ವಿಜ್ಞಾನ ಪತ್ರಿಕೆಯ ಶತಮಾನೋತ್ಸವ ಸ್ಮರಣೆ ಅಂಗವಾಗಿ ಜಯನಗರ ನ್ಯಾಷನಲ್ ಕಾಲೇಜಿನಲ್ಲಿ ‘ಕನ್ನಡ ಪತ್ರಿಕೆಗಳಲ್ಲಿ ವಿಜ್ಞಾನ’ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬೆಂಗಳೂರು : ವಿದ್ಯಾರ್ಥಿಗಳು, ಶಿಕ್ಷಕರು, ನಾಗರಿಕರು ಹೀಗೆ ವಿವಿಧ ವರ್ಗದ ಓದುಗರಿಗೆ ಯಾವ ರೀತಿಯಲ್ಲಿ ವಿಜ್ಞಾನ ವಿಷಯಗಳನ್ನು ಮುಟ್ಟಿಸಬೇಕೆಂಬ ಗೊಂದಲವಿದೆ. ಈ ಬಗ್ಗೆ ಮಾಧ್ಯಮಗಳಿಗೆ ವಿಜ್ಞಾನ ಬರಹಗಾರರ ಸಲಹೆ ಸೂಚನೆ ಅವಶ್ಯವಿದೆ ಎಂದು ಸುವರ್ಣ ನ್ಯೂಸ್ . ಕಾಂ ಮುಖ್ಯ ಸಂಪಾದಕರಾದ ಎಸ್.ಕೆ. ಶ್ಯಾಮಸುಂದರ್ ಹೇಳಿದರು.
ವಿಜ್ಞಾನ ಪತ್ರಿಕೆಯ ಶತಮಾನೋತ್ಸವ ಸ್ಮರಣೆ ಅಂಗವಾಗಿ ಜಯನಗರ ನ್ಯಾಷನಲ್ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ‘ಕನ್ನಡ ಪತ್ರಿಕೆಗಳಲ್ಲಿ ವಿಜ್ಞಾನ’ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಲ್ಲರಿಗೂ ಸುಲಭವಾಗಿ ವಿಜ್ಞಾನ ತಲುಪುವಂತಹ ವಾತಾವರಣ ನಿರ್ಮಾಣ ಮಾಡಿದರೆ, ಮಾಧ್ಯಮಗಳು ಓದುಗರಿಗೆ ಆಸಕ್ತರಾಗಿರುವ ವಿಜ್ಞಾನ ವಿಷಯಗಳನ್ನು ತಲುಪಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಪತ್ರಿಕೆಗಳಲ್ಲಿ ವಿಜ್ಞಾನ ಬರಹಗಳನ್ನು ಬರೆಯುವ ಎಲ್ಲರಿಗೂ ವಿಜ್ಞಾನದ ಜ್ಞಾನ ಇರುವುದಿಲ್ಲ. ಹೀಗಾಗಿ, ಇದೇ ಕ್ಷೇತ್ರದಲ್ಲಿ ತೊಡಗಿಸಿ ಕೊಂಡಿರುವ ಬರಹಗಾರರು ಸಲಹೆ ಸೂಚನೆಗಳನ್ನು ನೀಡಬೇಕಿದೆ ಎಂದರು.
ಭೌತಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ ಪ್ರೊ. ಎಚ್. ಆರ್. ರಾಮಕೃಷ್ಣರಾವ್ ಮಾತನಾಡಿ, ವಿಜ್ಞಾನ ಪತ್ರಿಕೆಯು ಬೆಳೆದು ಬಂದ ಹಾದಿ, ಆರಂಭದಲ್ಲಿ ವಿಜ್ಞಾನದ ಭಾಷೆ, ಸದ್ಯದ ಪರಿಸ್ಥಿತಿ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ನ್ಯಾಷನಲ್ ಕಾಲೇಜು ಅಧ್ಯಕ್ಷ ಡಾ. ಎ.ಎಚ್. ರಾಮರಾವ್, ಆಕಾಶವಾಣಿ ಬೆಂಗಳೂರು ಪ್ರಾದೇಶಿಕ ವಿಭಾಗದ ನಿರ್ದೇಶಕ ಜಿ.ಕೆ. ರವೀಂದ್ರಕುಮಾರ್, ಕನ್ನಡಪ್ರಭ ಸಹಾಯಕ ಸಂಪಾದಕ ರವಿಶಂಕರ್ ಭಟ್, ಸಮಯ ಟಿವಿ ಪ್ರಧಾನ ಸಂಪಾದಕ ಟಿ.ಆರ್. ಶಿವಪ್ರಸಾದ್ ಪಾಲ್ಗೊಂಡಿದ್ದರು.