ಮೊಬೈಲ್ ಇಂಟರ್ನೆಟ್ ಸ್ಪೀಡ್: ಯಾರು ಮುಂದೆ? ಯಾರು ಹಿಂದೆ? ಇಲ್ಲಿದೆ ಲೇಟೆಸ್ಟ್ ವರದಿ

By Web Desk  |  First Published Aug 22, 2019, 7:07 PM IST
  • ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಪ್ರಕಟಿಸಿರುವ ಸ್ಪೀಡ್ ಚಾರ್ಟ್
  • 4G ಡೌನ್‌ಲೋಡ್ ವೇಗ: ಜುಲೈ ತಿಂಗಳಲ್ಲಿ ರಿಲಯನ್ಸ್ ಜಿಯೋ ಪ್ರಥಮ 
  • 3G ಸೇವೆಯಲ್ಲಿ ಸರ್ಕಾರಿ ಸ್ವಾಮ್ಯದ BSNLಗೆ ಮೊದಲ ಸ್ಥಾನ

ಬೆಂಗಳೂರು (ಆ.22): ಅತ್ಯಂತ ವೇಗದ ಇಂಟರ್ನೆಟ್ ಸೇವೆ ಒದಗಿಸುವುದರಲ್ಲಿ ರಿಲಯನ್ಸ್ ಜಿಯೋ ಮೊದಲನೇ ಸ್ಥಾನವನ್ನು ಜುಲೈಯಲ್ಲೂ ಕಾಪಾಡಿಕೊಂಡಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಇತ್ತೀಚೆಗೆ ಬಿಡುಗಡೆಗೊಳಿಸಿರುವ ವರದಿಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದೆ.

ಪ್ರತಿ ಸೆಕೆಂಡಿಗೆ 21 ಮೆಗಾಬಿಟ್ಸ್ (Mbps) ಸರಾಸರಿ ಡೌನ್‌ಲೋಡ್ ವೇಗದೊಂದಿಗೆ ಜಿಯೋ ಮೊದಲನೇ ಸ್ಥಾನದಲ್ಲಿದ್ದರೆ,  ಅಪ್‌ಲೋಡ್ ವೇಗದಲ್ಲಿ ವೋಡಾಫೋನ್ ಪ್ರಥಮ ಸ್ಥಾನ ಪಡೆದುಕೊಂಡಿದೆ.

Tap to resize

Latest Videos

undefined

ಜೂನ್ ತಿಂಗಳಿನಲ್ಲಿ 17.6 Mbps 4ಜಿ ಡೌನ್‌ಲೋಡ್ ವೇಗ ದಾಖಲಿಸಿದ್ದ ಜಿಯೋ, ಜುಲೈನಲ್ಲಿ 21 Mbps ತಲುಪುವ ಮೂಲಕ ವೇಗವನ್ನು ಉತ್ತಮಪಡಿಸಿಕೊಂಡಿದೆ.

ಟ್ರಾಯ್ ಪ್ರಕಟಿಸಿರುವ ಸ್ಪೀಡ್ ಚಾರ್ಟ್ ಪ್ರಕಾರ ಏರ್‌ಟೆಲ್, ವೋಡಾಫೋನ್ ಹಾಗೂ ಐಡಿಯಾ ಸೆಲ್ಯುಲರ್ ಅನುಕ್ರಮವಾಗಿ 8.8 Mbps, 7.7 Mbps ಹಾಗೂ 6.6 Mbps ಸರಾಸರಿ ಡೌನ್‌ಲೋಡ್ ವೇಗವನ್ನು ದಾಖಲಿಸಿವೆ.

ಇದನ್ನೂ ಓದಿ | ನೂತನ ಸಚಿವರನ್ನು ಸಂಪರ್ಕಿಸ್ಬೇಕಾ? ಇಲ್ಲಿದೆ ಸುಲಭ ಐಡಿಯಾ!

ಜುಲೈ ತಿಂಗಳಿನಲ್ಲಿ 2.5 Mbps ಸರಾಸರಿ ಡೌನ್‌ಲೋಡ್ ವೇಗದೊಡನೆ ಸರ್ಕಾರಿ ಒಡೆತನದ BSNL ಅತಿವೇಗದ 3G ಜಾಲವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2 Mbps ಸರಾಸರಿ ಡೌನ್‌ಲೋಡ್ ವೇಗದೊಡನೆ ಐಡಿಯಾ, 1.9 Mbpsನೊಡನೆ ವೋಡಾಫೋನ್ ಹಾಗೂ 1.4 Mbpsನೊಡನೆ ಏರ್‌ಟೆಲ್ ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ.  

ಜುಲೈನಲ್ಲಿ 5.8 Mbps ಸರಾಸರಿ ಅಪ್‌ಲೋಡ್ ವೇಗದೊಡನೆ ವೋಡಾಫೋನ್ ಅತಿವೇಗದ 4G ಅಪ್‌ಲೋಡ್ ಜಾಲವಾಗಿ ಹೊರಹೊಮ್ಮಿದೆ. 5.3 Mbps ಅಪ್‌ಲೋಡ್ ವೇಗದೊಡನೆ ಐಡಿಯಾ ಸೆಲ್ಯುಲರ್, 4.3 Mbpsನೊಡನೆ ಜಿಯೋ ಹಾಗೂ 3.2 Mbpsನೊಡನೆ ಏರ್‌ಟೆಲ್, ಈ ಪಟ್ಟಿಯಲ್ಲಿ ನಂತರದ ಸ್ಥಾನಗಳನ್ನು ಪಡೆದಿವೆ.

ಬಳಕೆದಾರರು ಯಾವುದೇ ವೀಡಿಯೋ ವೀಕ್ಷಿಸಲು, ಅಂತರಜಾಲ ತಾಣಗಳನ್ನು ಬ್ರೌಸ್ ಮಾಡಲು, ಇಮೇಲ್‌ ಸಂದೇಶಗಳನ್ನು ಪಡೆದುಕೊಳ್ಳಲು ಡೌನ್‌ಲೋಡ್ ವೇಗ ಉತ್ತಮವಾಗಿರಬೇಕಾದ್ದು ಅತ್ಯಗತ್ಯ. ಇದೇ ರೀತಿ ಗ್ರಾಹಕರು ಇಮೇಲ್ ಅಥವಾ ಸೋಶಿಯಲ್ ಮೀಡಿಯಾ ಅಪ್ಲಿಕೇಶನ್‌ಗಳ ಮೂಲಕ ಚಿತ್ರ, ವೀಡಿಯೋ ಮತ್ತಿತರ ಫೈಲ್ ಗಳನ್ನು ಹಂಚಿಕೊಳ್ಳಲು ಅಪ್‌ಲೋಡ್ ವೇಗ ಉತ್ತಮವಾಗಿರಬೇಕಾಗುತ್ತದೆ.    

3G ಜಾಲಗಳ ಪೈಕಿ ಬಿಎಸ್‌ಎನ್‌ಎಲ್, ವೋಡಾಫೋನ್ ಹಾಗೂ ಐಡಿಯಾ ಜುಲೈ ತಿಂಗಳಿನಲ್ಲಿ 1.2 Mbps ಸರಾಸರಿ ಅಪ್‌ಲೋಡ್ ವೇಗ ದಾಖಲಿಸಿದರೆ, ಏರ್‌ಟೆಲ್‌ನ ಅಪ್‌ಲೋಡ್ ವೇಗ 0.6 Mbpsಗಳಷ್ಟಿತ್ತು.

click me!