ಆಗಸದಲ್ಲಿ ಇಸ್ರೋ ‘ತಿ’ವಿಕ್ರಮ: ಒಂದೇ ಬಾರಿ 29 ಉಪಗ್ರಹ ಉಡಾವಣೆ

By Web DeskFirst Published Apr 1, 2019, 12:11 PM IST
Highlights

ಮೊದಲ ಬಾರಿಗೆ 3 ಕಕ್ಷೆಗಳಲ್ಲಿ ಇಸ್ರೋ ಕಸರತ್ತು ಒಂದೇ ಬಾರಿ 29 ಉಪಗ್ರಹ ಉಡಾವಣೆ

ಚೆನ್ನೈ[ಏ.01]: ಶತ್ರು ದೇಶಗಳ ರಾಡಾರ್ ಚಟುವಟಿಕೆ ಮೇಲೆ ಹದ್ದಿನಗಣ್ಣಿಡುವ ‘ಎಮಿಸ್ಯಾಟ್’ ಸೇರಿದಂತೆ 29ಉಪಗ್ರಹಗಳನ್ನು ಉಡಾವಣೆ ಮಾಡಲು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಸಜ್ಜಾಗಿದೆ. ಸೋಮವಾರ ಬೆಳಗ್ಗೆ 9.27ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾ ಬಾಹ್ಯಾಕಾಶ ನೆಲೆಯಿಂದ ಈ ಎಲ್ಲ ಉಪಗ್ರಹಗಳನ್ನು ಹೊತ್ತು ಪಿಎಸ್‌ಎಲ್‌ವಿ-ಸಿ45 ರಾಕೆಟ್ ನಭೋಮಂಡಲದತ್ತ ಪಯಣ ಆರಂಭಿಸಿದೆ. ಇದಕ್ಕಾಗಿ ಭಾನುವಾರ ಬೆಳಗ್ಗೆ 6.27ರಿಂದಲೇ 27 ತಾಸುಗಳು ಕೌಂಟ್‌ಡೌನ್ ಶುರುವಾಗಿತ್ತು.

ಕೆಳಕಕ್ಷೆಯಲ್ಲಿ ಹಾರಾಡುವ ಉಪಗ್ರಹವನ್ನು ಹೊಡೆದುರುಳಿಸುವ ತಂತ್ರಜ್ಞಾನ ಸಿದ್ಧಿಸಿಕೊಂಡಿರುವ ಭಾರತದ ಮತ್ತೊಂದು ಸಾಹಸ ಇದಾಗಿದೆ ಎಂದು ಬಾಹ್ಯಾಕಾಶ ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ. ಏಕೆಂದರೆ, 29 ಉಪಗ್ರಹಗಳನ್ನು ಉಡಾವಣೆ ಮಾಡುವ ಪ್ರಕ್ರಿಯೆಯಲ್ಲಿ ಮೂರು ವಿವಿಧ ಕಕ್ಷೆಗಳಲ್ಲಿ ಇಸ್ರೋ ಕಸರತ್ತು ನಡೆಸಲಿದೆ. ಈ ರೀತಿ 3 ಕಕ್ಷೆಗಳಲ್ಲಿ ಇಸ್ರೋ ಪ್ರಯೋಗ ನಡೆಸುತ್ತಿರುವುದು ಇದೇ ಮೊದಲು. ಹೀಗಾಗಿ ಇದು ಭಾರಿ ಮಹತ್ವ ಪಡೆದುಕೊಂಡಿದೆ.

ಮತ್ತೊಂದೆಡೆ, ಇಸ್ರೋ ರಾಕೆಟ್ ಉಡಾವಣೆಯನ್ನು ಟೀವಿಯಲ್ಲಿ ಕಣ್ತುಂಬಿಕೊಳ್ಳುತ್ತಿದ್ದ ಜನಸಾಮಾನ್ಯರಿಗೆ ನೇರವಾಗಿ ವೀಕ್ಷಿಸುವ ಅವಕಾಶವನ್ನು ಇದೇ ಮೊದಲ ಸಲ ಇಸ್ರೋ ಕಲ್ಪಿಸಿದೆ. ಉಡಾವಣೆಯಾದ 17 ನಿಮಿಷದಲ್ಲಿ ಭೂಮಿಯಿಂದ 749 ಕಿ.ಮೀ. ದೂರದ ಕಕ್ಷೆಗೆ 436 ಕೆ.ಜಿ. ತೂಕದ ಎಮಿಸ್ಯಾಟ್‌ನ್ನು ಸೇರಿಸಲಾಗುತ್ತದೆ. ತದ ನಂತರ ಒಟ್ಟು 220 ಕೆ.ಜಿ. ತೂಕದ, ವಿವಿಧ ದೇಶ ಗಳಿಗೆ ಸೇರಿದ 28 ಉಪಗ್ರಹಗಳನ್ನು 504 ಕಿ.ಮೀ. ದೂರದ ಕಕ್ಷೆಗೆ ಬಿಡಲಾಗುತ್ತದೆ. ಬಳಿಕ 485 ಕಿ.ಮೀ. ದೂರಕ್ಕೆ ರಾಕೆಟ್ ಇಳಿಸಿ, ಅದನ್ನು ಬಾಹ್ಯಾ ಕಾಶ ಪ್ರಯೋಗಕ್ಕೆ ವೇದಿಕೆಯಾಗಿ ಬಳಸಲಾಗುತ್ತದೆ. ಕೆಲವು ವಾರ ಈ ವೇದಿಕೆ ಇರಲಿದ್ದು, ಬಳಿಕ ಬಾಹ್ಯಾಕಾಶ ಕಸವಾಗಲಿದೆ.

click me!