ಜಿಯೋಗೆ ಬೆವರಿಳಿಸುವ ಸುದ್ದಿ; ಡೇಟಾವೈಂಡ್'ನಿಂದ ಕೇವಲ 20 ರೂ.ಗೆ ಡೇಟಾ ಆಫರ್?

By Suvarna Web DeskFirst Published Mar 31, 2017, 3:15 PM IST
Highlights

ತಿಂಗಳಿಗೆ 20 ರೂ ಅಥವಾ ಅದಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಡೇಟಾ ಪ್ಯಾಕೇಜ್'ಗಳನ್ನು ಕೊಡತ್ತದೆ ಎಂದು ಡೇಟಾವೈಂಡ್ ಸಂಸ್ಥೆಯ ಮುಖ್ಯಸ್ಥ ಸುನೀತ್ ಸಿಂಗ್ ತುಲಿ ಹೇಳಿಕೊಂಡಿದ್ದಾರೆ.

ನವದೆಹಲಿ(ಮಾ. 31): ರಿಲಾಯನ್ಸ್ ಜಿಯೋ ಅಖಾಡಕ್ಕೆ ಬಂದಾಗಿನಿಂದ ಟೆಲಿಕಾಂ ವಲಯದಲ್ಲಿ ಡೇಟಾ ಸಮರ ಬಲುಜೋರಾಗಿ ನಡೆಯುತ್ತಿದೆ. ದುಬಾರಿ ಹಣ ತೆತ್ತು ಡೇಟಾ ಪಡೆಯುತ್ತಿದ್ದ ಗ್ರಾಹಕರಿಗಂತೂ ಸುಗ್ಗಿಯೇ ಸೃಷ್ಟಿಯಾಗಿದೆ. ಈ ಬೆಲೆ ಸಮರಕ್ಕೆ ಡೇಟಾವೈಂಡ್ ಕೂಡ ಧುಮುಕಲು ತಯಾರಿ ನಡೆಸಿದೆ. ರಿಲಾಯನ್ಸ್ ಜಿಯೋ 300 ರೂಪಾಯಿಗೆ ಕೊಡೋದನ್ನ ಡೇಟಾವೈಂಡ್ ಕೇವಲ 20 ರೂಪಾಯಿಗೆ ಕೊಡಲು ಯೋಜಿಸುತ್ತಿದೆ.

ವಿಶ್ವದ ಅತ್ಯಂತ ಅಗ್ಗದ ಟ್ಯಾಬ್ಲೆಟ್ ಎನ್ನಲಾಗಿದ್ದ ಆಕಾಶ್ ಟ್ಯಾಬ್ಲೆಟ್'ನ ತಯಾರಕವಾಗಿರುವ ಡೇಟಾವೈಂಡ್ ಸಂಸ್ಥೆಯು ಭಾರತದಲ್ಲಿ ವರ್ಚುವಲ್ ನೆಟ್ವರ್ಕ್ ಆಪರೇಟರ್(ವಿಎನ್'ಓ) ಪರವಾನಗಿಗೆ ಅರ್ಜಿ ಸಲ್ಲಿಸಿದೆ. ಲೈಸೆನ್ಸ್ ಸಿಕ್ಕ ಬಳಿಕ ಆರು ತಿಂಗಳಲ್ಲಿ ಕಂಪನಿಯು 100 ಕೋಟಿ ರೂ ಬಂಡವಾಳ ಹೂಡಿಕೆ ಮಾಡಲಿದೆ. ಏರ್ಟೆಲ್, ಜಿಯೋ, ವೊಡಾಫೋನ್ ಮೊದಲಾದ ಈಗಿರುವ ಟೆಲಿಕಾಂ ಆಪರೇಟರ್'ಗಳೊಂದಿಗಿನ ಸಹಕಾರದಲ್ಲಿ ಡೇಟಾವೈಂಡ್'ನ ಸೇವೆ ಕಾರ್ಯನಿರ್ವಹಿಸಲಿದೆ. ವರ್ಷಕ್ಕೆ 200 ರೂಪಾಯಿಗೆ ಗ್ರಾಹಕರಿಗೆ ಡೇಟಾ ಆಫರ್ ಕೊಡಲು ನಿರ್ಧರಿಸಿದೆ. ಆದರೆ, ಎಷ್ಟು ಡೇಟಾ ಕೊಡುತ್ತದೆ ಎಂಬ ವಿವರ ಸದ್ಯಕ್ಕಂತೂ ತಿಳಿದಿಲ್ಲ.

ಡೇಟಾವೈಂಡ್ ಸಂಸ್ಥೆ ಹೇಳಿಕೊಳ್ಳುವ ಪ್ರಕಾರ, ಇಂಟರ್ನೆಟ್'ಗಾಗಿ ತಿಂಗಳಿಗೆ ಸುಮಾರು ಒಂದು ಸಾವಿರ ರೂಪಾಯಿ ವ್ಯಯಿಸುತ್ತಿದ್ದ ಜನರಿಗೆ ರಿಲಾಯನ್ಸ್ ಜಿಯೋ ಅವರ 300 ರೂಪಾಯಿ ಪ್ಯಾಕೇಜು ರಿಲೀಫ್ ಕೊಟ್ಟಿದೆ. ಇಂಥವರ ಸಂಖ್ಯೆ 30 ಕೋಟಿ ಇರಬಹುದು. ಆದರೆ, ಇನ್ನುಳಿದ ಬಹಳಷ್ಟು ಜನರು ತಿಂಗಳಿಗೆ ಕೇವಲ 90 ರೂಪಾಯಿ ಮಾತ್ರ ಖರ್ಚು ಮಾಡಬಲ್ಲಷ್ಟು ಶಕ್ಯರು. ಇಂಥವರಿಗಾಗಿ ಡೇಟಾವೈಂಡ್ ತಿಂಗಳಿಗೆ 20 ರೂ ಅಥವಾ ಅದಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಡೇಟಾ ಪ್ಯಾಕೇಜ್'ಗಳನ್ನು ಕೊಡತ್ತದೆ ಎಂದು ಡೇಟಾವೈಂಡ್ ಸಂಸ್ಥೆಯ ಮುಖ್ಯಸ್ಥ ಸುನೀತ್ ಸಿಂಗ್ ತುಲಿ ಹೇಳಿಕೊಂಡಿದ್ದಾರೆ.

click me!