ಪಾಕ್‌ ಗಡಿ ಮೇಲೆ ಕಣ್ಣಿಡುವ ಉಪಗ್ರಹ ಆಗಸಕ್ಕೆ!

By Web Desk  |  First Published May 22, 2019, 11:07 AM IST

ಪಾಕ್‌ ಗಡಿ ಮೇಲೆ ಕಣ್ಣಿಡುವ ಉಪಗ್ರಹ ಇಂದು ಉಡ್ಡಯನ| ಪಾಕಿಸ್ತಾನ, ಬಾಂಗ್ಲಾದೇಶ ಗಡಿ ಭಾಗದಲ್ಲಿ ಉಗ್ರರ ಚಟುವಟಿಕೆ ಮೇಲೆ ಹದ್ದಿನ ಕಣ್ಣು| ಬೆಳಗ್ಗೆ 5.27ಕ್ಕೆ ಉಡ್ಡಯನ/ ಮೋಡ ಇದ್ದರೂ ಉಗ್ರರ ಚಲನವಲನ ಪತ್ತೆ ಹಚ್ಚುತ್ತೆ


ತಿರುಮಲ[ಮೇ.22]: ಪಾಕಿಸ್ತಾನ ಮತ್ತು ಬಾಂಗ್ಲಾ ದೇಶಗಳ ಗಡಿ ಪ್ರದೇಶಗಳ ಮೇಲೆ ನಿಗಾ ಇಡಲೆಂದೇ ಅಭಿವೃದ್ಧಿಪಡಿಸಲಾಗಿರುವ ಅತ್ಯಾಧುನಿಕ ಉಪಗ್ರಹವೊಂದನ್ನು ಇಸ್ರೋ ಯಶಸ್ವಿಯಾಗಿ ಉಡ್ಡಯನ ಮಡಿದೆ. ಒಳನುಸುಳುವ ಉಗ್ರರ ಚಲನವಲನದ ಮೇಲೆ ಸರ್ವಋುತುಗಳಲ್ಲೂ ತೀವ್ರ ನಿಗಾ ಇಡುವ, ಗಡಿಯ ಪಕ್ಕದಲ್ಲಿರುವ ಭಯೋತ್ಪಾದಕರ ಅಡಗುತಾಣಗಳನ್ನು ಪತ್ತೆ ಹಚ್ಚುವ ಉದ್ದೇಶದಿಂದಲೇ ಈ ಉಪಗ್ರಹವನ್ನು ಹಾರಿಬಿಡಲಾಗಿದೆ.

‘ರಿಸ್ಯಾಟ್‌ 2 ಬಿಆರ್‌ 1’ (ರಾಡಾರ್‌ ಇಮೇಜಿಂಗ್‌ ಸ್ಯಾಟಲೈಟ್‌) ಎಂಬ ಹೆಸರಿನ ಈ ಉಪಗ್ರಹವನ್ನು ಹೊತ್ತು ಆಂಧ್ರಪ್ರದೇಶದ ಶ್ರೀಹರಿಕೋಟ ಬಾಹ್ಯಾಕಾಶ ನೆಲೆಯಿಂದ ಪಿಎಸ್‌ಎಲ್‌ವಿ- ಸಿ 46 ರಾಕೆಟ್‌ ಬುಧವಾರ ಮುಂಜಾನೆ 5.27ಕ್ಕೆ ನಭೋಮಂಡಲದತ್ತ ಚಿಮ್ಮಿದ್ದು, ಇದಕ್ಕಾಗಿ ಮಂಗಳವಾರ ನಸುಕಿನ ಜಾವ 4.30ರಿಂದಲೇ ಕ್ಷಣಗಣನೆ ಶುರುವಾಗಿತ್ತು.

Tap to resize

Latest Videos

undefined

ಉಪಗ್ರಹ ಉಡಾವಣೆ ಹಿನ್ನೆಲೆಯಲ್ಲಿ ಇಸ್ರೋ ಮುಖ್ಯಸ್ಥ ಕೆ. ಶಿವನ್‌ ಅವರು ಪಿಎಸ್‌ಎಲ್‌ವಿ ರಾಕೆಟ್‌ನ ಪ್ರತಿಕೃತಿಯೊಂದಿಗೆ ತಿರುಮಲ- ತಿರುಪತಿಗೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿ, ಯಶಸ್ಸಿಗೆ ಬೇಡಿಕೊಂಡಿದ್ದರು.

‘ರಿಸ್ಯಾಟ್‌’ ಸೂಕ್ಷ್ಮ ಸಂವೇದಿ ಉಪಗ್ರಹವಾಗಿದ್ದು, ಸಿಂಥೆಟಿಕ್‌ ಅಪೆರ್ಚರ್‌ ರಾಡಾರ್‌ಗಳ ಮೂಲಕ ಸರ್ವಋುತು ಸರ್ವೇಕ್ಷಣೆ ಮಾಡುತ್ತದೆ. ಗಡಿಯಲ್ಲಿ ಉಗ್ರರ ಒಳನುಸುಳುವಿಕೆ ಮೇಲೆ ಹಗಲು- ರಾತ್ರಿ ಎನ್ನದೇ ನಿಗಾ ಇಟ್ಟು ಭದ್ರತಾ ಪಡೆಗಳಿಗೆ ನೆರವಾಗಲು ಇಸ್ರೋ ಅಭಿವೃದ್ಧಿಪಡಿಸಿರುವ ಮೊದಲ ಸರ್ವಋುತು ಉಪಗ್ರಹ ಇದಾಗಿದೆ. ಈ ಹಿಂದೆ ಆಪ್ಟಿಕಲ್‌ ಹಾಗೂ ಸ್ಪೆಕ್ಟ್ರಲ್‌ ಸೆನ್ಸರ್‌ಗಳನ್ನು ಬಳಸಿ ಸರ್ವೇಕ್ಷಣಾ ಉಪಗ್ರಹಗಳನ್ನು ಅಭಿವೃದ್ಧಿಪಡಿಸಲಾಗುತ್ತಿತ್ತು. ಆದರೆ ಮೋಡ ಆವರಿಸಿದರೆ, ನಿಗಾ ಇಡಲು ಕಷ್ಟವಾಗುತ್ತಿತ್ತು.

ಭಾರತದ ಬಾಹ್ಯಾಕಾಶ ಸಂಪನ್ಮೂಲವನ್ನು ಗಡಿ ಭದ್ರತೆ, ತುರ್ತು ನಿರ್ವಹಣಾ ಯೋಜನೆ ಮತ್ತು ಗಡಿಪ್ರದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಬಳಸಿಕೊಳ್ಳಬೇಕೆಂದು ಈ ಹಿಂದೆ ಗೃಹ ಸಚಿವ ರಾಜ್‌ನಾಥ್‌ಸಿಂಗ್‌ ನೇತೃತ್ವದ ಸಮಿತಿಯೊಂದು ಶಿಫಾರಸು ಮಾಡಿತ್ತು. ಅದರನ್ವಯ ಈ ಉಪಗ್ರಹ ಅಭಿವೃದ್ಧಿಪಡಿಸಲಾಗಿದೆ.

click me!