
ಬೆಂಗಳೂರು[ಆ.19]: ಚಂದ್ರನ ಮೇಲೆ ನೌಕೆ ಇಳಿಸಿ, ಹಲವು ಅನೂಹ್ಯ ಕುತೂಹಲ ಭೇದಿಸುವ ಭಾರತದ ಮಹತ್ವಾಕಾಂಕ್ಷಿ ಯೋಜನೆ ‘ಚಂದ್ರಯಾನ-2’ ಮಂಗಳವಾರ ಮಹತ್ವದ ಘಟ್ಟತಲುಪಲಿದೆ. ಆ.14ರಂದು ಭೂಕಕ್ಷೆಯ ಸಂಪರ್ಕ ಕಡಿದುಕೊಂಡು, ಚಂದ್ರನತ್ತ ಮುಖ ಮಾಡಿರುವ ಚಂದ್ರಯಾನ ನೌಕೆಯನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ವಿಜ್ಞಾನಿಗಳು ಅಂದುಉ ಚಂದ್ರನ ಕಕ್ಷೆಗೆ ಸೇರ್ಪಡೆ ಮಾಡಲಿದ್ದಾರೆ.
ದ್ರವರೂಪದ ಎಂಜಿನ್ ಅನ್ನು ಕೆಲಹೊತ್ತು ದಹಿಸಿ, ಕಕ್ಷೆಗೆ ಸೇರಿಸುವ ಸಾಹಸವನ್ನು ವಿಜ್ಞಾನಿಗಳು ಮಂಗಳವಾರ ನಡೆಸಲಿದ್ದಾರೆ. ಚಂದ್ರಯಾನ ನೌಕೆ ಯಶಸ್ವಿಯಾಗಿ ಕಕ್ಷೆಗೆ ಸೇರಿದರೆ, ಚಂದಿರನ ಪರಿಭ್ರಮಣೆಯನ್ನು ಆರಂಭಿಸಲಿದೆ. ಒಟ್ಟು 13 ದಿನಗಳ ಕಾಲ ಈ ಕಸರತ್ತು ನಡೆದು, ಚಂದಿರನ ಹತ್ತಿರಕ್ಕೆ ನೌಕೆ ಹೋಗಲಿದೆ. ಬಳಿಕ ‘ಪ್ರಜ್ಞಾನ್’ ಎಂಬ ರೋವರ್ ಒಳಗೊಂಡಿರುವ ‘ವಿಕ್ರಮ್’ ಎಂಬ ಲ್ಯಾಂಡರ್ ಚಂದ್ರಯಾನ ನೌಕೆಯ ಮತ್ತೊಂದು ಸಾಧನ ಆರ್ಬಿಟರ್‌ನಿಂದ ಬೇರ್ಪಡಲಿದೆ. ಮೂರ್ನಾಲ್ಕು ದಿನ ಚಂದ್ರನ ಕಕ್ಷೆಯನ್ನು ಸುತ್ತಿ, ಚಂದ್ರನ ದಕ್ಷಿಣ ಧ್ರುವದ ಮೇಲೆ ಲ್ಯಾಂಡರ್ ಇಳಿಯಲಿದೆ. ಬಳಿಕ ರೋವರ್ ಹೊರಬಂದು, 500 ಮೀ. ಕ್ರಮಿಸಿ, ಹಲವು ಮಹತ್ವದ ಮಾಹಿತಿಯನ್ನು ಸಂಗ್ರಹಿಸಲಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಜು.22ರಂದು ಚಂದ್ರಯಾನ- 2 ನೌಕೆ ಉಡಾವಣೆಯಾಗಿತ್ತು. ಈವರೆಗೆ ಅಮೆರಿಕ, ರಷ್ಯಾ ಹಾಗೂ ಚೀನಾ ಮಾತ್ರವೇ ಚಂದ್ರನ ಮೇಲೆ ನೌಕೆ ಇಳಿಸಿವೆ. ಭಾರತದ ನಾಲ್ಕನೇ ದೇಶವಾಗಲು ಹೊರಟಿರುವುದು ಹಾಗೂ ತೀರಾ ಅಗ್ಗದಲ್ಲಿ ಚಂದ್ರಯಾನ ಕೈಗೆತ್ತಿಕೊಂಡಿರುವುದು ಮತ್ತು ಈವರೆಗೆ ಯಾರೂ ಹೋಗಿರದ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸುತ್ತಿರುವ ಕಾರಣ ಈ ಯೋಜನೆ ವಿಶ್ವದ ಗಮನ ಸೆಳೆದಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.