ವರ್ಚುವಲ್ ರಿಯಾಲಿಟಿಯ ಮೂಸೆಯಿಂದ ಮುಂದಿನ ನಾಲ್ಕು ವರ್ಷಗಳಲ್ಲಿ ಐ ಟ್ರ್ಯಾಕಿಂಗ್, ಫೇಸ್ ಟ್ರ್ಯಾಕಿಂಗ್, ಹ್ಯಾಂಡ್ ಟ್ರ್ಯಾಕಿಂಗ್, ಇನ್‌ಸೈಟ್-ಔಟ್ ಟ್ರ್ಯಾಕಿಂಗ್, ಎಕ್ಸ್‌ಟರ್ನಲ್ ಬಾಡಿ ಟ್ರ್ಯಾಕಿಂಗ್, 140 ಡಿಗ್ರೀಸ್ ಫೀಲ್ಡ್ ಆಫ್ ವ್ಯೆ, ವಿವಿಧ ದೂರದ ತನಕ ಗಮನ ಹರಿಸಲು ಸಾಧ್ಯವಾಗುವ ವೇರಿಫೋಕಲ್ ಡಿಸ್‌ಪ್ಲೇ ಮತ್ತಿತರ ಸೇವೆಗಳು ಗ್ರಾಹಕರನ್ನು ತಲುಪಲಿದೆ. ಅಷ್ಟೇ ಅಲ್ಲದೇ ಈ ತಂತ್ರಜ್ಞಾನ ಬಳಸಿ ನಮ್ಮ ನೆನಪು ಮತ್ತು ಗ್ರಹಣ ಶಕ್ತಿ ಹೆಚ್ಚಿಸಬಹುದು ಎಂಬುದು ಈಗಿನ ತಾಜಾ ಸುದ್ದಿ.
ನೀವು ನಿಮ್ಮ ಮನೆಯ ಕೊಠಡಿಯಲ್ಲಿ ಕುಳಿತಿದ್ದೀರಿ. ಕೈಯಲ್ಲಿ ಇಂದು ಮೊಬೈಲ್, ಕಣ್ಣು-ಕಿವಿಯನ್ನು ಆವರಿಸಿದ ಹೆಡ್‌ಸೆಟ್ ಇದೆ. ಇವುಗಳ ಸಹಾಯದಿಂದ ನೀವು ಕಾಶ್ಮೀರಕ್ಕೋ, ಕನ್ಯಾಕುಮಾರಿಗೆ ಪ್ರವಾಸ ಹೋಗಬಹುದು, ಕುರ್ಚಿಯಲ್ಲೇ ಕುಳಿತು ಚೆಂದದ ಕಾರನ್ನು ಡ್ರೈವ್ ಮಾಡಬಹುದು, ಅಂತರಿಕ್ಷದಲ್ಲಿ ಹಾರಾಡಿಬರಬಹುದು...ಇದು ಭ್ರಮೆಯಲ್ಲ.
ಸಾಕಾರಗೊಂಡಿರುವ ತಂತ್ರಜ್ಞಾನ. ಇಲ್ಲದ ಜಾಗದಲ್ಲಿ ಇದೆ ಎಂಬಷ್ಟು ಸ್ಪಷ್ಟವಾಗಿ ತೋರಿಸುವ, ಕೇಳಿಸುವ, ಕಾಣಿಸುವ ನೈಜತೆಗೆ ಹತ್ತಿರವಾದಂತೆ ಭಾಸವಾಗಿಸುವ ಡಿಜಿಟಲ್ ತಂತ್ರವೇ ವರ್ಚುವಲ್ ರಿಯಾಲಿಟಿ. ನಿಮ್ಮೆದುರು ಕಾಶ್ಮೀರ, ಕನ್ಯಾಕುಮಾರಿ ಇಲ್ಲದಿದ್ದರೂ, ತಂತ್ರಜ್ಞಾನವು ನಿಮ್ಮ ಕಣ್ಣು, ಕಿವಿ, ದೇಹಕ್ಕೆ ಅಲ್ಲಿಗೆ ಹೋದ ಅನುಭವ ನೀಡುವುದು ಇದರ ವಿಶೇಷ.
ಸಂವಹನ ಮತ್ತು ಮನರಂಜನಾ ಕ್ಷೇತ್ರದಲ್ಲಿ ವರ್ಚುವಲ್ ರಿಯಾಲಿಟಿ (ವಿಆರ್) ತಂತ್ರಜ್ಞಾನ ಈಗ ಜನಪ್ರಿಯವಾಗುತ್ತಿದೆ. ಮೊಬೈಲ್ ಫೋನ್ಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಈಗೀಗ ವಿಆರ್ ಸೇವೆಯನ್ನು ಹೆಚ್ಚು ಹೆಚ್ಚು ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ. ಇದೀಗ ಸಂಶೋಧನೆಯೊಂದು, ವಿಆರ್ ತಂತ್ರಜ್ಞಾನ ಕೇವಲ ತುಂಬು ಮನರಂಜನೆ ನೀಡುವುದಷ್ಟೇ ಅಲ್ಲ ಮಾಹಿತಿಗಳನ್ನು ಗ್ರಹಿಸುವಲ್ಲಿ, ನೆನಪಿನ ಶಕ್ತಿ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ ಎಂಬುದನ್ನು ಸಾಬೀತುಪಡಿಸಿದೆ.
ಜನರು ಸಾಂಪ್ರದಾಯಿಕ ಕಂಪ್ಯೂಟರ್ ಅಥವಾ ಟ್ಯಾಬ್ಲೆಟ್ ಬಳಕೆಗಳಿಂದ ಕಲಿತ ವಿಷಯಗಳಿಗಿಂತ ವರ್ಚುವಲ್ ರಿಯಾಲಿಟಿ ತಂತ್ರದ ಮೂಲಕ ಹೆಚ್ಚಿನ ವಿಚಾರಗಳನ್ನು ಕಲಿತುಕೊಂಡು ನೆನಪಿನಲ್ಲಿಟ್ಟುಕೊಳ್ಳಬಲ್ಲರು ಎಂದು ಯೂನಿವರ್ಸಿಟಿ ಆಫ್ ಮೇರಿಲ್ಯಾಂಡ್‌ನ ತಂಡ ಕಂಡುಕೊಂಡಿದೆ. ವರ್ಚುವಲ್ ತಂತ್ರಜ್ಞಾನವು ಶಿಕ್ಷಣ ಮತ್ತು ತರಬೇತಿ ಕ್ಷೇತ್ರಗಳಲ್ಲಿ ಹೆಚ್ಚಿನ ಸಹಾಯ ಮಾಡಬಲ್ಲುದು ಎಂದು ಈ ವಿ.ವಿ.ಯ ಕಂಪ್ಯೂಟರ್ ಸೈನ್ಸ್‌ನ ಪ್ರೊ. ಅಮಿತಾಭ್ ವರ್ಷ್ನೆ ಹೇಳುತ್ತಾರೆ. 40 ಜನರಿಗೆ ಪ್ರಾಯೋಗಿಕ ಪರೀಕ್ಷೆ ಪ್ರೊ. ಅಮಿತಾಭ್ ಹಾಗೂ ತಂಡದವರು ತಮ್ಮ ಸಂಶೋಧನೆಯಲ್ಲಿ ಕಾಲ್ಪನಿಕ ವಸ್ತುವೊಂದರ ಚಿತ್ರವನ್ನು ವರ್ಚುವಲ್ ರಿಯಾಲಿಟಿ ತಂತ್ರಜ್ಞಾನ ಬಳಸಿ ಪ್ರಯೋಗಕ್ಕೆ ಒಳಗಾಗುವವರಿಗೆ ತೋರಿಸಿದ್ದಾರೆ.
ಬಳಿಕ ಅದನ್ನು ಎಷ್ಟು ಪರಿಣಾಮಕಾರಿಯಾಗಿ ಪ್ರಯೋಗಾರ್ಥಿಗಳು ನೆನಪಿಟ್ಟುಕೊಳ್ಳಬಲ್ಲರು ಎಂಬುದನ್ನು ಅಧ್ಯಯನದಲ್ಲಿ ಕಂಡುಕೊಂಡಿದ್ದಾರೆ. ಈ ಸಂಶೋಧನೆಗೋಸ್ಕರ ವರ್ಚುವಲ್ ರಿಯಾಲಿಟಿ ತಂತ್ರದ ಅರಿವೇ ಇಲ್ಲದ 40 ಮಂದಿಯನ್ನು ಆರಿಸಲಾಗಿತ್ತು. ಈ ಪೈಕಿ ಅರ್ಧದಷ್ಟು ಮಂದಿಗೆ ಸಾಂಪ್ರದಾಯಿಕ ಕಂಪ್ಯೂಟರ್ ಬಳಸಿ, ಇನ್ನರ್ಧ ಮಂದಿಗೆ ವಿಆರ್ ಹೆಡ್ ಮೌಂಟೆಡ್ ಡಿಸ್‌ಪ್ಲೇ ಬಳಸಿ ಚಿತ್ರಗಳನ್ನು ತೋರಿಸಲಾಯಿತು. ಸ್ವಲ್ಪ ಹೊತ್ತಿನ ಬಳಿಕ ಅವರೆಷ್ಟರ ಮಟ್ಟಿಗೆ ತಾವು ನೋಡಿದ ಚಿತ್ರಗಳನ್ನು ನೆನಪಿಡಬಲ್ಲರು ಎಂಬುದನ್ನು ಪ್ರತ್ಯೇಕವಾಗಿ ಪರೀಕ್ಷಿಸಲಾಯಿತು. ಈ ಸಂದರ್ಭ, ಸಾಂಪ್ರದಾಯಿಕ ಕಂಪ್ಯೂಟರ್ ಬಳಸಿ ಚಿತ್ರ ನೋಡಿದವರಿಗಿಂತ ಶೇ. 8.8 ರಷ್ಟು ಹೆಚ್ಚು ಪ್ರಮಾಣದಲ್ಲಿ ವಿಆರ್ ಹೆಡ್‌ಮೌಂಟೆಂಡ್ ಸೆಟ್‌ನಲ್ಲಿ ಚಿತ್ರ ನೋಡಿದವರು ಅದನ್ನು ನೆನಪಿಡಬಲ್ಲರು ಎಂಬುದು ಸಾಬೀತಾಯಿತು.
ವರ್ಚುವ ರಿಯಾಲಿಟಿ-ಹಾಗಂದ್ರೇನು?
ಕಂಪೂಟರ್ ಸೃಷ್ಟಿಸುವ ಕೃತಕ ಸನ್ನಿವೇಶದಲ್ಲಿ ಆಡಿಯೋ, ಫೋಟೋ, ವಿಡಿಯೋ ಮತ್ತಿತರ ಬಹುಮಾಧ್ಯಮದ ಮೂಲಕ ‘ಇಲ್ಲದ ಪರಿಸರವನ್ನು ನಾವಿದ್ದಲ್ಲೇ ಅನುಭವಿಸುವುದೇ’ ವರ್ಚುವಲ್ ರಿಯಾಲಿಟಿ. ಕಣ್ಣಿನೆದುರು ಪುಟ್ಟ ಪರದೆ ಹೊಂದಿರುವ ಹೆಡ್‌ಮೌಂಟೆಡ್ ಡಿಸ್‌ಪ್ಲೇ ಉಪಕರಣ ಅಥವಾ ಕೊಣೆಯೊಳಗಿನ ಮಲ್ಟಿಪಲ್ ಸ್ಕ್ರೀನ್ ಮತ್ತು ಪ್ರಾಜೆಕ್ಟರ್‌ಗಳ ಸಹಾಯದಿಂದ ವಿಆರ್‌ನ ಸುಖವನ್ನು ಅನುಭವಿಸಬಹುದು. ಆಧುನಿಕ ಸ್ಮಾರ್ಟ್‌ಫೋನ್‌ಗಳಿಗೆ ಅಭಿವೃದ್ಧಿಪಡಿಸಲಾಗುವ ವಿಆರ್ ಡಿಸ್‌ಪ್ಲೇ ತಂತ್ರಜ್ಞಾನವು ಜಿರೋಸ್ಕೋಪ್, ತಲೆ, ದೇಹದ ಪೊಸಿಶನ್ ಟ್ರ್ಯಾಕ್ ಮಾಡಲು ಸೆನ್ಸರ್‌ಗಳು, ಎಚ್‌ಡಿ ಪರದೆಗಳು, ಕಡಿಮೆ ತೂಕದ ಪ್ರೊಸೆಸರ್‌ಗಳನ್ನು ಒಳಗೊಂಡಿರುತ್ತವೆ.
360 ಡಿಗ್ರಿ ಕೋನದ ವಿಡಿಯೋಗಳನ್ನು ಸೆರೆಹಿಡಿಯಬಲ್ಲ, ವಸ್ತುವಿನ ಎಲ್ಲ ಮಗ್ಗುಲನ್ನು ಕಡಿಮೆ ರೆಸೊಲ್ಯೂಶನ್‌ನಲ್ಲಿ ಸೆರೆ ಹಿಡಿದು ಆನ್‌ಲೈನ್ ಸ್ಟ್ರೀನಿಂಗ್ ನೀಡಬಲ್ಲ ವಿಆರ್ ಕ್ಯಾಮೆರಾ ಅಥವಾ 360 ಡಿಗ್ರಿ ಕ್ಯಾಮೆರಾ ಅಥವಾ ಆಮ್ನಿ ಡೈರೆಕ್ಷನಲ್ ಕ್ಯಾಮೆರಾಗಳು ವಿಆರ್ ತಂತ್ರಜ್ಞಾನ ಬಳಕೆಯಲ್ಲಿ ಸಹಕಾರಿಯಾಗಿವೆ. ೧೯೯೦ರಲ್ಲಿ ಮೊದಲ ಜನಪ್ರಿಯ ವಾಣಿಜ್ಯಾತ್ಮಕವಾಗಿ ಬಳಕೆ ದಾರರ ಕೈಗೆ ವರ್ಚುವಲ್ ಹೆಡ್‌ಸೆಟ್‌ಗಳು ಬಿಡುಗಡೆಗೊಂಡವು.2017 ರಲ್ಲಿ ಗೂಗಲ್ ಪರಿಚಯಿಸಿದ ಸ್ಟ್ರೀಟ್ ವ್ಯೆ ಎಂಬ ಜನಪ್ರಿಯ ಆಪ್ ಕೂಡಾ ವಿಆರ್ ತಂತ್ರದ ಕೂಸೇ ಆಗಿದೆ. ೨೦೧೫ರಲ್ಲಿ ವಾಲ್ವ್ ಹಾಗೂ ಎಚ್‌ಟಿಸಿ ಕಂಪನಿಗಳು ಜಂಟಿಯಾಗಿ ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್‌ಗಳನ್ನು ಪರಿಚಯಿಸಿದವು. ಇವು ಟ್ರ್ಯಾಕಿಂಗ್ ತಂತ್ರಜ್ಞಾನವನ್ನು ಹೊಂದಿದ್ದವು.
2016 ರ ವೇಳೆಗೆ ಸುಮಾರು 230 ಕ್ಕೂ ಅಧಿಕ ಕಂಪನಿಗಳು ವಿಆರ್ ಆಧಾರಿತ ಉತ್ಪನ್ನಗಳನ್ನು ಉತ್ಪಾದಿಸ ತೊಡಗಿದ್ದವು. ಫೇಸ್‌ಬುಕ್ ವಿಆರ್ ತಂತ್ರದ ಅಭಿವೃದ್ಧಿಗೆ 400 ಸಿಬ್ಬಂದಿಯನ್ನು ನೇಮಿಸಿತ್ತು. ಗೂಗಲ್, ಆಪಲ್, ಅಮೇಝಾನ್, ಮೈಕ್ರೋಸಾಪ್ಟ್, ಸಾನಿ, ಸ್ಯಾಮ್ಸಂಗ್ ಮತ್ತಿತರ ಟೆಕ್ ದೈತ್ಯ ಸಂಸ್ಥೆಗಳು ವಿಆರ್ ತಂತ್ರದ ಬಳಕೆಗೆ ಆದ್ಯತೆ ನೀಡುತ್ತಾ ಬಂದಿವೆ.
ವಿಆರ್‌ನಿಂದ ಪ್ರಯೋಜನಗಳೇನು?
ಇಂದು ವಿಆರ್ ಬಹುಪಯೋಗಿ ಎನಿಸಿದೆ. ಗೇಮಿಂಗ್, ತ್ರಿಡಿ ಸಿನಿಮಾರಂಗದಲ್ಲಿ ಅತಿ ಹೆಚ್ಚು ಬಳಕೆ ಕಾಣುತ್ತಿದೆ. 1990 ರ ದಶಕದ ಮಧ್ಯಭಾಗದಲ್ಲಿ ವಿಆರ್ ಆಧಾರಿತ ವಿಡಿಯೋ ಗೇಂಗಳು ಬಿಡುಗಡೆಯಾದವು. 2010 ರ ವೇಳೆಗೆ ವಾಣಿಜ್ಯಾತ್ಮಕ ವಿಆರ್ ಹೆಡ್‌ಸೆಟ್ ಗಳನ್ನು ಒಕ್ಯುಲಸ್, ಎಚ್‌ಟಿಸಿ ವೈವ್, ಪ್ಲೇಸ್ಟೇಷನ್ ವಿಆರ್‌ಗಳು ಬಿಡುಗಡೆ ಮಾಡಿದವು. ಕ್ರೀಡಾ ಕೂಟಗಳು, ಲಲಿತ ಕಲೆ, ಸಂಗೀತ ಕಛೇರಿ, ಕಿರುಚಿತ್ರಗಳ ಪ್ರಸಾರಕ್ಕೂ, ಪ್ರಚಾರಕ್ಕೂ ತ್ರಿಡಿ ಸಿನಿಮಾಗಳು ಬಳಕೆಯಾಗುತ್ತಿವೆ. 2015 ರ ಬಳಿಕ ಸಾಕಷ್ಟು ಥೀಂ ಪಾರ್ಕ್‌ಗಳಲ್ಲೂ ವಿಆರ್ ಬಳಕೆಯಿದೆ. ರೊಬೋಟಿಕ್ಸ್ ಕ್ಷೇತ್ರದಲ್ಲಿ ವ್ಯವಸ್ಥೆಗಳ ನಿಯಂತ್ರಣಕ್ಕೆ, ಸಮಾಜ ವಿಜ್ಞಾನ, ಮನಃಶಾಸ್ತ್ರ ರಂಗದಲ್ಲೂ ವಿಆರ್ ಬಳಕೆ ವ್ಯಾಪಕವಾಗಿದೆ. ವರ್ಚುವಲ್ ರಿಯಾಲಿಟಿ ಮೂಲಕ ಸರ್ಜಿಕಲ್ ಟ್ರೈನಿಂಗ್ ನೀಡಲು ಸಾಧ್ಯ. ಪೋಸ್ಟ್ ಟ್ರಾಮಿಕ್ ಸ್ಟ್ರೆಸ್ ಡಿಸಾರ್ಡರ್(ಪಿಟಿಎಸ್‌ಡಿ),
ಫೋಬಿಯಾದಂತಹ ಮಾನಸಿಕ ಸಮಸ್ಯೆಗಳ ಚಿಕಿತ್ಸೆಗೆ ವರ್ಚುವಲ್ ರಿಯಾಲಿಟಿ ಎಕ್ಸ್‌ಪೋಶನ್ ಥೆರಪಿ ನೀಡಲಾಗುತ್ತಿದೆ. ನಿಜವಾದ ಕೆಲಸದ ಪರಿಸರಕ್ಕೆ ಹೋಗದೆಯೇ, ತಾವಿರುವಲ್ಲೇ ಕೆಲಸದ ಬಗ್ಗೆ ತರಬೇತಿ ಹೊಂದರು, ಶಿಕ್ಷಣ ಪಡೆಯಲು ಇದು ಸಹಕಾರಿ. ಮಿಲಿಟರಿ, ಅಂತರಿಕ್ಷ, ಚಾಲನಾ ತರಬೇತಿಗಳಿಗೂ ಉಪಕಾರಿ.
-ಕೃಷ್ಣ ಮೋಹನ ತಲೆಂಗಳ