ಗೂಗಲ್‌ ಕಿವಿಗೆ ಹೂವಿಟ್ಟ ಕಲಾವಿದ, ನಕಲಿ ಟ್ರಾಫಿಕ್ ಜಾಮ್ ಸೃಷ್ಟಿಸಿದ!

By Suvarna NewsFirst Published Feb 4, 2020, 7:46 PM IST
Highlights

ನಾವೆಲ್ಲರೂ ಕಣ್ಮುಚ್ಚಿ ಬಳಸೋ ಗೂಗಲ್ ಮ್ಯಾಪ್! ಅದರಲ್ಲೂ ಹೇಗೆ ದಾರಿ ತಪ್ಪಿಸ್ಬಹುದು ಎಂದು ತೋರಿಸಿಕೊಟ್ಟ ಕಲಾವಿದ; ಬೆಸ್ತು ಬೀಳೋ ಸರದಿ ಗೂಗಲ್‌ನದ್ದು 

ಬೆಂಗಳೂರು (ಫೆ.04): 'ಓ ಅಣ್ಣಾ... ಜಯನಗ್ರ ಹೆಂಗ್ ಹೋಗೋದು?' ಎಂದು ರಸ್ತೆ ಮಧ್ಯೆ ಗಾಡಿ ನಿಲ್ಲಿಸಿ ಕೇಳೋ ಜಮಾನ ಹೋಯ್ತು. ಈಗೇನಿದ್ದರೂ ಗೂಗಲೇ ಗುರುಗಳು. ದಾರಿ ತೋರಿಸೋದು ಅವ್ರೇ, ಎಲ್ಲೆಲ್ಲಿ ಟ್ರಾಫಿಕ್ ಜಾಮ್ ಇದೆ, ಪರ್ಯಾಯ ರಸ್ತೆ ಯಾವುದಯ್ಯ ಎಂದು  ತೋರಿಸೋದು ಅವ್ರೆ.

ನಾವ್ಯಾವ ಮಟ್ಟಿಗೆ ಅದನ್ನ ನೆಚ್ಚಿಕೊಂಡಿದ್ದೇವೆ ಅಂದ್ರೆ ಕಣ್ಮುಚ್ಚಿ ಗೂಗಲ್‌ ಮ್ಯಾಪನ್ನ ಫಾಲೋ ಮಾಡ್ತೀವಿ. ಅದು ಬಹಳ ಪ್ರಯೋಜನಕಾರಿ ನಿಜ, ಆದ್ರೆ ಈ ವ್ಯವಸ್ಥೆ ಫೂಲ್-ಪ್ರೂಫ್ ಅಲ್ಲವೆಂಬುವುದನ್ನು ಕಲಾವಿದನೊಬ್ಬ ಪ್ರೂವ್ ಮಾಡಿದ್ದಾನೆ.

ಇದನ್ನೂ ಓದಿ | ಗೂಗಲ್ ಮ್ಯಾಪ್ ನೋಡಿ ಡ್ರೈವ್ ಮಾಡೋ ಅಭ್ಯಾಸ ಇದೆಯಾ? ಹಾಗಾದ್ರೆ ಇದನ್ನು ಓದಿ!...

ಬರ್ಲಿನ್‌ನ ಸಿಮಾನ್ ವೆಕರ್ಟ್ ಎಂಬ ಕಲಾವಿದ ಗೂಗಲ್ ನೇವಿಗೇಶನ್ ಮ್ಯಾಪ್‌ನಲ್ಲಿ ನಕಲಿ ಟ್ರಾಫಿಕ್ ಜಾಮ್ ಸೃಷ್ಟಿಸಿದ್ದಾನೆ. ಆತ ತಂತ್ರಜ್ಞನಲ್ಲ, ಕೋಡಿಂಗ್ ಮಾಡಿ, ಪ್ರೋಗ್ರಾಮಿಂಗ್ ಬರೆದು ಏನಾದ್ರೂ ಮಾಡಿದ್ನಾ ಎಂದು ಭಾವಿಸಿದ್ರೆ ತಪ್ಪಾಗುತ್ತೆ.

ಆತ ಮಾಡಿದ್ದಿಷ್ಟೇ... ಒಂದು ಕೈಗಾಡಿ ತಗೊಂಡು 99 ಸ್ಮಾರ್ಟ್‌ಫೋನ್‌ಗಳನ್ನ ಅದ್ರಲ್ಲಿ ಹಾಕಿ, ಎಲ್ಲದರಲ್ಲೂ ಗೂಗಲ್ ನೇವಿಗೇಶನ್ ಮ್ಯಾಪ್ ಆನ್ ಮಾಡ್ಕೊಂಡು, ಬರ್ಲಿನ್‌ ನಗರದಲ್ಲಿ ಅದನ್ನ ತಳ್ಳಿಕೊಂಡು ಹೋಗಿದ್ದಾನೆ. ಹಾಸ್ಯಸ್ಪದ ವಿಷಯ ಅಂದ್ರೆ ಆತ ಬರ್ಲಿನ್‌ನ ಗೂಗಲ್ ಕಚೇರಿಯ ಮುಂದಿರುವ ರಸ್ತೆಯಿಂದಲೂ ಹಾದು ಹೋಗಿದ್ದಾನೆ. ಗೂಗಲ್ ಮ್ಯಾಪ್‌ನಲ್ಲಿ ಆತ ಹೋದ ದಾರಿಯೆಲ್ಲಾ ಕೆಂಪು ಬಣ್ಣಕ್ಕೆ ತಿರುಗಿ ಟ್ರಾಫಿಕ್ ದಟ್ಟಣೆಯನ್ನು ತೋರಿಸುತ್ತಿತ್ತು.    

ಇದನ್ನೂ ಓದಿ | ಗೂಗಲ್ ಮ್ಯಾಪ್ ಬಳಸುವವರೇ ಎಚ್ಚರ... ಈ ದಾರಿ ಅಲ್ಲಿಗೆ ಹೋಗಲ್ಲ!...

ಅದ್ಹೇಗೆ ಸಾಧ್ಯ?

ನಾವು ಅವಲಂಬಿಸಿರೋ ಗೂಗಲ್ ಮ್ಯಾಪ್ ನಮ್ಮಿಂದಲೇ  ಮಾಹಿತಿಯನ್ನು ಪಡೆದು ನಮಗೆ ದಾರಿ ತೋರಿಸುತ್ತವೆ. ಇದು ಗೂಗಲ್‌ ಮ್ಯಾಪ್‌ನ ಸಿಂಪಲ್  ಫಂಡಾ. ಗೂಗಲ್ ನಮ್ಮ ಸ್ಮಾರ್ಟ್‌ಫೋನ್‌ ಮೂಲಕ ನಾವಿರುವ ಜಾಗ, ನಾವು ಹೋಗುತ್ತಿರುವ ದಿಕ್ಕು, ನಾವು ಚಲಿಸುತ್ತಿರುವ ವೇಗ ಮುಂತಾದ ಎಲ್ಲಾ ಮಾಹಿತಿಯನ್ನು ಪಡೆಯುತ್ತದೆ.  ಹೀಗೆ ಒಂದು ರಸ್ತೆಯಲ್ಲಿರುವ ನೂರಾರು-ಸಾವಿರಾರು ಸ್ಮಾರ್ಟ್‌ಫೋನ್‌ ಬಳಕೆದಾರರ ಮೂಲಕ ಒಂದು ಕಂಪ್ಲೀಟ್ ಚಿತ್ರಣವನ್ನು ಗೂಗಲ್ ತಯಾರಿಸುತ್ತದೆ.

ಸ್ಮಾರ್ಟ್‌ಫೋನ್‌ಗಳಿಂದ ಪಡೆದ ಮಾಹಿತಿಯ ಆಧಾರದಲ್ಲಿ ಸಂಚಾರ ದಟ್ಟಣೆಯನ್ನು ತಿಳಿಸುತ್ತದೆ. ಸಾಮಾನ್ಯಕ್ಕಿಂತ  ಹೆಚ್ಚು ಸಂಚಾರ ದಟ್ಟಣೆ ಇದ್ದಾಗ ಕೆಂಪು ಬಣ್ಣದಲ್ಲಿ ಸೂಚಿಸುತ್ತದೆ.     

ಅದನ್ನು ನೊಡಿಕೊಂಡು ನಾವು ನಮ್ಮ ಪ್ರಯಾಣವನ್ನು ಪ್ಲಾನ್ ಮಾಡ್ತೀವಿ.  ಪರ್ಯಾಯ ರಸ್ತೆ ಹುಡುಕ್ತೀವಿ. ಹೋಗೋ ಟೈಮ್ ಚೇಂಜ್ ಮಾಡ್ತೀವಿ. ಆದರೆ ಸಿಮಾನ್ ವೆಕರ್ಟ್ ಈ ಬಗ್ಗೆ ತನ್ನ ಬ್ಲಾಗ್‌ನಲ್ಲಿ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ.  ಅದು ಎಷ್ಟರ ಮಟ್ಟಿಗೆ ಸತ್ಯ ಎಂಬುವುದನ್ನು ಗೂಗಲ್‌ ಹೇಳಬೇಕು.  
 

 

ಅಪ್ಡೇಟ್ಸ್:

'ನಕಲಿ ಟ್ರಾಫಿಕ್ ಜಾಮ್' ಕಲೆಗೆ ಗೂಗಲ್ ಬೌಲ್ಡ್, ಆದರೆ....  

ಕಾರ್, ಕಾರ್ಟ್ ಅಥವಾ ಕ್ಯಾಮಲ್, ಅದೇನೇ ಇರಲಿ, ಗೂಗಲ್ ಮ್ಯಾಪ್ ಬಳಸಿ ಮಾಡುವ ಸೃಜನಶೀಲ ಪ್ರಯೋಗಗಳನ್ನು ನಾವು ಸ್ವಾಗತಿಸುತ್ತೇವೆ. ಹಲವಾರು ಮೂಲಗಳಿಂದ ಸಂಗ್ರಹಿಸುವ ಮಾಹಿತಿಯನ್ನು ಆಧಾರಿಸಿ ಸಿದ್ಧವಾಗುವ ಗೂಗಲ್ ಮ್ಯಾಪ್ ಸತತವಾಗಿ ರಿಫ್ರೆಶ್ ಆಗುತ್ತಿರುತ್ತದೆ. ಕಾರು ಮತ್ತು ಮೋಟಾರ್‌ಸೈಕಲ್‌ಗಳನ್ನು ಪ್ರತ್ಯೇಕವಾಗಿ ಗುರುತಿಸುವ ತಂತ್ರಜ್ಞಾನ, ಭಾರತ, ಇಂಡೋನೇಶ್ಯಾ ಮತ್ತು ಈಜಿಪ್ಟ್ ಸೇರಿದಂತೆ ಹಲವಾರು ದೇಶಗಳಲ್ಲಿ ಗೂಗಲ್ ಬಳಸುತ್ತಿದೆ. ಆದರೆ ನಾವು ಕೈಗಾಡಿ ಬಗ್ಗೆ ಹೆಚ್ಚು ಅವಿಷ್ಕಾರ ಮಾಡಿಲ್ಲ. ಇಂತಹ ಪ್ರಯೋಗಗಳನ್ನು ನಾವು ಸ್ವಾಗತಿಸುತ್ತೇವೆ, ಮುಂದಿನ ದಿನಗಳಲ್ಲಿ ಉತ್ತಮ ಸೇವೆ ನೀಡಲು ಇದು ಸಹಕಾರಿಯಾಗಿದೆ, ಎಂದು ಗೂಗಲ್ ಹೇಳಿದೆ. 

click me!