ಏರ್'ಟೆಲ್'ಗಿಂತ ಜಿಯೋ ವೇಗ ದುಪ್ಪಟ್ಟು!

By Suvarna Web DeskFirst Published Apr 4, 2017, 8:18 AM IST
Highlights

* ತನ್ನದೇ ಹೆಚ್ಚು ಸ್ಪೀಡು ಎಂದು ಏರ್'ಟೆಲ್ ಹೇಳಿಕೊಂಡಿದ್ದು ಸುಳ್ಳೇ?
* ಜಿಯೋ ಕಂಪನಿ ಇಂಟರ್ನೆಟ್‌ ವೇಗದಲ್ಲೂ ನಂ.1: ಕೇಂದ್ರದ ಟ್ರಾಯ್‌'ನಿಂದಲೇ ಘೋಷಣೆ
* ಏರ್'ಟೆಲ್'ಗೆ ನಂಬರ್ ಒನ್ ಸ್ಥಾನ ಕೊಟ್ಟಿದ್ದ ಊಕ್ಲಾ ಕಂಪನಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಸರಿಯಾದ ಮಾನದಂಡಗಳನ್ನಿಟ್ಟುಕೊಂಡು ಸಮೀಕ್ಷೆ ಮಾಡಿದ್ದೇವೆ ಎಂದು ಊಕ್ಲಾ ಹೇಳಿಕೊಂಡಿದೆ.

ನವದೆಹಲಿ: ಶರವೇಗದಲ್ಲಿ ಗ್ರಾಹಕರನ್ನು ಸೆಳೆದ ರಿಲಯನ್ಸ್‌ ಜಿಯೋ ಕಂಪನಿ ಇಂಟರ್ನೆಟ್‌ ವೇಗದಲ್ಲೂ ನಂ.1 ಎಂದು ಕೇಂದ್ರ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌)ವೇ ಘೋಷಿಸಿದೆ. ಇದರಿಂದಾಗಿ ದೇಶದ ಅತ್ಯಂತ ವೇಗದ ನೆಟ್‌ವರ್ಕ್ ಎಂದು ಜಾಹೀರಾತು ನೀಡುತ್ತಿದ್ದ ಏರ್‌'ಟೆಲ್‌ ಕಂಪನಿಗೆ ಮತ್ತೆ ಮುಖಭಂಗವಾಗಿದೆ.

ಫೆಬ್ರವರಿಯಲ್ಲಿ ಜಿಯೋ ಡೌನ್‌ಲೋಡ್‌ ಸ್ಪೀಡ್‌ 17.42 ಎಂಬಿಪಿಎಸ್‌ನಿಂದ 16.48 ಎಂಬಿಪಿಎಸ್‌'ಗೆ ಇಳಿದಿದೆಯಾದರೂ, ವೇಗದಲ್ಲಿ ನಂಬರ್‌ 1 ಸ್ಥಾನದಲ್ಲೇ ಇದೆ. ಇಷ್ಟು ವೇಗದ ಇಂಟರ್ನೆಟ್‌ ಇದ್ದರೆ ಐದು ನಿಮಿಷದೊಳಗೆ ಒಂದು ಚಲನಚಿತ್ರ ಡೌನ್‌'ಲೋಡ್‌ ಮಾಡಬಹುದಾಗಿದೆ ಎಂದು ಟ್ರಾಯ್‌ ತಿಳಿಸಿದೆ.

Latest Videos

ಪ್ರತಿಸ್ಪರ್ಧಿ ಕಂಪನಿಗಳಾದ ಐಡಿಯಾ ಸೆಲ್ಯುಲರ್‌ (8.33 ಎಂಬಿಪಿಎಸ್‌) ಹಾಗೂ ಏರ್‌'ಟೆಲ್‌ (7.66 ಎಂಬಿಪಿಎಸ್‌)ಗಳಿಗೆ ಹೋಲಿಸಿದರೆ ಜಿಯೋ ಇಂಟರ್ನೆಟ್‌ ವೇಗ ಎರಡು ಪಟ್ಟು ಅಧಿಕವಾಗಿದೆ. 

ಇಂಟರ್ನೆಟ್‌ ವೇಗ ಅರಿಯಲು ಗ್ರಾಹಕರು ಬಳಸುವ ಮೈಸ್ಪೀಡ್‌ ಆ್ಯಪ್‌'ನ ಮಾಹಿತಿ ಬಳಸಿ ಈ ಲೆಕ್ಕಾಚಾರವನ್ನು ಟ್ರಾಯ್‌ ನಡೆಸಿದೆ. ವೇಗದ ಇಂಟರ್ನೆಟ್‌ ವಿಚಾರವಾಗಿ ಜಿಯೋ ಹಾಗೂ ಏರ್‌'ಟೆಲ್‌ ನಡುವೆ ಕದನವೇರ್ಪಟ್ಟಿತ್ತು. ತನ್ನದು ಅತ್ಯಂತ ವೇಗದ ಇಂಟರ್ನೆಟ್‌ ಎಂದು ಖಾಸಗಿ ಕಂಪನಿ ಊಕ್ಲಾ ಹೇಳಿದೆ ಎಂದು ಏರ್‌'ಟೆಲ್‌ ಜಾಹೀರಾತು ನೀಡಿತ್ತು. ಇದಕ್ಕೆ ಜಿಯೋ ಆಕ್ಷೇಪಣೆ ತೆಗೆದು ಜಾಹೀರಾತು ಗುಣಮಟ್ಟಮಂಡಳಿಗೆ ದೂರು ನೀಡಿತ್ತು. ಏರ್‌'ಟೆಲ್‌ನ ಜಾಹೀರಾತು ದಾರಿತಪ್ಪಿಸುವಂತಹದ್ದು ಎಂದು ಆ ಮಂಡಳಿ ಕೂಡ ಹೇಳಿತ್ತು.

ಆದರೆ, ಏರ್'ಟೆಲ್'ಗೆ ನಂಬರ್ ಒನ್ ಸ್ಥಾನ ಕೊಟ್ಟಿದ್ದ ಊಕ್ಲಾ ಕಂಪನಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಸರಿಯಾದ ಮಾನದಂಡಗಳನ್ನಿಟ್ಟುಕೊಂಡು ಸಮೀಕ್ಷೆ ಮಾಡಿದ್ದೇವೆ ಎಂದು ಊಕ್ಲಾ ಹೇಳಿಕೊಂಡಿದೆ.

ಯಾವ ನೆಟ್ವರ್ಕ್'ನ ಇಂಟರ್ನೆಟ್ ಎಷ್ಟು ಸ್ಪೀಡು?(ಎಂಬಿಪಿಎಸ್'ನಲ್ಲಿ)
ಜಿಯೋ: 16.48
ಐಡಿಯಾ: 8.33
ಏರ್'ಟೆಲ್: 7.66
ವೊಡಾಫೋನ್: 5.66
ರಿಲಾಯನ್ಸ್: 2.67
ಡೊಕೊಮೊ: 2.52
ಬಿಎಸ್ಸೆನ್ನೆಲ್: 2.01
ಏರ್'ಸೆಲ್: 2.01

(epaper.kannadaprabha.in)

click me!