ವಾಟ್ಸಾಪ್ ನಲ್ಲಿ ನಕಲಿ ಸಂದೇಶ ಪತ್ತೆ ವ್ಯವಸ್ಥೆ ಜಾರಿಗೆ ಸೂಚನೆ

By Web DeskFirst Published Aug 22, 2018, 11:28 AM IST
Highlights

ವಾಟ್ಸಾಪಲ್ಲಿ ನಕಲಿ ಸಂದೇಶ ಪತ್ತೆಗೆ ವ್ಯವಸ್ಥೆ ಜಾರಿ ಮಾಡಬೇಕು ಎಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಅವರು ವಾಟ್ಸಾಪ್ ನಿರ್ದೇಶನ ಮಾಡಿದ್ದಾರೆ. 

ನವದೆಹಲಿ: ನಕಲಿ ಸಂದೇಶ ಹರಡುತ್ತಿರುವವರ ಮೂಲ ಪತ್ತೆ ಮತ್ತು ಅದಕ್ಕೆ ತಾಂತ್ರಿಕ ಪರಿಹಾರ ಕಂಡುಕೊಳ್ಳುವಂತೆ ಹಾಗೂ ಭಾರತದಲ್ಲಿ ತನ್ನ ಸ್ಥಳೀಯ ಕಾರ್ಪೊರೇಟ್‌ ಕಚೇರಿ ತೆರೆಯುವಂತೆ ವಾಟ್ಸಪ್‌ಗೆ ಸರ್ಕಾರ ಮಂಗಳವಾರ ನಿರ್ದೇಶಿಸಿದೆ. ವಾಟ್ಸಪ್‌ ಮುಖ್ಯಸ್ಥ ಕ್ರಿಸ್‌ ಡೇನಿಯಲ್ಸ್‌ ಜೊತೆ ಮಾತುಕತೆಯ ಬಳಿಕ ಐಟಿ ಸಚಿವ ರವಿಶಂಕರ್‌ ಪ್ರಸಾದ್‌ ಈ ವಿಷಯ ತಿಳಿಸಿದ್ದಾರೆ.

ವಾಟ್ಸಪ್‌ ದೇಶದ ಡಿಜಿಟಲ್‌ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ನಿಭಾಯಿಸಿದೆ. ಆದರೆ, ಗುಂಪು ಹತ್ಯೆ ಮತ್ತು ಪ್ರತೀಕಾರದ ಅಶ್ಲೀಲ ಚಿತ್ರಗಳಂತಹ ಕೆಟ್ಟ ಬೆಳವಣಿಗೆಯನ್ನು ನಿರ್ವಹಿಸಲು ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಸ್ಥಳೀಯ ದೂರು ಪರಿಹಾರ ಅಧಿಕಾರಿ ನೇಮಕವೂ ಆಗಬೇಕಿದೆ. ನಕಲಿ ಮತ್ತು ಪ್ರಚೋದನಾತ್ಮಕ ಸಂದೇಶಗಳ ಮೂಲ ಪತ್ತೆ ಹಚ್ಚುವುದಕ್ಕೆ ವ್ಯವಸ್ಥೆ ರೂಪಿಸಬೇಕು ಎಂದು ಡೇನಿಯಲ್ಸ್‌ಗೆ ತಿಳಿಸಿರುವುದಾಗಿ ಸಚಿವರು ತಿಳಿಸಿದ್ದಾರೆ.

ಈ ಕುರಿತು ಕ್ರಮ ಕೈಗೊಳ್ಳದಿದ್ದಲ್ಲಿ ವಾಟ್ಸಪ್‌, ಹಿಂಸೆಗೆ ಕಾರಣವಾದ ವದಂತಿ ಹರಡಲು ಪ್ರಚೋದನೆ ಅಥವಾ ಕುಮ್ಮಕ್ಕು ನೀಡಿದ ಪ್ರಕರಣ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದೇನೆ. ವಾಟ್ಸಪ್‌ ಪಾವತಿ ಸೇವೆಗಳ ವಿಷಯದಲ್ಲಿ ಆರ್‌ಬಿಐ ನೀತಿಗಳನ್ನು ಪಾಲಿಸುವಂತೆಯೂ ನಿರ್ದೇಶಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಂಪೆನಿ ಕಾರ್ಯನಿರ್ವಹಿಸಲಿದೆ ಎಂದು ಡೇನಿಯಲ್ಸ್‌ ಭರವಸೆ ನೀಡಿದುದಾಗಿ ಪ್ರಸಾದ್‌ ಹೇಳಿದ್ದಾರೆ.

click me!