ಇಲ್ಲಿಯವರೆಗೂ ದೇಶದಲ್ಲಿ ಸೈಬರ್ ದಾಳಿಯಾಗಿಲ್ಲ: ಟೆಕ್ ಸಂಸ್ಥೆ

By Suvarna Web DeskFirst Published May 15, 2017, 4:00 PM IST
Highlights

ಆದರೂ ದೇಶದಾದ್ಯಂತವಿರುವ ಬ್ಯಾಂಕಿಂಗ್,ಟೆಲಿಕಾಂ,ವಿದ್ಯುತ್ ಹಾಗೂ ವಿಮಾನಯಾನ ಜಾಲತಾಣಗಳ ಸುರಕ್ಷತೆಯ ಬಗ್ಗೆ ಹೆಚ್ಚು ಗಮನವಿಡಲಾಗಿದೆ. ಕಳೆದ ಒಂದು ವಾರದಲ್ಲಿ 150ಕ್ಕೂ ಹೆಚ್ಚು ದೇಶಗಳಲ್ಲಿ  ವಾನ್ನಾ ಕ್ರೈ ದಾಳಿ ನಡೆಸಿದೆ.

ನವದೆಹಲಿ(ಮೇ.15): ವಿಶ್ವದಾದ್ಯಂತ ಗಾಬರಿ ಹುಟ್ಟಿಸಿರುವ ವಾನ್ನಾ ಕ್ರೈ ಎಂಬ ರಾನ್ಸಮ್'ವೇರ್ ವೈರಸ್  ದೇಶದ ನೆಟ್'ವರ್ಕ್ ಜಾಲಗಳಲ್ಲಿ ದಾಳಿಯಾಗಿರುವ ಬಗ್ಗೆ ಇಲ್ಲಿಯವರೆಗೂ ವರದಿ ಬಂದಿಲ್ಲ' ಎಂದು ಭಾರತದ ಸೈಬರ್ ಭದ್ರತಾ ಘಟಕ (CERT-In),  ತಿಳಿಸಿದೆ.

ಆದರೂ ದೇಶದಾದ್ಯಂತವಿರುವ ಬ್ಯಾಂಕಿಂಗ್,ಟೆಲಿಕಾಂ,ವಿದ್ಯುತ್ ಹಾಗೂ ವಿಮಾನಯಾನ ಜಾಲತಾಣಗಳ ಸುರಕ್ಷತೆಯ ಬಗ್ಗೆ ಹೆಚ್ಚು ಗಮನವಿಡಲಾಗಿದೆ. ಕಳೆದ ಒಂದು ವಾರದಲ್ಲಿ 150ಕ್ಕೂ ಹೆಚ್ಚು ದೇಶಗಳಲ್ಲಿ  ವಾನ್ನಾ ಕ್ರೈ ದಾಳಿ ನಡೆಸಿದೆ.

ಇಲ್ಲಿಯವರೆಗೂ ಎಲ್ಲವೂ ಸರಿಯಾಗಿರುವಂತೆ ತೋರುತ್ತಿದೆ. ದಾಳಿಯ ಬಗ್ಗೆ ಯಾವುದೇ ವರದಿಗಳು ಬಂದಿಲ್ಲ. ನಾವು ಮೈಕ್ರೋ'ಸಾಫ್ಟ್ ಹಾಗೂ ಇತರ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದ್ದು, ಸುರಕ್ಷತೆಯ ಬಗ್ಗೆ ಸಂಪೂರ್ಣ ಗಮನವಿರಿಸಿದ್ದೇವೆ ಎಂದು ಭಾರತೀಯ ಕಂಪ್ಯೂಟರ್'ಗಳ ತುರ್ತು ನಿರ್ವಹಣ ತಂಡದ (CERT-In) ಮಹಾ ನಿರ್ದೇಶಕ ಸಂಜಯ್ ಬಾಳ್ ತಿಳಿಸಿದ್ದಾರೆ.

ವಾನ್ನಾ ಕ್ರೈ ರಷ್ಯಾ ಹಾಗೂ ಇಂಗ್ಲೆಂಡ್ ದೇಶಗಳು ಸೇರಿದಂತೆ 150ಕ್ಕೂ ಹೆಚ್ಚು ದೇಶಗಳ ಪ್ರಮುಖ ಜಾಲತಾಣಗಳ ಮೇಲೆ ದಾಳಿ ನಡೆಸಿದೆ. ಇಷ್ಟು ದೊಡ್ಡ ಮಟ್ಟದ ಇತಿಹಾಸದಲ್ಲಿ ಎಲ್ಲೂ ನಡೆದಿರಲಿಲ್ಲ. ವರದಿಯ ಪ್ರಕಾರ 2 ಲಕ್ಷಕ್ಕೂ ಹೆಚ್ಚು ಸಿಸ್ಟಂ'ಗಳಿಗೆ ತೊಂದರೆಯಾಗಿದೆ.

ವಾನ್ನಾ ಕ್ರೈ  ರಾನ್ಸಮ್'ವೇರ್

ವಾನ್ನಾ ಕ್ರೈ ಎಂಬ ಹೊಸ ಮಾಲ್'ವೇರ್ ಎಂಬುದು ಹೊಸ ಆನ್'ಲೈನ್ ವೈರಸ್ ಆಗಿದೆ. ಮೊನ್ನೆಯಷ್ಟೇ ವಿಶ್ವದ ನೂರಕ್ಕೂ ಹೆಚ್ಚು ದೇಶಗಳ ಸೈಬರ್ ವ್ಯವಸ್ಥೆಯ ಮೇಲೆ ಈ ಮಾಲ್'ವೇರ್ ದಾಳಿ ನಡೆಸಿದೆ. ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆಯಿಂದ ಕದ್ದ ಕೆಲವು ಕೋಡ್'ಗಳನ್ನು ಬಳಸಿ ದುಷ್ಕರ್ಮಿಗಳು ಶುಕ್ರವಾರ ಜಗತ್ತಿನಾದ್ಯಂತ ಕಂಪ್ಯೂಟರ್'ಗಳನ್ನು ಹ್ಯಾಕ್ ಮಾಡಿದ್ದಾರೆ.

ವೈರಸ್ ಕೋಡ್ ಮುಚ್ಚಿಟ್ಟಿರುವ ಇಮೇಲ್ ಅಟ್ಯಾಚ್ಮೆಂಟ್ ಮೂಲಕ ಇದು ಹರಡುತ್ತದೆ. ದುಷ್ಕರ್ಮಿಗಳು ಅನುಮಾನ ಬಾರದ ರೀತಿಯಲ್ಲಿ ಅಟ್ಯಾಚ್ಮೆಂಟ್'ವೊಂದಿಗೆ ಇಮೇಲ್ ಕಳುಹಿಸಿರುತ್ತಾರೆ. ಜನರು ಹಿಂದೆ ಮುಂದೆ ನೋಡದೇ ಆ ಇಮೇಲ್ ಓಪನ್ ಮಾಡಿ ಅಟ್ಯಾಚ್ಮೆಂಟ್ ಡೌನ್'ಲೋಡ್ ಮಾಡಿಕೊಂಡರೆ ಅಲ್ಲಿಗೆ ನಿಮ್ಮ ಕಂಪ್ಯೂಟರ್ ನಿಮ್ಮ ಕೈತಪ್ಪಿದಂತೆಯೇ. ಅಟ್ಯಾಚ್ಮೆಂಟ್ ಮೂಲಕ ಕಂಪ್ಯೂಟರ್ ಸಿಸ್ಟಂನ ಒಳ ಸೇರುವ ಈ ತಂತ್ರಾಂಶವು ಕಂಪ್ಯೂಟರ್'ನ ಆಪರೇಟಿಂಗ್ ಸಿಸ್ಟಂನ ಕೋಡ್'ನಲ್ಲಿ ಸ್ವಲ್ಪ ಬದಲಾವಣೆ ಮಾಡುತ್ತದೆ. ಕಂಪ್ಯೂಟರ್'ನಲ್ಲಿರುವ ಮಹತ್ವದ ಐಟಂಗಳಿದ್ದರೆ ದುಷ್ಕರ್ಮಿಗಳು ಅವುಗಳನ್ನು ಎನ್'ಕ್ರಿಪ್ಟ್ ಮಾಡುತ್ತಾರೆ. ಆಗ ಆ ಐಟಂಗಳು ಅಸಲಿ ಮಾಲಿಕರಿಂದ ಕಣ್ಮರೆಯಾಗುತ್ತದೆ. ನಿಮಗೆ ಆ ಡೇಟಾ ಬೇಕೆಂದರೆ ಇಂತಿಷ್ಟು ದುಡ್ಡು ಕೊಡಿ ಎಂದು ದುಷ್ಕರ್ಮಿಗಳು ದುಂಬಾಲು ಬಿದ್ದು ಕಂಪ್ಯೂಟರ್'ಗೆ ಮೆಸೇಜ್ ಹಾಕುತ್ತಾರೆ. ದುಡ್ಡು ಕೊಡಲಿಲ್ಲವೆಂದರೆ ಆ ಡೇಟಾವೆಲ್ಲವನ್ನೂ ಅಳಿಸಿಹಾಕುತ್ತೇವೆಂದು ಬೆದರಿಕೆ ಹಾಕುತ್ತಾರೆ. ಹಣದ ವಹಿವಾಟಿಗೆ ಸೈಬರ್ ಕ್ರಿಮಿನಲ್'ಗಳು ಬಿಟ್ ಕಾಯಿನ್ ವ್ಯವಸ್ಥೆಯನ್ನು ಉಪಯೋಗಿಸುತ್ತಾರೆ.

ದೇಶಾದ್ಯಂತ ಒಟ್ಟು 2 ಲಕ್ಷಕ್ಕೂ ಹೆಚ್ಚು ಎಟಿಎಂಗಳಿವೆ. ಹಳೆಯ ಎಟಿಎಂಗಳಲ್ಲಿ ವಿಂಡೋಸ್ ಎಕ್ಸ್'ಪಿ ತಂತ್ರಾಂಶವೇ ಇದೆ. ಈ ತಂತ್ರಾಂಶವು ಸೈಬರ್ ದಾಳಿಗೆ ಸುಲಭ ತುತ್ತಾಗಿದೆ ಎಂಬ ಮಾತು ತಜ್ಞರಿಂದ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಮೈಕ್ರೋಸಾಫ್ಟ್ ಸಂಸ್ಥೆಯು ತನ್ನ ತಂತ್ರಾಂಶದಲ್ಲಿ ಸ್ವಲ್ಪ ಅಪ್'ಗ್ರೆಡೇಶನ್ ಮಾಡುತ್ತಿದೆ.

ಕಳೆದ ವರ್ಷ ದೇಶದಲ್ಲಿ ಇಂಥದ್ದೇ ಮಾಲ್'ವೇರ್'ವೊಂದರ ದಾಳಿಯಾಗಿ ಲಕ್ಷಾಂತರ ಎಟಿಎಂ ಕಾರ್ಡ್'ಗಳು ಅಪಾಯಕ್ಕೆ ಸಿಲುಕಿದ್ದವು. 2016ರ ಮೇ, ಜೂನ್ ಮತ್ತು ಜುಲೈ ತಿಂಗಳಲ್ಲಿ ಹಿಟಾಚಿ ಸಂಸ್ಥೆಯ ಎಟಿಎಂ ಮೆಷೀನ್'ಗಳಲ್ಲಿ ಬಳಕೆ ಮಾಡಿದ್ದ ಎಟಿಎಂ ಕಾರ್ಡ್'ಗಳು ಸೈಬರ್ ದಾಳಿಗೆ ತುತ್ತಾಗಿದ್ದವು.

click me!