
ಮದ್ಯಪಾನ ಅಥವಾ ಧೂಮಪಾನಕ್ಕಿಂತಲೂ ಅತಿ ದೊಡ್ಡ ವ್ಯಸನ
ಇಂದಿನ ಕಾಲದಲ್ಲಿ ಮಗು ಹುಟ್ಟುತ್ತಲೇ ಅಮ್ಮನ ಹಾಲಿಗಿಂತ ಹೆಚ್ಚಾಗಿ ಮೊಬೈಲ್ ಸ್ಕ್ರೀನ್ ಮೇಲೆ ಕಣ್ಣಿಡುತ್ತಿದೆ. ಊಟ ಮಾಡಿಸಬೇಕೆಂದರೆ ಯೂಟ್ಯೂಬ್ ಬೇಕು, ಮಗು ಅಳಬಾರದೆಂದರೆ ಕೈಲಿ ಸ್ಮಾರ್ಟ್‌ಫೋನ್ ಇರಬೇಕು. ಆದರೆ ನೆನಪಿಡಿ, ನೀವು ಪ್ರೀತಿಯಿಂದ ಮಗುವಿನ ಕೈಗೆ ಕೊಡುತ್ತಿರುವ ಆ ಮೊಬೈಲ್ ಇದೆಯಲ್ಲ, ಅದು ಮದ್ಯಪಾನ ಅಥವಾ ಧೂಮಪಾನಕ್ಕಿಂತಲೂ ಅತಿ ದೊಡ್ಡ ವ್ಯಸನವಾಗಿ ಬದಲಾಗುತ್ತಿದೆ! ಹೌದು, ಇದು ಕೇಳಲು ವಿಚಿತ್ರ ಅನ್ನಿಸಬಹುದು, ಆದರೆ ಸೋಷಿಯಲ್ ಮೀಡಿಯಾ ಇಂದು ಮಕ್ಕಳ ಪಾಲಿಗೆ 'ಸೈಲೆಂಟ್ ಕಿಲ್ಲರ್' ಆಗಿ ಪರಿಣಮಿಸಿದೆ.
ರೀಲ್ಸ್ ಲೋಕದ ಮಾಯಾಜಾಲ - ಮಕ್ಕಳ ಮನಸ್ಸಿಗೆ ವಿಷ!
ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಬರುವ 15 ಸೆಕೆಂಡಿನ ರೀಲ್ಸ್‌ಗಳು ಮಕ್ಕಳ ಮೆದುಳನ್ನು 'ಡೋಪಮೈನ್ ಲೂಪ್' (Dopamine Loop) ಎಂಬ ಸುಳಿಗೆ ತಳ್ಳುತ್ತವೆ. ಯಾವುದೋ ಒಬ್ಬ ಇನ್ ಫ್ಲುಯೆನ್ಸರ್ ಐಷಾರಾಮಿ ಜೀವನ ನಡೆಸುವುದನ್ನು ನೋಡಿ, ಮಗು ತನ್ನ ಬದುಕನ್ನು ಅವರೊಂದಿಗೆ ಹೋಲಿಸಿಕೊಳ್ಳಲು ಶುರು ಮಾಡುತ್ತದೆ. "ನನ್ನ ಹತ್ತಿರ ಆ ಆಟಿಕೆ ಇಲ್ಲ ಯಾಕೆ?", "ನಾನು ಅವರಷ್ಟು ಸುಂದರವಾಗಿಲ್ಲವೇ?" ಎಂಬ ಕೀಳರಿಮೆ ಚಿಕ್ಕ ವಯಸ್ಸಿನಲ್ಲೇ ಮಕ್ಕಳಲ್ಲಿ ಖಿನ್ನತೆ ಮತ್ತು ಆತಂಕಕ್ಕೆ (Depression and Anxiety) ಕಾರಣವಾಗುತ್ತಿದೆ. ಲೈಕ್ಸ್ ಮತ್ತು ಕಾಮೆಂಟ್‌ಗಳಿಗಾಗಿ ಹಪಹಪಿಸುವ ಈ ಹಾದಿ, ಮಕ್ಕಳನ್ನು ಮಾನಸಿಕವಾಗಿ ಹೈರಾಣು ಮಾಡುತ್ತಿದೆ.
ಹಗಲಿಡೀ ಮೊಬೈಲ್, ರಾತ್ರಿಯಿಡೀ ಗೇಮ್ಸ್! ಇದರಿಂದಾಗಿ ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ದಪ್ಪನೆಯ ಕನ್ನಡಕ ಬರುತ್ತಿದೆ. ಸ್ಕ್ರೀನ್‌ನಿಂದ ಹೊರಸೂಸುವ ನೀಲಿ ಬೆಳಕು ಮಕ್ಕಳ ಮೆದುಳಿನ 'ಮೆಲಟೋನಿನ್' (Melatonin) ಹಾರ್ಮೋನ್ ಮೇಲೆ ದಾಳಿ ಮಾಡುತ್ತದೆ. ಇದರಿಂದ ನಿದ್ರೆಯ ಮಾದರಿ ತಪ್ಪಿ ಹೋಗಿ, ಮಕ್ಕಳು ಸದಾ ಸಿಡುಕುವಂತೆ ಅಥವಾ ಕಿರಿಕಿರಿ ಮಾಡಿಕೊಳ್ಳುವಂತೆ ಬದಲಾಗುತ್ತಾರೆ. ತಡರಾತ್ರಿವರೆಗೆ ಸ್ಕ್ರೋಲಿಂಗ್ ಮಾಡುವುದರಿಂದ ತಲೆನೋವು ಮತ್ತು ಏಕಾಗ್ರತೆಯ ಕೊರತೆ ಉಂಟಾಗುತ್ತಿದೆ.
ಮೈದಾನ ಮರೆತ ಮಕ್ಕಳು - ಮನೆಯಲ್ಲೇ ಬೆಳೆಯುವ ಬೊಜ್ಜು:
ಹಿಂದೆಲ್ಲಾ ಸಂಜೆ ಆಯಿತೆಂದರೆ ಮಕ್ಕಳು ಮೈದಾನಕ್ಕೆ ಓಡುತ್ತಿದ್ದರು. ಆದರೆ ಈಗ? ಮೂಲೆಯೊಂದರಲ್ಲಿ ಕುಳಿತು ಫೋನ್‌ಗೆ ಅಂಟಿಕೊಂಡಿರುತ್ತಾರೆ. ದೈಹಿಕ ಚಟುವಟಿಕೆ ಶೂನ್ಯವಾದಾಗ ಮಕ್ಕಳಲ್ಲಿ ಬೊಜ್ಜು (Obesity), ಬೆನ್ನುಮೂಳೆಯ ಸಮಸ್ಯೆ ಮತ್ತು ವಿಟಮಿನ್ ಡಿ ಕೊರತೆ ಕಾಣಿಸಿಕೊಳ್ಳುತ್ತಿದೆ. ಹೊರಗಿನ ಪ್ರಪಂಚದ ನೈಜ ಸ್ನೇಹಿತರಿಗಿಂತ ವರ್ಚುವಲ್ ಪ್ರಪಂಚದ 'ಫೇಕ್' ಫ್ರೆಂಡ್ಸ್ ಮೇಲೆ ಮಕ್ಕಳಿಗೆ ಪ್ರೀತಿ ಹೆಚ್ಚಾಗುತ್ತಿದೆ. ಇದು ಅವರ ಸಾಮಾಜಿಕ ಬೆಳವಣಿಗೆಯನ್ನೇ ಕುಂಠಿತಗೊಳಿಸುತ್ತಿದೆ.
ಮಕ್ಕಳನ್ನು ತಂತ್ರಜ್ಞಾನದಿಂದ ಸಂಪೂರ್ಣವಾಗಿ ದೂರವಿಡುವುದು ಇಂದಿನ ಕಾಲದಲ್ಲಿ ಅಸಾಧ್ಯ. ಆದರೆ ಅದನ್ನು ನಿಯಂತ್ರಿಸುವುದು ನಿಮ್ಮ ಕೈಯಲ್ಲಿದೆ:
ಡಿಜಿಟಲ್ ಕರ್ಫ್ಯೂ: ಊಟದ ಟೇಬಲ್ ಮತ್ತು ಮಲಗುವ ಕೋಣೆಯಲ್ಲಿ ಮೊಬೈಲ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಿ.
ರೋಲ್ ಮಾಡೆಲ್ ಆಗಿರಿ: ನೀವು ದಿನಪೂರ್ತಿ ಫೋನ್ ಹಿಡಿದು ಕುಳಿತರೆ ಮಕ್ಕಳು ಅದನ್ನೇ ಕಲಿಯುತ್ತಾರೆ. ಮೊದಲು ನಿಮ್ಮ ಸ್ಕ್ರೀನ್ ಸಮಯವನ್ನು ಕಡಿಮೆ ಮಾಡಿ.
ಮುಕ್ತ ಸಂವಾದ: ಆನ್‌ಲೈನ್‌ನಲ್ಲಿರುವ ಅಪಾಯಗಳು, ಸೈಬರ್ ಭದ್ರತೆ ಮತ್ತು ಟ್ರೋಲಿಂಗ್ ಬಗ್ಗೆ ಮಕ್ಕಳಿಗೆ ಪ್ರೀತಿಯಿಂದ ವಿವರಿಸಿ.
ಹೊರಾಂಗಣ ಆಟಕ್ಕೆ ಒತ್ತು: ದಿನಕ್ಕೆ ಕನಿಷ್ಠ ಒಂದು ಗಂಟೆ ಮಗುವಿನ ಜೊತೆ ಹೊರಗೆ ಹೋಗಿ ಆಟವಾಡಿ ಅಥವಾ ವ್ಯಾಯಾಮ ಮಾಡಲು ಪ್ರೇರೇಪಿಸಿ.
ನೆನಪಿಡಿ, ಮಗುವಿಗೆ ಮೊಬೈಲ್ ಕೊಡುವುದು ಎಂದರೆ ಅವರಿಗೆ ಶಾಂತಿಯನ್ನು ಕೊಡುವುದಲ್ಲ, ಅವರ ಭವಿಷ್ಯದ ಆರೋಗ್ಯದ ಜೊತೆ ಆಟವಾಡುವುದು. 'ಸ್ಮಾರ್ಟ್' ಫೋನ್ ಬಳಕೆಯಲ್ಲಿ ನೀವು 'ಸ್ಮಾರ್ಟ್' ಆಗಿದ್ದರೆ ಮಾತ್ರ ನಿಮ್ಮ ಮಗುವಿನ ಭವಿಷ್ಯ ಸುರಕ್ಷಿತ!
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.