
ಈಗ ತಂತ್ರಜ್ಞಾನ ಸಿಕ್ಕಾಪಟ್ಟೆ ಮುಂದುವರೆದಿದೆ. ಅದರಲ್ಲಿಯೂ ಚಾಟ್‌ಜಿಪಿಟಿ ತಂತ್ರಜ್ಞಾನ ಬಳಸಿಕೊಂಡು ಏನೇನು ಮಾಡಲಾಗುತ್ತಿದೆಯೋ ಆ ದೇವರಿಗೇ ಗೊತ್ತು. ಈಗ ಬರುವ ಯಾವುದಾದರೂ ವಿಡಿಯೋಗಳು ನಕಲಿಯೋ, ಅಸಲಿಯೋ ಎಂದು ತಿಳಿಯದ ಸಂಕಷ್ಟವೂ ಎದುರಾಗಿದೆ. ರಾಷ್ಟ್ರಪತಿ, ಪ್ರಧಾನಿಯಿಂದ ಹಿಡಿದು ಚಿಕ್ಕಪುಟ್ಟ ಜನರಂತೆ ಹೋಲುವ ವ್ಯಕ್ತಿಯನ್ನು ಮಾಡಿ, ಇಲ್ಲವೇ ಅವರ ಬಾಯಲ್ಲಿಯೇ ಏನೇನೋ ಎಡವಟ್ಟುಗಳನ್ನು ಹೇಳಿಸಿ ಟ್ರೋಲ್ ಮಾಡುವುದೂ ನಡೆದೇ ಇದೆ. ಇಲ್ಲವೇ ಯಾವುದೋ ಒಂದು ಕಾಂಟ್ರವರ್ಸಿಯ ಹೇಳಿಕೆ ಹೇಳಿದಂತೆ ಮಾಡಿ, ಅದನ್ನು ವೈರಲ್ ಮಾಡಿ, ಆ ವ್ಯಕ್ತಿಯನ್ನು ಕಂಡರೆ ಆಗದವರು ಅದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡು, ಅದರ ಸತ್ಯಾಸತ್ಯತೆ ಪರಿಶೀಲಿಸದವರು ಅದನ್ನೇ ನಿಜವೆಂದು ನಂಬುವುದು... ಅಬ್ಬಾ ಈ ತಂತ್ರಜ್ಞಾನ ಮಾಡುತ್ತಿರುವ ಕಿತಾಪತಿಗಳು ಒಂದಲ್ಲಾ ಎರಡಲ್ಲ...
ಆದರೆ ಇದೇ ತಂತ್ರಜ್ಞಾನ ಬಳಸಿಕೊಂಡು ನಮ್ಮ ಅಗತ್ಯ ಕೆಲಸಗಳನ್ನೂ ಮಾಡಿಕೊಳ್ಳಬಹುದು, ಕೆಲವೊಂದು ಕೆಲಸಗಳನ್ನು ಸುಲಭವಾಗಿ ನೆರವೇರಿಸಿಕೊಳ್ಳಬಹುದು. ಅದಕ್ಕೆ ಉದಾಹರಣೆಯಾಗಿದ್ದು, ಈಗ ವೈರಲ್ ಆಗ್ತಿರೋ ವಿಡಿಯೋ. ಇದರಲ್ಲಿ ಕನ್ನಡ ಬಾರದ ವಿದ್ಯಾರ್ಥಿಯೊಬ್ಬ ಆಟೋ ಚಾಲಕನ ಜೊತೆ ಚೌಕಾಸಿ ಮಾಡಲು ಚಾಟ್ ಜಿಪಿಟಿಯನ್ನು ಬಳಸಿಕೊಂಡಿದ್ದಾನೆ. ಇವನ ಈ ಕೆಲಸಕ್ಕೆ ಮೆಚ್ಚಿ ಚಾಲಕ 30 ರೂಪಾಯಿ ಕಡಿಮೆ ಕೇಳಿದ್ದಾನೆ. ಅಷ್ಟಕ್ಕೂ ಬೆಂಗಳೂರಿನಲ್ಲಿ ಆಟೊ ರೇಟಿನ ಬಗ್ಗೆ ಹೇಳುವುದೇ ಬೇಡ ಬಿಡಿ. ಮಿನಿಮಮ್ ಚಾರ್ಜೇ 80-100 ರೂಪಾಯಿ ಅನ್ನುವ ಮಟ್ಟಿಗೆ ಬಂದು ಬಿಟ್ಟಿದೆ. ಸಮೀಪ ಇದ್ದರೂ ಬರಲ್ಲ, ದೂರ ಇದ್ದರೂ ಬರಲ್ಲ. ಬಾಯಿ ಬಿಟ್ಟರೆ 200-300 ರೂಪಾಯಿ! ಇದು ಬಹುತೇಕ ಆಟೋ ಚಾಲಕರ ಮಾತೇ. ಅಪರೂಪಕ್ಕೆ ಎಂಬಂತೆ ಕೆಲವು ಆಟೋ ಚಾಲಕರು ಪ್ರಾಮಾಣಿಕವಾಗಿ ಕರೆದುಕೊಂಡು ಹೋಗುವುದು ಇದೆ.
ಡ್ರೋನ್ನಲ್ಲಿ ಬಂದ ಹಾರ ವರನ ಕೊರಳ ಬದ್ಲು ಸಿಕ್ಕಾಕ್ಕೊಂಡಿದ್ದೇ ಬೇರೆ ಕಡೆ! ಮದುಮಗ ಕಕ್ಕಾಬಿಕ್ಕಿ... ವಿಡಿಯೋ ವೈರಲ್
ಇದೀಗ ಹೊರ ರಾಜ್ಯದ ವಿದ್ಯಾರ್ಥಿ ಬೇರೆ. ಎಲ್ಲೋ ಹೋಗಲು 150 ಹೇಳಿದ್ದಾರೆ ಆಟೋ ಚಾಲಕ. ಅದಕ್ಕೆ ಕಡಿಮೆ ಮಾಡಿಕೊಳ್ಳುವಂತೆ ಹೇಳಿದರೆ ಅದು ಚಾಲಕನಿಗೆ ಅರ್ಥವಾಗಲಿಲ್ಲ. ಆಗ ವಿದ್ಯಾರ್ಥಿ ಚಾಟ್‌ಜಿಪಿಟಿ ನೆರವು ಪಡೆದು, ನಾನು ವಿದ್ಯಾರ್ಥಿ. ಸ್ವಲ್ಪ ಕಡಿಮೆ ಹಣ ಪಡೆಯುವಂತೆ ಆಟೋ ಚಾಲಕನಿಗೆ ಹೇಳು. ಆದರೆ ಭಾಷಾ ಪ್ರಯೋಗ ತುಂಬಾ ಸೌಮ್ಯವಾಗಿರಲಿ ಎಂದಿದ್ದಾನೆ. ಅದರಂತೆ ಚಾಟ್‌ಜಿಪಿಟಿ, ಅಣ್ಣಾ... ಎನ್ನುವ ಮೂಲಕ ವಿದ್ಯಾರ್ಥಿಯ ಮನಸ್ಸಿನ ಭಾವನೆಗಳನ್ನು ಹೇಳಿದೆ. ಕೊನೆಗೆ ಆಟೋ ಚಾಲಕ, ನಾನು 150 ರೂಪಾಯಿ ಹೇಳಿದ್ದೆ. ಈಗ ಬೇಕಿದ್ರೆ 30 ರೂಪಾಯಿ ಕಡಿಮೆ ಮಾಡಿ 120 ಮಾಡಿಕೊಳ್ತೇನೆ. ಅದಕ್ಕಿಂತ ಕಡಿಮೆ ಆಗಲ್ಲ ಎಂದಿದ್ದಾರೆ. ಕೊನೆಗೆ ವಿದ್ಯಾರ್ಥಿ ಒಪ್ಪಿಕೊಂಡು ಹೋಗಿದ್ದಾನೆ.
ಇದಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಆಟೋ ಚಾಲಕ ಹೀಗೆ ಬಾಯಿಗೆ ಬಂದಂತೆ ಕೇಳುವುದೇ ಮೊದಲು ತಪ್ಪು. ಎಲ್ಲಿಗೆ ಹೋಗುವುದಿದ್ದರೂ ಮೊದಲು ಮೀಟರ್ ಹಾಕುವಂತೆ ತಾಕೀತು ಮಾಡಬೇಕು ಎಂದಿದ್ದಾರೆ. ಅದು ಸಾಧ್ಯವಿಲ್ಲದ ಮಾತು ಎಂದು ಮತ್ತೆ ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ. ಆಟೋ ಚಾಲಕರು ಹಣ ವಸೂಲಿ ಮಾಡುವ ಬಗ್ಗೆನೇ ಕಮೆಂಟ್ ಬಾಕ್ಸ್ಗಳು ತುಂಬಿ ಹೋಗಿವೆ. ಒಂದೇ ಕಿಲೋ ಮೀಟರ್ ದೂರ ಇದ್ದರೂ ನೂರು ರೂಪಾಯಿ ಕೊಡಬೇಕಾಗಿ ಬಂತು ಎಂದು ಒಬ್ಬರು ಬರೆದುಕೊಂಡಿದ್ದರೆ, ನಾನು ಎಷ್ಟೋ ಬಾರಿ ಮೋಸ ಹೋಗಿದ್ದೇನೆ. ಆದ್ದರಿಂದ ಓಲಾ ಕ್ಯಾಬ್ ಬುಕ್ ಮಾಡುತ್ತೇನೆ. ಅದರಲ್ಲಿ ಸ್ವಲ್ಪ ಹಣ ಜಾಸ್ತಿಯಾದರೂ ಮಾಮೂಲಿನ ಆಟೋದವರು ಪಡೆದಂತೆ ಪಡೆಯುವುದಿಲ್ಲ ಎನ್ನುವುದೇ ಸಮಾಧಾನ ಎಂದು ಬರೆದಿದ್ದಾರೆ.
ಘಿಬ್ಲಿ ಫೋಟೋ ಬಳಸ್ತಿದ್ದೀರಾ? ಗೋಳೋ ಎಂದು ಅಳುವ ಮೊದ್ಲು ಸೈಬರ್ ಕ್ರೈಂನವರ ಈ ಎಚ್ಚರಿಕೆ ಕೇಳಿಬಿಡಿ...
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.