ಅಂಗಾರಕನ ಅಂಗಳಕ್ಕೆ ಮತ್ತೊಂದು ನೌಕೆ: ಮಂಗಳ ಗ್ರಹವೇ ಏಕೆ?

By nikhil vk  |  First Published Nov 28, 2018, 12:00 PM IST

ಮಂಗಳನ ಅಂಗಳಕ್ಕೆ ಮುತ್ತಿಕ್ಕಿದ ನಾಸಾದ ನೌಕೆ! ಮಂಗಳ ಗ್ರಹದ ನೆಲ ಮುಟ್ಟಿದ ನಾಸಾದ 'ಇನ್ ಸೈಟ್' ನೌಕೆ! 'ಇನ್ ಸೈಟ್' ನೌಕೆ 482 ಮಿಲಿಯನ್ ಕಿ.ಮೀ ಯಶಸ್ವಿ ಪ್ರಯಾಣ! ಮಂಗಳನ ಅಂಗಳದ ಛಾಯಾಚಿತ್ರ ಕ್ಲಿಕ್ಕಿಸಿದ 'ಇನ್ ಸೈಟ್' ನೌಕೆ 


ಕ್ಯಾಪ್ ಕ್ಯಾನವೆಲ್(ನ.28): ರಾತ್ರಿ ಆಗಸದಲ್ಲಿ ಮಿಂಚುವ ಆ ಕೆಂಪು ಬಣ್ಣದ ಚುಕ್ಕಿ, ಸಹಸ್ರಾರು ವರ್ಷಗಳಿಂದ ಮಾನವ ಜನಾಂಗವನ್ನು ಸೂಜಿಗದಂತೆ ಸೆಳೆಯುತ್ತಲೇ ಇದೆ.  ಅಂಗಾರಕನ ಅಂಗಳ ಎಂದರೆ ಮಾನವನಿಗೆ ಎಲ್ಲಿಲ್ಲದ ಕುತೂಹಲ.

ಮಾನವ ತನ್ನ ಕಣ್ಣೆತ್ತಿ ಮೇಲೆ ನೋಡಲು ಪ್ರಾರಂಭಿಸಿದ ದಿನದಿಂದ ಆ ಕೆಂಪು ಗ್ರಹದಲ್ಲೇನಿದೆ ಎಂಬ ಕುತೂಹಲ ಮನೆ ಮಾಡಿದೆ. ಕಾಲ ಕಳೆದಂತೆ ಮಾನವನ ಜ್ಞಾನ ವಿಕಾಸವಾದಂತೆ, ವಿಜ್ಞಾನ ಮುನ್ನಲೆಗೆ ಬಂದಂತೆ ಮಂಗಳ ಗ್ರಹವನ್ನು ನೋಡುವುದಷ್ಟೇ ಏನು ಅದರ ಅಂಗಳದಲ್ಲಿ ಮಾನವ ನಿರ್ಮಿತ ನೌಕೆಯನ್ನು ಇಳಿಸಿದ್ದಾಗಿದೆ. 

Latest Videos

undefined

ಅದರಂತೆ ಅಂತರಿಕ್ಷದಲ್ಲಿ ಆರು ತಿಂಗಳ ಕಾಲ ಪ್ರಯಾಣ ನಡೆಸಿದ ನಂತರ, ನಾಸಾ ಸಂಸ್ಥೆಯ ಬಾಹ್ಯಾಕಾಶ ನೌಕೆ 'ಇನ್ ಸೈಟ್' ಮಂಗಳ ಗ್ರಹದ ಮೇಲೆ ಯಶಸ್ವಿಯಾಗಿ ಮಂಗಳ ಗ್ರಹಕ್ಕೆ ಬಂದಿಳಿದಿದೆ. ಆರು ತಿಂಗಳಲ್ಲಿ 300 ಮಿಲಿಯನ್ ಮೈಲು (482 ಮಿಲಿಯನ್ ಕಿ.ಮೀ) ಪ್ರಯಾಣ ನಡೆಸಿದ ನೌಕೆ, 6 ನಿಮಿಷಗಳಲ್ಲಿ ಅಂಗಾರಕನ ಅಂಗಳಕ್ಕೆ ಮುತ್ತಿಕ್ಕಿದೆ.

ಕ್ಯಾಲಿಫೋರ್ನಿಯಾದ ಪಸಡೆನಾದಲ್ಲಿರುವ ನಾಸಾದ ಜೆಟ್ ಪ್ರೊಪಲ್ಷನ್ ಪ್ರಯೋಗಾಲಯದಲ್ಲಿ ನೌಕೆಯ ನಿಯಂತ್ರಣ ಕೊಠಡಿ ಇದ್ದು, ಮಂಗಳ ಗ್ರಹದ ಮೇಲೆ ಬಾಹ್ಯಾಕಾಶ ನೌಕೆ ಬಂದಿಳಿಯುತ್ತಿದ್ದಂತೆ ವಿಜ್ಞಾನಿಗಳು ಹರ್ಷೋದ್ಗಾರದಿಂದ ಕೇಕೆ ಹಾಕುತ್ತಾ ಕುಣಿದು ಕುಪ್ಪಳಿಸಿದರು.

ಕಳೆದ ಮೇ ತಿಂಗಳಲ್ಲಿ ನಾಸಾ ಸಂಸ್ಥೆ ಜೋಡಿ ಸಣ್ಣ ಉಪಗ್ರಹವನ್ನು ಅಂತರಿಕ್ಷಕ್ಕೆ ಕಳುಹಿಸಿಕೊಟ್ಟಿತ್ತು. ಅಲ್ಲಿಂದ ನಂತರ ಕಾಲಕಾಲಕ್ಕೆ ಉಪಗ್ರಹದ ಚಲನವಲನ, ಮಾಹಿತಿಗಳು ವಿಜ್ಞಾನಿಗಳಿಗೆ ಸಿಗುತ್ತಿದ್ದವು. ಮಂಗಳ ಗ್ರಹದ ಮೇಲೆ ಉಪಗ್ರಹ ಬಂದಿಳಿಯುತ್ತಿದ್ದಂತೆ ಮಂಗಳ ಗ್ರಹದ ಮೇಲ್ಮೈಯ ಛಾಯಾಚಿತ್ರ ಕಳುಹಿಸಿದೆ.

ಛಾಯಾಚಿತ್ರದಲ್ಲಿ ಮಂಗಳನ ಮೇಲೆ ಅವಶೇಷಗಳಂತೆ ಚುಕ್ಕೆಯನ್ನು ಹೊಂದಿದೆ. ಸುತ್ತಲೂ ಬಂಡೆಕಲ್ಲುಗಳಂತಹ ದೃಶ್ಯಗಳಿವೆ. ವಿಜ್ಞಾನಿಗಳು ಅಂದುಕೊಂಡಿದ್ದ ರೀತಿಯಲ್ಲಿಯೇ ಅವರಿಗೆ ಮಂಗಳನ ಮೇಲ್ಮೈ ಛಾಯಾಚಿತ್ರದಿಂದ ಕಂಡುಬಂದಿದೆ. ಇನ್ನು ಕೆಲ ಗಂಟೆಗಳಲ್ಲಿ ಅಥವಾ ಮುಂದಿನ ದಿನಗಳಲ್ಲಿ ಮಂಗಳ ಗ್ರಹದ ಇನ್ನಷ್ಟು ಸ್ಪಷ್ಟ ಚಿತ್ರಗಳು ಸಿಗುವ ನಿರೀಕ್ಷೆಯಲ್ಲಿದ್ದಾರೆ.

ಯಾವುದೇ ದೋಷವಿಲ್ಲದೆ, ಅಡೆತಡೆಗಳಾಗದೆ ಸರಿಯಾಗಿ ಉಪಗ್ರಹ ಮಂಗಳನ ಮೇಲೆ ಬಂದಿಳಿದಿದೆ, ಇದೊಂದು ಅಭೂತಪೂರ್ವ ಕ್ಷಣ ಎಂದು ಪ್ರಯೋಗಾಲಯದ ಮುಖ್ಯ ಎಂಜಿನಿಯರ್ ರಾಬ್ ಮಾನ್ನಿಂಗ್ ತಿಳಿಸಿದ್ದಾರೆ.

click me!