ಮೊಬೈಲ್ ಪ್ರಿಯರಿಗೆ ಸಿಹಿ ಸುದ್ದಿ; ಇನ್ಮುಂದೆ ಆ್ಯಪಲ್ ಫೋನ್ ಖರೀದಿ ಸುಲಭ!

By Web Desk  |  First Published Sep 2, 2019, 5:21 PM IST

ಬದಲಾಗುತ್ತಿರುವ ಅಂತರಾಷ್ಟ್ರೀಯ ವಾಣಿಜ್ಯ ಸಮೀಕರಣಗಳು, ಅಮೆರಿಕನ್ ಕಂಪನಿಗಳಿಗೆ ಭಾರತದತ್ತ ಗಮನ ಹರಿಸುವ ಅನಿವಾರ್ಯತೆ ಸೃಷ್ಟಿಸಿದೆ.  1.3 ಬಿಲಿಯನ್ ಜನಸಂಖ್ಯೆ ಹೊಂದಿರುವ ಭಾರತ ಈಗ ಹೂಡಿಕೆಗೆ ನೆಚ್ಚಿನ ತಾಣವಾಗಿದೆ. 


ಆ್ಯಪಲ್ ಬಳಕೆದಾರರಿಗೆ ಕಂಪನಿಯು ಒಂದು ಸಿಹಿ ಸುದ್ದಿಯನ್ನು ಹೊತ್ತು ತಂದಿದೆ. ಇನ್ನು ಕೆಲ ತಿಂಗಳಿನಲ್ಲಿ ಆ್ಯಪಲ್ ಖುದ್ದಾಗಿ ತನ್ನ ಫೋನ್‌ಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲಿದೆ. 

ಭಾರತದ ಹೊಸ ವಾಣಿಜ್ಯ ನಿಯಮಗಳ ಲಾಭ ಪಡೆಯುವ ನಿಟ್ಟಿನಲ್ಲಿ, ಜಗತ್ತಿನ ಅತೀ ಜನಪ್ರಿಯ ಮೊಬೈಲ್ ಫೋನ್ ತಯಾರಕ ಆ್ಯಪಲ್ ಈ ತೀರ್ಮಾನ ಕೈಗೊಂಡಿದೆ ಎಂದು ವರದಿಯಾಗಿದೆ.

Tap to resize

Latest Videos

ಮೊಬೈಲ್‌ನಂತಹ ಇಲೆಕ್ಟ್ರಾನಿಕ್ಸ್ ಸರಕುಗಳನ್ನು ತಯಾರಿಸುವ ಆ್ಯಪಲ್‌ನಂಥ ಕಂಪನಿಗಳಿಗೆ ಈ ಹಿಂದೆ ವಿಧಿಸಲಾಗಿದ್ದ ನಿಯಮಗಳನ್ನು ಭಾರತ ಸರ್ಕಾರವು ಇತ್ತೀಚೆಗೆ ಸಡಿಲಿಸಿದೆ. ಶೇ. 30ರಷ್ಟು ಉತ್ಪನ್ನಗಳನ್ನು ಇಲ್ಲೇ ತಯಾರಿಸಬೇಕೆಂಬ ನಿಯಮವನ್ನು ಸರ್ಕಾರ ರೂಪಿಸಿತ್ತು. ಈ ನಿಯಮವನ್ನು ಆ್ಯಪಲ್ ವಿರೋಧಿಸಿತ್ತು. 

ಇದನ್ನೂ ಓದಿ | ಬದುಕಿದ್ದಾರಾ ಆ್ಯಪಲ್ ಕಂಪನಿ ಒಡೆಯ ಸ್ಟೀವ್ಸ್ ಜಾಬ್ಸ್?

ಆ್ಯಪಲ್‌ನ  ಬಿಡಿಭಾಗಗಳು ಮತ್ತು ಉಪಕರಣಗಳು ಬಹುತೇಕವಾಗಿ ಚೀನಾದಲ್ಲೇ ತಯಾರಾಗುತ್ತಿವೆ. ಆದುದರಿಂದ ಈ ನಿಯಮವು ಕಂಪನಿಗಳಿಗೆ ಸಮಸ್ಯೆಯಾಗಿ ಪರಿಣಮಿಸಿತ್ತು. 

ಆದರೆ ಈಗ ಅಮೆರಿಕಾ ಮತ್ತು ಚೀನಾ ನಡುವೆ ನಡೆಯುತ್ತಿರುವ ವಾಣಿಜ್ಯ ಸಮರದ ಪರಿಣಾಮವಾಗಿ, ಭಾರತವು ಈ ಕಂಪನಿಗಳಿಗೆ ಹೂಡಿಕೆಗಾಗಿ ನೆಚ್ಚಿನ ತಾಣವಾಗುತ್ತಿದೆ. ಅಲ್ಲದೇ, ಚೀನಾ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ ಪರ್ಯಾಯ ಮಾರುಕಟ್ಟೆಯನ್ನು ಕಂಡುಕೊಳ್ಳುವ ಅವಕಾಶ ಒದಗಿಬಂದಿದೆ.

ಆ್ಯಪಲ್ ಫೋನ್ ದುಬಾರಿ, ಅದರ ಮೇಲೆ ಆಮದು ಸುಂಕ ಸೇರಿದಾಗ ಇನ್ನೂ ದುಬಾರಿ. ಭಾರತದ ಶ್ರೀಸಾಮಾನ್ಯನ ಆ ಫೋನ್‌ಗಳು ಕೈಗೆಟಕುವುದೂ ಇಲ್ಲ.  ಇಲ್ಲೇ ತಯಾರಿಸಿ, ಖುದ್ದು ಮಾರಾಟ ಮಾಡಿದ್ರೆ, ಹೆಚ್ಚೆಚ್ಚು ಗ್ರಾಹಕರನ್ನು ಪಡೆಯುವ ಮೂಲಕ  ಮಾರುಕಟ್ಟೆಯನ್ನು ವಿಸ್ತರಿಸುವ ಯೋಜನೆ ಇದೆ. 

ಇದನ್ನೂ ಓದಿ | ಇಂಡಿಯನ್ ಆ್ಯಪಲ್ ಮಾರುಕಟ್ಟೆಗೆ ಬರುತ್ತಿದೆ; ಬೆಲೆಯೂ ಪಾಕೆಟ್ ಫ್ರೆಂಡ್ಲಿ!

ಈಗಾಗಲೆ ಬೆಂಗಳೂರು ಮತ್ತು ಚೆನ್ನೈಯಲ್ಲಿ ಎರಡು ಕಂಪನಿಗಳು ಆ್ಯಪಲ್‌ಗಾಗಿ ಫೋನ್‌ಗಳನ್ನು ತಯಾರಿಸುವ ಕೆಲಸದಲ್ಲಿ ತೊಡಗಿವೆ..

ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಆ್ಯಪಲ್, ಮುಂದಿನ ದಿನಗಳಲ್ಲಿ ಆನ್‌ಲೈನ್ ಮೂಲಕ  iPhone, iPads ಮತ್ತು Apple Mac ಕಂಪ್ಯೂಟರ್ ಗಳನ್ನು ಮಾರುವ ಯೋಜನೆ ಹೊಂದಿದೆ.  ಮುಂಬೈಯಲ್ಲಿ ಮುಖ್ಯ ಕಚೇರಿಯನ್ನು ಆ್ಯಪಲ್ ತೆರೆಯಲಿದೆ ಎಂದು ಹೇಳಲಾಗುತ್ತಿದೆ. 

ಖುದ್ದು ಆನ್‌ಲೈನ್ ಮೂಲಕ ಮಾರಾಟಕ್ಕೆ ತೊಡಗಿಕೊಂಡರೆ, ಆ್ಯಪಲ್ ಹೆಸರಿನ ನಕಲಿ ಉತ್ಪನ್ನಗಳಿಗೆ ಕಡಿವಾಣ ಹಾಕಲು ಸುಲಭವಾಗಲಿದೆ, ಎಂದು  ಕಂಪನಿಯ ಇನ್ನೊಂದು ಲೆಕ್ಕಾಚಾರ.

ಸದ್ಯಕ್ಕೆ ಆಫ್‌ಲೈನ್ ಫ್ರಾಂಚೈಸಿ ಸ್ಟೋರ್ ಹಾಗೂ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಂಥ ಆನ್‌ಲೈನ್ ಸ್ಟೋರ್‌ಗಳ ಮೂಲಕ ತನ್ನ ಪ್ರಾಡಕ್ಟ್‌ಗಳನ್ನು ಆ್ಯಪಲ್ ಮಾರುತ್ತಿದೆ.

click me!