50 ಲಕ್ಷ ಐಟಿ ಉದ್ಯೋಗಿಗಳ ಪೈಕಿ ಶೇ.25ರಷ್ಟುಬೆಂಗಳೂರಿನಲ್ಲೇ ಇದ್ದಾರೆ. ಅಂದರೆ, 12.50 ಲಕ್ಷ ಉದ್ಯೋಗಿಗಳು ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ​ವನ್ನಾಧ​ರಿಸಿದ ಸೇವಾ ವಲಯಗಳಲ್ಲಿ ಬೆಂಗಳೂರಿ​ನಲ್ಲಿದ್ದಾರೆ. ಬೆಂಗಳೂರಿನ 1 ಕೋಟಿ ಜನಸಂಖ್ಯೆಗೆ ಹೋಲಿಸಿದರೆ ಐಟಿ ಉದ್ಯೋಗಿಗಳ ಪ್ರಮಾಣ ಶೇ.12.50ರಷ್ಟಿದೆ. ಆದರೆ, ಬೇರೆಲ್ಲ ಉದ್ಯೋಗಗಳಿಗೆ ಹೋಲಿಸಿದರೆ ಐಟಿ ಉದ್ಯೋಗಿಗಳಿಗೆ ಹೆಚ್ಚಿನ ವೇತನ ಇರುವುದರಿಂದ ಈ ಸಿಲಿಕಾನ್‌ ಸಿಟಿಯ ಆರ್ಥಿಕತೆಗೆ ಐಟಿ ವಲಯ ಮತ್ತು ಉದ್ಯೋಗಿಗಳ ಕೊಡುಗೆ ಗಣನೀಯ. ಐಟಿ ಉದ್ಯಮ ಬೆಳೆದ ನಂತರವೇ ಬೆಂಗಳೂರಿನಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮ, ಕೇಟರಿಂಗ್‌ ಉದ್ಯಮ, ಸಾರಿಗೆ ಮತ್ತಿತರ ಪೂರಕ ಉದ್ಯಮಗಳು ತ್ವರಿತವಾಗಿ ಬೆಳೆದಿವೆ. 12.50 ಲಕ್ಷ ಐಟಿ ಉದ್ಯೋಗಿಗಳನ್ನಾಧರಿಸಿ 12.50 ಲಕ್ಷ ಮಂದಿ ಪೂರಕ ಉದ್ಯೋಗದಲ್ಲಿ ತೊಡಗಿದ್ದಾರೆ. ಇದರರ್ಥ ಒಬ್ಬ ಐಟಿ ಉದ್ಯೋಗಿ ಕೆಲಸ ಕಳೆದುಕೊಂಡರೆ ಆತನೊಬ್ಬ ಮಾತ್ರವೇ ಉದ್ಯೋಗ ಕಳೆದುಕೊಳ್ಳುವುದಿಲ್ಲ, ಅದಕ್ಕೆ ಪೂರಕ ಸೇವಾವಲಯದ ಮತ್ತೊಬ್ಬ ಉದ್ಯೋಗ ಕಳೆದುಕೊಳ್ಳುತ್ತಾನೆ.

ಜಿಮ್‌ ಕಿಮ್‌ ಲೆಕ್ಕದ ಪ್ರಕಾರವೇ ಶೇ.69ರಷ್ಟುಐಟಿ ಉದ್ಯೋಗಿಗಳು ಅಂದರೆ ಸುಮಾರು 8.50 ಲಕ್ಷ ಮಂದಿ ಉದ್ಯೋಗ ಕಳೆದು​ಕೊಂಡರೆ ಐಟಿ ವಲಯವನ್ನಾಧರಿಸಿದ ಇತರ ಸೇವಾ​ವಲಯದ 8.50ಲಕ್ಷ ಮಂದಿಯೂ ಉದ್ಯೋಗ ಕಳೆದುಕೊಳ್ಳುತ್ತಾರೆ. ಅದು ಅಂತ್ಯವಲ್ಲ. ಅಪಾಯದ ಆರಂಭ. ಐಟಿ ಉದ್ಯೋಗಿಗಳು ಕೆಲಸ ಕಳೆದು​ಕೊಂಡರೆ, ಮನೆ ಬಾಡಿಗೆಯನ್ನೇ ಜೀವನಾಧಾರ​ವಾಗಿಟ್ಟುಕೊಂಡಿರುವ ಲಕ್ಷಾಂತರ ಮಂದಿ ಮನೆ ಮಾಲೀಕರಿಗೆ ನಷ್ಟ. ಸಾವಿರಾರು ಮೆಸ್‌ಗಳಿಗೆ, ಕ್ಯಾಟರಿಂಗ್‌ ಕಂಪನಿಗಳಿಗೆ, ಬೇಕರಿ, ದರ್ಶಿನಿಗಳಿಗೆ, ಟ್ಯಾಕ್ಸಿ, ಆಟೋಗಳಿಗೆ, ಸಿನಿಮಾ ಮಾಲ್‌ಗಳಿಗೆ, ಷೋ ರೂಮ್‌ಗಳಿಗೆ ನಷ್ಟ. ಅದು ಒಂದು ಮುಖ. ಮತ್ತೊಂದು ಕರಾಳ ಮುಖ ಎಂದರೆ ಎಲ್ಲೆಲ್ಲಿ ನಿರುದ್ಯೋಗ ಹೆಚ್ಚಿದೆಯೋ ಅಲ್ಲೆಲ್ಲ ಅಪರಾಧಗಳ ಸಂಖ್ಯೆ ಹೆಚ್ಚುತ್ತಿವೆ. ಐಟಿಗಳ ವಲಯ​ದಲ್ಲಿದ್ದವರು ನಿರುದ್ಯೋಗಿಗಳಾದರೆ ಐಟಿಯಾ​ಧಾರಿತ ಅಪರಾಧಗಳ ಸಂಖ್ಯೆಯೂ ಹೆಚ್ಚಿದರೆ ಅದು ಅಸಹಜವೇನಲ್ಲ.


ಆತಂಕ ವಾಸ್ತವವೆ? ಅತಿರಂಜಿತ​ವಾದುದೇ?: ಈ ಪ್ರಶ್ನೆಗೆ ಇತ್ತೀಚಿನ ಉದ್ಯಮದ ಬೆಳವಣಿಗೆಗಳೇ ಸ್ಪಷ್ಟಉತ್ತರ ನೀಡುತ್ತವೆ. ಚೀನಾದ ಜಿಯಾನ್ಸು ಪ್ರದೇಶದ ಕುನ್‌ಶಾನ್‌ನಲ್ಲಿರುವ ಫಾಕ್ಸ್‌ಕಾನ್‌ ಸಂಸ್ಥೆ ಏಕಾಏಕಿ 60,000 ಉದ್ಯೋಗಿಗಳನ್ನು ಕೆಲಸದಿಂದ ಕಿತ್ತೊಗೆದಿದೆ. ಫಾಕ್ಸ್‌ಕಾನ್‌ ಉತ್ಪಾದನಾ ಘಟಕದಲ್ಲಿ ಇದ್ದ ಉದ್ಯೋಗಿಗಳ ಸಂಖ್ಯೆ 1.10 ಲಕ್ಷ. ಈ ಪೈಕಿ ಶೇ.55ರಷ್ಟುಉದ್ಯೋಗಿಗಳನ್ನು ಮನೆಗೆಕಳುಹಿಸಿದೆ. ಅದಕ್ಕೆ ಮುಖ್ಯ ಕಾರಣ ಆಟೋಮೇಷನ್‌. ಅಂದರೆ ಈ ಉದ್ಯೋಗಿಗಳು ಮಾಡುತ್ತಿದ್ದ ಕೆಲಸಕ್ಕೆ ಫಾಕ್ಸ್‌​ಕಾನ್‌ ರೋಬೊಗಳನ್ನು ನಿಯೋಜಿಸಿದೆ. ಫಾಕ್ಸ್‌ಕಾನ್‌ ಆಟೋ​ಮೇಷನ್‌ ಅಳವಡಿಸಿಕೊಂಡ ಪರಿಣಾಮ 60,000 ಮಂದಿ ಏಕಕಾಲಕ್ಕೆ ಉದ್ಯೋಗ ಕಳೆದು​ಕೊಂಡಿ​ರುವುದು ಮಾನವ ಇತಿಹಾಸದ ದಾಖಲೆ. ಅಷ್ಟಕ್ಕೂ ಈ ಫಾಕ್ಸ್‌ ಕಾನ್‌ ಯಾವುದೇ ಗೊತ್ತೇ? ವಿಶ್ವವಿಖ್ಯಾತ ಐಫೋನ್‌ ಉತ್ಪಾದಿಸುವ ಸಂಸ್ಥೆ. ಅದು ಚೀನಾ ಕತೆ ಆಯಿತು. 


ಭಾರತದಲ್ಲೂ ಆಟೋಮೇಷನ್‌ ಕೆಲಸ ನುಂಗುವ ಕಾರ್ಯವನ್ನಾರಂಭಿಸಿದೆ. 90 ವರ್ಷದ ಇತಿಹಾಸ ಇರುವ ದೇಶದ ಪ್ರತಿಷ್ಠಿತ ಟೆಕ್ಸ್‌ಟೈಲ್‌ ಸಂಸ್ಥೆ ರೇಮಂಡ್‌ 10,000 ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ನಿರ್ಧರಿಸಿದೆ. ಕಾರ್ಮಿಕರ ಕೆಲಸವನ್ನು ಇನ್ನು ರೋಬೊ­ಗಳು ನಿರ್ವಹಿಸಲಿವೆ. 30,000 ಉದ್ಯೋಗಿ­ಗಳಿ­ರುವ ರೇಮಂಡ್‌ ಕಂಪನಿ ಶೇ.33ರಷ್ಟುಉದ್ಯೋಗಿಗಳನ್ನು ಮನೆಗೆ ಕಳುಹಿಸಿ, ರೋಬೊಗಳನ್ನು ನಿಯೋಜಿಸುತ್ತಿದೆ. ರೇಮಂಡ್‌ ಸಿಇಒ ಸಂಜಯ್‌ ಬೆಹ್‌್ಲ ಹೇಳುವ ಪ್ರಕಾರ, ಒಂದು ರೋಬೊ 200 ಕಾರ್ಮಿಕರ ಕೆಲಸ­ವನ್ನು ನಿರ್ವ​ಹಿಸುತ್ತದೆ. ಅಂದರೆ, 50 ರೋಬೊ ನಿಯೋ​­ಜಿಸಿ 10,000 ಮಂದಿಯನ್ನು ಮನೆಗೆ ಕಳುಹಿಸುವ ತಂತ್ರ. ಭಾರತದ ಮಟ್ಟಿಗೆ ಆಟೋಮೇ­ಷನ್‌ ಐಟಿ ವಲಯದ ಉದ್ಯೋಗ ನುಂಗುವಷ್ಟೇ ಪ್ರಮಾಣದಲ್ಲಿ ಟೆಕ್ಸ್‌​ಟೈಲ್‌ ವಲಯದ ಉದ್ಯೋಗ­ಗಳನ್ನು ನುಂಗಲಿದೆ. ಮುಂಬರುವ ವರ್ಷಗಳಲ್ಲಿ ಈ ವಲಯದ 70 ಲಕ್ಷ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂಬ ಅಂದಾಜು ಇದೆ. 


ಭಾರತದ ಐಟಿ ಉದ್ಯಮದ ಯಶಸ್ಸಿಗೆ ಮೂಲ ಇಲ್ಲಿನ ಇಂಗ್ಲಿಷ್‌ ಮಾತನಾಡಬಲ್ಲ ಪರಿಣತರು. ಭಾರತ ಜಾಗತಿಕ ಹೊರಗುತ್ತಿಗೆ ಉದ್ಯಮದ ಕೇಂದ್ರ­ವಾ­ಗಲು ಈ ಪ್ರತಿಭಾವಂತರೇ ಕಾರಣ. 2008-­2015ರಲ್ಲಿ ಈ ಸಂಖ್ಯೆಗೆ ಶೇ. 9.4ರಷ್ಟುಮಂದಿ ಪದವೀ­ಧರರು ಸೇರ್ಪಡೆಯಾಗಿದ್ದಾರೆ. 2015ರ ವಿತ್ತೀಯ ವರ್ಷದಲ್ಲಿ 5.8 ಮಿಲಿಯನ್‌ ಪದವೀಧರರನ್ನು ಭಾರತ ಐಟಿ ವಲಯಕ್ಕೆ ಕೊಟ್ಟಿದೆ. ಆದರೆ ಈಗ ಉದ್ಯೋಗ ಕಳೆದುಕೊಳ್ಳುವ ಐಟಿ ವಲ­ಯದ ಆತಂಕ ನಿಜವಾಗುತ್ತಿದೆ. ಭಾರತದಲ್ಲಿ ಹೆಚ್ಚು ಕಮ್ಮಿ ಶೇ.50ರಷ್ಟುಐಟಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಾರೆ ಎಂದು ನ್ಯಾಸ್‌ಕಾಮ್‌ ಅಂದಾಜು ಮಾಡಿದೆ. ಪ್ರತಿವರ್ಷವೂ ದೊಡ್ಡಪ್ರಮಾಣದಲ್ಲಿ ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದ ಐಟಿ ದಿಗ್ಗಜಗಳಾದ ಟಿಸಿಎಸ್‌, ಇನ್‌ಫೋಸಿಸ್‌, ವಿಪ್ರೊ, ಟೆಕ್‌ ಮಹಿಂದ್ರ, ಎಂಫಸಿಸ್‌ ಮತ್ತಿತರ ಕಂಪನಿಗಳು 2015ನೇ ಸಾಲಿನಲ್ಲಿ ಶೇ.24ರಷ್ಟುಕಡಿಮೆ ಉದ್ಯೋಗಿ­ಗಳನ್ನು ನೇಮಕ ಮಾಡಿಕೊಂಡಿವೆ. ಅದಕ್ಕೆ ಮುಖ್ಯ ಕಾರಣ ಆಟೋಮೇಷನ್‌. ಕ್ಯಾಂಪಸ್‌ಗಳಲ್ಲಿ ನೇಮಕ ಮಾಡಿಕೊಳ್ಳುತ್ತಿದ್ದ ಪ್ರಮಾಣವು ಏಳು ವರ್ಷಗಳಲ್ಲೇ ಅತಿ ಕನಿಷ್ಠ ಮಟ್ಟಕ್ಕೆ ಇಳಿದಿದೆ. ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯೂಇಎಫ್‌) ಮಾಡಿರುವ ಅಂದಾಜಿನ ಪ್ರಕಾರ, ಆಟೋಮೇಷನ್‌ನಿಂದಾಗಿ 2020ರ ವೇಳೆಗೆ 50 ಲಕ್ಷ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ.


ಆಟೋಮೇಷನ್‌ ಈಗ ಎಲ್ಲೆಡೆಗೂ ವ್ಯಾಪಿಸುತ್ತಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ ಗ್ರಾಹಕರ ಸೇವೆಗೆ ರೋಬೊಗಳನ್ನು ನಿಯೋಜಿಸಿದೆ. ಐಸಿಐಸಿಐ ಬ್ಯಾಂಕ್‌ ಪ್ರಾಯೋಗಿಕವಾಗಿ 10 ಲಕ್ಷ ಖಾತೆಗಳನ್ನು ರೊಬೋಟ್‌ ನಿಯೋಜಿಸಿ ಆಟೋಮೇಷನ್‌ ವ್ಯಾಪ್ತಿಗೆ ತಂದಿದೆ. ಬೆಂಗಳೂರಿನಲ್ಲೇ ಹುಟ್ಟಿಬೆಳೆದು ವಿಶ್ವಾದ್ಯಂತ ವ್ಯಾಪಿಸಿರುವ ಇನ್‌ಫೋಸಿಸ್‌ ಸಹ ಆಟೋಮೇಷನ್‌ಗೆ ತೆರೆದುಕೊಳ್ಳುತ್ತಿದೆ. ಇತ್ತೀಚೆಗೆ ತ್ರೈಮಾಸಿಕ ಫಲಿತಾಂಶ ಪ್ರಕಟಿಸುವಾಗ ಇನ್‌ಫೋಸಿಸ್‌ ಸಿಇಒ ವಿಶಾಲ್‌ ಸಿಖ್ಖಾ ಆಟೋಮೇಷನ್‌ ಅನ್ನು ಹೆಚ್ಚು ಬಳಕೆ ಮಾಡುವುದಾಗಿ ಹೇಳಿದ್ದಾರೆ. ಕಂಪನಿಯ ಶೇ.81ರಷ್ಟುಮಾನವ ಶಕ್ತಿ ಮಾತ್ರ ಬಳಕೆಯಾಗುತ್ತಿದೆ.

ಶೇ.19ರಷ್ಟುಮಂದಿ ಬಳಕೆಯಾಗುತ್ತಿಲ್ಲ ಎಂದು ಹೇಳಿದ್ದಾರೆ. ಇದರರ್ಥ ಶೇ.19ರಷ್ಟುಮಂದಿಯನ್ನು ಮನೆಗೆ ಕಳುಹಿಸಲಾಗು­ವುದು ಎಂದೇ. ಐಟಿ ವಲಯದಲ್ಲಿ ಉದ್ಯೋಗಗಳನ್ನು ಆಟೋಮೇ­ಷನ್‌ ನುಂಗಿ ಹಾಕುವ ಬಗ್ಗೆ ನಾಸ್‌ಕಾಮ್‌ (ನ್ಯಾಷನಲ್‌ ಅಸೋಸಿಯೇಷನ್‌ ಆಫ್‌ ಸಾಫ್ಟ್‌ವೇರ್‌ ಅಂಡ್‌ ಸವೀರ್‍ಸಸ್‌ ಕಂಪನೀಸ್‌) ಕೂಡಾ ಆತಂಕ ವ್ಯಕ್ತಪಡಿ­ಸಿದೆ. ತನ್ನ ಇತ್ತೀಚಿನ ಪಸ್ರ್ಪೆಕ್ಟಿವ್‌ 2025- ಶೇಪಿಂಗ್‌ ದಿ ಡಿಜಿಟಲ್‌ ರೆವೊಲ್ಯುಷನ್‌ ವರದಿಯಲ್ಲಿ 2020ರ ವೇಳೆಗೆ ಐಟಿ ಉದ್ಯಮದ ಆದಾಯ 250 ಬಿಲಿಯನ್‌ ಡಾಲರ್‌ ದಾಟಬಹುದು ಎಂದು ಅಂದಾಜಿಸಿದೆ. ಆದರೆ ಐಟಿ ಮತ್ತು ಐಟಿ ವಲಯವನ್ನಾಧರಿಸಿದ ಮತ್ತು ಪೂರಕ ತಂತ್ರಜ್ಞಾನ ವಲಯದಲ್ಲಿ ಶೇ.50ರಷ್ಟು ಉದ್ಯೋಗಗಳನ್ನು ಆಟೋಮೇಷನ್‌ ಬದಲಾಯಿಸ­ಲಿದೆ ಎಂದು ತಿಳಿಸಿದೆ.


ಆಟೋಮೇಷನ್‌ ಭಾರತದ ಆರ್ಥಿಕತೆಗೆ ವರವಾ­ಗುವ ಬದಲು ಶಾಪವಾಗಲಿದೆ. ಇತ್ತೀಚೆಗೆ ಲೇಬರ್‌ ಬ್ಯೂರೋ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಭಾರತದ ನಿರುದ್ಯೋಗ ಪ್ರಮಾಣ 2015-­16ರಲ್ಲಿ ಶೇ.5ಕ್ಕೇರಿದೆ. ಇದು ಕಳೆದ ಆರು ವರ್ಷಗಳಲ್ಲೇ ಅಧಿಕ ಪ್ರಮಾಣ. ಅಂದರೆ, ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಮೇಕಿಂಗ್‌ ಇಂಡಿಯಾ, ಸ್ಕಿಲ್‌ ಇಂಡಿಯಾ ಯೋಜನೆಗಳನ್ನು ಜಾರಿ ಮಾಡುತ್ತಿ­ರುವುದಾಗಿ ಹೇಳಿಕೊಂಡಿದ್ದರೂ ನಿರುದ್ಯೋಗ ಪ್ರಮಾಣ ಹೆಚ್ಚುತ್ತಲೇ ಇದೆ. ಆಟೋಮೇಷನ್‌ ವ್ಯಾಪ್ತಿ ಗಣಿ, ಉತ್ಪಾದನೆ, ವಿದ್ಯುತ್‌, ಅನಿಲ ಸರಬರಾಜು, ನಿರ್ಮಾಣ, ವ್ಯಾಪಾರ, ಸಾರಿಗೆ ಮತ್ತು ಸಂಪರ್ಕ ವಲಯಗಳಿಗೂ ವಿಸ್ತಾರಗೊಂಡರೆ ಅದರಿಂದಾಗುವ ಅನುಕೂಲಗಳಿಗಿಂತ ಅಪಾಯವೇ ಹೆಚ್ಚು. 
ಬಹು ಜನರ ವೆಚ್ಚದಲ್ಲಿ ಕೆಲವರನ್ನು ಮಾತ್ರ ಶ್ರೀಮಂತ­ಗೊಳಿಸುವ ಮತ್ತು ಬಹಳ ಜನರ ಉದ್ಯೋಗಗಳನ್ನು ಕಸಿ­ಯುವ ಯಾಂತ್ರೀಕರಣವನ್ನು ನಾನು ಒಪ್ಪುವುದಿಲ್ಲ ಎಂದು ಮಹಾತ್ಮ ಗಾಂಧಿ ಹೇಳಿದ್ದು ಮಾಹಿತಿ ತಂತ್ರಜ್ಞಾನ ಯುಗಕ್ಕೂ ಹೆಚ್ಚು ಪ್ರಸ್ತುತ ಎನಿಸುತ್ತದೆ.
 

ಮೂಲ : ನಾಸಾಕಾಂ, ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾ ಸಂಸ್ಥೆ

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಘೋಸ್ಟ್‌ ಪೇರಿಂಗ್‌ ಮೂಲಕ ವಾಟ್ಸಪ್‌ ಹ್ಯಾಕ್‌ ಭೀತಿ! ಎಚ್ಚರಿಕೆ ಜಾರಿ
ಓಲಾ ಸ್ಕೂಟರ್ಸ್‌ ಮಾತ್ರವಲ್ಲ, ಸರ್ವೀಸ್‌ ವಿಚಾರದಲ್ಲಿ ಮೋಟಾರ್‌ಸೈಕಲ್‌ದೂ ಅದೇ ಕಥೆ!